Sunday, 28 October 2012
Friday, 19 October 2012
ಮಲಾಲಳಿಗಾಗಿ ಮಿಡಿಯಿತು ಜಗತ್ತು
ಹೌದು, ತಾಲಿಬಾನಿಗಳ ಕೆಂಗಣ್ಣಿಗೆ ಗುರಿಯಾದ ಮಲಾಲ ಶಾಲೆಯಿಂದ ಮರಳುವಾಗ ಅವರ ಗುಂಡೇಟಿಗೆ ಗುರಿಯಾದಳು. ತಲೆಗೂ ಕುತ್ತಿಗೆಗೂ ಗುಂಡು ತಗಲಿ ಮಾರಣಾಂತಿಕವಾಗಿ ಗಾಯಗೊಂಡಳು. ತಾಲಿಬಾನಿಗಳ ಈ ಆಕ್ರಮಣಕ್ಕೂ ಕಾರಣವಿತ್ತು. ಪಾಕಿಸ್ತಾನದಲ್ಲಿ ತಾಲಿಬಾನಿಗಳ ಕ್ರೌರ್ಯವನ್ನು ಈಕೆ ಜಗತ್ತಿನ ಮುಂದೆ ತೆರೆದಿಟ್ಟಳು. ಅವರು ನಡೆಸುವ ಕ್ರೂರ ವರ್ತನೆಗಳು ಪಾಕಿಸ್ತಾನದ ಹೊರಗಿನವರಿಗೂ ಮನದಟ್ಟಾಯಿತು. ತಾಲಿಬಾನಿಗಳ ಪ್ರಕಾರ ಹೆಣ್ಣು ಮಕ್ಕಳು ಶಾಲೆಗೆ ಹೋಗುವಂತಿಲ್ಲ. ಇನ್ನು ಶಾಲೆಗೆ ಹೋಗುವುದಾದರೆ ಜೀವದ ಹಂಗು ತೊರೆದಿರಬೇಕು. ಇಂತಹ ಪರಿಸ್ಥಿತಿ ನಿರ್ಮಾಣವಾಗುವಾಗ ಮಲಾಲಳಿಗೆ ಕೇವಲ ಹನ್ನೊಂದು ವರ್ಷ. ಈಕೆ ಡೈರಿಯಲ್ಲಿ ದೈನಂದಿನ ಅನುಭವಗಳನ್ನು ಶುರು ಮಾಡಿದಳು. ಉರ್ದು ಭಾಷೆ ಚೆನ್ನಾಗಿ ಬಲ್ಲ ಆಕೆ ತನ್ನ ಅನುಭವಗಳ ಬರವಣಿಗೆಗೂ ಅದೇ ಭಾಷೆ ಬಳಸಿಕೊಂಡಳು. ಆ ಬರಹಗಳೆಲ್ಲ್ಲವೂ ಹೃದಯಕ್ಕೆ ನಾಟುವಂತಿದ್ದವು. ಆಕೆಯ ಡೈರಿಯ ಕೆಲವು ತುಣುಕುಗಳು ಇಲ್ಲ್ಲಿವೆ.
ಜನವರಿ 3 ಶನಿವಾರ, ತಲೆಬರಹ: ‘ಭಯವಾಗುತ್ತಿದೆ’.
![]() |
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಲಾಲ |
ಒಮ್ಮೆ ನಾನು ಶಾಲೆಯಿಂದ ಮರಳಿ ಬರುವಾಗ “ನಿನ್ನನ್ನು ಸಾಯಿಸ್ತೀನಿ” ಎಂದು ಹಿಂದಿನಿಂದ ಓರ್ವ ವ್ಯಕ್ತಿ ಕಿರುಚುವುದು ಕೇಳಿಸಿತು. ನಾನು ಗಾಬರಿಯಾಗಿ ನಡೆಯುವ ವೇಗ ಹೆಚ್ಚಿಸಿದೆ. ಸ್ವಲ್ಪ ಮುಂದೆ ಸಾಗಿ ತಿರುಗಿ ನೋಡಿದೆ. ಆತ ನನ್ನನ್ನು ಹಿಂಬಾಲಿಸುತ್ತಿಲ್ಲ ಎಂದು ಸಮಾಧಾನವಾಯಿತು. ಆತ ಫೋನಿನಲ್ಲಿ ಯಾರಿಗೋ ಬೆದರಿಕೆ ಹಾಕುತ್ತಿದ್ದ ಎಂಬುದನ್ನು ಅರಿತು ನಿರಾಳಳಾದೆ.
ಜನವರಿ 4 ಆದಿತ್ಯವಾರ, ತಲೆಬಹರಹ: ಶಾಲೆಗೆ ಹೋಗಬೇಕು.
ಇಂದು ಶಾಲೆಗೆ ರಜೆ. ಹಾಗಾಗಿ ತಡಮಾಡಿ ಎದ್ದೆ. ಆಗ ಹತ್ತುಗಂಟೆಯಾಗಿತ್ತು. ಗ್ರೀನ್ ಚೌಕದಲ್ಲಿ ಕೊಲ್ಲಲ್ಪಟ್ಟ ಮೂವರ ಕುರಿತು ತಂದೆಯವರು ಮಾತನಾಡುತ್ತಿದ್ದುದನ್ನು ಕೇಳಿ ಬೇಸರವಾಯಿತು. ಸೈನಿಕ ಕಾರ್ಯಾಚರಣೆ ಆರಂಭಗೊಳ್ಳುವುದಕ್ಕಿಂತ ಮುಂಚೆ ಆದಿತ್ಯವಾರ ನಾವೆಲ್ಲರೂ ಎಲ್ಲಿಗಾದರೂ ಸುತ್ತಾಡಲು ಹೋಗುತ್ತಿದ್ದೆವು. ಆದರೆ ಈಗ ಅದು ಅಸಾಧ್ಯವಾಗಿದೆ. ಪಿಕ್ನಿಕ್ಕಿಗೆ ತೆರಳಿ ವರ್ಷದ ಮೇಲಾಯಿತು.

ಜನವರಿ 5 ಸೋಮವಾರ, ತಲೆಬರಹ: ಬಣ್ಣದ ಬಟ್ಟೆಗಳನ್ನೂ ಧರಿಸಬಾರದು.
ಶಾಲೆಗೆ ಹೋಗುವ ನಿಟ್ಟಿನಲ್ಲಿ ಯೂನಿಫಾರ್ಮ್ ಧರಿಸಲು ಅಣಿಯಾದಾಗ ಪ್ರಿನ್ಸಿಪಾಲ್ ಮುಂಚಿನ ದಿನ ಹೇಳಿದ್ದು ನೆನಪಾಯಿತು. “ಸಮವಸ್ತ್ರ ಧರಿಸಿ ನಾಳೆ ಬರಬೇಡಿ ಸಾದಾ ಉಡುಪಿನಲ್ಲೇ ಬನ್ನಿ” ಎಂದಿದ್ದರು. ನಾನು ನನ್ನ ಗುಲಾಬಿ ಬಣ್ಣದ ಬಟ್ಟೆ ತೊಟ್ಟು ಹೋದೆ. ಸಹಪಾಠಿಗಳೆಲ್ಲ ಬಣ್ಣ ಬಣ್ಣದ ವಸ್ತ್ರ ಧರಿಸಿದ್ದರು.
ಶಾಲೆಯಿಂದ ಬಂದು ಊಟ ಮುಗಿಸಿ ಟ್ಯೂಷನ್ನಿಗೆ ಹೋಗಿ ಬಂದೆ. ರಾತ್ರಿ ವಾರ್ತೆ ವೀಕ್ಷಿಸಿದಾಗ ಕಳೆದ 15 ದಿನಗಳಿಂದ ವಿಧಿಸಿದ್ದ ಕಫ್ರ್ಯೂ ಹಿಂತೆಗೆದುಕೊಂಡ ವಿಚಾರ ತಿಳಿದು ಸಂತಸವಾಯಿತು. ಕಾರಣ ನನ್ನ ಇಂಗ್ಲಿಷ್ ಟೀಚರ್ ಅಲ್ಲಿ ವಾಸವಾಗಿದ್ದರು. ಬಹುಶಃ ಅವರು ನಾಳೆ ಶಾಲೆಗೆ ಬರಬಹುದು.
ಜನವರಿ 7 ಬುಧವಾರ, ತಲೆಬರಹ: ಗುಂಡಿನ ಸದ್ದಿಲ್ಲ. ಭಯವೂ ಇಲ್ಲ.
ಮೊಹರ್ರಮ್ ರಜೆಯ ಪ್ರಯುಕ್ತ ಬುನೈರಿಗೆ ಕುಟುಂಬ ಸಮೇತ ಬಂದಿದ್ದೇನೆ. ಹಸಿರಿನಿಂದ ಕಂಗೊಳಿಸುವ ಅದು ನನ್ನ ಪ್ರಿಯವಾದ ತಾಣ. ನನ್ನ ಸ್ವಾತ್ ಕಣಿಯೂ ಸೌಂದರ್ಯದಲ್ಲಿ ಕಡಿಮೆಯೇನಿಲ್ಲ. ಆದರೆ ಅಲ್ಲಿ ಶಾಂತತೆಯಿಲ್ಲ. ಬುನೈರಿನಲ್ಲಿ ಶಾಂತಿಯಿದೆ, ನೆಮ್ಮದಿಯಿದೆ. ಗುಂಡಿನ ಸದ್ದು ಕೇಳಿಸುವುದಿಲ್ಲ. ಯಾವ ಭಯವೂ ಇಲ್ಲ. ನಾವು ಸಂತಸದಿಂದಿದ್ದೇವೆ. ಅಲ್ಲಿ ಹಲವಾರು ಅಂಗಡಿಗಳಿದ್ದವು. ನಾನು ಏನನ್ನೂ ಖರೀದಿಸಲಿಲ್ಲ. ಅಮ್ಮ ಕಿವಿಯೋಲೆ ಮತ್ತು ಬಳೆ ಖರೀದಿಸಿದರು.
ಜನವರಿ 9 ಶುಕ್ರವಾರ, ತಲೆಬರಹ: ಮೌಲಾನಾ ರಜೆ ಹಾಕಿದ್ದೀರಾ?
ಇವತ್ತು ಶಾಲೆಯಲ್ಲಿ ನಾನು ನನ್ನ ಬುನೈರ್ ಪಿಕ್‍ನಿಕ್‍ನ ಬಗ್ಗೆ ಗೆಳತಿಯರಲ್ಲಿ ಮಾತನಾಡಿದೆ. ಅವರು ಅದಕ್ಕೆ ಗಮನ ಕೊಡಲಿಲ್ಲ. ಅಲ್ಲಿನ ಕಥೆ ಕೇಳಿ ಕೇಳಿ ಸಾಕಾಯಿತು ಎಂದರು. ಎಫ್.ಎಮ್. ರೇಡಿಯೋದಲ್ಲಿ ಭಾಷಣ ಮಾಡುತ್ತಿದ್ದ ಮೌಲಾನಾ ಶಾಹ್ ದುರಾನ್‍ರ ಮರಣದ ಬಗ್ಗೆ ಹರಡಿದ್ದ ವದಂತಿಗಳ ಬಗ್ಗೆ ಮಾತನಾಡಿದೆವು. ಹೆಣ್ಮಕ್ಕಳು ಶಾಲೆಗೆ ಹೋಗಬಾರದೆಂದು ಘೋಷಿಸಿದ್ದು ಇದೇ ಮೌಲಾನಾ. ಅವರು ರಜೆಯ ಮೇರೆಗೆ ಊರಿಗೆ ಹೋಗಿದ್ದಾರೆ ಎಂದು ಓರ್ವಳು ತಿಳಿಸಿದಳು.
ಜನವರಿ 14 ಬುಧವಾರ, ತಲೆಬರಹ ಮತ್ತೆ ಶಾಲೆಗೆ ಹೋಗುವುದು ಅನುಮಾನ.
ಇಂದು ಶಾಲೆಗೆ ಹೋಗುವಾಗ ಮನಸ್ಸು ತಳಮಳಗೊಂಡಿತ್ತು. ನಾಳೆಯಿಂದ ಚಳಿಗಾಲದ ರಜೆ ಪ್ರಾರಂಭವಾಗುತ್ತದೆ. ಪ್ರಿನ್ಸಿಪಾಲರು ರಜೆ ಆರಂಭಗೊಳ್ಳುವುದರ ಬಗ್ಗೆ ಹೇಳಿದ್ದಾರೆ. ಆದರೆ ಯಾವಾಗ ಪುನರಾರಂಭವಾಗುತ್ತದೆ ಎಂಬ ಬಗ್ಗೆ ಏನೂ ಹೇಳಿಲ್ಲ. ನನ್ನ ಅಂದಾಜಿನ ಪ್ರಕಾರ ಜನವರಿ 15 ರಿಂದ ಹುಡುಗಿಯರ ಶಿಕ್ಷಣವನ್ನು ತಾಲಿಬಾನ್ ನಿಷೇಧಿಸಿರುವುದೇ ಪ್ರಿನ್ಸಿಪಾಲರ ಈ ಮೌನಕ್ಕೆ ಕಾರಣವಾಗಿರಬಹುದು.
ಈ ಬಾರಿ ನಮಗಾರಿಗೂ ರಜೆಯ ಬಗ್ಗೆ ಸಂತಸವಾಗಲಿಲ್ಲ. ತಾಲಿಬಾನ್ ಆದೇಶ ಜಾರಿಗೆ ಬಂದರೆ ಮತ್ತೆ ನಮಗೆ ಶಾಲೆಯ ಮೆಟ್ಟಿಲು ಹತ್ತುವಂತಿಲ್ಲ. ಅದೇ ಬೇಸರ ಎಲ್ಲರಿಗೂ ಕಾಡುತ್ತಿತ್ತು. ಕೆಲವು ಹುಡುಗಿಯರು ಸ್ವಾತ್ ಪ್ರದೇಶದಿಂದ ಬೇರೆಡೆಗೆ ಹೋಗುವುದಾಗಿ ತಿಳಿಸಿದರು. ಕೊನೆಯ ದಿನವಾದ ಕಾರಣ ಎಂದಿಗಿಂತ ಹೆಚ್ಚು ಸಮಯ ಮೈದಾನದಲ್ಲಿ ಆಟ ವಾಡಿದೆವು. ಶಾಲೆ ಮತ್ತೆ ಆರಂಭವಾಗುತ್ತದೆಂದು ನನ್ನ ನಂಬಿಕೆಯಾಗಿತ್ತು. ಆದರೂ ಶಾಲೆಯಿಂದ ಮರಳುವಾಗ ಇನ್ನೆಂದೂ ಇಲ್ಲಿಗೆ ಬರಲಾರನೆಂಬ ಭಾವನೆಯಿಂದ ಕಟ್ಟ ಕಡೆಗೆ ನಮ್ಮ ಶಾಲೆಯ ಕಡೆಗೊಮ್ಮೆ ನೋಟ ಬೀರಿದೆ.
ಇವೆಲ್ಲವೂ ಆ ಪುಟ್ಟ ಹುಡುಗಿಯ ಮನಸ್ಸಿನಲ್ಲಿ ಉದಯಿಸಿದ ತೀಕ್ಷ್ಣ ಭಾವನೆಗಳು. ಸ್ವಾತ್ ಕಣಿವೆಯಲ್ಲಿ ತಾಲಿಬಾನಿಗಳ ಪ್ರಭುತ್ವ ತಾರಕಕ್ಕೇರಿದ ಸಂದರ್ಭದಲ್ಲಿ ಮಲಾಲಳ ಡೈರಿಯ ಈ ಸಾಲುಗಳನ್ನು ಬಿಬಿಸಿಯ ಉರ್ದು ವಿಭಾಗವು ಪ್ರಕಟಿಸಲು ಒಲವು ತೋರಿತು. ಅವಳ ತಂದೆ ಓರ್ವ ಅಧ್ಯಾಪಕರಾಗಿದ್ದರು. ಅವರು ಮಗಳ ಬೆಂಬಲಕ್ಕೆ ನಿಂತರು. ಮಲಾಲಳ ಸ್ವಂತ ಹೆಸರಿನಲ್ಲಿ ಅದನ್ನು ಪ್ರಕಟಿಸುವಂತಿರಲಿಲ್ಲ. ಹಾಗೇನಾದರೂ ಪ್ರಕಟಿಸಿದರೆ ಅವಳ ಜೀವಕ್ಕೇ ಕುತ್ತು. ಆದ್ದರಿಂದ ‘ಗುಲ್ ಮಕಾಯಿ’ ಎಂಬ ಕಾವ್ಯನಾಮದೊಂದಿಗೆ ಪ್ರಕಟವಾಯಿತು. ಇದರೊಂದಿಗೆ ತಾಲಿಬಾನಿಗಳ ಕುರಿತು ಜಗತ್ತು ತಿಳಿಯಿತು. ತಾಲಿಬಾನಿಗಳಿಗೆ ಅಜ್ಞಾತ ಬರಹಗಾರ್ತಿ ನುಂಗಲಾರದ ತುತ್ತಾದಳು. ಅವಳ ತಂದೆ ಹೇಳುತ್ತಿದ್ದರಂತೆ. “ಕೆಲವು ದಿನಗಳ ಹಿಂದೆ ಡೈರಿಯ ಪ್ರಿಂಟ್ ಔಟನ್ನು ಯಾರೋ ಒಬ್ಬರು ತೆಗೆದುಕೊಂಡು ಬಂದು ಎಷ್ಟು ಸುಂದರವಾಗಿ ಬರೆದಿದ್ದಾಳಲ್ವ ಎಂದು ಹೊಗಳುತ್ತಿದ್ದರಂತೆ. ಅದು ಬರೆದಿರುವುದು ನನ್ನ ಮಗಳು ಎಂದು ಹೇಳಿಕೊಳ್ಳಲಾರದೆ ತಂದೆ ಮುಗುಳ್ನಗೆ ಬೀರಿ ಸುಮ್ಮನಾದರಂತೆ.”
ತಾಲಿಬಾನಿಗಳ ಹಿಡಿತದಲ್ಲಿದ್ದ ಸ್ವಾತ್ ಕಣಿವೆಯು “ಫ್ಲಶ್ ಔಟ್ ತಾಲಿಬಾನ್” ಎಂಬ ಯೋಜನೆಯಿಂದಾಗಿ ಸರಕಾರದ ಸ್ವಾಧೀನಕ್ಕೆ ಬಂತು. ಆಗ “ಗುಲ್ ಮಕಾಯ್” ಎಂಬ ಹೆಸರಿನೊಂದಿಗೆ ತೆರೆಯ ಹಿಂದೆ ನಿಂತು ಬರೆಯುತ್ತಿದ್ದವಳು ಮಲಾಲ ಆಗಿ ಸಮಾಜದ ಮುಂದೆ ಬಂದಳು. ಇದನ್ನು ಕಂಡು ಜಗತ್ತು ಬೆರಗುಗಣ್ಣಿನಿಂದ ನೋಡಿತು. 13ರ ಪೋರಿಯ ಈ ಸಾಧನೆಗೆ, ಸ್ಥೈರ್ಯಕ್ಕೆ ತಲೆದೂಗಿತು. ಇದರಿಂದಾಗಿ ಹಲವಾರು ಪ್ರಶಸ್ತಿಗಳು ಅವಳನ್ನು ಅರಿಸಿ ಬಂದುವು.
ಮಲಾಲಾ ಈಗ ದೇಶಾದ್ಯಂತ ಪ್ರಸಿದ್ದಿ ಪಡೆದಳು. ಆಕೆ ಮಹಿಳೆಯರ ಶಿಕ್ಷಣದ ಕುರಿತು ಮಾತನಾಡಿದಳು. ಇಸ್ಲಾಮ್ ಮಹಿಳೆಯರಿಗೆ ನೀಡುವ ಸ್ಥಾನಮಾನದ ಕುರಿತು ವಿವರಿಸಿದಳು. ಇಸ್ಲಾಮಿನ ಕುರಿತ ತಾಲಿಬಾನಿಗಳ ವ್ಯಾಖ್ಯೆಯನ್ನು ವಿರೋಧಿಸಿದಳು. ರಾಜಕಾರಣಿಗಳಿಗೆ ನಿಸ್ವಾರ್ಥ ಸೇವೆ ಮಾಡಲು ಸಾಧ್ಯವಿಲ್ಲದಿದ್ದರೆ ನಾನೇ ರಾಜಕೀಯಕ್ಕಿಳಿಯುತ್ತೇನೆ ಎಂದು ಸವಾಲು ಹಾಕಿದಳು. ಇಷ್ಟೆಲ್ಲ ಮಾತನಾಡುವಾಗ ಮಲಾಲಗಳಿಗೆ ಕೇವಲ 14 ವರ್ಷ.
ಧಾರವಾಹಿ ನೋಡಿಯೋ ಗೇಮ್ಸ್ ಆಡಿಯೋ ಕಾಲಹರಣ ಮಾಡುವ ಈ ವಯಸ್ಸಿನಲ್ಲಿ ಮಲಾಲ ಸುಂದರ ರಾಷ್ಟ್ರದ ಕನಸು ಕಂಡಳು. “ನನ್ನ ಕನಸಿನ ಪ್ರಕಾರ ಪಾಕಿಸ್ತಾನದಲ್ಲಿ ಸದಾ ಶಾಂತಿ ನೆಲೆಸಿರಬೇಕು. ನೆರೆ ರಾಷ್ಟ್ರದೊಂದಿಗೆ ಸೌಹಾರ್ದತೆ ಇರಬೇಕು. ನನ್ನ ಪಾಕಿಸ್ತಾನದಲ್ಲಿ ಭ್ರಷ್ಟಾಚಾರ, ಹಗರಣಗಳಿರಬಾರದು. ಅದು ಅಜಾತ ಶತ್ರು ರಾಷ್ಟ್ರವಾಗಿರಬೇಕು.” ಇವು ಮಲಾಲಳ ಮನದಾಳದ ಇಂಗಿತವಾಗಿತ್ತು. ಇಂದು ಎಲ್ಲಾ ಪ್ರಾಯದವರಿಗೂ ಅವಳ ಧೈರ್ಯ, ಸ್ಥೈರ್ಯ, ಛಲದಲ್ಲಿ ಮಾದರಿಯಿದೆ. ಸತ್ಯ ಹೇಳುವವರಿಗೆ ಈ ಜಗತ್ತಿನಲ್ಲಿ ಕ್ರೌರ್ಯವೇ ಪ್ರತಿಫಲವಾಗಿ ದೊರೆಯುತ್ತದೆ. ಮಲಾಲಳ ಸ್ಥಿತಿಯೂ ಅಂತೆಯೇ ಆಗಿದೆ. ಹಾಗಂತ ಸತ್ಯವನ್ನು ಅಡಗಿಸಿಡಬೇಕು ಅಂತಲ್ಲ. ತಡವಾಗಿಯಾದರೂ ಸತ್ಯಕ್ಕೆ ಗೆಲುವು ಲಭಿಸಿಯೇ ತೀರುವುದು. ನೂರು ದಿನ ಇಲಿಯಾಗಿ ಬಾಳುವುದಕ್ಕಿಂತ ಒಂದು ದಿನ ಹುಲಿಯಾಗಿ ಬದುಕುವುದು ನಮ್ಮ ಜನ್ಮಕ್ಕೆ ನೀಡುವ ಗೌರವವಲ್ಲವೇ?
Wednesday, 26 September 2012
ಪುರುಷರೇ ಹೀಗೆ?
ನಾನು ಸಂಜೆ ಮೆಲ್ಲನೆ ಮನೆ ತಲುಪಿದೆ. ಇವತ್ತು ನನ್ನವಳನ್ನು ಸ್ವಲ್ಪ ಹೆದರಿಸುವ ಒಂದು ತುಂಟ ಆಲೋಚನೆ ಮನಸ್ಸಿನಲ್ಲಿ ಮೊಳಕೆಯೊಡೆಯಿತು.
ಹಾಗೆ ನಾನು ಕಾಲಿಂಗ್ ಬೆಲ್ ಅದುಮಿ ಓಡಿ ಹೋಗಿ ಅಂಗಳದ ಮೂಲೆಯಲ್ಲಿದ್ದ ಮಲ್ಲಿಗೆ ಬಳ್ಳಿಯ ಮರೆಯಲ್ಲಿ ಅಡಗಿ ಕುಳಿತು ಬಾಗಿಲಿನ ಕಡೆಗೆ ನೋಡತೊಡಗಿದೆ. ಯಾವುದೇ ಪ್ರತಿಕ್ರಿಯೆ ಇಲ್ಲ.
ಸ್ವಲ್ಪ ಹೊತ್ತಾದ ಮೇಲೆ 'ಕಿರ್ರೀ' ಎಂದು ಶಬ್ದ ಮಾಡುತ್ತಾ ಬಾಗಿಲು ತೆರೆದುಕೊಂಡಿತು. ಹಿಂದೆಯೇ ನನ್ನ ಶ್ರೀಮತಿಯವರು ನಿದ್ದೆಯಿಂದ ಎದ್ದು ಬಂದವಳಂತಿದ್ದಳು.
ನಾನು ಅವಳನ್ನು ಮದುವೆಯಾದ ದಿನದಂದೇ ನನಗೆ ಒಂದು ಸಂಶಯ ಬಂದಿದೆ. ಇವಳಿಗೂ ಕುಂಭಕರ್ಣನ ಸಂತತಿಗೂ ಯಾವುದಾದರೂ ಲಿಂಕ್ ಇರಬಹುದೇ ಎಂದು.
ಹೊರಬಂದ ಅವಳು ಆಚೆ ಈಚೆ ನೋಡಿ ಕನಸು ಕಂಡವಳಂತೆ ಒಳನಡೆದಳು. ನಾನು ಎದ್ದು ಬಂದು ಮತ್ತೊಮ್ಮೆ ಬೆಲ್ಲನ್ನು ಅದುಮಿ ಬಾಗಿಲಿಗೆ ಬೆನ್ನು ಹಾಕಿ ನಿಂತೆ.
ಸ್ವಲ್ಪ ಕಳೆದ ನಂತರ ಬಾಗಿಲು ತೆರೆದುಕೊಂಡಿತು. ನನ್ನವಳು ನನ್ನನ್ನು ಪ್ರೀತಿಯಿಂದ ಸ್ವಾಗತಿಸಬಹುದೆಂದು ಭಾವಿಸಿದೆ. ಆದರೆ ನಡೆದದ್ದು ಬೇರೆಯೇ. ಬೆನ್ನಿಗೆ ಎರಡು ಗುದ್ದು ಬಿತ್ತು. ಹಿಂದೆಯೇ ಸಾಲು ಪಟಾಕಿ ಸಿಡಿಸಿದ ಹಾಗೆ ಬೈಗುಳ.
"ಏನ್ರೀ ಕಳ್ಳರ ಹಾಗೆ ಬಂದು ಕಾಲಿಂಗ್ ಬೆಲ್ ಅದುಮಿದ್ದು" ನಾನು ನನ್ನ ಮೇಲಿನ ಆರೋಪವನ್ನು ಸರಿಪಡಿಸಿದೆ.
'ನಿಮ್ಮ ಕರ್ಮ' ಎಂದು ಗೊಣಗುತ್ತಾ ಒಳಹೋದಳು.
ನಮ್ಮ ಈ ಬೀದಿ ಕಾಳಗವನ್ನು ಯಾರಾದರೂ ನೋಡಿದರೋ ಎಂದು ನಾನು ಸುತ್ತ ಮುತ್ತ ಕಣ್ಣು ಹಾಯಿಸಿದೆ. ಆಗ ಎದುರು ಮನೆಯ ಸಾವಿತ್ರಿಯಕ್ಕ ನೋಡಿಯೂ, ನೋಡದಂತೆ ತೆಂಗಿನ ಮರವನ್ನು ದಿಟ್ಟಿಸುತ್ತಿದ್ದರು.
ನಾನು ಬೇಗನೇ ಒಳಹೊಕ್ಕೆ. ನಾನು ಕಳ್ಳರಂತೆ ಹೋಗಲು ಕಾರಣವಿತ್ತು. ಬೆಳಿಗ್ಗೆ ಹೋಗುವಾಗ ಟೀವಿ ಮೇಲೆ ಇಟ್ಟಿದ್ದ ಫ್ಲವರ್ ವಾಝನ್ನು ಒಡೆದು ಹಾಕಿ ಹೋಗಿದ್ದೆ. ಅದು ನನ್ನಿಂದ ಆಕಸ್ಮಿಕವಾಗಿ ಸಂಭವಿಸಿದರೂ ನನ್ನವಳ ದೃಷ್ಟಿಯಲ್ಲಿ ಅಕ್ಷಮ್ಯ ಅಪರಾಧವಾಗಿತ್ತು.
ಆ ವಾಝ್ ಅವಳ ಅಣ್ಣ ದುಬೈಯಿಂದ ಕಳಿಸಿದ್ದಾಗಿತ್ತು. ನನ್ನಲ್ಲಿ ಹಲವಾರು ಬಾರಿ ಹೇಳಿದ್ದಳು, ಅಲಂಕಾರಕ್ಕೆ ಒಂದು ವಾಝ್ ತರಬೇಕೆಂದು ಆದರೆ ನಾನು ಕ್ಯಾರೇ ಮಾಡಲಿಲ್ಲ. ಅಂತಹ ವಾಝನ್ನು ಒಡೆದು ಹಾಕಿದಾಗ ನನ್ನವಳಿಗೆ ಮಾತ್ರವಲ್ಲ ಎಂಥ ವಳಿಗೂ ಕೋಪ ಬರಬಹುದು.
ನಾನು ಅಪರಾಧಿ ಭಾವನೆಯಿಂದ ಮೆಲ್ಲನೆ ಅಡುಗೆ ಮನೆಗೆ ಹೋದೆ. ನನ್ನ ಮೇಲಿದ್ದ ಕೋಪ ಅಲ್ಲಿನ ಪಾತ್ರೆಗಳು ಅನುಭವಿಸುತ್ತಿದ್ದವು. ಒಂದೊಂದು ಪಾತ್ರೆಯೂ ವ್ಯತ್ಯಸ್ಥ ರೂಪ ತಾಳಿದ್ದವು. ಇನ್ನು ಕೊಡಪಾನದ ಅವಸ್ಥೆ ಹೇಳತೀರದು. ಉಪ್ಪಲ್ಲಿ ಹಾಕಿದ ಮಿಡಿ ಮಾವಿನ ಕಾಯಿಯಂತಾಗಿತ್ತು.
ನನ್ನ ಮಗ ಆದಿಲ್ ನಿದ್ರಿಸುತ್ತಿದ್ದುದರಿಂದ ಬಚಾವಾದ. ಇಲ್ಲದಿದ್ದರೆ ಅವಳ ಕೋಪದ ಪ್ರಭಾವ ಅವನ ಮೇಲೆರಗುತ್ತಿತ್ತು. ನನ್ನ ಮೇಲಿದ್ದ ಕೋಪವನ್ನು ಇತರರ ಮೇಲೆ ಪ್ರಯೋಗಿಸುವುದು ಅವಳ ವಾಡಿಕೆ.
"ಏನು ಶ್ರೀಮತಿಯವರೇ ತುಂಬಾ ಗರಂ ಆದಂತೆ ಕಾಣುತ್ತೀರಾ" ನಾನು ಮೆಲ್ಲನೆ ಕೆಣಕಿದೆ.
ಆಗ ನನ್ನೊಂದಿಗೆ ಮೌನವ್ರತ ಆಚರಿಸಿಯಾಗಿತ್ತು. ಯಾವುದೇ ಪ್ರತಿಕ್ರಿಯೆ ಇಲ್ಲ. ಮುಖ ಗಂಟಿಕ್ಕಿತ್ತು.
ನನ್ನವಳಲ್ಲಿದ್ದ ಪ್ಲಸ್ ಪಾಯಿಂಟ್ ಏನೆಂದರೆ ಕೋಪ ಬಂದಾಗ ಮೌನವ್ರತ ಆಚರಿಸುವುದು. ಬಹುಶಃ ಲೋಕದಲ್ಲಿ ಇವಳು ಮೊದಲು ಸೃಷ್ಟಿಯಾಗಿರಬಹುದು.
ನನಗೆ ದಾಂಪತ್ಯ ಜೀವನವು ಬೇಸತ್ತು ಹೋಗಿತ್ತು. ದಿನ ನಿತ್ಯ ಸಣ್ಣಪುಟ್ಟ ವಿಷಯಗಳಿಗೆ ಗಲಾಟೆ. ಹೇಗೂ ನೀರಿಗಿಳಿದಾಗಿದೆ. ಇನ್ನು ಚಳಿಗೆ ಯಾಕೆ ಹೆದರುವುದು. ಆದರೆ ಎಷ್ಟೇ ಗಲಾಟೆ ಮಾಡಿದರೂ ಅವಳ ಮನಸ್ಸಿನ ಮೂಲೆಯಲ್ಲಿ ನನ್ನೊಂದಿಗೆ ಗಾಢವಾದ ಪ್ರೀತಿಯಿದೆ.
ನಾನು ಬಂದು ಟೇಬಲಿನ ಮುಂದೆ ಕುಳಿತೆ. ಸ್ವಲ್ಪ ಹೊತ್ತಾದ ಮೇಲೆ 'ಇಕೊಳ್ಳಿ ಚಾ' ಎಂದು ಟೇಬಲಿನ ಮೇಲೆ ಕುಕ್ಕಿ ಒಂದು ಮೂಲೆಯಲ್ಲಿ ಹೋಗಿ ಕುಳಿತಳು. ಚಹಾ ಅಕ್ಕಿ ತೊಳೆದ ನೀರಿನಂತಿತ್ತು.
ಚಹಾ ಕುಡಿದು ಅವಳನ್ನು ಮಾತಿಗೆಳೆಯಲು ಪ್ರಯತ್ನಿಸಿದೆ.
"ಅಲ್ಲ ಕಣೇ, ಯಾಕೆ ಇಷ್ಟು ಕೋಪ" ಮೆಲ್ಲನೆ ಕೇಳಿದೆ. ಮದವೇರಿದ ಆನೆಯನ್ನು ಮನವೊಲಿಸುವಂತಾಗಿತ್ತು ನನ್ನ ಅವಸ್ಥೆ.
"ಏನ್ರೀ ಒಂದು ವಾಝ್ ತರಲು ಹೇಳಿದಾಗ ನಿಮಗೆ ತರಲಾಗಲಿಲ್ಲ. ಈಗ ನನ್ನ ಅಣ್ಣ ತಂದದ್ದನ್ನು ಮುರಿದು ಹಾಕಿದ್ದೀರಲ್ಲ. ನಾನು ಏನಾದರೂ ತರಲು ಹೇಳಿದಾಗ ನಿಮಗೆ ದುಂದುವೆಚ್ಚ. ನೀವು ಅನಾವಶ್ಯಕವಾಗಿ ಏನು ಬೇಕಾದರೂ ಖರೀದಿಸಬಹುದು." ಕೋಪ ಇಳಿಯುವ ಲಕ್ಷಣ ಕಾಣಿಸಿತು.
"ಸಾರಿ ಕಣೇ. ಅದು ಆಕಸ್ಮಿಕವಾಗಿ ಮುರಿದದ್ದು. ನಾನು ಬೇಕೂಂತಲೇ ಮುರಿದದ್ದಲ್ಲ."
"ತಪ್ಪು ಮಾಡಿ 'ಸಾರಿ' ಹೇಳಿದರೆ ಮುಗಿಯಿತು. ಪುರುಷ ಸಂತಾನವೇ ಹೀಗೆ. ಒಂದು ತಪ್ಪಿತಸ್ಥ ಭಾವನೆಯೇ ಇಲ್ಲ."
ಅವಳು ನನ್ನ ಸವಿೂಪ ಬಂದು ಕುಳಿತಳು. ಕೋಪ ಅರ್ಧ ಇಳಿದಿತ್ತು.
"ನೀನು ನನ್ನ ತಪ್ಪನ್ನು ಪುರುಷ ಜಾತಿಯ ಮೇಲೆ ಹೊರಿಸುವುದು ಸರಿಯಲ್ಲ." ನಾನು ಪುರುಷರ ಪ್ರತಿನಿಧಿಯಂತೆ ವಾದಿಸಿದೆ.
"ಪುರುಷರಂತೆ! ಪುರುಷರು ಕರುಣೆ ಇಲ್ಲದವರು."
"ಆಯಿತು ಕಣೇ. ಪುರುಷರು ಕರುಣೆ ಇಲ್ಲದವರು. ಸ್ತ್ರೀಯರು ಕರುಣಾಮೂರ್ತಿಗಳು" ನಾನು ಅವಳ ವಾದವನ್ನು ಸಮ್ಮತಿಸಿದೆ.
"ಹಾಗೆ ದಾರಿಗೆ ಬನ್ನಿ."
"ಆಯಿತು ಕಣೇ. ಇನ್ನು ರಂಪಾಟ ಸಾಕು."
"ಇದ್ದದ್ದನ್ನು ಹೇಳಿದರೆ ನಿಮಗೆ ಆಗುವುದಿಲ್ಲ" ಎಂದು ಗೊಣಗುತ್ತಾ ಎದ್ದು ಅಡುಗೆ ಕೋಣೆಗೆ ಹೋದಳು.
ಸ್ವಲ್ಪ ಹೊತ್ತಾದ ಮೇಲೆ ನಾನು ಅಡುಗೆ ಕೋಣೆಗೆ ಹೋದೆ. ಅವಳು ಪಾತ್ರೆ ತೊಳೆಯುತ್ತಿದ್ದಳು. ಮುಖ ಕುಂಬಳಕಾಯಿಯಂತಿತ್ತು.
ನಾನು ಹೇಳಿದೆ, "ಸಾರಿ ಕಣೇ ನಾನು ಬೇಕೂಂತಲೇ ಮುರಿದು ಹಾಕಿದ್ದಲ್ಲ. ನೀನು ಏನೂ ಹೆದರಬೇಡ. ಬೇಗ ಹೊರಟು ನಿಲ್ಲು. ಇವತ್ತು ಶಾಪಿಂಗ್‍ಗೆ ಹೋಗುವಾ. ಅಲ್ಲಿಂದ ನೀನು ಬೇಕಾದದ್ದನ್ನು ಖರೀದಿಸಿಕೋ."
ಆಗ ಅವಳ ಸಂತೋಷಕ್ಕೆ ಪಾರವೇ ಇಲ್ಲ.
"ನನಗೆ ಗೊತ್ತಿತ್ತು ನೀವು ಒಳ್ಳೆಯವರು ಎಂದು. ನಿಮಗೆ ಸ್ತ್ರೀಯರ ನೋವನ್ನು ಅರ್ಥಮಾಡಿಕೊಳ್ಳುವಷ್ಟು ಕರುಣೆ ಇದೆ."
ನನಗೆ ಒಂದು ಸಂಶಯ ಬಂತು. ನಾನು ಗಂಡೋ ಹೆಣ್ಣೋ? ಕಾರಣ, ಅವಳು ಹೇಳಿದ್ದಳು, ಪುರುಷರು ಕರುಣೆ ಇಲ್ಲದ ಜಾತಿಗಳು ಎಂದು.
ನಾನು ಬಂದು ಮತ್ತೆ ಪೇಪರು ಓದಲು ಕುಳಿತೆ.
ಬೇಗ ಬೇಗನೇ ಕೆಲಸ ಮುಗಿಸತೊಡಗಿದಳು. ಅವಳಲ್ಲಿ ಯಾವುದೋ ಹಬ್ಬದ ಸಂಭ್ರಮವಿತ್ತು. ಅದಕ್ಕೆ ಕಾರಣವೂ ಇತ್ತು. ನಮ್ಮ ನಾಲ್ಕು ವರ್ಷದ ಸಮರ ಮಿಶ್ರಿತ ಸುಖ ದಾಂಪತ್ಯ ಜೀವನದಲ್ಲಿ ಅವಳನ್ನು ಶಾಪಿಂಗ್‍ಗೆ ಕರೆದುಕೊಂಡು ಹೋಗುವುದು ಇದು ಮೊದಲ ಬಾರಿಯಾಗಿತ್ತು. ಯಾವುದಾದರೂ ಸಭೆ ಸಮಾರಂಭಗಳಿಗೆ ಹೋದರೆ ಒಂದು ಬಸ್ಸಲ್ಲಿ ಹೋಗಿ ಇನ್ನೊಂದು ಬಸ್ಸಲ್ಲಿ ಬರುತ್ತಿದ್ದೆವು.
ಅವಳು ಕೆಲಸ ಮುಗಿಸಿ ನನ್ನ ಸಮೀಪ ಬಂದು ಕುಳಿತು ನನ್ನ ಗುಣಗಾನ ಮಾಡಲು ಪ್ರಾರಂಭಿಸಿದಳು. ಕರಿ ಮೋಡಗಳೆಲ್ಲಾ ಮಾಯವಾಗಿ ಶುಭ್ರ ನೀಲಾಕಾಶದಂತಿತ್ತು ಅವಳ ಮುಖ. "ನೀವು ತುಂಬಾ ಒಳ್ಳೆಯವರು. ನಾನು ನಿಮ್ಮ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಸಾರಿ ಆಯ್ತಾ? ಕ್ಷಮಿಸ್ತೀರಿ ತಾನೇ?
ತುಂಟ ನಗು ಬೀರುತ್ತಾ ತನ್ನ ತಲೆಯನ್ನು ನನ್ನ ಹೆಗಲ ಮೇಲಿಟ್ಟಳು. ಆಗಲೇ ಮಗ ಆದಿಲ್ ನಿದ್ದೆಯಿಂದ ಎದ್ದು ಅಳಲು ಪ್ರಾರಂಭಿಸಿದನು.
Thursday, 16 August 2012
ವಿವಾಹ ವಿಚ್ಛೇದನ

ಅವಳು ಕಣ್ಣೀರು ಸುರಿಸುತ್ತಿದ್ದಳು. ನಮ್ಮ ದಾಂಪತ್ಯ ಬದುಕಿನಲ್ಲಿ ಏನಾದರೂ ಏಡವಟ್ಟಾಗಿದೆಯೇ ಎಂದು ಮೆಲುಕು ಹಾಕುತ್ತಿದ್ದಳು. ನಾನು ಅವಳಿಗೆ ತೀಕ್ಷ್ಣ ಉತ್ತರವನ್ನು ನೀಡಿದೆ. “ನಿನಗೆ ನನ್ನ ಹೃದಯದಲ್ಲಿ ಜಾಗವಿಲ್ಲ. ಅದನ್ನು ನಾನು ನನ್ನ ಪ್ರೇಯಸಿಗೆ ನೀಡಿದ್ದೇನೆ. ನಾನು ನಿನ್ನನ್ನು ಹೆಚ್ಚೇನೂ ಪ್ರೀತಿಸಿರಲಿಲ್ಲ” ಅತ್ಯಂತ ಆಘಾತಕಾರೀ ಉತ್ತರ!
ಕೊನೆಗೆ ನಾನು ಅವಳಿಗೆ ನಮ್ಮ ಮನೆ, ನನ್ನ ಕಾರು ಮತ್ತು ನನ್ನ ಕಂಪೆನಿಯ 30 ಶೇಕಡಾ ಮಾಲಕತ್ವವನ್ನು ವಿಚ್ಛೇದನ ಪತ್ರದೊಂದಿಗೆ ನೀಡಿದೆ. ಅವಳು ಅದರ ಕಡೆಗೊಮ್ಮೆ ನೋಟ ಬೀರಿ ಅದನ್ನು ಹರಿದು ಚಿಂದಿ ಮಾಡಿದಳು.
ಹತ್ತು ವರ್ಷಗಳಿಗಿಂತಲೂ ಹೆಚ್ಚು ನನ್ನೊಂದಿಗೆ ಜೀವನ ನಡೆಸಿದ ಅವಳು ಈಗ ಅಪರಿಚತೆಯಾದಳು. ಅವಳ ವ್ಯರ್ಥವಾದ ಸಮಯ, ಸಂಪತ್ತು ಮತ್ತು ಎನರ್ಜಿಯ ಕುರಿತು ನನಗೆ ಅಪರಾಧಿ ಮನೋಭಾವ ಮಾಡಿತು. ಅವಳು ನನ್ನ ಮುಂದೆ ನಿಂತು ರೋಧಿಸ ತೊಡಗಿದಳು. ಅವಳ ಆ ಅಳು ನನಗೊಂದು ಮುಕ್ತಿಯಂತೆ ತೋರಿತು. ನನ್ನ ಬಹುದಿನಗಳ ಆಕಾಂಕ್ಷೆಯು ನೆರವೇರುತ್ತದೆಂದು ಸಂತಸಪಟ್ಟೆ.
ಮರುದಿನ ನಾನು ಮನೆಗೆ ಬಹಳ ತಡವಾಗಿ ಹೋದೆ. ಟೇಬಲಿನ ಮುಂದೆ ಕುಳಿತು ಅವಳು ಏನೋ ಬರೆಯುತ್ತಿದ್ದಳು. ಅಲ್ಲಿ ಎಂದಿನಂತೆ ನನಗೆ ಊಟ ಬಡಿಸಿಟ್ಟಿರಲಿಲ್ಲ. ನಾನು ನೇರವಾಗಿ ಬೇಡ್ ರೂಮಿಗೆ ಹೋಗಿ ಮಲಗಿದೆ. ಆ ದಿನವನ್ನು ನನ್ನ ಪ್ರೇಯಸಿಯೊಂದಿಗೆ ಕಳೆದಿದ್ದರಿಂದ ಆಯಾಸವಾಗಿತ್ತು. ಬಹಳ ಬೇಗನೇ ನಿದ್ದೆ ಹತ್ತಿತು. ನನಗೆ ಬೆಳಿಗ್ಗೆ ಎಚ್ಚರವಾದಾಗ ಅವಳು ಬರೆಯುತ್ತಲೇ ಇದ್ದಳು. ನಾನು ಅತ್ತ ಕಡೆ ಗಮನ ಹರಿಸಲಿಲ್ಲ. ಪುನಃ ನಾನು ನಿದ್ದೆಗೆ ಜಾರಿದೆ. ನಾನು ನಿದ್ದೆಯಿಂದ ಎಚ್ಚೆತ್ತ ಬಳಿಕ ಅವಳು ಅವಳ ವಿಚ್ಛೇದನದ ಶರತ್ತುಗಳನ್ನು ನೀಡಿದಳು.
ಅವಳು ನನ್ನಿಂದ ಏನನ್ನೂ ಬಯಸಲಿಲ್ಲ. ವಿಚ್ಛೇದನೆಯ ಒಂದು ತಿಂಗಳ ಮುಂಚೆ ನೆನಪಿಸಬೇಕು ಎಂದು ಮಾತ್ರ ಹೇಳಿದ್ದಳು. ಆ ಒಂದು ತಿಂಗಳಲ್ಲಿ ನಾವು ಜಗಳಗಳಿಲ್ಲದ ಸಾಮಾನ್ಯ ಬದುಕು ಸಾಗಿಸಬೇಕೆಂದೂ ತಿಳಿಸಿದಳು. ಅವಳು ಹಾಗೆ ಹೇಳಲು ಕಾರಣವೂ ಇತ್ತು. ನಮ್ಮ ಮಗನಿಗೆ ಮಾಸಿಕ ಪರೀಕ್ಷೆಯು ನಡೆಯಲಿಕ್ಕಿರುವುದು ಅದೇ ತಿಂಗಳಲ್ಲಾಗಿತ್ತು. ಮಕ್ಕಳಿಗಾಗಿ ಎಲ್ಲಾ ನೋವನ್ನೂ ನುಂಗಿಕೊಳ್ಳಲು ಆ ತಾಯಿ ಸಿದ್ಧಳಾದಳು. ತಮ್ಮ ಈ ಜಗಳದಲ್ಲಿ ಮಗನನ್ನು ಬಲಿಪಶುವಾಗಿಸಲು ಅವಳು ಬಯಸಲಿಲ್ಲ.
ಈ ಶರತ್ತು ನನಗೆ ಒಪ್ಪಿಗೆಯಾಗಿತ್ತು. ಆದರೆ ಅವಳು ಇನ್ನೂ ಹೆಚ್ಚಿನ ಶರತ್ತನ್ನು ಮುಂದಿಟ್ಟಳು. ನಮ್ಮ ಮದುವೆಯ ದಿನ ನಾನು ಅವಳನ್ನು ಬೆಡ್‍ರೂಮಿಗೆ ಬರಮಾಡಿಕೊಂಡಂತೆ ಪುನಃ ಬರಮಾಡಿಕೊಳ್ಳಬೇಕಂತೆ. ಇದನ್ನು ಆ ಕೊನೆಯ ತಿಂಗಳ ಎಲ್ಲಾ ದಿನಗಳಲ್ಲೂ ಮುಂದುವರಿಸಬೇಕೆಂದು ಹೇಳಿದಳು.
ಅವಳು ಮಕ್ಕಳಾಟಿಕೆಯಲ್ಲಿ ತೊಡಗಿದ್ದಾಳೆಂದು ನನಗೆ ಭಾಸವಾಯಿತು. ನಮ್ಮ ಕೊನೆಯ ದಿನಗಳನ್ನು ಅಸಹನೀಯ ಗೊಳಿಸುತ್ತಾಳೆಂದು ಭಾವಿಸಿದೆ. ಆದರೂ ಅವಳ ಈ ವಿಚಿತ್ರ ಬೇಡಿಕೆಯನ್ನು ಒಪ್ಪಿಕೊಂಡೆ. ನಾನು ನನ್ನ ಪ್ರೇಯಸಿಯೊಂದಿಗೆ ಅವಳ ಈ ಬೇಡಿಕೆಯನ್ನು ತಿಳಿಸಿದೆ. ಅವಳು ಬಿದ್ದು ಬಿದ್ದು ನಕ್ಕಳು. “ಅವಳು ಏನೋ ತಂತ್ರ ಹೂಡುತ್ತಾಳೆ. ಹೇಗಿದ್ದರೂ ಅವಳು ವಿಚ್ಛೇದನವನ್ನು ಎದುರಿಸಲೇ ಬೇಕಾಗಿತ್ತು” ಎಂದು ಪ್ರತಿಕ್ರಿಯಿಸಿದಳು.
ನನಗೆ ವಿಚ್ಛೇದನದ ಆಲೋಚನೆ ಬಂದಂದಿನಿಂದ ನಮ್ಮ ಮಧ್ಯೆ ಯಾವುದೇ ಶಾರೀರಿಕ ಸಂಬಂಧವೇರ್ಪಡಲಿಲ್ಲ. ಮೊದಲ ದಿನ ಅವಳ ಬೇಡಿಕೆಯಂತೆ ನಾನು ಅವಳ ಭುಜದ ಮೇಲೆ ಕೈಯಿರಿಸಿ ರೂಮಿನಿಂದ ಹೊರಬಂದೆವು. ನಮ್ಮ ಮಗ ಹಿಂದಿನಿಂದ ಹೊಡೆಯುತ್ತಾ “ಪಪ್ಪಾ, ನೀವು ತುಂಬಾ ಚೂಟಿ” ಎಂದು ಗೇಲಿ ಮಾಡಿದನು. ಅವನ ಆ ಮಾತು ನನ್ನ ಮನಸ್ಸನ್ನು ಕಲಕಿತು. ನಮ್ಮ ನಟನೆಯನ್ನು ಅವನು ನೈಜತೆಯಾಗಿ ಭಾವಿಸಿದ್ದನು. ನಾನು ಅವಳೊಂದಿಗೆ ಸ್ವಲ್ಪ ಮುಂದೆ ಸಾಗಿದಾಗ ಅವಳು ಬಹಳ ದುಃಖದಿಂದ “ವಿಚ್ಛೇದನೆಯ ವಿಚಾರವನ್ನು ಮಗನಿಗೆ ತಿಳಿಸಬೇಡಿ” ಎಂದು ಮೆಲ್ಲನೆ ಹೇಳಿದಳು. ನಾನು ಅಡ್ಡಡ್ಡ ತಲೆಯಾಡಿಸಿ ಒಪ್ಪಿಗೆ ಸೂಚಿಸಿದೆ. ಮನಸ್ಸಿಗೆ ಏನೋ ಒಂದು ರೀತಿಯ ಖಿನ್ನತೆಯ ಅನುಭವವಾಯಿತು.
ಎರಡನೇ ದಿನ ನಾವು ಇನ್ನೂ ಹೆಚ್ಚು ಬಾಂಧವ್ಯದ ನಟನೆ ಮಾಡಿದೆವು. ಅವಳು ನನ್ನ ಎದೆ ಮೇಲೆ ತಲೆ ಇಟ್ಟಳು. ಅಸಹನೆಯಿಂದ ಸಹಿಸಿಕೊಂಡೆ. ನನಗೆ ಹೆಚ್ಚು ಸಮಯ ಇವಳನ್ನು ಉಳಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡೆ. ಅವಳು ಯೌವನವನ್ನು ದಾಡಿದಂತೆ ತೋಚಿತು. ಅವಳ ಕೆನ್ನೆಯ ಮೇಲೆ ಸುಕ್ಕುಗಳು ಬಿದ್ದಿದ್ದವು. ತಲೆಯ ಕೂದಲು ಕಂದು ಬಣ್ಣಕ್ಕೆ ತಿರುಗಿತ್ತು. ವಿವಾಹವು ಅವಳಿಂದ ಯೌವನವನ್ನು ಕಸಿದುಕೊಂಡಿತ್ತು.
ನಾಲ್ಕನೆಯ ದಿನ, ನಾನು ಅವಳೊಂದಿಗೆ ಹೆಜ್ಜೆ ಹಾಕುತ್ತಿದ್ದಾಗ (ನನ್ನ ಒಂದು ಕೈ ಅವಳ ಭುಜದ ಮೇಲಿತ್ತು) ಅನ್ಯೋನ್ಯತೆಯ ಭಾವವೊಂದು ಮರಳಿದಂತೆ ಭಾಸವಾಯಿತು. ತನ್ನ ಜೀವನದಿಂದ 10 ವರ್ಷಗಳನ್ನು ನನಗಾಗಿ ನೀಡಿದವಳು ಇದೇ ಮಹಿಳೆ ಎಂಬ ಗುರುತು ಪ್ರಜ್ಞೆಯು ಜಾಗೃತವಾಯಿತು. ಐದು ಮತ್ತು ಆರನೇ ದಿನ, ನಾವು ಒಟ್ಟಾಗಿ ಸೇರಿ ಈ ಮನೆಯನ್ನು ಸ್ವರ್ಗವಾಗಿಸಿದ್ದು, ಉತ್ತಮ ಸಂತಾನವನ್ನು ಪಡೆದದ್ದು ಎಲ್ಲವೂ ನೆನಪಿಗೆ ಬಂತು.
ಈ ವಿಷಯಗಳೊಂದನ್ನೂ ನಾನೂ ನನ್ನ ಪ್ರೇಯಸಿಯೊಂದಿಗೆ ಹೇಳಲಿಲ್ಲ. ನಾನು ನನ್ನ ಪತ್ನಿಯ ಕುರಿತು ನನಗರಿವಿಲ್ಲದೆಯೇ ಕಾಳಜಿ ವಹಿಸಲು ಪ್ರಾರಂಭಿಸಿದೆ. ವಿಚ್ಛೇದನಕ್ಕೆ ದಿನಗಳು ಉರುಳುತ್ತಿತ್ತು. ಮಗನು ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯುತ್ತಿದ್ದ. ನಮಗೆ ತಿಳಿಯದಂತೆಯೇ ಬದುಕು ಸಾಮಾನ್ಯವಾಗ ತೊಡಗಿತು. ನಾನು ಆಫೀಸಿಗೆ ಹೋಗುವಾಗ ಯಾವ ಬಟ್ಟೆ ಧರಿಸಬೇಕು ಎಂದು ಅವಳು ಹೇಳುತ್ತಿದ್ದಳು. ಅವಳು ದಿನಾಲೂ ಒಂದು ಬಟ್ಟೆ ಧರಿಸುತ್ತಿದ್ದಳು. ಅವಳಲ್ಲಿ ಹಲವು ಬಟ್ಟೆಗಳಿದ್ದರೂ ದಿನಗಳೆದಂತೆ ಅವೆಲ್ಲವೂ ದೊಡ್ಡದಾಯಿತು. ಅಂದರೆ ಅವಳು ತೆಳ್ಳಗಾಗ ತೊಡಗಿದಳು. ಇದು ನನ್ನನ್ನು ಗಾಬರಿಗೊಳಿಸಿತು.
ಮರುದಿನ ಅವಳು ನೋವು ಸಹಿಸುತ್ತಿದ್ದಾಳೆ ಎಂಬಂತೆ ತೋಚಿತು. ನಾನು ನಿಧಾನವಾಗಿ ಅವಳ ಹಣೆಯ ಮೇಲೆ ಕೈಯಿಟ್ಟೆ. ಅದೇ ಸಮಯ ನಮ್ಮ ಮಗ ಅಲ್ಲಿಗೆ ಬಂದನು “ಪಪ್ಪಾ ತಾಯಿಯನ್ನು ಚೆನ್ನಾಗಿ ನೋಡಿಕೋ” ಎಂದು ಕಮೆಂಟನ್ನೂ ಹೊಡೆದನು. ಅವಳು ಅವನನ್ನು ಹತ್ತಿರ ಕರೆದು ಬರಸೆಳೆದು ತಬ್ಬಿಕೊಂಡಳು. ನಾನು ನನ್ನ ಮುಖವನ್ನು ಬೇರೆಡೆಗೆ ತಿರುಗಿಸಿದೆ. ಇದನ್ನು ಕಂಡು ಕೊನೆಯ ಗಳಿಗೆಯಲ್ಲಿ ನನ್ನ ಮನಸ್ಸು ಬದಲಾದರೆ ಎಂದರೆ ಭಯವಾಯಿತು. ನಾನು ಅವಳನ್ನು ಬಳಸುತ್ತಾ ರೂಮಿನಿಂದ ಹೊರಬಂದೆ. ನಾನು ಬಿಗಿಯಾಗಿ ಹಿಡಿದಿದ್ದೆ. ಅದು ನಮ್ಮ ಮದುವೆಯ ಆರಂಭ ದಿನಗಳಂತಿತ್ತು. ಆದರೆ ಈಗ ಅವಳು ತೆಳ್ಳಗಾದುದು ನನ್ನನ್ನು ದುಃಖಕ್ಕೀಡು ಮಾಡಿತು.
ಕೊನೆಯ ದಿನ ನಾವು ಕೈ ಕೈ ಹಿಡಿದು ನಡೆಯುವಾಗ ನನ್ನ ಹೆಜ್ಜೆಯು ಭಾರವಾಗ ತೊಡಗಿತು. ಏನೋ ಅಮೂಲ್ಯವಾದ ಒಂದನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬ ಭಾವನೆ ಮೂಡಿತು. ಅಪರಾಧಿ ಭಾವವು ನನ್ನನ್ನು ಕಿತ್ತು ತಿನ್ನ ತೊಡಗಿತು. ನಾನು ಕಾರು ಚಲಾಯಿಸುತ್ತ ಬೇಗನೇ ನನ್ನ ಪ್ರೇಯಸಿಯ ಬಳಿಗೆ ಹೋದೆ. ಅವಳ ಮನೆಯ ಬಾಗಿಲನ್ನು ತಟ್ಟಿದಾಗ ಅವಳು ಬಾಗಿಲು ತೆರೆದಳು. ನನ್ನನ್ನು ಕಂಡು ಸಂತಸಪಟ್ಟಳು. ನಾನು ಅವಳೊಂದಿಗೆ ಹೇಳಿದೆ. “ಸಾರೀ ಕಣೇ. ನಾನು ನನ್ನ ಪತ್ನಿಯೊಂದಿಗೆ ವಿಚ್ಛೇದನ ಪಡೆಯುತ್ತಿಲ್ಲ” ಇದನ್ನು ಕೇಳಿದ ಅವಳು ನಿಬ್ಬೆರಗಾದಳು. ಅಯೋಮಯವಾಗಿ ನನ್ನ ಹಣೆ ಮೇಲೆ ಕೈಯಿಟ್ಟು ಕೇಳಿದಳು “ನೀನು ಜ್ವರದಿಂದ ಬಳಲುತ್ತಿದ್ದಿಯಾ?” ನಾನು ಅವಳ ಕೈಯನ್ನು ಸರಿಸಿ ಹೇಳಿದೆ. “ ಇಲ್ಲ ಕಣೆ. ನಾನು ಹೇಳುವುದು ನಿಜ. ನನ್ನ ತಲೆ ಕೆಟ್ಟಿಲ್ಲ. ಇನ್ನು ನಾವು ಒಟ್ಟಾಗಿ ಬಾಳುತ್ತೇವೆ.”
ನನ್ನ ವೈವಾಹಿಕ ಜೀವನವು ಅವಳಿಂದಾಗಿ ಬಹುಶಃ ನೀರಸವಾಗಿರಬಹುದು. ನಾನು ಬದುಕಿನ ಮೌಲ್ಯಗಳನ್ನು ಅರ್ಥಮಾಡಿಕೊಂಡಿರಲಿಲ್ಲ. ಆದರೆ ಈಗ ನನಗೆ ಅರ್ಥವಾಗುತ್ತಿದೆ. ಮದುವೆಯಾಗಿ ಅವಳನ್ನು ಮನೆಗೆ ಕರೆತಂದಂದಿನಿಂದ ಇನ್ನು ಮರಣದ ತನಕ ಅವಳನ್ನು ಕೈಬಿಡಲಾರೆ.
ನನ್ನ ಪ್ರೇಯಸಿಯು ಬಲವಾಗಿ ನನ್ನ ಕೆನ್ನೆಗೆ ಬಾರಿಸಿದಳು. ನನ್ನನ್ನು ಬಾಗಿಲಿನಿಂದ ಹೊರ ದಬ್ಬಿದಳು. ಅವಳು ಕಣ್ಣೀರು ಸುರಿಸಿದಳು. ನನ್ನ ಪತ್ನಿಯ ಪ್ರೀತಿಯ ಮುಂದೆ ಅವಳ ಕಣ್ಣೀರು ನಗಣ್ಯವೆಂದು ತೋರಿತು. ನಾನು ಮನೆಗೆ ಮರಳಿದೆ.
ದಾರಿಯಲ್ಲಿ ಕಾರು ನಿಲ್ಲಿಸಿ ನಾನು ನನ್ನ ಪತ್ನಿಗೋಸ್ಕರ ಒಂದು ಬೊಕ್ಕೆ ಹೂವು ಖರೀದಿಸಿದೆ. ಅಂಗಡಿಯವಳು “ಅದರ ಮೇಲೆ ಏನು ಬರೆಯಲಿ” ಎಂದು ಕೇಳಿದಳು. ನಾನು ಮುಗುಳ್ನಕ್ಕು ಹೇಳಿದೆ, “ಮರಣದ ತನಕ ಪ್ರತೀ ದಿನ ನಿನ್ನ ಆರೈಕೆ ಮಾಡುತ್ತೇನೆ.” ನಾನು ಹೂವು ಹಿಡಿದುಕೊಂಡು ಮನೆಗೆ ತಲುಪಿದೆ. ಮುಖದಲ್ಲಿ ಮುಗುಳ್ನಗು ತರಲು ಮರೆಯಲಿಲ್ಲ. ನಾನು ಬಹಳ ಜತನದಿಂದ ಹೆಜ್ಜೆಯಿರಿಸುತ್ತ ಬೆಡ್‍ರೂಮಿಗೆ ಹೋದೆ. ಅವಳು ಹಾಸಿಗೆಯಲ್ಲಿ ಮಲಗಿದ್ದಳು. ನಾನು ಬಂದ ಸದ್ದು ಕೇಳಿ ಅವಳು ನೋಡಲಿಲ್ಲ. “ಏಕೆ ಚಿನ್ನಾ ಕೋಪವೇ” ಎಂದು ಅವಳು ಮಗ್ಗುಲು ಬದಲಿಸಿ ಕೇಳಿದೆ. ನನಗೆ ಆಕಾಶವೇ ಕಳಚಿಬಿದ್ದಂತಾಯಿತು. ಮೂಗಿನಿಂದ ರಕ್ತ ಹರಿದಿತ್ತು. ಮರಳಿ ಬಾರದ ಲೋಕಕ್ಕೆ ನನ್ನನ್ನು ಬಿಟ್ಟು ಒಂಟಿಯಾಗಿ ಮರಳಿದ್ದಳು.
...........
ಅವಳು ಒಂದು ತಿಂಗಳಿನಿಂದ ಕ್ಯಾನ್ಸರಿನಿಂದ ಬಳಲುತ್ತಿದ್ದಳು. ನಾನು ನನ್ನ ಪ್ರೇಯಸಿಯೊಂದಿಗೆ ನಿಭಿಡತೆಯಿಂದಿರುವಾಗ ಅವಳ ಈ ರೋಗದ ಕಡೆಗೆ ನನ್ನ ಗಮನವೇ ಹರಿಯಲಿಲ್ಲ. ತಾನು ಬೇಗನೇ ಮರಣ ಹೊಂದುತ್ತೇನೆ ಎಂದು ಅವಳಿಗೆ ತಿಳಿದಿತ್ತು. ಆದರೂ ತನ್ನ ಎಲ್ಲಾ ನೋವನ್ನು ಮರೆತು ನನ್ನನ್ನು ಆ ಕೆಡುಕಿನಿಂದ ತಡೆಯಲು ಪ್ರಯತ್ನಿಸಿ ಯಶಸ್ವಿಯೂ ಆಗಿದ್ದಳು. ಆದರೆ ಅದನ್ನು ಕಾಣುವ ಸೌಭಾಗ್ಯ ಅವಳಿಗೆ ದೊರೆಯಲಿಲ್ಲ. ಅಮೂಲ್ಯ ಸಂಪತ್ತು ನನ್ನ ಕೈಯಲ್ಲಿತ್ತು. ಅವರ ಕುರಿತು ನನಗೆ ಪ್ರಜೆ ಇರಲಿಲ್ಲ. ಅದರ ಮೌಲ್ಯವು ಮನವರಿಕೆಯಾಗುವಾಗ ಅದು ನನ್ನಿಂದ ದೂರವಾಯಿತು. ಈಗ ನನಗೆ ಕಣ್ಣೀರೇ ಗತಿಯಾಯಿತು. ಹಣ, ಸಂಪತ್ತು, ಅಂತಸ್ತು, ಅಧಿಕಾರ ಎಲ್ಲವೂ ಪತ್ನಿಯ ಪ್ರೀತಿಯ ಮುಂದೆ ಕ್ಷುಲ್ಲಕ ಎಂಬ ಮಾತು ಎಷ್ಟು ನಿಜ ಅಲ್ಲವೇ?
(ಸತ್ಯ ಆಧಾರಿತ ಕಥೆ)
ಸಂಗ್ರಹ: ಇಮ್ತಿಯಾಝ್ ಪೆರ್ಲ
Tuesday, 31 July 2012
ಬ್ಯಾರಿ ಹುಡುಗರು, ಹಿಂದೂ ಹುಡುಗಿಯರು ಎಂದೆಲ್ಲಾ ಮಾತನಾಡುತ್ತಿದ್ದರು…
ನಾವೀನ್ ಸೂರಿಂಜೆ
ಬರೆಯುತ್ತಾರೆ
ಜುಲೈ 28 ಸಂಜೆ 6.45 ರ ವೇಳೆ. ನನ್ನ ಸುದ್ದಿ ಮೂಲ ಯುವಕನೊಬ್ಬ ನನಗೆ ಕರೆ ಮಾಡಿದ್ದ. ಆತ ಪಡೀಲ್ ನಿವಾಸಿ. ಆತ ನನಗೆ ತಿಳಿಸಿದ್ದಿಷ್ಟು. “ನವೀನಣ್ಣ, ನಮ್ಮ ಪಡೀಲ್ ಜಂಕ್ಷನ್ನಲ್ಲಿ ಒಂದು ಟಿಂಬರ್ ಯಾಡರ್್ ಇದೆಯಲ್ವ. ಅಲ್ಲಿ ಒಂದು ಸುಮಾರು 30 ಮಂದಿ ಯುವಕರು ನಿಂತುಕೊಂಡು ಮಾತನಾಡುತ್ತಿದ್ದರು. ಇನ್ಯಾರನ್ನೋ ಕರೆಯಲು ಇನ್ಯಾರಿಗೋ ಒತ್ತಾಯಿಸುತ್ತಿದ್ದರು. ಬೈಕುಗಳನ್ನು ರೆಡಿ ಇಟ್ಟುಕೊಳ್ಳಿ ಎನ್ನುತ್ತಿದ್ದರು. ಬಹುಷಃ ಅವರು ನಮ್ಮ ಮೇಲಿನ ಗುಡ್ಡೆಯಲ್ಲಿರುವ ಗೆಸ್ಟ್ ಹೌಸ್ಗೆ ದಾಳಿ ಮಾಡಲು ಯೋಚಿಸುತ್ತಿದ್ದಾರೆ ಎನಿಸುತ್ತದೆ. ಬ್ಯಾರಿ ಹುಡುಗರು, ಹಿಂದೂ ಹುಡುಗಿಯರು ಎಂದೆಲ್ಲಾ ಮಾತನಾಡುತ್ತಿದ್ದರು” ಎಂದ. ಅವರು ಯಾವ ಸಂಘಟನೆಯವರು ಅಂತಿ ತಿಳ್ಕೋ ಮಾರಾಯ ಎಂದೆ ನಾನು. ಅವರು ಹಿಂದೂ ಸಂಘಟನೆಗಳು ಎಂಬುದಷ್ಟೇ ಅವನಿಗೆ ಖಚಿತವಾಯ್ತೆ ವಿನಹ ನಿಖರವಾಗಿ ಯಾವ ಸಂಘಟನೆ ಎಂಬುದು ತಿಳಿಯಲಿಲ್ಲ.
ತಕ್ಷಣ ನನ್ನ ಮನಸ್ಸಿಗೆ ಬಂದ ಪ್ರಶ್ನೆ “ಈ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕೇ ಬೇಡವೇ” ಎಂಬುದು. ದಾಳಿ ಯಾರು ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ಯಾಕಾಗಿ, ಯಾರ ಮೇಲೆ, ಯಾವ ಸಂಘಟನೆ, ಎಲ್ಲಿಗೆ ದಾಳಿ ಮಾಡುತ್ತಿದೆ ಎಂಬುದೂ ಗೊತ್ತಿಲ್ಲ. ಒಂದು ತೀರಾ ಪ್ರಾಥಮಿಕ ಮಾಹಿತಿಯಷ್ಠೆ ತಿಳಿದಿದೆ. ಸಂಘಟನೆಯ ಕಾರ್ಯಕರ್ತರೇ ಫೋನಾಯಿಸಿದ್ದರೆ ಪೊಲೀಸರಿಗೆ ಮಾಹಿತಿ ನೀಡಬಹುದಿತ್ತು. ನನ್ನ ಸುದ್ದಿಮೂಲ ಮಾಹಿತಿ ನೀಡಿದ್ದರಿಂದ ಆ ಸುದ್ದಿಯನ್ನು ಖಚಿತಪಡಿಸಿಕೊಂಡೇ ಪೊಲೀಸರಿಗೆ ಮಾಹಿತಿ ನೀಡೋಣ ಎಂದುಕೊಂಡು ನಾನು ಮತ್ತು ನನ್ನ ಕ್ಯಾಮರಮೆನ್ ಪಡೀಲ್ ಗುಡ್ಡೆಯ ಮೇಲಿರುವ ಗೆಸ್ಟ್ ಹೌಸ್ ಕಡೆ ಬೈಕಿನಲ್ಲಿ ತೆರಳಿದೆ.
ಒಂದೈದು ನಿಮಿಷದಲ್ಲಿ ಪಡೀಲ್ ಗುಡ್ಡೆಯಲ್ಲಿರುವ ಮಾನರ್ಿಂಗ್ ಮಿಸ್ಬಾ ಎನ್ನುವ ಹೋಂ ಸ್ಟೇ ಅಥವಾ ಗೆಸ್ಟ್ ಹೌಸ್ ಹೊರಭಾಗದಲ್ಲಿ ನಾನು ಮತ್ತು ನನ್ನ ಕ್ಯಾಮರಮೆನ್ ಇದ್ದೆವು. ಆಗ ಅಲ್ಲಿ ಯಾವ ದಾಳಿಕೋರರೂ ಇರಲಿಲ್ಲ. ಐದು ನಿಮಿಷ ಅಲ್ಲೇ ಕಾದು ನಿಂತೆವು. ಯಾರು ಯಾಕಾಗಿ ಈ ಹೋಂ ಸ್ಟೇಗೆ ದಾಳಿ ಮಾಡಲು ಸಿದ್ದತೆ ಮಾಡುತ್ತಾರೆ ಎಂಬುದು ಗೊತ್ತೇ ಆಗಲಿಲ್ಲ. ಪಡೀಲ್ ಹೆದ್ದಾರಿಯಿಂದ ಅಂದಾಜು ಅರ್ಧ ಕಿಮಿ ರಸ್ತೆ ದಾರಿಯಲ್ಲಿ ಈ ಹೋಂ ಸ್ಟೇ ಇದೆ. ಇದರ ಸುತ್ತಲೂ ದೊಡ್ಡದಾದ ಕಂಪೌಂಡ್ ಇದೆ. ಒಂದೇ ಒಂದು ಗೇಟ್ ಇದೆ. ಗೇಟ್ನಿಂದ 60 ಮೀಟರ್ ದೂರದಲ್ಲಿ ಹೋಂ ಸ್ಟೇ ಬಂಗಲೆ ಇದೆ. ನಾನು ಗೇಟ್ ಹತ್ತಿರ ನಿಂತು ಒಮ್ಮೆ ಇಡೀ ಬಂಗಲೆಯತ್ತಾ ಕಣ್ಣಾಡಿಸಿದೆ. ಅಲ್ಲಿ ದಾಳಿ ಮಾಡಲು ಕಾರಣವಾಗುವಂತಹ ಯಾವುದೇ ಆ್ಯಕ್ಟಿವಿಟೀಸ್ ನನಗೆ ಗೋಚರಿಸಲಿಲ್ಲ. ಒಬ್ಬಳು ಹುಡುಗಿ ಹೊರಗೆ ಚೇರ್ನಲ್ಲಿ ಕುಳಿತಿದ್ದಳು. ಇನ್ನಿಬ್ಬರು ಹುಡುಗರು ಬಂಗಲೆಯ ಮತ್ತೊಂದು ಮೂಲೆಯಲ್ಲಿ ನಿಂತುಕೊಂಡು ಮೊಬೈಲ್ನಲ್ಲಿ ಆಟವಾಡುತ್ತಿದ್ದರು. ಅವರು ಯಾವುದೇ ರೀತಿಯಲ್ಲೂ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿರಲಿಲ್ಲ. ಆದುದರಿಂದ ದಾಳಿಕೋರರು ಬಯಸುವ ಸನ್ನಿವೇಶ ಅಲ್ಲಿರಲಿಲ್ಲ. ಆದುದರಿಂದ ಆಗಲೂ ನನಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಅನ್ನಿಸಲಿಲ್ಲ. ನನ್ನ ಮಾಹಿತಿ ತಪ್ಪಾದರೆ ಒಂದಿಡೀ ಪೊಲೀಸ್ ಇಲಾಖೆಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಮತ್ತು ಹೋಂ ಸ್ಟೇಯಲ್ಲಿದ್ದವರಿಗೆ ವಿನಾಕಾರಣ ಪೊಲೀಸ್ ಕಿರುಕುಳ ನೀಡಲು ಕಾರಣನಾಗುವಂತಾಗುತ್ತೇನೆ ಎಂಬ ಆತಂಕದಿಂದಲೇ ಮಾಹಿತಿ ನೀಡಲಿಲ್ಲ. ನಾನು ಈ ರೀತಿ ಯೋಚಿಸುತ್ತಿರುವಾಗಲೇ ಸುಮಾರು ಮೂವತ್ತೂ ಅಧಿಕ ಇದ್ದ ತಂಡವೊಂದು ಹೋಂ ಸ್ಟೇಯ ಗೇಟಿನತ್ತಾ ಬರುತ್ತಿತ್ತು. ನಾನು ತಕ್ಷಣ ಕುತೂಹಲದಿಂದಲೇ ಕೇಳಿದೆ. “ಏನು ವಿಷಯ? ಏನಾಗ್ತಾ ಇದೆ ಇಲ್ಲಿ ?” ಎಂದು ತುಳುವಿನಲ್ಲಿ ಪ್ರಶ್ನಿಸಿದೆ. ತಕ್ಷಣ ಯುವಕನೊಬ್ಬ “ಬ್ಯಾರಿಗಳು ನಮ್ಮ ಹಿಂದೂ ಹುಡುಗಿಯರನ್ನು ಇಲ್ಲಿ ಕರೆದುಕೊಂಡು ಬಂದಿದ್ದಾರೆ. ಅವರನ್ನು ಬಿಡಬಾರದು” ಎಂದ. ಅಷ್ಟರಲ್ಲಿ ಗುಂಪಿನಲ್ಲಿದ್ದ ಇನ್ನಿತರ ಯುವಕರು ಹೊರಗೆ ಕುಳಿತಿದ್ದ ಹುಡುಗಿಯತ್ತಾ ಕೈ ತೋರಿಸಿ “ಅಲ್ಲಿ ಅಲ್ಲಿ ಇದ್ದಾಳೆ ಹುಡುಗಿ, ಅಗೋ ಹುಡುಗರು ಅಲ್ಲಿದ್ದಾರೆ ” ಎಂದು ಯುವಕ ಯುವತಿಯರತ್ತಾ ಓಡಿಕೊಂಡು ದಾಳಿಗೆ ಸಿದ್ದರಾದರು. ತಕ್ಷಣ ದಾಳಿ ಅರಿವಾದ ಯುವತಿ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಬಂಗಲೆಯ ಒಳ ಹೋದಳು. ಮತ್ತು ಬಾಗಿಲು ಹಾಕಲು ಯತ್ನಿಸಿದಳು. ಆಗ ಸುಮಾರು 30 ರಷ್ಟಿದ್ದ ದಾಳಿಕೋರರು ಬಾಗಿಲನ್ನು ಬಲವಾಗಿ ದೂಡಿ ಬಾಗಿಲು ತೆರೆಯುವಲ್ಲಿ ಸಫಲರಾದರು.
ಈಗ ನನ್ನ ಪ್ರಜ್ಞೆ ನಿಜವಾಗಿಯೂ ಜಾಗೃತವಾಗಿತ್ತು. ತಕ್ಷಣ ನನ್ನ ಕಚೇರಿ ಮೊಬೈಲ್ 9972570044 ನಿಂದ ಮಂಗಳೂರು ಗ್ರಾಮಾಂತರ ಪೊಲೀಸ್ ನಿರೀಕ್ಷಕ ರವೀಶ್ ನಾಯಕ್ಗೆ 9480805330 ಎಂಬ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದೆ. ಆಗ ಸುಮಾರು 7.15 ರ ಸಂಜೆ ಸಮಯ. ರವೀಶ್ ನಾಯಕ್ ನನ್ನ ಕರೆ ಸ್ವೀಕರಿಸಲೇ ಇಲ್ಲ. ಒಂದು ಕಡೆಯಿಂದ ದಾಳಿ ಪ್ರಾರಂಭವಾಗಿದೆಯಷ್ಟೆ. ಇನ್ನೇನು ಆಗುತ್ತೋ ಎಂಬ ಆತಂಕದ ನಡುವೆಯೇ ಕಕ್ಕಾಬಿಕ್ಕಿಯಾದ ಹುಡುಗಿಯರು ಎಲ್ಲೆಲ್ಲೋ ಓಡಲು ಶುರುವಿಟ್ಟುಕೊಂಡಿದ್ದರು. ಪೊಲೀಸರಿಗೆ ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಬೇರೆ ದಾರಿ ಕಾಣದೆ ಟಿವಿ 9 ವರದಿಗಾರನಾಗಿರುವ ನನ್ನ ಗೆಳೆಯ ರಾಜೇಶ್ ರಾವ್ ಬಳಿ ಪೊಲೀಸರಿಗೆ ಫೋನ್ ಮಾಡುವಂತೆ ಹೇಳಿದೆ. ರಾಜೇಶ್ ರಾವ್ ಅವರ ಮೊಬೈಲ್ನಿಂದ ಇನ್ಸ್ಸ್ಪೆಕ್ಟರ್ ರವೀಶ್ ನಾಯಕ್ಗೆ ಕರೆ ಮಾಡಿದರು. ಆಗಲೂ ರವೀಶ್ ನಾಯಕ್ ಕರೆ ಸ್ವೀಕರಿಸಲೇ ಇಲ್ಲ.
ನಾವು ಇನ್ಸ್ಸ್ಪೆಕ್ಟರ್ಗೆ ಫೋನ್ ಕರೆ ಮಾಡುತ್ತಿದ್ದಂತೆ ನಮ್ಮ ಕ್ಯಾಮರಾಮೆನ್ ದಾಳಿಕೋರರ ಹಿಂದೆಯೇ ಹೋಗಿ ಕರ್ತವ್ಯ ನಿರ್ವಹಿಸುತ್ತಿದ್ದ. ನಾನು ಮತ್ತು ನನ್ನ ಕ್ಯಾಮರಮೆನ್ ಮಾತ್ರ ಅಲ್ಲಿದ್ದೆವು. ಅಷ್ಟರಲ್ಲಿ ಸ್ಥಳೀಯ ಸಹಾಯ ಎಂಬ ಕೇಬಲ್ ಚಾನೆಲ್ ಕ್ಯಾಮರಮೆನ್ ಶರಣ್ ಮತ್ತು ಫೋಟೋಗ್ರಾಫರ್ ವಿನಯ ಕೃಷ್ಣ ಅಲ್ಲಿಗೆ ಬಂದಿದ್ದರು. ನಾನು ಎಲ್ಲವನ್ನೂ ಮೂಕ ಪ್ರೇಕ್ಷಕನಾಗಿ ನೋಡುತ್ತಿದ್ದೇನೆ. ನನಗೇನೂ ಮಾಡಲಾರದ ಅಪರಾಧಿ ಮನೋಭಾವ ನನ್ನಲ್ಲಿ ಮೂಡಿತ್ತು. ದಾಳಿಕೋರರಲ್ಲಿ ಶೇಕಡಾ 50ಕ್ಕೂ ಅಧಿಕ ಮಂದಿ ಮಧ್ಯಪಾನ ಮಾಡಿದ್ದರು. ನಾನು ಹೇಳಿದರೂ ಕೇಳೋ ಸ್ಥಿತಿಯಲ್ಲಿ ಇರಲಿಲ್ಲ. ಈ ಜಗತ್ತಿನಲ್ಲಿ ಏನೇನೋ ಹಿಂಸೆಗಳು ನಡೆದಿರಬಹುದು. ಆದರೆ ನನ್ನ ಜೀವಮಾನದಲ್ಲಿ ಇಂತಹ ಹಿಂಸೆಯನ್ನು ನೋಡಿರಲಿಲ್ಲ. ನನ್ನ ಕ್ಯಾಮರಾಮೆನ್ ಎಲ್ಲೆಲ್ಲಿ ಹೊಡೆಯುತ್ತಾರೋ ಅಲ್ಲಲ್ಲಿ ಓಡುತ್ತಿದ್ದ. ನಾನು ನೋಡುತ್ತಿದ್ದೆ ಮತ್ತು ಸಾಧ್ಯವಾದಷ್ಟೂ ಕಿರಿಚುತ್ತಿದ್ದೆ. “ಏ ಹುಡುಗಿರಿಗೆ ಹೊಡಿಬೇಡ್ರಿ” ಎಂತ ಬೊಬ್ಬೆ ಹೊಡೆಯುತ್ತಿದ್ದೆ. ನನ್ನ ಬೊಬ್ಬೆ ನನ್ನ ಕ್ಯಾಮರಾದಲ್ಲಿ ದಾಖಲಾಗಿದೆಯೇ ವಿನಹ ದಾಳಿಕೋರರ ಹೃದಯಕ್ಕೆ ತಟ್ಟಲೇ ಇಲ್ಲ. ಹಲ್ಲೆಗೆ ಒಳಗಾದ ಯುವಕರು ಗೋಗೆರೆಯುತ್ತಿದ್ದರು. “ಪ್ಲೀಸ್ ಬಿಟ್ಟುಬಿಡಿ. ನಾವು ಬತರ್್ ಡೇ ಪಾಟರ್ಿ ನಡೆಸುತ್ತಿದ್ದೇವೆ, ಪ್ಲೀಸ್” ಎಂದು ಕಾಲಿಗೆ ಬೀಳುತ್ತಾನೆ. ಆದರೂ ಕ್ರೂರಿ ದಾಳಿಕೋರರ ಮನಸ್ಸು ಕರಗುವುದಿಲ್ಲ. ಇಷ್ಟೇ ಆಗಿದ್ದರೆ ನಾನು ಮರೆತುಬಿಡುತ್ತಿದ್ದೆ. ಆದರೆ ಮುಂದೆ ನನ್ನ ಕಣ್ಣ ಮುಂದೆ ಬಂದಿದ್ದು ಭೀಭತ್ಸ ದೃಶ್ಯಗಳು.
ನಾಲ್ವರು ಹುಡುಗರಿಗೆ ದಾಳಿಕೋರರು ಬಡಿಯುತ್ತಿರುವ ದೃಶ್ಯ ನೋಡಿ ಶಾಕ್ಗೆ ಒಳಗಾದ ಯುವತಿಯರು ದಿಕ್ಕಾಪಾಲಾಗಿ ಓಡಲು ಶುರುವಿಟ್ಟುಕೊಂಡರು. ಬಂಗಲೆಯ ತುಂಬಾ ಓಡುತ್ತಿರುವ ಯುವತಿಯರ ಹಿಂದೆ ಒಂದಷ್ಟು ದಾಳಿಕೋರರ ಓಟ ನಡೆಯುತ್ತಿತ್ತು. ನಂಬಿದರೆ ನಂಬಿ. ಬಿಟ್ಟರೆ ಬಿಡಿ. ಒಬ್ಬಳು ಹುಡುಗಿ ಒಂದನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾಳೆ. ಅವಳನ್ನು ಹಿಡಿದುಕೊಂಡ ಇಪ್ಪತ್ತೂ ಅಧಿಕ ದಾಳಿಕೋರ ಕಾರ್ಯಕರ್ತರು ಆಕೆಯ ವಸ್ತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಆಕೆಯ ಕೆನ್ನೆಗೆ ಬಿಗಿದು, ಗೋಡೆಗೆ ನೂಕಿದ್ದಾರೆ. ಅಷ್ಟರಲ್ಲಿ ಪಿಂಕ್ ಡ್ರೆಸ್ ತೊಟ್ಟುಕೊಂಡಿದ್ದ ಹುಡುಗಿಯೊಬ್ಬಳು ಓಡಲು ಶುರುವಿಟ್ಟುಕೊಂಡಳು. ಆಕೆಯನ್ನು ಹಿಡಿದ ಗೂಂಡಾ ದಾಳಿಕೋರರು ಅಕ್ಷರಶ ಆಕೆಯನ್ನು ಬೆತ್ತಲು ಮಾಡಿದ್ದಾರೆ. ಒಂದು ತುಂಡು ವಸ್ತ್ರ ಹೊರತುಪಡಿಸಿ ವಿವಸ್ತ್ರ ಮಾಡಿದ ನಂತರ ಆಕೆಯ ಅಂಗಾಂಗಳ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡಿದ್ದಾರೆ. ಇದು ನನ್ನನ್ನು ಅಕ್ಷರಶ ಅಧೀರನನ್ನಾಗಿಸಿದ ಧೃಶ್ಯ. ಈ ರೀತಿಯ ದೃಶ್ಯವನ್ನು ನಾನು ನನ್ನ ಜೀವಮಾನದಲ್ಲಿ ನೋಡಿರಲಿಲ್ಲ. ಕೇಳಿದ್ದೆ. ಇವೆಲ್ಲವೂ ವಿಶುವಲ್ ಆಗದೇ ಇರುವಂತದ್ದು. ಶೂಟಿಂಗ್ ಆಗಿದ್ದು ಸ್ವಲ್ಪವೇ ಸ್ವಲ್ಪ ಭಾಗ. ಆನಂತರ ಪಾಟರ್ಿಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಹುಡುಗ ಹುಡುಗಿಯರನ್ನು ಒಂದೇ ಕೋಣೆಯಲ್ಲಿ ಹಾಕಿ ಚಿಲಕ ಹಾಕಿದರು. ಇವೆಲ್ಲವೂ ನಡೆದಿದ್ದು ಮಿಂಚಿನ ವೇಗದಲ್ಲಿ. ಹೆಚ್ಚೆಂದರೆ 15 ನಿಮಿಷದಲ್ಲಿ ಇವೆಲ್ಲವೂ ಮುಗಿದು ಹೋಗಿತ್ತು.
ದಾಳಿಕೋರರ ಕಾರ್ಯಾಚರಣೆ ಒಂದು ಹಂತಕ್ಕೆ ಮುಗಿದ ನಂತರ ಪೊಲೀಸ್ ಇನ್ಸ್ಸ್ಪೆಕ್ಟರ್ ರವೀಶ್ ನಾಯಕ್, ಪೊಲೀಸ್ ಎಸೈ ಮುನಿಕಂಠ ನೀಲಸ್ವಾಮಿ ಮತ್ತು ಪೋಲೀಸ್ ಪೇದೆಗಳು ಬಂದಿದ್ದಾರೆ. ವಿಶೇಷ ಎಂದರೆ ಪೊಲೀಸರಿಗೆ ದಾಳಿಕೋರರ ಜೊತೆ ಮೊದಲೇ ಸಂಪರ್ಕ ಇರೋ ರೀತಿಯಲ್ಲಿ ಪೊಲೀಸರು ವತರ್ಿಸಿದ್ದಾರೆ. ಸುಮಾರು ಅರ್ಧ ಗಂಟೆಗಳಿಗೂ ಹೆಚ್ಚು ಕಾಲ ಪೊಲೀಸರು ದಾಳಿಕೋರರ ಜೊತೆ ಮಾತಕತೆಯಲ್ಲಿ ತಲ್ಲೀನರಾಗಿದ್ದರು. ದಾಳಿಕೋರರ ಬಂಧಿಸುವ ಬದಲು ಅವರ ಜೊತೆ ಹರಟೆ ಹೊಡೆಯುತ್ತಿರುವುದು ನನಗೆ ಆಶ್ಚರ್ಯ ಉಂಟು ಮಾಡಿತ್ತು. ಇವೆಲ್ಲಾ ನಡೆಯುತ್ತಿರಬೇಕಾದರೆ ಪಾಟರ್ಿಯಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬ ತಪ್ಪಿಸಿಕೊಳ್ಳಲು ಯತ್ನಿಸಿದ. ತಕ್ಷಣ ಪೊಲೀಸರು ಆ ಯುವಕನನ್ನು ವಶಕ್ಕೆ ತೆಗೆದುಕೊಂಡರು. ಪೊಲೀಸರ ವಶದಲ್ಲಿದ್ದ ಯುವಕನಿಗೆ ದಾಳಿಕೋರರು ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಿದರು.
ಅಷ್ಟರಲ್ಲಿ ನಮ್ಮ ಇನ್ನಷ್ಟೂ ಕ್ಯಾಮರಮೆನ್ಗಳು ಬಂದಿದ್ದರು. ನಾನು ನನ್ನ ಕ್ಯಾಮರಮೆನ್ ಜೊತೆ ಕಚೇರಿಗೆ ಬಂದು ಎಲ್ಲಾ ವಿಝುವಲ್ಸ್ ಬೆಂಗಳೂರು ಕಚೇರಿಗೆ ಅಪ್ಲಿಂಕ್ ಮಾಡಿದೆ. 7.45 ಕ್ಕೇ ವರದಿ ಪ್ರಕಟವಾಯಿತು. ವರದಿ ಪ್ರಕಟವಾದ ಕೆಲವೇ ನಿಮಿಷಗಳಲ್ಲಿ ನಮ್ಮ ಚಾನೆಲ್ನಲ್ಲಿ ಬರುತ್ತಿದ್ದ ವರದಿ ಮತ್ತು ದೃಶ್ಯಗಳನ್ನು ರಾಷ್ಟ್ರೀಯ ವಾಹಿನಿಗಳು ಬಳಕೆ ಮಾಡಿಕೊಂಡು ಸುದ್ಧಿ ಪ್ರಕಟಿಸಿದವು. ತಕ್ಷಣ ಇದೊಂದು ರಾಷ್ಟ್ರೀಯ ಸುದ್ಧಿಯಾಗಿ ಮಾರ್ಪಡಾಗಿತ್ತು. ಇದರಿಂದ ತೀವ್ರ ಕೋಪಗೊಂಡಿದ್ದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನನ್ನ ಗೆಳೆಯ, ಟಿವಿ 9 ವರದಿಗಾರ ರಾಜೇಶ್ ರಾವ್ಗೆ ದೂರವಾಣಿ ಕರೆ ಮಾಡಿದ್ದಾರೆ. ರಾಜೇಶ್ಗೆ ಸೀಮಂತ್ ಕುಮಾರ್ ಸಿಂಗ್ ಕರೆ ಮಾಡಿದಾಗ ನಾನೂ ಕೂಡಾ ರಾಜೇಶ್ ಜೊತೆಗಿದ್ದೆ. ಸೀಮಂತ್ ಮಾತುಗಳನ್ನು ರಾಜೇಶ್ ಲೌಡ್ ಸ್ಪೀಕರ್ ಇಟ್ಟು ನನಗೆ ಕೇಳಿಸುತ್ತಿದ್ದ. “ನವೀನ ನ್ಯೂಸ್ ಯಾಕೆ ಮಾಡಬೇಕಿತ್ತು. ಅವನಿಗೆ ಅಕ್ಕ ತಂಗಿ ಇಲ್ಲವಾ ? ಅವರಿಗೆ ಹೊಡೆಯಲ್ವ ? ಅದನ್ನು ಟಿವಿಯಲ್ಲಿ ತೋರಿಸ್ತಾರಾ ? ನೋಡ್ಕೋತೀನಿ ನಾನು ಅವನನ್ನು. ಅವನು ಮಂಗಳೂರಿನಲ್ಲಿ ತಾಲೀಬಾನ್ ಸಂಸ್ಕೃತಿ ಇದೆ ಎಂದು ಹೇಳಿದ. ಅಸ್ಸಾಂನ ಘಟನೆಗೆ ಈ ಘಟನೆಯನ್ನು ಹೋಲಿಸಿ ಲೈವ್ ಕೊಟ್ಟ. ಈ ಬಾರಿ ಅವನನ್ನು ಬಿಡುವುದಿಲ್ಲ. ಈ ಕೇಸ್ನಲ್ಲಿ ಅವನನ್ನು ಫಿಕ್ಸ್ ಮಾಡುತ್ತೇನೆ. ಅವನಿಗೆ ಎಷ್ಟು ಬೇಕಾದರೂ ಇಂಪ್ಲ್ಯೂಯನ್ಸ್ ಇರಲಿ. ಫಿಕ್ಸ್ ಮಾಡುವುದು ಮಾಡೋದೆ” ಎಂದು ಸೀಮಂತ್ ಹೇಳುತ್ತಿದ್ದರು. “ಹುಡುಗಿಯರಿಗೆ ಮತ್ತು ಹುಡುಗರಿಗೆ ಹೊಡೆದಿದ್ದು ದೊಡ್ಡ ವಿಷಯ ಅಲ್ಲ. ಅದನ್ನು ಚಿತ್ರೀಕರಿಸಿದ್ದು ಮಹಾ ಅಪರಾಧ ಎಂಬುದಷ್ಟೇ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತಿನ ಅರ್ಥ ಎಂಬುದಂತೂ ಸ್ಪಷ್ಟ.
ಇಂದು ಬೆಳಿಗ್ಗೆ ನನಗೆ ಇನ್ನೊಂದು ಶಾಕ್ ಕಾದಿತ್ತು. ನಾನು ಯಾರ ಪರವಾಗಿ ಸುದ್ದಿ ಮಾಡಿದ್ದೇನೋ ಅವರೇ ನನ್ನ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನನಗೆ ಸ್ಪಷ್ಟವಾಗಿ ಗೊತ್ತಿತ್ತು. ಹಲ್ಲೆಗೊಳಗಾದ ಯಾವುದೇ ಹುಡುಗ ಹುಡುಗಿ ಸ್ವ ಇಚ್ಚೆಯಿಂದ ನನ್ನ ವಿರುದ್ಧ ದೂರು ನೀಡಲು ಸಾದ್ಯವಿಲ್ಲ. ಪ್ಲೀಸ್ ಹೊಡಿಯಬೇಡಿ ಎಂದು ನಾನು ಸಾಧ್ಯವಾದಷ್ಟು ಬೊಬ್ಬೆ ಹಾಕುತ್ತಿದ್ದದ್ದು ಹಲ್ಲೆಗೊಳಗಾದ ಯುವತಿಯರಿಗೆ ಗೊತ್ತಿತ್ತು ಅಂದುಕೊಳ್ಳುತ್ತೇನೆ. ಸಂಜೆಯಾಗುವಾಗ ನನ್ನ ಡೌಟ್ ಕ್ಲೀಯರ್ ಆಗಿತ್ತು. ಮಾಧ್ಯಮದ ಜೊತೆ ಮಾತನಾಡಿದ ಹಲ್ಲೆಗೊಳಗಾದ ಯುವಕರು “ನಾವು ಮಾಧ್ಯಮ ಮಂದಿ ವಿರುದ್ಧ ದೂರು ನೀಡಿಲ್ಲ. ನಮಗೆ ಮಾಧ್ಯಮದವರು ಸಪೋಟರ್್ ಮಾಡಿದ್ದಾರೆ” ಎಂದರು.
ಅದೇನೇ ಇರಲಿ. ಮಂಗಳೂರು ಗ್ರಾಮಾಂತರ ಪೊಲೀಸರು ನನ್ನ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ನಾವು ಚಿತ್ರೀಕರಿಸಿದ ವಿಝುವಲ್ಸ್ ಆಧಾರದಲ್ಲೇ ಈವರೆಗೆ 8 ಮಂದಿ ದಾಳಿಕೋರರನ್ನು ಬಂಧಿಸಿದ್ದಾರೆ. ನಾವು ಒಂದು ಆಕ್ಷೇಪಾರ್ಹ ಘಟನೆಯನ್ನು ಚಿತ್ರೀಕರಿಸಿ ಸುದ್ದಿ ಪ್ರಸಾರ ಮಾಡಿದ್ದೇವೆಯೇ ಹೊರತು ಆಕ್ಷೇಪಾರ್ಹ ದೃಶ್ಯವನ್ನಲ್ಲ ಎಂಬುದು ನನಗೆ ಸ್ಪಷ್ಟತೆ ಇದೆ. ಮಂಗಳೂರಿನಲ್ಲಿ ಜುಲೈ 28 ರಾತ್ರಿ ನಡೆದ ದಾಳಿ ಹೊಸದೇನೂ ಅಲ್ಲ. ಪ್ರತೀ ವಾರಕ್ಕೊಂದು ಇಂತಹ ಘಟನೆ ನಡೆಯುತ್ತದೆ. ಮುಸ್ಲಿಂ ಹುಡುಗ ಹಿಂದೂ ಹುಡುಗಿ ಒಟ್ಟಿಗಿದ್ದರೆ ಹಿಂದೂ ಮತೀಯವಾದಿಗಳು ಅವರಿಗೆ ಹಲ್ಲೆ ಮಾಡಿ ಮತೀಯವಾದಿಗಳೇ ಅವರನ್ನು ಠಾಣೆಗೆ ಕೊಂಡೊಯ್ದು ಪೊಲೀಸರ ವಶಕ್ಕೆ ನೀಡುತ್ತಾರೆ. ಪೊಲೀಸರು ಪ್ರೇಮಿ(ಗೆಳೆಯರು)ಗಳ ತಂದೆ ತಾಯಿಯನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸುತ್ತಾರೆ. ನಾವು ಶೂಟಿಂಗ್ ಮಾಡದೇ ಇದ್ದರೆ ಇಲ್ಲೂ ಅಷ್ಟೇ ನಡೆಯುತ್ತಿತ್ತು. ನಮ್ಮ ಶೂಟಿಂಗ್ನಿಂದ ಕೋಮುವಾದಿಗಳ ಒಂದು ಕ್ರೂರ ಮುಖ ಬಯಲಾಗಿದೆ ಮತ್ತು ಎಂಟು ಮಂದಿ ಬಂಧಿತರಾಗುವಂತೆ ಮಾಡಿದೆ. ಯಾರು ಏನೇ ಅನ್ನಲ್ಲಿ. ಯಾವ ಕೇಸೇ ಬೀಳಲಿ. ನಾನು ಪತ್ರಕರ್ತನಾಗಿ ಸಮಾಜಕ್ಕೆ ಏನೋ ನ್ಯಾಯ ನೀಡಿದ್ದೇನೆ ಅನ್ನಿಸುತ್ತಿದೆ. ಅಳುತ್ತಿರುವ ನನ್ನ ಮನಸ್ಸಿಗೆ ಸಧ್ಯ ಅಂತಹ ಸಮಾಧಾನ ಸಾಕು.
ನನ್ನ ಮೇಲೆ ದೂರು ನೀಡಿರುವುದು ಮತ್ತು ನನ್ನ ವಿರುದ್ಧ ಎಫ್ಐಆರ್ ದಾಖಲಿಸಿರುವುದು ದೊಡ್ಡ ವಿಷಯವೇ ಅಲ್ಲ. ನನ್ನ ಮೇಲಿನ ಎಫ್ಐಆರ್ನಿಂದ ದಾಳಿಕೋರ ಕ್ರೂರಿ ಮೃಗಗಳಿಗೆ ಶಿಕ್ಷೆಯಾಗುವುದಾದರೆ ನನ್ನ ಮೇಲಿನ ಎಫ್ಐಆರನ್ನು ನಾನು ಖುಷಿ ಪಡುತ್ತೇನೆ. ಯಾವುದಾದರೂ ಒತ್ತಡಕ್ಕೆ ಮಣಿದು ಆರೋಪದಿಂದ ನನ್ನನ್ನು ಬಿಡುಗಡೆ ಮಾಡುವಾಗ ಅಂತಹ ಬಿಡುಗಡೆಯಿಂದ ಆರೋಪಿ ದಾಳಿಕೋರರಿಗೆ ಲಾಭವಾಗುವುದಾದರೆ ಆಂತಹ ಬಿಡುಗಡೆ ನನಗೆ ಬೇಕಾಗಿಲ್ಲ. ನನ್ನ ಸಮ್ಮುಖದಲ್ಲೇ ನನ್ನ ಸಹೋದರಿಯರ ಮೇಲೆ ದಾಳಿ ನಡೆಸಿದ ದಾಳಿಕೋರರಿಗೆ ನ್ಯಾಯಾಲಯ ಅದೆಂತಹ ಶಿಕ್ಷೆ ನೀಡಿದರೂ ನ್ಯಾಯ ನೀಡಿದಂತಾಗುವುದಿಲ್ಲ. ಆದರೂ ಅವರಿಗೆ ಶಿಕ್ಷೆಯಾಗಬೇಕು.
——————————————————
ಇನ್ನಷ್ಟೂ ಬರೆಯಲು ಇದೆ. ಬರೆಯಲು ಸಮಯ ಸಾಕಾಗಿಲ್ಲ. ಯಾವುದೇ ವ್ಯಕ್ತಿ ಯಾ ಸಂಘಟನೆಗೆ ಈ ದಾಳಿ ವಿರುದ್ದ ಹೋರಾಟ ಮಾಡುವುದಾದರೆ ಇನ್ನಷ್ಟೂ ಮಾಹಿತಿ ಬೇಕಾಗಿದ್ದಲ್ಲಿ ಅಥವಾ ಯಾವುದೇ ತನಿಖಾ ಸಂಸ್ಥೆಗೆ ಮಾಹಿತಿ ಬೇಕಾದ್ದಲ್ಲಿ ಯಾವುದೇ ಅವಧಿಯಲ್ಲಿ ನನ್ನನ್ನು ಸಂಪರ್ಕಿಸಬಹುದು .
——————————————————
ಇನ್ನಷ್ಟೂ ಬರೆಯಲು ಇದೆ. ಬರೆಯಲು ಸಮಯ ಸಾಕಾಗಿಲ್ಲ. ಯಾವುದೇ ವ್ಯಕ್ತಿ ಯಾ ಸಂಘಟನೆಗೆ ಈ ದಾಳಿ ವಿರುದ್ದ ಹೋರಾಟ ಮಾಡುವುದಾದರೆ ಇನ್ನಷ್ಟೂ ಮಾಹಿತಿ ಬೇಕಾಗಿದ್ದಲ್ಲಿ ಅಥವಾ ಯಾವುದೇ ತನಿಖಾ ಸಂಸ್ಥೆಗೆ ಮಾಹಿತಿ ಬೇಕಾದ್ದಲ್ಲಿ ಯಾವುದೇ ಅವಧಿಯಲ್ಲಿ ನನ್ನನ್ನು ಸಂಪರ್ಕಿಸಬಹುದು .
ನನ್ನ ವಿಳಾಸ :
ನವೀನ್ ಸೂರಿಂಜೆ
ಪತ್ರಕರ್ತ
ಕಸ್ತೂರಿ ನ್ಯೂಸ್ 24
ಮಂಗಳೂರು
ಮೊಬೈಲ್ : 9972570044, 8971987904
ನವೀನ್ ಸೂರಿಂಜೆ
ಪತ್ರಕರ್ತ
ಕಸ್ತೂರಿ ನ್ಯೂಸ್ 24
ಮಂಗಳೂರು
ಮೊಬೈಲ್ : 9972570044, 8971987904
Saturday, 23 June 2012
ಅಮ್ಮಾ.... ನಾನು ಕದ್ದಿಲ್ಲ
ತಾಯಿ ಮತ್ತು ಮಕ್ಕಳ ನಡುವಿನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರೀತಿಯ ಹಲವು ರೂಪಗಳು ಕಪಟವಾಗಿದ್ದರೂ ಈ ಪ್ರೀತಿಯು ನಿಷ್ಕಳಂಕವಾಗಿರುತ್ತದೆ. ಮಕ್ಕಳಿಗೆ ನಾನಾ ಕಾರಣಗಳಿಂದ ತಾಯಿಯೊಂದಿಗೆ ಪ್ರೀತಿ ಕಡಿಮೆಯಾದರೂ ತಾಯಿಗೆ ಮಾತ್ರ ಮಕ್ಕಳೊಂದಿಗೆ ಪ್ರೀತಿ ಹೆಚ್ಚಾಗುತ್ತಿರುತ್ತದೆ. ಅದು ಜೀವನದ ಕೊನೆಯವರೆಗೂ ಹಾಗೇ ಮುಂದುವರಿಯುತ್ತದೆ. ತಾಯಿಯು ಮಕ್ಕಳಿಗೋಸ್ಕರ ಸಿಕ್ಕಾಪಟ್ಟೆ ಕಷ್ಟ ಅನುಭವಿಸುತ್ತಾಳೆ. ತಾಯಿಯ ಪ್ರಾರ್ಥನೆಯ ವಸ್ತುವಾಗಿ ಯಾವಾಗಲೂ ಮಕ್ಕಳು ಸ್ಥಾನ ಪಡೆದಿರುತ್ತಾರೆ. ಇಂದು ನಾವು ಹೊರಗಡೆ ಹೋಗಿ ಅಥವಾ ಯಾವುದಾದರೂ ವಾಹನದಲ್ಲಿ ಸುತ್ತಾಡಿ ಸುರಕ್ಷಿತವಾಗಿ ಮನೆಗೆ ತಲುಪುವುದಿದ್ದರೆ ಅದು ತಾಯಿಯ ಪ್ರಾರ್ಥನೆಯ ಫಲ ಎಂದೇ ನಾನು ನಂಬುತ್ತೇನೆ. ಯಾಕೆಂದರೆ ಅವಳ ಪ್ರಾರ್ಥನೆಯಲ್ಲಿ ಸ್ವಾರ್ಥ ಇರುವುದಿಲ್ಲ. ಮಕ್ಕಳಿಗಾಗಿ ಮಿಡಿಯುವ ಹೃದಯದಿಂದ ಹೊರಡುವ ಪ್ರಾರ್ಥನೆಯು ತೀಕ್ಷ್ಣವಾಗಿರುತ್ತದೆ.
ಮಕ್ಕಳು ಸಂಕಷ್ಟ ಅನುಭವಿಸುವಾಗ ಅವರಿಗೆ ನೆನಪಾಗುವುದು ತಾಯಿಯದ್ದಾಗಿದೆ. ತಾಯಿಯ ಸಾಂತ್ವನದ ನುಡಿಗಳು ಅವರ ಅರ್ಧ ಸಂಕಷ್ಟವನ್ನು ದೂರ ಮಾಡುತ್ತವೆ. ಈ ಘಟನೆಯನ್ನೊಮ್ಮೆ ಓದಿ ನೋಡಿ. ಒಂದು ವರ್ಷದ ಹಿಂದೆ ನಡೆದ ಘಟನೆ. ಗೆಳೆಯರೊಂದಿಗೆ ಗೋವಾಕ್ಕೆ ಹೋಗಿ ಮರಳುವಾಗ ನಡೆದ ಕಣ್ಣೀರಿನ ಕಥೆಯಿದು. ಗೋವಾದಿಂದ ಕಲ್ಲಿಕೋಟೆಗಿರುವ ಟ್ರೈನ್ ನಿಮಿಷಗಳ ವ್ಯತ್ಯಾಸದಿಂದ ತಪ್ಪಿ ಹೋಯಿತು. ಮನೆಗೆ ಬೇಗನೇ ತಲುಪಬೇಕು ಎಂಬ ತವಕದಿಂದ ವೊದಲು ಬಂದ ಮಂಗಳೂರು ಕಡೆಗಿರುವ ಗಾಡಿ ಹತ್ತಿ ಮಂಗಳೂರು ತಲುಪಿದೆವು. ಆಗ ರಾತ್ರಿ 11ರ ಸಮಯ. ಜನ ಸಂದಣಿ ಅಷ್ಟೇನೂ ಇರಲಿಲ್ಲ. ಕಲ್ಲಿಕೋಟೆಗಿರುವ ಟ್ರೈನಿನ ಕುರಿತು ಅಲ್ಲಿ ವಿಚಾರಿಸಿದಾಗ, ಮುಂಜಾನೆ 6 ಗಂಟೆಗೆ ಎಂಬ ಕಳವಳಕಾರಿ ಉತ್ತರ ಸಿಕ್ಕಿತು. ನಾವು ಸ್ಟೇಶನಿನಲ್ಲಿ ನಿಂತು, ಕುಳಿತು, ನಡೆದು, ಲ್ಯಾಪ್ಟಾಪಿನಲ್ಲಿ ಗೇಮ್ ಆಡಿ ಸಮಯ ಕಳೆದೆವು. ರಾತ್ರಿ ಮೂರು ಗಂಟೆಯ ಸಮಯ....
ವಿಶ್ರಾಂತಿ ಕೊಠಡಿಯ ಕುರ್ಚಿಯೊಂದರಲ್ಲಿ ನಿದ್ರೆಗೆ ಜಾರಿದ ನಾನು ಮಹಿಳೆಯೋರ್ವಳ ಕಿರುಚಾಟದಿಂದ ಥಟ್ಟನೆ ಎಚ್ಚೆತ್ತುಕೊಂಡೆ. 'ದೇವರೇ ನನ್ನ ಸರ ಕಾಣುತ್ತಿಲ್ಲ' ಎಂದು ಅವಳು ಬೊಬ್ಬೆ ಹೂಡೆಯುತ್ತಿದ್ದಳು. ಏನು ಎಂದು ತಿಳಿಯದೆ ಸೇರಿದ್ದ ಜನರ ಗುಂಪಿನ ಕಡೆಗೆ ನಾನು ಓಟಕ್ಕಿತ್ತೆ. ಅಲ್ಲಿ ಸೇರಿದ್ದ ಜನರ ಮಾತಿನಲ್ಲಿ ಸರ ಕಳ್ಳತನ ನಡೆದಿದೆ ಎಂದು ತಿಳಿಯಿತು. ಅವರು ಯಾವುದೋ ತೀರ್ಥಕ್ಷೇತ್ರಕ್ಕೆ ಹೋಗಿ ಮರಳುವವರಾಗಿದ್ದರು. ಈ ಮಹಿಳೆ ಅಳು ನಿಲ್ಲಿಸಲಿಲ್ಲ. ಪತಿಯು ಅತ್ತಿತ್ತ ನಡೆಯುತ್ತಾ ಯಾರ್ಯಾರನ್ನೋ ನೋಡುತ್ತಿದ್ದಾನೆ. ಓರ್ವ ಕಪು ಅಂಗಿ ಧರಿಸಿದ ಕಳ್ಳನ ಮುಖಭಾವ ಹೊದಿದ್ದ ಒಬ್ಬ ಹೂಡುಗನು ಅತ್ತಿತ್ತ ಅಲೆಯುತ್ತಿದ್ದುದನ್ನು ನಾನು ನೋಡಿದ್ದೇನೆ ಎಂದು ಗುಂಪಿನಲ್ಲಿದ್ದ ಯಾರೋ ಹೇಳಿದರು. ಅಂತಹ ಚಹರೆ ಹೊಂದಿದ ಹುಡುಗನನ್ನು ಹುಡುಕುತ್ತಾ ಎಲ್ಲರ ಕಣ್ಣುಗಳೂ ಅತ್ತಿತ್ತ ಹರಿದಾಡಿದವು. ಆದರೆ ಫಲಿತಾಂಶ ಶೂನ್ಯ.
ಸಮಯವು ಮುಂದೆ ಸಾಗುತ್ತಿತ್ತು.....
ನಾನು ಮತ್ತು ಗೆಳೆಯ ಕುಳಿತು ಲ್ಯಾಪ್ಟಾಪಿನಲ್ಲಿ ಸೀಡಿ ನೋಡುತ್ತಿದ್ದೆವು. ಆಗ ನನ್ನ ಬಳಿ ಕುಳಿತಿದ್ದ ಓರ್ವ ವ್ಯಕ್ತಿಯು ನನ್ನನ್ನು ಕರೆಯುತ್ತಾ ಹೇಳಿದನು. 'ಇಲ್ಲಿ ಕುಳಿತಿದ್ದದ್ದು ಆ ಹುಡುಗ ಅಂತ ಕಾಣುತ್ತೆ. ವಿಚಾರಿಸಿ.' ನಾನು ನೋಡಿದೆ. ಕಪ್ಪು ಅಂಗಿ ಧರಿಸಿದ ಒಬ್ಬ ಹುಡುಗ ನಡೆದುಕೊಂಡು ಹೋಗುತ್ತಿದ್ದನು. ತಡ ಮಾಡದೆ ಆ ಮಹಿಳೆಯ ಗಂಡನಿಗೆ ಮಾಹಿತಿ ನೀಡಿದೆ. ಇದನ್ನು ಕೇಳಿದ್ದೇ ತಡ ಅವನು ಹುಡುಗನನ್ನು ಹಿಡಿಯಲು ಹೊರಗೋಡಿದನು. ಅವನೊಂದಿಗೆ ಹಲವರು ಸೇರಿಕೊಂಡರು. ಲ್ಯಾಪ್ಟಾಪನ್ನು ಮಡಚಿ ನಾನೂ ಕೂಡಾ ಎಲ್ಲರಂತೆ ಓಡಿದೆ. ಆಗಲೇ ಅವರು ಆ ಹುಡುಗನನ್ನು ಹಿಡಿದಾಗಿತ್ತು. ನಾನು ಹುಡುಗನನ್ನೇ ನೋಡಿದೆ. 20ರ ಹರೆಯ ಇರಬಹುದು. ಬಿಳಿ ಮೈ ಬಣ್ಣ, ಅವನು ವಿಪರೀತ ಬೆವರಿದ್ದನು.
'ನೀನಲ್ಲವೇ ಇಲ್ಲಿ ಬಂದು ಸರ ಕದ್ದದ್ದು' ಜನರು ನಾಲ್ಕು ಭಾಗಗಳಿಂದಲೂ ಅವನನ್ನು ಎಳೆದಾಡುತ್ತಾ ಅವನನ್ನು ವಿಚಾರಿಸಿದರು. 'ಇಲ್ಲ, ನಾನು ಕದ್ದಿಲ್ಲ, ನಾನು ಈಗ ಇಲ್ಲಿಗೆ ಬರುತ್ತಿದ್ದೇನಷ್ಟೇ' ಕಣ್ಣೀರು ಸುರಿಸುತ್ತಾ ಅವನು ಹೇಳಿದನು. 'ಸುಳ್ಳು ಹೇಳುತ್ತಿದ್ದೀಯಾ ನನ್ಮಗನೇ' ಎಂದು ಆ ಮಹಿಳೆಯ ಗಂಡ ಅವನ ಮುಖಕ್ಕೊಂದು ಏಟು ನೀಡಿದನು. ಇದನ್ನು ಕಂಡದ್ದೇ ತಡ ಇತರರೂ ಕೂಡಾ ತಮ್ಮ ಕೈಲಾದುದನ್ನು ನೀಡಿದರು. ಪ್ರತೀ ಒದೆ ಬೀಳುವಾಗಲೂ 'ನಾನು ಕದ್ದಿಲ್ಲ... ದೇವರಾಣೆಗೂ ನಾನು ಕದ್ದಿಲ್ಲ... ನನ್ನನ್ನು ಹೊಡೆಯಬೇಡಿ' ಎಂದು ಬೇಡುತ್ತಿದ್ದನು. ಜನರಿಗೆ ಅವನ ಕೂಗು ಕೇಳಿಸಲೇ ಇಲ್ಲ. ಏಟು ಜೋರಾಗಿ ಬೀಳ ತೊಡಗಿದಾಗ ಅವನು ಓಡುವ ವಿಫಲ ಪ್ರಯತ್ನ ನಡೆಸಿದನು. ಇದರಿಂದಾಗಿ ಏಟಿನ ವೇಗವು ಹೆಚ್ಚತೊಡಗಿ ಅವನ ಬಾಯಿಯಿಂದ ರಕ್ತ ಒಸರತೊಡಗಿತು. ಆಗಲೂ ಅವನು 'ನಾನು ಕದ್ದಿಲ್ಲ... ನನ್ನ ತಾಯಿಯಾಣೆ ನಾನು ಕದ್ದಿಲ್ಲ' ಎಂದು ಅಳುತ್ತಿದ್ದನು. ಇದನ್ನೆಲ್ಲಾ ನೋಡುತ್ತಿದ್ದ ನಾನು ಕೇವಲ ಮೂಕ ಪ್ರೇಕ್ಷಕನಾದೆ.
ಯಾರೋ ಪೋಲೀಸರಿಗೆ ಸುದ್ದಿ ಮುಟ್ಟಿಸಿದ್ದರಿಂದ ರೈಲ್ವೇ ಪೋಲೀಸರ ಆಗಮನವಾಯಿತು. ಜನರು ಸರಿದು ದಾರಿ ಮಾಡಿಕೊಟ್ಟರು. ಪೂಲೀಸರು ಅವನೊಂದಿಗೆ ವಿಚಾರಿಸಿದಾಗಲೂ ಅವನು 'ಸಾರ್ ನಾನು ಕದ್ದಿಲ್ಲ. ಈಗಷ್ಟೇ ನಾನು ಈ ದಾರಿಯಾಗಿ ಬಂದದ್ದು' ಎಂದು ಉತ್ತರಿಸಿದನು.
'ನೀನು ಎತ್ತ ಹೋಗುವುದಕ್ಕಾಗಿ ಇತ್ತ ಬಂದೆ' ಪೋಲೀಸಿನವನು ಕೇಳಿದನು.
'ಸಾರ್, ನಾನು ಈ ಮಾರ್ಕೆಟಿನಲ್ಲಿ ತರಕಾರಿಯ ಲಾರಿಯಿಂದ ತರಕಾರಿ ಇಳಿಸಿ ರೂಮಿಗೆ ಹೋಗುವಾಗ ಚಾ ಸೇವಿಸಲು ಈ ದಾರಿಯಾಗಿ ಬಂದೆ... ನನ್ನ ಕೊಠಡಿ ಅಲ್ಲಿದೆ' ಎಂದು ದೂರದಲ್ಲಿದ್ದ ಕಟ್ಟಡದ ಕಡೆಗೆ ಬೆರಳು ತೋರಿಸುತ್ತಾ ಹೇಳಿದನು.
'ಚಹಾ ಕುಡಿಯಲು ಬಂದದ್ದಂತೆ' ಎಂದು ಆರ್ಭಟಿಸುತ್ತಾ ಆ ಮಹಿಳೆಯ ಗಂಡ ಅವನ ತಲೆಗೆ ಬಲವಾಗಿ ಹೊಡೆದನು. ಅವನು ಏಟು ತಾಳಲಾರದೆ ಕೆಳಗೆ ಕುಸಿದನು.
ಪೋಲೀಸರು ಆ ಹುಡುಗನನ್ನು ವಿಚಾರಣೆಗೆ ಒಳಪಡಿಸಿದರು.... ಅವನ ಮನೆ ಕಾಸರಗೋಡಿನಲ್ಲಿ. ಕಳೆದ ಎರಡು ತಿಂಗಳಿನಿಂದ ಸಮೀಪದ ಅಂಗಡಿಗಳಿಗೆ ಬರುವ ತರಕಾರಿಗಳನ್ನು ಲಾರಿಯಿಂದ ಇಳಿಸುವ ಕೆಲಸ ಮಾಡುತ್ತಿದ್ದಾನೆ. ಮನೆಯಲ್ಲಿರುವ ತಾಯಿ ಮತ್ತು ತಂಗಿಯನ್ನು ಸಾಕಲಿಕ್ಕಾಗಿ ಈ ಕೆಲಸಕ್ಕೆ ಸೇರಿದ್ದಾನೆ. ಇವಿಷ್ಟು ವಿಚಾರಣೆಯಿಂದ ತಿಳಿದು ಬಂದ ವಿಚಾರಗಳು. ಬಳಿಕ ಪೋಲೀಸಿನವನು ಹೇಳಿದನು. 'ನೀನು ಸರ ಕದ್ದಿದ್ದರೆ ಅದನ್ನು ಮರಳಿಸು. ಸುಮ್ಮನೆ ಯಾಕೆ ಒದೆ ತಿನ್ನುತ್ತೀ'
'ನಾನು ಕದ್ದಿಲ್ಲ ಸಾರ್. ದೇವರಾಣೆಗೂ ನಾನು ಕದ್ದಿಲ್ಲ' ಅವನು ಕಣ್ಣೀರು ಸುರಿಸುತ್ತಾ ಕೈ ಮುಗಿದು ಬೇಡಿಕೊಂಡನು.
'ಇವನು ಕದಿಯುವುದನ್ನು ನೋಡಿದವರಿದ್ದಾರೆಯೇ' ಪೋಲೀಸರು ಕೇಳಿದರು. 'ಇವನು ಇಲ್ಲಿ ಸುತ್ತಾಡುತ್ತಿರುವುದನ್ನು ಒಬ್ಬನು ನೋಡಿದ್ದಾನೆ' ಎಂದು ಹೇಳುತ್ತಾ ಆ ಮಹಿಳೆ ಮತ್ತು ಆಕೆಯ ಗಂಡ ಪೋಲೀಸರೊಂದಿಗೆ ವಿಶ್ರಾಂತಿ ಕೊಠಡಿಯ ಕಡೆಗೆ ಹೆಜ್ಜೆ ಹಾಕಿದರು. ಆ ಹುಡುಗನನ್ನು ನೋಡಿದವನು ಅಲ್ಲೆಲ್ಲೂ ಕಾಣಲಿಲ್ಲ. 'ಎಲ್ಲಿ ಅವನು' ಪೋಲೀಸರು ಕೇಳಿದರು. 'ಲ್ಯಾಪ್ಟಾಪ್ ಬಿಡಿಸಿ ಕುಳಿತ ಒಬ್ಬ ಯುವಕನೂ ನೋಡಿದ್ದಾನೆ' ಯಾರೋ ಹೇಳಿದರು. ಅವನು ಹೇಳಿದ್ದು ನನ್ನ ಕುರಿತಾಗಿತ್ತು. 'ನಾನು ಕಂಡಿಲ್ಲ. ಇವನು ಹೇಳಿದ್ದನ್ನು ಅವರಿಗೆ ತಿಳಿಸಿದ್ದೇನಷ್ಟೇ' ಎಂದು ಹೇಳಲು ಮುಂದಾದೆ.
ಅವನು ಕದ್ದಿದ್ದಾನೆಯೇ ಎಂದು ನನಗೆ ಹೇಳಲು ಅಸಾಧ್ಯ. ಯಾಕೆಂದರೆ ಅವನು ತೆಗೆಯುವುದನ್ನು ನಾನು ನೋಡಿಲ್ಲ. ಈಗ ನನಗೆ ಏನೂ ಹೇಳಲಾಗದ ಸ್ಥಿತಿ. ಈ ಜನರ ಗುಂಪಿನ ಮಧ್ಯೆ ನಾನು ಮೌನಿಯಾದೆ. ಕದ್ದವನು ಸಿಗದಿದ್ದರೆ ಸಿಕ್ಕಿದವನನ್ನು ಕಳ್ಳನಾಗಿಸುವ ಕಾಲವಲ್ಲವೇ ಇದು!!
ಇವನು ಕದಿಯುವುದನ್ನು ನಾನು ನೋಡಿಲ್ಲ..... ಎಂದು ಹೇಳಲು ಮುಂದಾದಾಗ, ಆ ಮಹಿಳೆಯ ಗಂಡನು ಮತ್ತೊಮ್ಮೆ ತನ್ನ ಅಭಿಪ್ರಾಯವನ್ನು ಘೋಷಿಸಿದನು. 'ಇವನಿಗೆ ಇನ್ನೆರಡು ಬಿಗಿದರೆ ಬಾಯಿ ಬಿಡ್ತಾನೆ ಸಾರ್' ಇದನ್ನು ಕೇಳಿದ್ದೇ ತಡ ಅವನು ಪೋಲೀಸರ ಕೈಯಿಂದ ತಪ್ಪಿಸಿ ಓಡಿದನು. ಜನರೂ ಅವನ ಹಿಂದೆ ಓಡಿದರು. ನಾವು ಅಲ್ಲಿಯೇ ನಿಂತೆವು. ಅವನು ಓಡಿದ ಕಾರಣಕ್ಕಾಗಿ ಎಲ್ಲರೂ ಅವನನ್ನು ಕಳ್ಳನೆಂಬ ಪಟ್ಟ ಕಟ್ಟಿ ಬಿಟ್ಟರು. ನನಗೆ ಅವನ ಕಣ್ಣೀರೇ ಕಣ್ಮುಂದೆ ಬರುತ್ತಿತ್ತು. 'ನಾನು ಕದ್ದಿಲ್ಲ' ಎಂಬ ರೋಧನವು ನನ್ನ ಕಿವಿಯಲ್ಲಿ ಮಾರ್ದನಿಸುತ್ತಿತ್ತು.
ಮುಂಜಾನೆ 5.30ರ ಸಮಯ....
ನಾವು ಹೋಗಬೇಕಾದ ಕಲ್ಲಿಕೋಟೆ ಟ್ರೈನ್ ಬಂತು. ನಾವು ಟ್ರೈನ್ ಹತ್ತಿ ಕುಳಿತು ನಾನು ನೀರಿಗಾಗಿ ಬಾಟಲಿ ಹಿಡಿದು ಹೊರಟೆ. ಸ್ವಲ್ಪ ಮುಂದೆ ಸಾಗಿದಾಗ, ಕತ್ತಲೆ ತುಂಬಿದ ಜಾಗವೊಂದರಿಂದ ಕ್ಷೀಣ ಅಳುವೊಂದು ಕೇಳಿಸಿತು. ನಾನು ಮೆಲ್ಲನೆ ಮುಂದೆ ಸಾಗಿದೆ. ಅದು ಅವನು.... ಜನರ ಮುಂದೆ ಕಳ್ಳನಾದವನು... ಅವನು ಅಳುತ್ತಾ ವೊಬೈಲಿನ ಲ್ಲಿ ಯಾರಿಗೋ ಕಾಲ್ ಮಾಡುತ್ತಿದ್ದಾನೆ. ನಾನು ಅವನ ಮಾತನ್ನು ಆಲಿಸಿದೆ.
'ಹಲೋ, ಅಮ್ಮಾ.... ಇದು ನಾನು' ಅವನು ಬಿಕ್ಕಳಿಸುತ್ತಾ ಹೇಳಿದನು.
'ಅಮ್ಮಾ.... ನಾನು ಕೆಲಸ ಮುಗಿಸಿ ಮರಳುವಾಗ ರೈಲ್ವೇ ಸ್ಟೇಶನಿನಲ್ಲಿ ಎಲ್ಲರೂ ನನ್ನನ್ನು ಹಿಡಿದು ಕಳ್ಳನಾಗಿಸಿದರು' ಅವನ ಸ್ವರ ಗದ್ಗದಿತವಾಯಿತು.
'ಅಮ್ಮಾ... ನಾನು ಕದ್ದಿಲ್ಲ. ಎಲ್ಲರೂ ಸೇರಿ ನನಗೆ ಹೊಡೆದರು. ಅಮ್ಮಾ... ನನ್ನ ಬಾಯಿಂದ ರಕ್ತ ಬರುತ್ತಿದೆ' ಅವನು ಅಳತೊಡಗಿದನು.
'ನನಗೆ ಜೀವಿಸುವ ಆಸೆಯೇ ಹೊರಟು ಹೋಗಿದೆ ಅಮ್ಮಾ. ಅವರೊಂದಿಗೆ ನಾನು ವಾಸವಿರುವ ಸ್ಥಳದ ಕುರಿತು ಹೇಳಿದ್ದೇನೆ. ಅವರು ನನ್ನನ್ನು ಹುಡುಕುತ್ತಾ ಅಲ್ಲಿಗೆ ಬರುವರು. ನಾನು ಕಳ್ಳನಲ್ಲ. ಅಮ್ಮಾ... ನೀನಾದರೂ ನನ್ನನ್ನು ನಂಬು. ನಾನು ಏನನ್ನೂ ಕದ್ದಿಲ್ಲ ಅಮ್ಮಾ....' ಅವನ ಕಣ್ಣಿನಿಂದ ಕಣ್ಣೀರು ಧಾರೆ ಧಾರೆಯಾಗಿ ಇಳಿಯತೊಡಗಿತು. ಇದನ್ನು ಕಂಡ ನನ್ನ ಕಣ್ಣುಗಳಿಗೆ ಸುಮ್ಮನಿರಲಾಗಲಿಲ್ಲ. ನಾನು ಕೂಡಾ ಅತ್ತೆ. ಅವನ ಒಂದೊಂದು ಮಾತೂ ನನ್ನ ಹೃದಯಕ್ಕೆ ಭರ್ಚಿಯಂತೆ ತಿವಿಯುತ್ತಿತ್ತು. ಯಾರೂ ಅವನನ್ನು ನಂಬದ ಸ್ಥಿತಿಯಲ್ಲಿ ಸಮಯವನ್ನು ಲೆಕ್ಕಿಸದೆ ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುವ ತಾಯಿಗೆ ಫೊನ್ ಮಾಡಿ ತಾಯಿಯನ್ನು ನಂಬಿಸುತ್ತಿದ್ದನು. ಎಂಥಾ ಹೃದಯ ವಿದ್ರಾವಕ ಸನ್ನಿವೇಶ!!
ಅಲ್ಲ, ಅವನು ಕಳ್ಳನಲ್ಲ..... ನನ್ನ ಮನಸ್ಸು ಸಾರಿ ಸಾರಿ ಹೇಳುತ್ತಿತ್ತು. ಟ್ರೈನ್ ಹೊರಡಲು ಪ್ರಾರಂಭಿಸಿತು. ನಾನು ಓಡಿ ಹೋಗಿ ಟ್ರೈನ್ ಹತ್ತಿದೆ. ನೀರು ತೆಗೆಯುವುದನ್ನೂ ಮರೆತಿದ್ದೆ. ಅವನಿದ್ದ ಕಡೆಗೆ ನಾನು ನೋಡಿದೆ. ಅವನು ಕಾಣುತ್ತಿಲ್ಲ. ರೈಲು ಮುಂದೆ ಮುಂದೆ ಸಾಗುತ್ತಿದೆ... ಮೂರು ದಿನಗಳ ನಿದ್ದೆ ಹಾಗೂ ಪ್ರವಾಸದ ಆಯಾಸವು ನನ್ನಿಂದ ಮಾಯವಾಗಿತ್ತು. ನಿದ್ರಿಸಬೇಕು ಎಂದು ಕಣ್ಣು ಮುಚ್ಚಿದಾಗ ನನ್ನ ಮನಸ್ಸಿಗೆ ಬರುತ್ತಿದ್ದುದು ಸರ ಕಳೆದುಕೊಂಡ ಆ ಮಹಿಳೆಯ ರೋದನವಲ್ಲ, ಕಳ್ಳನೆಂದು ಜನರಿಂದ ಒದೆ ತಿಂದ ಆ ಹುಡುಗನ ಸ್ಥಿತಿಯಂತೂ ಅಲ್ಲ. ಬದಲಾಗಿ ವೇಳೆಯಲ್ಲದ ವೇಳೆಯಲ್ಲಿ ಮಗನ ಕರೆಗೆ ಓಗೊಟ್ಟ ಆ ವಾತ್ಸಲ್ಯಮಯಿ ತಾಯಿ. ಮಗನನ್ನು ಜನರು ಅಟ್ಟಾಡಿಸಿ ಹೊಡೆದದ್ದನ್ನು , ಮಗನ ಬಾಯಿಂದ ಬಂದ ರಕ್ತವನ್ನು ನೆನೆದು ಮಿಡಿಯುವ ಆ ಮಾತೃ ಹೃದಯ. 'ನನಗೆ ಜೀವಿಸುವ ಆಸೆಯೇ ಹೊರಟು ಹೋಗಿದೆ' ಎಂದು ಮಗನು ಹೇಳುವಾಗ ಆ ತಾಯಿಯ ಪ್ರತಿಕ್ರಿಯೆಯು ಏನಾಗಿರಬಹುದು. ಅವಳು ರೋದಿಸಿರಲಾರಳೇ ,... ಮಗನ ಕಣ್ಣೀರಿನೊಂದಿಗೆ ಅವಳೂ ಕಣ್ಣೀರು ಸುರಿಸಿರಲಾರಳೇ ಅಥವಾ 'ನೀನು ಅಳಬೇಡ ,ನಿನ್ನೊಂದಿಗೆ ತಾಯಿ ಇಲ್ಲವೇ' ಎಂದು ಸಾಂತ್ವನ ನೀಡಿರಲಾರಳೇ
ಮೊದಲಾದ ಉತ್ತರ ಸಿಗದ ಪ್ರಶ್ನೆಗಳು ಇಂದಿಗೂ ನನ್ನನ್ನು ಕಿತ್ತು ತಿನ್ನುತ್ತಿವೆ. ಆದರೂ ನನಗೆ ಈಗಲೂ ಆ ತಾಯಿಯೊಂದಿಗೆ ಹೇಳಲಿಕ್ಕಿರುವುದು ಒಂದೇ ಮಾತು 'ಅಮ್ಮಾ ಕ್ಷಮಿಸು. ಮಗನನ್ನು ಕಳ್ಳನಾಗಿಸಿದ ಜನರ ಗುಂಪಿನಲ್ಲಿ ನಾನೂ ಇದ್ದೆ. ಅವನ ನಿರಪರಾಧಿತ್ವವನ್ನು ಸಾಬೀತು ಪಡಿಸುವ ಸಂದರ್ಭ ಒದಗಿ ಬಂದರೂ ನಾನು ಮೌನಿಯಾದೆ. ಅಮ್ಮಾ .. ನನ್ನ ಕ್ಷಮಿಸಮ್ಮಾ.... (ಇದು ಸಂಗ್ರಹಿತ ಘಟನೆಯಾದ್ದರಿಂದ ಇಲ್ಲಿ 'ನಾನು' ಎಂಬ ಪದವನ್ನು ಬಳಸಿದ್ದೇನೆ.)
Monday, 18 June 2012
ರೀ .... ಚಪ್ಪಲಿ ಮರೆಯಬೇಡಿ

'ನೀವು ಯಾವಾಗ ಬಂದದ್ದು...' ರಾಗ ಎಳೆದಳು.
ನಾನು ಮೌನ ವಹಿಸಿ ಮ್ಯಾಚ್ ನೋಡುತ್ತಾ ಕುಳಿತೆ. ಮಾತಾಡದ್ದನ್ನು ಕಂಡು ಕೈಯ್ಯಲ್ಲಿದ್ದ ಬನಿಯಾನನ್ನು ಎತ್ತಿ ಎಸೆದಳು. ಬೇಡ ಎಸೆದ ಬಲೆಯಂತೆ ಅದು ನನ್ನ ಮೇಲೆ ಬಂದು ಬಿತ್ತು.
'ಏನು ಮಾರಾಯ್ತಿ. ಮನೆಗೆ ಬಂದವರನ್ನು ಓಡಿಸ್ತಿಯಾ' ನಾನು ಪ್ರತಿಕ್ರಿಯಿಸಿದೆ.
'ಮನೆಗೆ ಬರುವುದು ಹೀಗಾ...ಕಳ್ಳರು ಕೂಡಾ ಹೀಗೆ ಬರುವುದಿಲ್ಲ ' ಗರಂ ಆಗಿಯೇ ಉತ್ತರ ಕೊಟ್ಟು ಒಳ ಹೋದಳು.
ನಾನು ಟಿ.ವಿ. ನೋಡುತ್ತಾ ಕುಳಿತೆ. ಶಮಾ ವಸ್ತ್ರ ಮಡಚಿಟ್ಟು ಕಾಫಿ ತಯಾರಿಸಲು ಅಡುಗೆ ಕೋಣೆಗೆ ಹೋದಳು. ಕಾಫಿಗೆ ನೀರಿಟ್ಟು ನನ್ನ ಸಮೀಪ ಬಂದು ಕುಳಿತಳು. ಆಗಲೇ ನನಗೆ ಮನದಟ್ಟಾಯಿತು. ಇದು ಯಾವುದೋ ಒಂದು ಬೇಡಿಕೆಯನ್ನು ನನ್ನ ಮುಂದಿಡಲಿಕ್ಕಿರುವ ಮುನ್ನುಡಿ ಎಂದು.
'ರೀ.. ನನಗೆ ಒಂದು ಚಪ್ಪಲ್ ಬೇಕು. ಇದ್ದ ಚಪ್ಪಲಿ ಸವೆದು ಹೋಗಿದೆ.' ತನ್ನ ಬೇಡಿಕೆ ಮುಂದಿಟ್ಟಳು.
'ಏನು ಚಪ್ಪಲಾ ...! ವೊನ್ನೆಯಲ್ವಾ ತೆಗೆದು ಕೊಟ್ಟದ್ದು. ಅದು ಹೇಗೆ ಸವೆದು ಹೋಗುವುದು. ನೀನೇನು ಪೋಸ್ಟ್ ಮ್ಯಾನ್ ಕೆಲಸ ಮಾಡ್ತಿಯಾ' ನಾನು ಸ್ವಲ್ಪ ಜೋರಾಗಿಯೇ ಉತ್ತರ ನೀಡಿದೆ.
'ಹೋಂ .. ಮೊನ್ನೆಯಂತೆ ವೊನ್ನೆ.... ಕಳೆದ ಬಕ್ರೀದಿಗಲ್ವಾ ನೀವು ತೆಗೆದು ಕೊಟ್ಟದ್ದು. ಈಗ ಒಂದು ವರ್ಷವಾಗುತ್ತಾ ಬಂತು' ಅವಳು ಕೂಡಾ ಸ್ವರವೇರಿಸಿ ಮಾತಿಗಿಳಿದಳು.
ನಾನು ಸ್ವಲ್ಪ ತಣ್ಣಗಾದೆ. ಇನ್ನು ಮಾತನಾಡಿದರೆ ನೆರೆಕರೆಯವರು ಓಡಿ ಬರುವುದು ಗ್ಯಾರಂಟಿ.
ನನ್ನವಳ ಸ್ವರ ಸ್ವಲ್ಪ ಇಂಪು. ಒವ್ಮೊಮ್ಮೆ ನಾನು ಒತ್ತಾಯಿಸಿದರೆ ಹಾಡ್ತಾಳೆ. ಶಾಲೆಯಲ್ಲಿ ಅವಳಿಗೆ ಹಾಡುಗಾರಿಕೆಯಲ್ಲಿ ಬಹು ಮಾನ ಸಿಕ್ಕಿದೆಯಂತೆ. ಆದರೆ ಅವಳಿಗೆ ಕೋಪ ಬಂದು ಸ್ವರವೇರಿಸಿ ಮಾತನಾಡಿದರೆ ಇಂಪೆಲ್ಲಾ ಹೋಗಿ ದೊಡ್ಡ ಯಕ್ಷಗಾನವಾಗುತ್ತದೆ.
'ಏನೇ ಈಗ ಚಪ್ಪಲಿಯ ಅಗತ್ಯ. ಹೊರಗೆ ಸುತ್ತಾಡಲು ಹೋಗುತ್ತಿಯಾ' ಉರಿಯುವ ಬೆಂಕಿಗೆ ತುಪ್ಪ ಸುರಿದೆ. ಆದರೆ ಅದು ಉರಿಯುವ ಬದಲು ನಂದಿ ಹೋಯಿತು. ಅವಳ ಪ್ರತಿಕ್ರಿಯೆಯನ್ನು ಎದುರಿಸಲು ಸಜ್ಜಾಗಿ ನಿಂತ ನನಗೆ ಕೇವಲ ಅವಳ ಕಣ್ಣೀರನ್ನೇ ನೋಡಬೇಕಾಯಿತು. ಪಾಪ ಅವಳು ಕಣ್ಣೀರು ಸುರಿಸುತ್ತಾ ಒಳನಡೆದಳು.
ಅವಳನ್ನು ಸಮಾಧಾನ ಪಡಿಸುವ ಮನಸ್ಸಾಯಿತು. ಆದರೆ ಈ ಮ್ಯಾಚನ್ನು ಬಿಟ್ಟು ಹೋಗುವುದು ಹೇಗೆ. ಆದದ್ದಾಗಲಿ ಮ್ಯಾಚ್ ನೋಡಿ ಮುಗಿಸುವ ಎಂದು ಕುಳಿತೆ.
ಸ್ವಲ್ಪ ಹೊತ್ತಿನ ನಂತರ ಶಮಾ ಚಹಾದೊಂದಿಗೆ ಬಂದಳು.'ಮಳೆ ನಿಂತು ಹೊದ ಮೇಲೆ ಹನಿಯೊಂದು ಮೂಡಿದೆ ' ಎಂಬಂತೆ ಒಂದು ಹನಿ ಕಣ್ಣೀರು ಕೆನ್ನೆಯ ಮೇಲೆಯೇ ಇತ್ತು. ನಾನು ಎಷ್ಟೇ ಸತಾಯಿಸಿದರೂ ಅವಳಿಗೆ ನನ್ನೊಡನಿದ್ದ ಪ್ರೀತಿಯು ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಲಿಲ್ಲ. ಅದೇ ನನ್ನ ದೊಡ್ಡ ಅದೃಷ್ಟ.
'ಇಕೊಳ್ಳಿ ಚಾ' ಎಂದು ಟೀಪಾಯ್ ಮೇಲೆ ಕುಕ್ಕಿ ಅಡುಗೆ ಮನೆ ಕಡೆಗೆ ಹೋದಳು.
'ಈಗ ಚಹಾ ಯಾರು ಕೇಳಿದರು' ನಾನು ಮೆಲ್ಲನೆ ಗುನುಗಿದೆ. ಅದು ಅವಳಿಗೆ ಕೇಳಿಸಿರಬೇಕು.
'ಏನು ನೀವು ಹೇಳಿದ್ದು' ಹೋಗುತ್ತಿದ್ದವಳು ತಿರುಗಿ ಬಂದಳು.
'ಏನಿಲ್ಲ, ನಾನು ಕೇಳದೆಯೇ ನೀನು ಚಹಾ ತಂದಿಯಲ್ಲ ಥ್ಯಾಂಕ್ಸ್'
'ಏನು ನನಗೆ ಕಿವಿ ಕೇಳಿಸ್ತದೆ. ನಿಮಗೆ ಪ್ರೀತಿ ಇಲ್ಲದಿದ್ದರೂ ನನಗೆ ನಿಮ್ಮಲ್ಲಿ ಪ್ರೀತಿ ಇದೆ. ಪತ್ನಿಯರ ಬಾಧ್ಯತೆಯ ಕುರಿತು ದೊಡ್ಡ ದೊಡ್ಡದು ಬರೀತಿರಲ್ಲಾ ' ಕೊನೆಯ ಅಸ್ತ್ರವನ್ನು ಪ್ರಯೋಗಿಸಿದಳು. ಇವಳ ಗಲಾಟೆಯಲ್ಲಿ ಲಾಸ್ಟ್ ಬ್ಯಾಟ್ಸ್ ಮನ್ ಶ್ರೀಶಾಂತ್ ಬೌಲ್ಡ್ ಆದದ್ದು ಗೊತ್ತೇ ಆಗಲಿಲ್ಲ.
'ಆಯ್ತು ಕಣೆ ನೀನು ಹೇಳಿದ್ದೇ ಸರಿ '
'ನಾನು ಯಾವಾಗಲೂ ಸರಿಯನ್ನೇ ಹೇಳುವುದು. ಇದ್ದದ್ದನ್ನು ಹೇಳಿದರೆ ನಿಮಗಾಗುವುದಿಲ್ಲ ' ಸಿಡುಕುತ್ತಾ ಅಡುಗೆ ಕೋಣೆಗೆ ಹೋದಳು.
ಹೇಗೂ ಇಂಡಿಯಾದ ಹಣೆಬರಹ ಗೊತ್ತಾಯಿತು. ಇನ್ನು ನೋಡಿ ಏನು ಪ್ರಯೋಜನ. ನಾನು ಟಿ.ವಿ. ಆಫ್ ಮಾಡಿ ಚಾ ಕುಡಿದ ಗ್ಲಾಸನ್ನು ಹಿಡಿದು ಅಡುಗೆ ಮನೆಗೆ ಹೊರಟೆ.
'ಇಕೊಳ್ಳೆ, ಎಲ್ಲಿದ್ದಿ' ನಾನು ಸಂಧಾನ ಮಾತುಕತೆಗೆ ಪ್ರಾರಂಭಿಸಿದೆ.
'ಬಂದು ನೋಡಿ. ಎಲ್ಲಿದ್ದೀನೀಂತ ' ಅಡುಗೆ ಕೋಣೆಯಿಂದ ಉತ್ತರ ಬಂತು
'ಅವನೆಲ್ಲಿ'
...................
'ನಿನ್ನಲ್ಲಿ ಕೇಳಿದ್ದು'
'ಯಾರು?'
'ನಿನ್ನ ಮಗ '
'ಓ' ನನಗೆ ಅವನು ಮಗ. ನಿಮಗೆ ಏನಾಗಬೇಕು'
ಅವಳಿಂದ ಉಲ್ಟಾ ಉತ್ತರ ಬರಲು ಶುರುವಾಯಿತು. ಅಂತಹ ಉತ್ತರ ಬರತೊಡಗಿದರೆ ಅದು ಕೋಪ ಇಳಿಯುವುದರ ಸೂಚನೆ.
'ಏನು ಮಾರಾಯ್ತಿ. ನೀನು ಇಲ್ಲಿರಬೇಕಾದವಳಲ್ಲ ಹೈಕೋರ್ಟ್ನಲ್ಲೋ, ಸುಪ್ರೀಮ್ ಕೋರ್ಟ್ನಲ್ಲೋ ಲಾಯರಾಗಬೇಕಿತ್ತು''
'ನಾನು ಲಾಯರಾಗುತ್ತಿದ್ದರೆ ನಿಮ್ಮನ್ನು ಮದುವೆಯಾಗುತ್ತಿರಲಿಲ್ಲ '
'ಹೌದು, ಹೌದು ನೀನು ಲಾಯರಾಗದಿದ್ದುದು ಒಳ್ಳೆದೇ ಆಯಿತು. ಆಗಿದ್ದರೆ ನೀನು ನನಗೆ ಸಿಗುತ್ತಿರಲಿಲ್ಲ ' ಅವಳ ಮುಖದಲ್ಲಿ ನಗು ಮಿನುಗಿತು. ಆದರೂ ನನಗೆ ತೋರ್ಪಡಿಸದೆ ತಿರುಗಿ ನಿಂತು ನಕ್ಕಳು.
'ಅಲ್ಲ ಕಣೇ, ನಮ್ಮ ಮಗ ಎಲ್ಲಿ'?
'ಎಲ್ಲೋ ಹೊರಗೆ ಆಡ್ತಿರಬೇಕು. ಹೋಗಿ ನೋಡಿ ' ಉತ್ತರ ಕೊಟ್ಟಳು. ಅಳಿದುಳಿದ ಕೋಪ ಮಾತ್ರ ಬಾಕಿ ಇತ್ತು.
ನಾನು ಮೂಲೆಯಲ್ಲಿಟ್ಟಿದ್ದ ಫ್ರಿಜ್ಜ್ ನ ಬಾಗಿಲು ತೆರೆಯುತ್ತಾ ಹೇಳಿದೆ.
'ಇಂದು ರಾತ್ರಿ ಅಡುಗೆ ಮಾಡ್ಬೇಡ ಕಣೇ'
'ಯಾಕೆ? ಉಪವಾಸ ಕೂರ್ಬೇಕಾ'
'ಅಲ್ಲ, ಇಂದಿನ ಡಿನ್ನರ್ ಹೊರಗೆ. ಬೇಗ ರೆಡಿಯಾಗು'
ಅಷ್ಟು ಹೇಳಿದ್ದೇ ತಡ. ಅವಳ ಸಂತೋಷಕ್ಕೆ ಪಾರವೇ ಇಲ್ಲ. ನನ್ನೊಂದಿಗೆ ಹೊರಗೆ ಕೈಕೈ ಹಿಡಿದು ಸುತ್ತಾಡುವುದೆಂದರೆ ಅವಳಿಗೆ ಪಂಚಪ್ರಾಣ. ಆದರೆ ನನಗೆ ಪುರುಸೊತ್ತಿರಬೇಕಲ್ವಾ'
ಅವಳು ನನ್ನ ಬಳಿ ಬಂದಳು. ಅಮವಾಸೆಯಂತಿದ್ದ ಮುಖ ಈಗ ಹುಣ್ಣಿಮೆಯಂತಾಗಿತ್ತು. ಆದರೆ ಕೋಪ ಬಂದಿತ್ತು ಎಂಬುದರ ಕುರುಹಾಗಿ ಮೂಗಿನ ಕೆಂಪು ಇನ್ನೂ ಮಾಸಿರಲಿಲ್ಲ.
'ರೀ ನೋವಾಯ್ತಾ'
'ಏನು? ನೋವಾಗಲು ನೀನು ಇಂಜೆಕ್ಷನ್ ಕೊಟ್ಟಿದ್ದಿಯಾ'
'ಅಲ್ಲರೀ, ನಿಮ್ಮ ಮನಸ್ಸಿಗೆ ನೋವಾಯ್ತಾ'
'ಎಂಥ ನೋವು ಮಾರಾಯ್ತಿ. ನನಗೆ ಎಷ್ಟೇ ನೋವಾದರೂ ನೀನೇ ಮುಲಾಮು ಹಚ್ಚುತ್ತಿ. ಮತ್ತೆ ಯಾಕೆ ಹೆದರಿಕೆ'
'ಐ ಯಾಂ ರಿಯಲಿ ಸಾರಿ ಆಯ್ತಾ' ನನ್ನ ತೋಳು ಬಳಸಿದಳು.
'ಏ... ರೋಮ್ಯಾನ್ಸೆಲ್ಲ ಮತ್ತೆ. ಈಗ ಹೋಗಿ ರೆಡಿಯಾಗು' ನಾನು ಎಚ್ಚರಿಸಿದೆ. ಅವಳು ಚಿಗರೆಯಂತೆ ಓಡಿದಳು.
ನಾನು ಹೋಗಿ ಸೋಫಾದಲ್ಲಿ ಕುಳಿತು ಟಿ.ವಿ. ಆನ್ ಮಾಡಿದೆ. ಆದರೆ, ಕೇಬಲ್ ಕಟ್ಟಾಗಿತ್ತು.
'ರೀ, ಇಲ್ಲಿ ಬನ್ನಿಯಂತೆ ' ಒಳಗಿನಿಂದ ಕೂಗಿದಳು.
ನಾನು ಹೋಗಿ ನೋಡಿದೆ. ಬಚ್ಚಲಿನ ಬಾಗಿಲಲ್ಲಿ ಡ್ರೆಸ್ ಹಿಡಿದು ನಿಂತಿದ್ದಳು.
'ಇಲ್ಲ ಕಣೆ ನಾನು ಸ್ನಾನ ಮಾಡುವುದಿಲ್ಲ. ನೀನು ಮಾಡಿ ಬಾ' ನಾನು ಸಂದರ್ಭೋಚಿತವಾಗಿ ಹೇಳಿದೆ.
'ಛೀ ನೀವೊಂದು... ಅದಕ್ಕಲ್ಲರೀ'
'ಮತ್ಯಾವುದಕ್ಕೆ?'
'ನೀವು ಬರ್ತಿರೋ ಇಲ್ವೋ'
ನಾನು ಅವಳ ಬಳಿ ಹೋದೆ. ಅವಳು ಮುಖವನ್ನು ನನ್ನ ಕಿವಿಯ ಬಳಿ ತಂದು ಹೇಳಿದಳು.'ರೀ, ಚಪ್ಪಲಿ ಕೊಳ್ಳಲು ಮರೆಯಬಾರದು'' ಮುಗ್ದ ಹುಡುಗಿ.
ಬೇಗನೆ ಬಾಗಿಲು ಮುಚ್ಚಿ, 'ನೀವು ಬೇಗ ಮಗನನ್ನು ಕರೆದು ತನ್ನಿ.' ಎಂದು ರಾಗ ಎಳೆದಳು.
ಹೊರಗೆ ಆಡುತ್ತಿದ್ದ ಮಗ ಆದಿಲ್ನನ್ನು ಕರೆಯಲು ನಾನು ಹೊರಟೆ.
Thursday, 14 June 2012
ರೀ, ನೀವು ನನ್ನನ್ನು ಪ್ರೀತಿಸ್ತಿದ್ದೀರಾ

'ರೀ, ನೀವ್ಯಾಕೆ ಪುಸ್ತಕ ಬಿಸಾಡಿದ್ದು' ಭುಜದ ಮೇಲೆದ್ದ ಶಾಲನ್ನು ತಲೆಗೆ ಹಾಕುತ್ತಾ ಕೇಳಿದಳು.
'ಓ ಅದಾ, ಪುಸ್ತಕ ಓದಿ ಆಯ್ತು. ಹಾಗೆ ಬಿಸಾಡಿದ್ದು. ಅದಿರ್ಲಿ, ನಾನು ನಿನ್ನಲ್ಲಿ ಎಷ್ಟೋ ಸಾರಿ ಹೇಳಿದ್ದೇನೆ. ಓದುವಾಗ ಹಾಗೆ ಉಪದ್ರ ಮಾಡಬಾರದು ಅಂತ ' ನಾನು ಎದೆ ಬಡಿತವನ್ನು ಸ್ಥಿಮಿತಕ್ಕೆ ತಂದುಕೊಳ್ಳುತ್ತಾ ಹೇಳಿದೆ.
'ಹಾಗಾದರೆ ಏನಾದರೂ ಬಹುಮುಖ್ಯ ವಿಷಯ ಹೇಳಲಿಕ್ಕಿದ್ದರೆ ಎಂಥ ಮಾಡುವುದು' ಶಮಾ ಕಣ್ಣರಳಿಸಿ ಹೇಳಿದಳು.
'ಅಂಥ ವಿಷಯಗಳಿದ್ದರೆ ಬಂದು ಕರೆಯಬೇಕು. ಅದಲ್ಲದೆ ಹೀಗೆ ಬಂದು ಮೈ ಮುಟ್ಟುದಲ್ಲ ' ನಾನು ಅವಳ ಕೈ ಹಿಡಿದು ಹತ್ತಿರ ಕುಳ್ಳಿರಿಸಿ ಕೈ ಬಳೆಯನ್ನು ಎರಡು ಸುತ್ತು ತಿರುಗಿಸಿದೆ.
ನಾನು ಓದಲು ಕುಳಿತರೆ ಪರಿಸರದ ಪರಿವೆಯೇ ಇರುವುದಿಲ್ಲ. ಏನೇ ಗದ್ದಲಗಳಿರುತ್ತಿದ್ದರೂ ನನ್ನ ಓದುವಿಕೆಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಪ್ರಯಾಣಿಸುವಾಗ ಓದಲು ಕುಳಿತು ಇಳಿಯ ಬೇಕಾದ ಜಾಗ ಬಿಟ್ಟು ಮುಂದೆ ಹೋದದ್ದೂ ಇದೆ. 'ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ' ಎಂಬ ಹಾಡೊಂದಿದೆ. ಆದರೆ ಇದು ನನ್ನ ಪಾಲಿಗೆ 'ಪುಸ್ತಕವೊಂದು ನನ್ನಲ್ಲಿದ್ದರೆ ನನಗದು ಕೋಟಿ ರೂಪಾಯಿಗಳು' ಎಂದಾಗಿದೆ. ಈ ಹಾಡನ್ನು ಶಮಾಳ ಮುಂದೆ ಹಾಡಿ ಬೆನ್ನಿಗೆ ಎರಡು ಗುದ್ದು ಬಿದ್ದ ಫಜೀತಿಯೂ ನಡೆದಿದೆ.
'ಶೀ ಕೈಬಿಡಿ ' ಶಮಾ ಕೈ ಕೊಸರಿಕೊಂಡು ಬಿದ್ದಿದ್ದ ಪುಸ್ತಕವನ್ನು ಎತ್ತಿ ಸೋಫಾದ ಮೇಲಿಟ್ಟಳು. ನನ್ನ ಬಳಿ ಕುಳಿತು ನನ್ನ ಅಂಗಿಯ ಗುಂಡಿ ತಿರುಗಿಸತೊಡಗಿದಳು. ಇದು ಯಾವುದೇ ಬೇಡಿಕೆಗಿರುವ ಮುನ್ನುಡಿ ಎಂದು ತಿಳಿಯಿತು. ಅವಳ ಈ ವರ್ತನೆಯಿಂದ ನನ್ನ ಅಂಗಿಯ ಗುಂಡಿಗಳು ಪೂರ್ಣ ಆಯುಷ್ಯದೊಂದಿಗೆ ಸತ್ತ ಇತಿಹಾಸವೇ ಇಲ್ಲ.
'ಆ ಗುಂಡಿಯನ್ನು ಬದುಕಲು ಬಿಡು ಮಾರಾಯ್ತಿ' ನಾನು ಅವಳ ಕೈಯನ್ನು ಗುಂಡಿಯಿಂದ ಬಿಡಿಸಿದೆ.
'ರೀ, ನಿಮ್ಮಲ್ಲಿ ನನಗೆ ಒಂದು ವಿಷಯ ಕೇಳಲಿಕ್ಕೆ ಉಂಟು. ನೀವು ಒಪ್ತೀರಾ'
'ವೊದಲು ಕೇಳು. ಆ ಮೇಲೆ ತೀರ್ಮಾನಿಸುವ ಒಪ್ಪಬೇಕೋ ಬೇಡವೋ ಅಂಥ '
ಶಮಾ ತನ್ನ ಅರ್ಧ ಭಾರವನ್ನು ನನ್ನ ಮೇಲೆ ಹಾಕಿದಳು. ಆದ್ದರಿಂದ ಇದು ಬಹಳ ಭಾರದ ಬೇಡಿಕೆ ಇರಬಹುದೆಂದು ಭಾವಿಸಿದೆ.
'ರೀ, ನನ್ನ ತಮ್ಮ ಇದ್ದಾನಲ್ಲಾ......'
'ಹೌದು ಇದ್ದಾನೆ. ಏನಾಯಿತು ಅವನಿಗೆ' ನಾನು ಮಧ್ಯದಲ್ಲಿ ಬಾಯಿ ಹಾಕಿದೆ.
'ವೊದಲು ನಾನು ಹೇಳುವುದನ್ನು ಪೂರ್ತಿಯಾಗಿ ಕೇಳಿ. ಆ ಮೇಲೆ ನಿಮ್ಮ ಕಮೆಂಟ್' ಎಂದು ನನ್ನ ತಲೆಗೆ ವೊಟಕಿದಳು.
'ಓ.ಕೆ, ಓ.ಕೆ ನೀನು ಹೇಳು'
'ನನ್ನ ತಮ್ಮ ಇನ್ನು ಮುಂದೆ ಇಲ್ಲಿ ಉಳಕೊಂಡು ಕಾಲೇಜಿಗೆಹೋದರೆ ಹೇಗೆ' ಅವಳ ಬೇಡಿಕೆಯ ಮಂಡನೆಯಾಯಿತು.
ರೋಗಿ ಬಯಸಿದ್ದೂ ಹಾಲು ವೈದ್ಯರು ಕೊಟ್ಟದ್ದೂ ಹಾಲು ಎಂಬಂತಾಯಿತು. ಅವನನ್ನು ಮನೆಯಲ್ಲಿ ನಿಲ್ಲಿಸಬೇಕೆಂಬ ಹಂಬಲ ನನಗೆ ವೊದಲೇ ಇತ್ತು. ಆದರೆ ಇದನ್ನು ಅವಳಲ್ಲಿ ಹೇಳಿರಲಿಲ್ಲ. ಅವನು ನನಗೆ ಅಳಿಯ ಮಾತ್ರವಲ್ಲ, ಉತ್ತಮ ಗೆಳೆಯನೂ ಆಗಿದ್ದ. ಉತ್ತಮ ಸ್ವಭಾವವೂ ಅವನಲ್ಲಿತ್ತು. ನಾನು ಶಮಾಳನ್ನು ಮದುವೆಯಾದುದರಲ್ಲಿ ಅವನ ನಡವಳಿಕೆಯ ಪಾತ್ರವೂ ಇತ್ತು.
'ಇಲ್ಲಿಂದ ಹೋದರೂ ಮನೆಯಿಂದ ಹೋದರೂ ತಲುಪುವುದು ಕಾಲೇಜಿಗಲ್ಲವೇ' ನಾನು ಕೈಯ್ಯಗಲಿಸಿ ಸೋಫಾದಲ್ಲಿ ಒರಗಿಕೊಳ್ಳುತ್ತಾ ಹೇಳಿದೆ.
'ನಾನು ಏನೇ ಹೇಳಿದರೂ ನಿಮಗೆ ಕೇರ್ಲೆಸ್. ನಿಮ್ಮ ಮುಂದೆ ನನ್ನ ಮಾತಿಗೆ ಬೆಲೆಯೇ ಇಲ್ಲ ' ನನ್ನ ಮಾತು ಕೇಳಿ ಶಮಾ ಸ್ವಲ್ಪ ಗರಮ್ ಆದಳು.
'ಯಾರು ಹಾಗೆ ಅಂದದ್ದು'
'ಮತ್ತೆ ನೀವು ಹಾಗೆ ಯಾಕೆ ವರ್ತಿಸುವುದು'
ಶಮಾ ಹಠ ಹಿಡಿದರೆ ಅದನ್ನು ಸಾಧಿಸುವವರೆಗೆ ಗರಿಷ್ಟ ಪ್ರಯತ್ನ ಮಾಡುತ್ತಿದ್ದಳು. ಅವಳ ಹಠ ಯಶಸ್ವಿಯಾಗದಿದ್ದರೆ ಅವಳಿಗೆ ಬೇಸರವೇನೂ ಆಗುತ್ತಿರಲಿಲ್ಲ. ಅದು ಅವಳಲ್ಲಿರುವ ಪ್ಲಸ್ ಪಾಯಿಂಟುಗಳಲ್ಲೊಂದು. ನಾನು ಅವಳನ್ನು ಮದುವೆಯಾದ ಸಂದರ್ಭದಲ್ಲಿ ಅತ್ತೆ ಹೇಳಿದ್ದರು. 'ನೋಡು, ಇವಳಿಗೆ ಕೋಪ ಸ್ವಲ್ಪ ಜಾಸ್ತಿ. ಇವಳ ತಂದೆಯ ಕೊಂಡಾಟದಿಂದ ಹೀಗಾಗಿದೆ. ಆದರೆ, ಈ ಕೋಪ ಹೆಚ್ಚು ಹೊತ್ತು ನಿಲ್ಲುವುದಿಲ್ಲ .'
'ಕೋಪ ಹೆಚ್ಚು ಹೊತ್ತು ನಿಲ್ಲುವುದಿಲ್ಲು ಎಂದು ಹೇಳಿದ್ದನ್ನು ಕೇಳಿ ನನಗೆ ಸ್ವಲ್ಪ ಸಮಾಧಾನವಾಗಿತ್ತು. ಅತ್ತೆ ಒಂದು ತಪ್ಪು ಮಾಡಿದ್ದರು. ಶಮಾಳಿಗೆ ಯಾವೆಲ್ಲಾ ಸಂದರ್ಭಗಳಲ್ಲಿ ಕೋಪ ಬರುತ್ತದೆಂದು ಪಟ್ಟಿ ತಯಾರಿಸಿ ಕೊಟ್ಟಿದ್ದರೆ ನನ್ನ ಬೆನ್ನಿಗೆ ಬೀಳುವ ಗುದ್ದುಗಳನ್ನೂ ಪಾತ್ರೆಗಳ ಮೇಲಾಗುವ ಅಮಾನುಷ ವರ್ತನೆಗಳನ್ನೂ ಕಡಿಮೆ ಮಾಡಬಹುದಾಗಿತ್ತು.
'ನೋಡು ಬಂಗಾರಿ, ನೀನು ನನ್ನ ಮುಂದಿಟ್ಟ ಯಾವುದೇ ಬೇಡಿಕೆಗಳನ್ನು ನಾನು ತಿರಸ್ಕರಿಸಿದ್ದೇನೆಯೇ? ಈ ಹುಡ್ಗಿರೇ ಹೀಗೆ. ಪತ್ನಿ ಹೇಳಿದ ಹಾಗೆ ಕೇಳಿದರೂ, ಕೊನೆಗೆ ಹೇಳ್ತಾರೆ ನೀವು ನನಗೆ ಏನೂ ಮಾಡಿಕೊಡಲಿಲ್ಲ ಎಂದು. ಹಾಗೆ ಹೇಳುವಾಗ, ಎಷ್ಟು ಬೇಜರಾಗುತ್ತದೆ ಗೊತ್ತಾ' ನಾನು ಮುಖ ಬಾಡಿಸಿ ಹೇಳಿದೆ.
'ಓ..... ಸಾಕು ನಿಮ್ಮ ನಾಟಕ . ಪುರುಷರೆಲ್ಲ ಯಾಕೆ ಹೀಗೆ' ಅವಳು ಹುಸಿ ಕೋಪದಿಂದ ಮುಖ ತಿರುಗಿಸಿದಳು.
'ಓಕೆ. ಪುರುಷರಿಗೆ ಕರುಣೆ ಇಲ್ಲ. ಒಪ್ಪಿಕೊಳ್ತೇನೆ ' ತರ್ಕವನ್ನು ಮುಂದುವರಿಸಲು ನನಗೆ ಆಸಕ್ತಿ ಇರಲಿಲ್ಲ. ಹಾಗೆ ನಾನು ಅವಳ ವಾದವನ್ನು ಒಪ್ಪಿಕೊಂಡೆ.
'ಹಾಗೆ ದಾರಿಗೆ ಬನ್ನಿ ' ಕೋರ್ಟಿನಲ್ಲಿ ವಾದಿಸಿ ಕೇಸು ಜಯಿಸಿದಂತಹ ಗೆಲುವಿನ ನಗೆ ಶಮಾಳ ಸುಂದರ ವದನದಲ್ಲಿತ್ತು.
'ನಿನಗೆ ಒಂದು ವಿಷಯ ಗೊತ್ತುಂಟಾ' ನಾನು ಅವಳಲ್ಲಿ ಕೇಳಿದೆ.
'ಹೇಳಿದರಲ್ಲವೇ ಗೊತ್ತಾಗುವುದು' ರೆಡಿಮೇಡ್ ಪ್ರತಿಕ್ರಿಯೆ ಬಂತು.
'ನೀವು ಹೆಂಗಸರನ್ನು ಹೊಗಳಿ ಅಟ್ಟದಲ್ಲಿರಿಸ್ತಿಯಲ್ಲ. ಹೆಂಗಸರಿಗೆ ಬಯಸುವಾಗ ಅಳಲು ಸಾಧ್ಯ, ಆದರೆ ನಗಲು ಸಾಧ್ಯವಿಲ್ಲ.'
ನಾನು ಹೇಳಿದ್ದು ಸತ್ಯ ಅಂತ ಅವಳಿಗೆ ಗೊತ್ತಾಗಿತ್ತು. ಅವಳು ನನ್ನ ತೊಡೆ ಮೇಲೆ ಗುದ್ದಿ ಹೇಳಿದಳು. ಅದೆಲ್ಲಾ ಇರಲಿ, ನಾನು ಹೇಳಿದ ವಿಷಯ ಏನಾಯಿತು'
'ಯಾವ ವಿಷಯ' ನಾನು ಗೊತ್ತಿಲ್ಲದವನಂತೆ ಕೇಳಿದೆ.
'ನನ್ನ ತಮ್ಮನ ವಿಚಾರ '
'ಓ ಅದಾ, ನೋಡು ಶಮಾ ಅವನನ್ನು ಇಲ್ಲಿ ನಿಲ್ಲಿಸಿ ನಮ್ಮ ಗಲಾಟೆಗಳನ್ನು ತೋರಿಸುವುದೇಕೆ'
'ಹಾಗಾದರೆ ಆ ಪ್ರಜ್ಞೆ ಉಂಟಲ್ಲಾ. ಇನ್ನಾದರೂ ನೀವು ನನ್ನೊಂದಿಗೆ ಗಲಾಟೆ ಮಾಡುವುದನ್ನು ನಿಲ್ಲಿಸಬಹುದು ' ಯಾವುದೋ ದೊಡ್ಡ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಂತೆ ಶಮಾ ಕಣ್ಣರಳಿಸಿ ಹೇಳಿದಳು.
ನಾನು ಒಳಗೊಳಗೇ ನಕ್ಕೆ. ಯಾಕೆಂದರೆ ಈ ವರೆಗೆ ನಾನು ಏಕಾಂಗಿಯಾಗಿ ಹೋರಾಡುತ್ತಿದ್ದೆ. ಇನ್ನು ಅಳಿಯನಿಂದಾಗಿ ನನಗೆ ಆನೆ ಬಲ ಬಂದಂತಾಗಬಹುದು.
'ರೀ ನೀವು ಒಪ್ತೀರೋ, ಇಲ್ವೋ ಫಸ್ಟ್ ಅದು ಹೇಳಿ ' ಅವಳು ತನ್ನ ಪಟ್ಟು ಸಡಿಲಿಸಲಿಲ್ಲ.
'ನನಗೆ ಗೊತ್ತಿತ್ತು ನೀವು ಒಪ್ತೀರಿ ಅಂತ '
'ಒಪ್ಪದೆ ಬೇರೆ ದಾರಿಯಿದ್ದರಲ್ಲವೇ' ನಿನ್ನ ಪ್ರತಿಭಟನೆಯ ಮುಂದೆ ತಲೆಬಾಗದಿರಲಾಗುತ್ತದಾ, ನೀನು ಸ್ವಾತಂತ್ರ್ಯ ಸಂಗ್ರಾಮಗಳಲ್ಲಿರುತ್ತಿದ್ದರೆ, ನಮ್ಮ ದೇಶವು 1947ಕ್ಕಿಂತ ವೊದಲೇ ಸ್ವತಂತ್ರವಾಗುತ್ತಿತ್ತೋ ಏನೋ '
'ಸಾಕು ಸಾಕು ನಿಮ್ಮ ಸೋಪಿಂಗ್'
ಶಮಾ ನನ್ನ ಭುಜದ ಮೇಲೆ ತಲೆ ಒರಗಿಸಿದಳು. ಹಗಲೆಲ್ಲಾ ಮಾಡಿದ ಕೆಲಸದ ಆಯಾಸವು ಅದರಲ್ಲಿ ತಿಳಿಯುತ್ತಿತ್ತು.
'ರೀ, ನೀವು ನನ್ನನ್ನು ಪ್ರೀತಿಸ್ತಿದ್ದೀರಾ' ನನ್ನ ಕೈ ಮೇಲೆ ಕೈಯಿಟ್ಟು ಕೇಳಿದಳು.
ಈ ಹುಡುಗಿಯರು ಹೀಗೇನೆ. ಹುಚ್ಚು ಮನಸ್ಸು. ಗಂಡ ಪ್ರೀತಿಸ್ತಾನೆ ಅಂತ ಗೊತ್ತಿದ್ದರೂ ಅದನ್ನು ಆಗಾಗ ಕನ್ಫರ್ಮ್ ಮಾಡುತ್ತಿರುತ್ತಾರೆ.
'ಯಾಕೆ ಮಾರಾಯ್ತಿ ಈಗ ಇಂತಹ ಪ್ರಶ್ನೆ' ನಾನು ಅವಳ ಕೂದಲಲ್ಲಿ ಕೈಯಾಡಿಸುತ್ತಾ ಕೇಳಿದೆ.
'ಹೀಗೆ ಸುಮ್ಮನೆ ಕೇಳಿದ್ದು, ರೀ ನಂಗೆ ನಿದ್ದೆ ಬರ್ತದೆ. ನಾನು ಹೋಗ್ತೇನೆ. ಓದಿದ್ದು ಸಾಕು. ಬೇಗ ಬನ್ನಿ ' ಶಮಾ ಎದ್ದು ರೂಮಿನ ಕಡೆಗೆ ಹೋದಳು. ಅವಳು ಎದ್ದು ಹೋಗುವಾಗ ನಾನೂ ಕೂಡಾ ಅವಳ ಹಿಂದೆ ಹೋಗಬಹುದೆಂದು ಭಾವಿಸಿದ್ದಳು. ಅವಳ ಆಲೋಚನೆ ಉಲ್ಟಾ ಹೊಡೆಯಿತು. ನಾನು ಏಳದ್ದನ್ನು ಕಂಡು ಅವಳು ಹೇಳಿದಳು.
'ರೀ ನೀವು ಬರ್ತೀರೋ ಇಲ್ವೋ'
'ನೀನು ಹೋಗು. ನನಗೆ ಸ್ವಲ್ಪ ಓದ್ಲಿಕ್ಕುಂಟು' ಅವಳನ್ನು ಓರೆಗಣ್ಣಿನಿಂದ ನೋಡುತ್ತಾ ಹೇಳಿದೆ.
'ನೀವು ಬೆಳಿಗ್ಗೆ ವರೆಗೆ ಓದುತ್ತಾ ಇರಿ. ನಾನು ಬಾಗಿಲು ಹಾಕಿ ಮಲಗುತ್ತೇನೆ. ಮತ್ತೆ ಬಂದು ಬಾಗಿಲು ತಟ್ಟಿದರೆ ನಾನು ತೆರೆಯಲಿಕ್ಕಿಲ್ಲ. ಹೊರಗೆ ಮಲಗಬೇಕು'
'ಓ.ಕೆ '
ಶಮಾ ಸಿಡುಕಿನಿಂದ ಹೋದಳು. ನಾನು ನೆಪ ಮಾತ್ರಕ್ಕೆ ಓಕೆ ಅಂದ್ರೂ ಅವಳ ಹಿಂದೇನೇ ಎದ್ದು ಹೋದೆ. ಯಾಕೆಂದರೆ ಇಲ್ಲಿ ತನಕ ನಾನು ಹೊರಗೆ ಮಲಗಲಿಲ್ಲ. ಇನ್ನು ಹೊಸದಾಗಿ ಆ ಅನುಭವ ಆಗುವುದು ಬೇಡ ಎಂಬ ಮುಂಜಾಗ್ರತಾ ಕ್ರಮ....
Sunday, 10 June 2012
ಬಾಲ್ಯದ ನೆನಪು
ಮಳೆಯ ಹನಿಗಳು ತಟಪಟ ಉದುರುತ್ತಿದ್ದಂತೆ
ಮನವು ಬಾಲ್ಯದ ಕಡೆಗೆ ಕಾಲ್ಕಿತ್ತಿತು
ಎಷ್ಟೊಂದು ಸುಂದರ ಆ ಬಾಳು
ಆದರೆ ಇಂದು ಅದು.....
ಬರೇ ನೆನಪು ಮಾತ್ರ
ಮಳೆಗೆ ನೆನೆದು ತಾಯಿ ಕೊಟ್ಟ ಪೆಟ್ಟು
ಇಂದಿಗೂ ಹಚ್ಚ ಹಸುರಾಗಿ ಉಳಿದಿದೆ
ನಾನು ಈಜಿ ಆಡಿದ ತೋಡು ,
ಉಯ್ಯಾಲೆ ಕಟ್ಟಿದ್ದ ಗೀರು ಮರದ ರೆಂಬೆ
ಹತ್ತಿ ಇಳಿದ ಮಾವು , ಪೇರಳೆ ಮರಗಳು
ನನ್ನ ಕೈ ಬೀಸಿ ಕರೆಯುತಿವೆ .....
ನನಗೆ ಹೋಗಲು ಮುಜುಗರ
ಯಾಕೆಂದರೆ ನಾನೀಗ ಯುವಕ
ಈ ಆಟವೆಲ್ಲಾ ಬಾಲ್ಯಕ್ಕೆ ಸೀಮಿತವಲ್ಲವೇ???
ಮನವು ಬಾಲ್ಯದ ಕಡೆಗೆ ಕಾಲ್ಕಿತ್ತಿತು
ಎಷ್ಟೊಂದು ಸುಂದರ ಆ ಬಾಳು
ಆದರೆ ಇಂದು ಅದು.....
ಬರೇ ನೆನಪು ಮಾತ್ರ
ಮಳೆಗೆ ನೆನೆದು ತಾಯಿ ಕೊಟ್ಟ ಪೆಟ್ಟು
ಇಂದಿಗೂ ಹಚ್ಚ ಹಸುರಾಗಿ ಉಳಿದಿದೆ
ನಾನು ಈಜಿ ಆಡಿದ ತೋಡು ,
ಉಯ್ಯಾಲೆ ಕಟ್ಟಿದ್ದ ಗೀರು ಮರದ ರೆಂಬೆ
ಹತ್ತಿ ಇಳಿದ ಮಾವು , ಪೇರಳೆ ಮರಗಳು
ನನ್ನ ಕೈ ಬೀಸಿ ಕರೆಯುತಿವೆ .....
ನನಗೆ ಹೋಗಲು ಮುಜುಗರ
ಯಾಕೆಂದರೆ ನಾನೀಗ ಯುವಕ
ಈ ಆಟವೆಲ್ಲಾ ಬಾಲ್ಯಕ್ಕೆ ಸೀಮಿತವಲ್ಲವೇ???
Wednesday, 30 May 2012
ನಮ್ಮ ಜನ ದುನಿಯಾನೆ ಚೇಂಜ್ ಮಾಡ್ತಾರೆ ಕಣ್ರೀ

ನಮ್ಮವರು ಪಾಲಿಸೋ ರೂಲ್ಸ್ ಗೆ ಹಿಡಿದ ಕನ್ನಡಿಯಂತಿದೆ. ಸುಪ್ರಿಂ ಕೋರ್ಟ್ ಇತ್ತೀಚಿಗೆ ವಾಹನಗಳಿಗೆ ಕೂಲ್ ಗ್ಲಾಸ್ ಗಳನ್ನ ಬಳಸಬಾರದು ಅನ್ನೋ ಕಾನೂನು ಜಾರಿಮಾಡಿತು. ಯುವಜನರಲ್ಲಂತೂ ಶೋಕ ತುಂಬಿದ ಮುಖಭಾವ. ಶೋಕಿವಾಲ ಜನರಿಗೆ ಇದು ನುಂಗಲಾರದ ತುತ್ತಾಗಿತ್ತು, ನಮ್ಮ ವಾಹನದ ಸೌದರ್ಯ ಕೂಲ್ ಗ್ಲಾಸ್ ನಲ್ಲಿ ಅಡಗಿದೆ ಅನ್ನೋ ಶೋಕಿಲಾಲ ಜನರು ಅದಕ್ಕೊಂದು ಸೂಕ್ತ ದಾರಿಯನ್ನು ಕಂಡುಕೊಂಡಿದ್ದಾರೆ. ಅವರ ಅನ್ವೇಷಣೆ ಅದ್ಬುತ ಆಚೆಗೆ ಕಾನೂನಿಗೂ ಸಾಲಂ ತಮ್ಮ ಶೋಕಿ ಜೀವನಕ್ಕೂ ಗುಲಾಂ ಅನ್ನೋ ರಿತಿಯಲ್ಲಿದೆ ಅವರ ಹೊಸ ಅನ್ವೇಷಣೆ.
ಸುಪ್ರಿಂ ಕೋರ್ಟ್ ಕೂಲ್ ಗ್ಲಾಸ್ ನಿಷೇದಿಸಿದೆ ಆದರೆ ಸ್ಕ್ರೀನ್ ಹಾಕೋದನ್ನ ನಿಷೆದಿಸಲು ಮರತೆಬಿಟ್ಟಿದೆ. ಹೌದು ಈ ಹೊಸ ಅನ್ವೆಷನೆಯೇ ಸ್ಕ್ರೀನ್.. ಮನಸ್ಸಿಗೆ ಒಪ್ಪದಿದ್ದರೂ, ಹಿರಿಯರ ಮಾತನ್ನ ಪಾಲಿಸಿ ಹಿರಿಯರಿಗೆ ಗೌರವಕೊಡುವಂತಹ ಕೆಲಸ ಇದೆ ತಾನೇ ….. ಮುಂದಿನ ಸುಪ್ರಿಂ ಕೋರ್ಟ್ ನಿಷೇದ ಯಾವುದರ ಮೇಲೆ ಇರಬಹುದು ನೀವು ಹೇಳಿ ನೋಡೋಣ ? ಸ್ಕ್ರೀನ್ ಮೇಲಾ ಅಥವ ಶೋಕಿ ವಾಹನಗಳ ಮೇಲೇನಾ ?..
ನಿತಿನ್ ರೈ, ಕುಕ್ಕುವಳ್ಳಿ. (ವರದಿಗಾರರು, ವಿಕೆ ನ್ಯೂಸ್)
Monday, 28 May 2012
ಅರಳುವ ವೊದಲೇ ಮುದುಡಿದ ಅರ್ಫಾ

ಜಗತ್ತು ಕಂಡ ಮೈಕ್ರೋಸಾಫ್ಟ್ ದಿಗ್ಗಜ ಬಿಲ್ಗೇಟ್ಸ್ನ ಕುರಿತು ಎಲ್ಲರಿಗೂ ತಿಳಿದಿರಬಹುದು. ಈ ಬಿಲ್ಗೇಟ್ಸ್ ಅರ್ಫಾಳ ಪ್ರತಿಭೆಗೆ ಮಾರು ಹೋಗಿ ಮೈಕ್ರೋಸಾಫ್ಟ್ ಪ್ರಧಾನ ಕಚೇರಿಗೆ ಖುದ್ದಾಗಿ ಕರೆಸಿದ್ದಾರೆಂದಾದರೆ ಅವಳ ಪ್ರತಿಭೆಯನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳಬಹುದು. ಅವಳನ್ನು ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಅವಳ ಸಾಧನೆಯನ್ನು ಗುರುತಿಸಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನೀಡಲಾಗುವ ‘ಫಾತಿಮಾ ಜಿನ್ನಾ’ ಸ್ವರ್ಣ ಪ್ರಶಸ್ತಿಯನ್ನು ಅಂದಿನ ಪಾಕ್ ಪ್ರಧಾನಿ ಶೌಕತ್ ಅಝೀಝ್ರಿಂದ ಪಡೆದುಕೊಂಡಳು. ಅದೇ ವರ್ಷ ‘ಸಲಾಂ ಪಾಕಿಸ್ತಾನ ಯೂತ್’ ಪ್ರಶಸ್ತಿಯನ್ನೂ ಪಡೆದಳು.
ಆಯಾ ಕ್ಷೇತ್ರಗಳಲ್ಲಿನ ಸಾಧನೆಗೆ ನೀಡಲಾಗುವ ‘ಪ್ರೈಡ್ ಆಫ್ ಪರ್ಫಾಮೆನ್ಸ್’ ನಾಗರಿಕ ಪ್ರಶಸ್ತಿಯೂ ಅರ್ಫಾಳಿಗೆ ಬಂದಿತ್ತು. ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ವಯಸ್ಸಿನ ಕಿಶೋರಿ ಎಂಬ ಹೆಗ್ಗಳಿಕೆಗೂ ಪಾತ್ರಳಾದಳು. ಅರ್ಫಾಳ ಸಾಧನೆಯನ್ನು ಗುರುತಿಸಿ 3ಜಿ ವೈಯರ್ಲೆಸ್ ಬ್ರಾಡ್ಬ್ಯಾಂಡ್ ಸರ್ವೀಸ್ ಕಂಪೆನಿಯಾದ ಪಾಕಿಸ್ತಾನ ಟೆಲಿ ಕಮ್ಯೂನಿಕೇಶನ್ ಕಂಪೆನಿಯು ಅವಳನ್ನು ತನ್ನ ರಾಯಭಾರಿಯಾಗಿ ಆಯ್ಕೆ ಮಾಡಿತ್ತು.

ಲಾಹೋರ್ ಗ್ರಾಮರ್ ಸ್ಕೂಲ್ನಲ್ಲಿ ಎ-ಲೆವೆಲ್ನಲ್ಲಿ ಎರಡನೇ ವರ್ಷ ವ್ಯಾಸಂಗ ಮಾಡುತ್ತಿದ್ದ ಅರ್ಫಾ 2011ರ ಡಿಸೆಂಬರ್ 22ರಂದು ಅಪಸ್ಮಾರಕ್ಕೆ ತುತ್ತಾಗಿ ಹೃದಯಾಘಾತಕ್ಕೆ ಒಳಗಾದಳು. ಇದರಿಂದಾಗಿ ಆಕೆಯ ಮೆದುಳಿಗೆ ತೀವ್ರ ಹಾನಿಯಾಯಿತು. ಕೂಡಲೇ ಅವಳನ್ನು ಲಾಹೋರಿನ ಕಂಬೈನ್ಡ್ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಅರ್ಫಾಳ ಅನಾರೋಗ್ಯವನ್ನರಿತ ಬಿಲ್ಗೇಟ್ಸ್ ದಿಗ್ಭ್ರಾಂತರಾದರು. ಅವಳ ಚಿಕಿತ್ಸೆಗಾಗಿ ಸ್ವಂತ ಖರ್ಚಿನಲ್ಲೇ ಅಂತಾರಾಷ್ಟ್ರೀಯ ವೈದ್ಯರನ್ನು ನೇಮಿಸಿದರೂ ಅರ್ಫಾಳ ಸ್ಥಿತಿಯು ದಿನದಿಂದ ದಿನಕ್ಕೆ ಹದಗೆಡ ತೊಡಗಿತು. ಕೊನೆಗೆ ವೈದ್ಯರ ಪ್ರಯತ್ನಗಳೆಲ್ಲವೂ ನಿರರ್ಥಕವೆಂಬಂತೆ ಈ ಲೋಕಕ್ಕೆ ಶಾಶ್ವತವಾಗಿ ವಿದಾಯ ಹೇಳಿದಳು. ಇವಳ ಮರಣದಿಂದಾಗಿ ಇಡೀ ಜಗತ್ತೇ ಏನೋ ಅಮೂಲ್ಯವಾದುದನ್ನು ಕಳಕೊಂಡಂತೆ ಚಡಪಡಿಸಿತು. “ಇಂದು ನನ್ನ ಜೀವನ ಅತ್ಯಂತ ದುಃಖದ ದಿನ” ಎಂದು ಅರ್ಫಾಳ ಮರಣದ ಕುರಿತು ಬಿಲ್ಗೇಟ್ಸ್ ಹೇಳಿದ್ದಾರೆಂದಾದರೆ ಅವಳ ಬೆಲೆ ಎಷ್ಟೆಂದು ಭಾಸವಾಗಬಹುದು.
ಕಂಪ್ಯೂಟರ್ ಕ್ಷೇತ್ರದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದ್ದ ಅರ್ಫಾಳು ಹಾರ್ವರ್ಡ್ ವಿಶ್ವಾವಿದ್ಯಾಲಯದಲ್ಲಿ ಮುಂದಿನ ವ್ಯಾಸಾಂಗ ಮಾಡುವ ಮತ್ತು ಮೈಕ್ರೊಸಾಫ್ಟ್ ಕಂಪೆನಿಯಲ್ಲಿ ಸೇವೆ ಸಲ್ಲಿಸಲು ಬಯಸಿದ್ದಳು. ನಂತರ ಪಾಕಿಸ್ತಾನಕ್ಕೆ ತೆರಳಿ ಸ್ಯಾಟಲೈಟ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ತಾಂತ್ರಿಕ ಸಂಶೋಧನೆಗಳನ್ನು ಕೈಗೊಳ್ಳುವ ಹೆಬ್ಬಯಕೆ ಹೊಂದಿದ್ದಳು. ಆದರೆ ವಿಧಿಯಾಟದ ಮುಂದೆ ಎಲ್ಲವೂ ವೊಣಕಾಲೂರಿತು.
ಅರ್ಫಾಳ ಸ್ಮರಣಾರ್ಥ ಲಾಹೋರ್ ಟೆಕ್ನಾಲಜಿ ಪಾರ್ಕನ್ನು ಅರ್ಫಾ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಎಂದು ನಾಮಕರಣ ಮಾಡುವ ಮೂಲಕ ಮುಖ್ಯಮಂತ್ರಿ ಶಹಬಾಝ್ ಶರೀಫ್ ಆಕೆಗೆ ಗೌರವ ಸಲ್ಲಿಸಿದ್ದಾರೆ ಅಂತೂ ಜಗತ್ತಿಗೆ ನವೀನ ಆವಿಷ್ಕಾರಗಳ ಮೂಲಕ ಕೊಡುಗೆಗಳನ್ನು ನೀಡಬೇಕಾಗಿದ್ದ ತಾರೆಯು ಅಸ್ತಮಿಸಿದೆ. ಅರ್ಫಾರಂತಹವರು ಇನ್ನೂ ಹುಟ್ಟಿ ಬರಲಿ ಎಂಬುದು ದೇಶದ ಜನರ ಹಾರೈಕೆ.
Wednesday, 11 April 2012
ಲೋಟ, ಬಟ್ಟಲು ಸಾಲದೇ?
ಹಿಂದಿನ ಕಾಲದಲ್ಲಿ ಮಕ್ಕಳು ಅಳುವಾಗ ಸಮಾಧಾನ ಪಡಿಸಲಿಕ್ಕಾಗಿ ಸ್ಟೀಲಿನ ಲೋಟವನ್ನೋ, ಬಟ್ಟಲನ್ನೋ ನೀಡುತ್ತಿದ್ದೆವು. ಮಕ್ಕಳು ಅದನ್ನು ನೆಲಕ್ಕೆ ಬಡಿದು ಸದ್ದು ಮಾಡುತ್ತಾ ಆಟವಾಡುತ್ತಿದ್ದವು. ಆದರೆ ಇಂದು ಕಾಲವೇ ಬದಲಾಗಿದೆ. ಇಂದು ಲೋಟ, ಬಟ್ಟಲುಗಳ ಸ್ಥಾನವನ್ನು ರೆಡಿಮೇಡ್ ಆಟಿಕೆಗಳು ಆಕ್ರಮಿಸಿಕೊಂಡಿವೆ. ಪ್ಲಾಸ್ಟಿಕ್, ಫೈಬರ್ನಿಂದ ತಯಾರಿಸಲಾದ ಆಟಿಕೆಗಳು ವಿವಿಧ ಸದ್ದನ್ನು ಮಾಡುತ್ತಾ ಮಕ್ಕಳ ಅಳುವನ್ನು ನಿಲ್ಲಿಸುತ್ತದೆ. ವಿವಿಧ ಬಣ್ಣದ, ವೈವಿಧ್ಯಮಯ ಆಟಿಕೆಗಳು ಮಕ್ಕಳನ್ನೂ ಹೆತ್ತವರನ್ನೂ ಬಲುಬೇಗನೇ ಆಕಷ್ರಿಸುತ್ತವೆ. ಎಷ್ಟೇ ಬೆಲೆ ತೆತ್ತಾದರೂ ಹೆತ್ತವರು ಅವುಗಳನ್ನು ಖರೀದಿಸಿ ತರುತ್ತಾರೆ.
ಆದರೆ ಹೆಚ್ಚಿನವರು ಅದರ ಹಿಂದಿರುವ ಆಘಾತಕಾರಿ ವಿಷಯಗಳನ್ನು ತಿಳಿದಿಲ್ಲ. ವಿವಿಧ ಕಂಪೆನಿಗಳು ತಯಾರಿಸುತ್ತಿರುವ ಆಟಕೆಗಳಲ್ಲಿ ಹಲವು ರೀತಿಯ ರಾಸಾಯನಿಕ ವಸ್ತುಗಳು ತುಂಬಿರುತ್ತವೆ. ಕಂಪೆನಿಗಳು ಪರಸ್ಪರ ಪೈಪೋಟಿಗಾಗಿ, ಲಾಭ ಗಳಿಸುವ ದುರಾಸೆಯಿಂದಲೂ ಏನನ್ನೂ ಮಾಡಲು ಹೇಸುವುದಿಲ್ಲ. ಆಟಿಕೆಗಳಿಗೆ ಆಕಷ್ರಕ ಬಣ್ಣವನ್ನು ನೀಡಲು ಹಲವು ರೀತಿಯ ವಣ್ರ ವಧ್ರಕ ರಾಸಾಯನಿಕ ವಸ್ತುಗಳನ್ನು ಬೆರೆಸುತ್ತಾರೆ. ಪುಟ್ಟ ಮಕ್ಕಳು ಈ ಆಟಿಕೆಗಳಿಂದ ಆಟವಾಡುವಾಗ ಅವುಗಳನ್ನು ಬಾಯಿಗೆ ಹಾಕುತ್ತವೆ. ಜೊಲ್ಲುರಸವು ಈ ಆಟಿಕೆಗಳಿಗೆ ತಾಗಿ ಅದರಿಂದ ವಿಶಕಾರಕ ರಾಸಾಯನಿಕಗಳು ಬಿಡುಗಡೆ ಹೊಂದಿ ಮಗುವಿನ ಹೊಟ್ಟೆಗೆ ಸೇರುತ್ತವೆ. ಇದು ಪುಟ್ಟ ಮಕ್ಕಳ ದೇಹದಲ್ಲಿ ಬಹು ಬೇಗನೇ ತನ್ನ ತಾಕತ್ತನ್ನು ಪ್ರದಶ್ರಿಸುತ್ತದೆ. ಇದರಿಂದಾಗಿ ಮಕ್ಕಳಲ್ಲಿ ಹಲವು ರೀತಿ ಶಾರೀರಿಕ ಹಾಗೂ ಮಾನಸಿಕ ರೋಗಗಳು ಕಂಡು ಬರುತ್ತವೆ. ಮಾತ್ರವಲ್ಲ, ಇದು ನಿರಂತರವಾಗಿ ದೇಹಕ್ಕೆ ಪ್ರವೇಶಿಸುವುದರಿಂದ ಪ್ರಾಣಕ್ಕೂ ಅಪಾಯವಿದೆ.
ದೀಕ್ಷಾ ಎಂಬ ಮಗು ಬಹಳ ಚುರುಕಾಗಿದ್ದಳು. ಮಾತ್ರವಲ್ಲ ತುಂಟಿಯಾಗಿದ್ದಳು. ಎಲ್ಲರಿಗೂ ಪ್ರೀತಿ ಪಾತ್ರಳಾಗಿದ್ದಳು. ಅವಳ ತುಂಟತನದ ತೊದಲು ನುಡಿಗೆ ಎಲ್ಲರೂ ಮರುಳಾಗುತ್ತಿದ್ದರು. ಆದರೆ ಕ್ರಮೇಣ ಅವಳಲ್ಲಿ ಬದಲಾವಣೆಗಳು ಗೋಚರಿಸಲಾರಂಭಿಸಿದವು. ಅವಳ ಸೌಂದಯ್ರವು ಕುಗ್ಗ ತೊಡಗಿತು. ಹೊಟ್ಟೆಗೆ ತಿನ್ನುವುದನ್ನು ನಿಲ್ಲಿಸತೊಡಗಿದಳು. ಸದಾ ಖಿನ್ನಳಾಗಿರುತ್ತಿದ್ದಳು. ಇತರ ಮಕ್ಕಳು ಆಡುವುದನ್ನು ನೋಡಿದರೂ ಅವರ ಬಳಿಗೆ ಹೋಗುತ್ತಿರಲಿಲ್ಲ.ಆತಂಕಗೊಂಡ ಹೆತ್ತವರು ಅವಳನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋದರು. ಪರೀಕ್ಷಿಸಿದ ವೈದ್ಯರು ನಿಮ್ಮ ಮಗುವಿನ ಕಿಡ್ನಿ ವಿಫಲವಾಗಿದೆ ಎಂಬ ಆತಂಕಕಾರಿ ವಾತ್ರೆಯನ್ನು ತಿಳಿಸಿದರು. ಹೆಚ್ಚಿನ ಪರೀಕ್ಷೆ ನಡೆಸಿದಾಗ ಮಗುವಿನ ಶರೀರದಲ್ಲಿ ಪೋಲಿ ವೆನೈಲ್ ಕ್ಲೋರೈಡ್ ಎಂಬ ರಾಸಾಯನಿಕ ಪತ್ತೆಯಾಯಿತು. ಇದು ಮಗುವಿನ ಶರೀರಕ್ಕೆ ಹೇಗೆ ಪ್ರವೇಶಿಸಿತು ಎಂದು ವೈದ್ಯರ ತಲೆಗೆ ಹತ್ತಲಿಲ್ಲ. ಕೊನೆಗೆ ಆ ಮಗುವಿನ ಆಟಿಕೆಯನ್ನು ಪರೀಕ್ಷಿಸಿದಾಗ ಬೊಂಬೆಯೊಂದರಲ್ಲಿ ಈ ರಾಸಾಯನಿಕ ಇರುವುದು ಪತ್ತೆಯಾಯಿತು.
ಇಂತಹ ಹಲವು ರಾಸಾಯನಿಕ ವಸ್ತುಗಳು ಇಂದು ತಯಾರಾಗುತ್ತಿರುವ ಆಟಿಕೆಗಳಲ್ಲಿ ವಿವಿಧ ಪ್ರಮಾಣದಲ್ಲಿವೆ. ಆದ್ದರಿಂದ ನಾವು ದುಬಾರಿ ಬೆಲೆ ತೆತ್ತು ಆಟಿಕೆಗಳನ್ನು ತರುವಾಗ ಅದರೊಂದಿಗೆ ರೋಗವನ್ನೂ ಹೊತ್ತು ತರುತ್ತೇವೆ ಎಂಬ ಪ್ರಜ್ನೆಯು ನಮ್ಮಲ್ಲಿ ಜಾಗೃತವಾಗಬೇಕು. ಲಾಭ, ಪೈಪೋಟಿಗಳ ಈ ಜಗತ್ತಿನಲ್ಲಿ ಆರೋಗ್ಯ, ಪ್ರಕೃತಿಗೆ ಬೆಲೆ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ನಮ್ಮ ಮಗುವಿನ ಆರೋಗ್ಯ ಹದಗೆಡಲು ನಾವು ಕಾರಣಕತ್ರರಾಗಬಾರದು. ಮಗುವಿನ ಮೇಲಿನ ಅತಿಯಾದ ಮಮತೆಯು ಮಗುವಿಗೆ ಕಂಟಕವಾಗಬಾರದು.
Monday, 19 March 2012
ಉಪವಾಸದ ಹನ್ನೆರಡನೇ ವರ್ಷಕ್ಕೆ ಕಾಲಿಟ್ಟ ಇರೋಂ ಶರ್ಮಿಳಾ

ಆದರೆ ಇರೋಮ್ ಶರ್ಮಿಳ ಚಾನು ಎಂಬ ಮಹಿಳೆಯ ಪ್ರತಿಭಟನೆಗೆ ಸರಿಸಾಟಿಯಾಗಿ ಯಾರೂ ಪ್ರತಿಭಟನೆ ನಡೆಸಲಿಲ್ಲ. ಇನ್ನು ನಡೆಸಲಿಕ್ಕೂ ಇಲ್ಲ. ಈಕೆಯ ಪ್ರತಿಭಟನೆಗೆ ಹತ್ತು ವಷ್ರ ಕಳೆಯಿತು. ಶರಮಿಳಾ ಮಾಡುತ್ತಿರುವುದೇನೆಂದರೆ ಈಕೆ ಆಹಾರ ಸೇವಿಸುತ್ತಿಲ್ಲ. ಅಂದರೆ ಆಮರಣಾಂತ ಉಪವಾಸ ಆಚರಿಸಿದ್ದಾಳೆ. ಇದು ಕೇವಲ ಒಂದೆರಡು ದಿನಗಳ ಉಪವಾಸವಲ್ಲ. ತಿಂಗಳುಗಳ ಉಪವಾಸವೂ ಅಲ್ಲ. ಈಕೆ ಸುದೀರ್ಘ ಹನ್ನೆರಡು ವರ್ಷಗಳಿಂದ ಉಪವಾಸ ಆಚರಿಸುತ್ತಿದ್ದಾಳೆ. ಈ ವರ್ಷ ಗಳಲ್ಲಿ ಈಕೆ ಏನನ್ನೂ ಸೇವಿಸಿಲ್ಲ ಎಂದರೆ ನೀವು ನಂಬಲೇಬೇಕು. ಯಾಕೆಂದರೆ ಇದೊಂದು ವಾಸ್ತವವಾಗಿದೆ. 2000 ಇಸವಿಯ ನವೆಂಬರ್ ತಿಂಗಳಿನಲ್ಲಿ ಆರಂಭಿಸಿದ ಉಪವಾಸವು ಇಂದಿಗೂ ಮುಂದುವರಿಯುತ್ತಲೇ ಇದೆ.
ಶರ್ಮಿಳ ಆತಂಕವಾದಿಯಲ್ಲ, ಬಂಡುಕೋರಳಲ್ಲ, ಸಮಾಜಘಾತುಕಳೂ ಅಲ್ಲ, ಈಕೆ ನಮ್ಮ-ನಿಮ್ಮ ಮನೆ
ಯ ಹೆಣ್ಣು ಮಕ್ಕಳಂಥವಳು. ಅಪ್ಪಟ ಭಾರತೀಯ ನಾರಿ. ಭಾರತದ ಆಭರಣ ಎಂದು ಕರೆಯಲ್ಪಡುವ ಮಣಿಪುರ ರಾಜ್ಯದವಳು.
ಇಡೀ ಜಗತ್ತಿನ ಇತಿಹಾಸದಲ್ಲಿ ಕೇವಲ ಒಂದು ಬೇಡಿಕೆ ಇರಿಸಿ ಇಷ್ಟು ವರ್ಷ ಗಳ ಕಾಲ ಆಮರಣಾಂತರ ಉಪವಾಸ ಆಚರಿಸಿದ ಉದಾಹರಣೆಯೇ ಇಲ್ಲ. ಯಾವ ಪ್ರತಿಭಟನೆಕಾರರೂ ಮುಟ್ಟಲಾಗದ ಎತ್ತರವನ್ನು ಶರ್ಮಿಳ ಏರಿದ್ದಾಳೆ. ಬಹುಶಃ ಇನ್ನೊಂದು ಶರ್ಮಿಳ ಜಗತ್ತಿನಲ್ಲಿರಲು ಸಾಧ್ಯವೇ ಇಲ್ಲ. ಮುಂದೆ ಹುಟ್ಟಲೂ ಸಾಧ್ಯವಿಲ್ಲ. ಹಾಗಾಗಿ ಸಮಸ್ತ ಮಣಿಪುರವೇ ಶರ್ಮಿಳ ಬದುಕುವಂತಾಗಲಿ ಎಂದು ಬಯಸುತ್ತಿದೆ.
ಈ ಸಂದಭ್ರದಲ್ಲಿ ಮಣಿಪು ರದ ಹಿನ್ನಲೆ ಏನು ಎಂಬುವುದನ್ನು ತಿಳಿಯುವುದು ಸೂಕ್ತವೆನಿಸುತ್ತದೆ. ನೀಲಿ ಬಣ್ಣದ ಪರ್ವತ ಶ್ರೇಣಿಗಳಿಂದಾವೃತವಾದ ನಿಸರ್ಗ ರಮಣೀಯ ಮಣಿಪುರವು ಮ್ಯಾನ್ಮಾರ್ ಗಡಿಗೆ ತಾಗಿಕೊಂಡಿದೆ. 1881ರಲ್ಲಿ ಬ್ರಿಟಿಷರು ಯುದ್ಧದ ಮೂಲಕ ಈ ನಾಡನ್ನು ವಶಪಡಿಸಿಕೊಂಡರು. ನಂತರ 1947ರಲ್ಲಿ ಭಾರತದ ಗಣರಾಜ್ಯಕ್ಕೆ ಸೇರ್ಪಡೆಗೊಂಡಿತು. 1972ರ ಜನವರಿ 21ರಂದು ಮಣಿಪುರಕ್ಕೆ ಪೂರ್ಣ ಪ್ರಮಾಣದ ರಾಜ್ಯಸ್ಥಾನ ದೊರೆಯಿತು. ವಿವಿಧ ಕಲೆ, ಸಂಸ್ಕ್ರತಿ ಹೊಂದಿರುವ ಮಣಿಪು ರವು ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಸಿದ್ದಹಸ್ತವಾಗಿದೆ.
ಇಂತಹಮಣಿಪುರವು ಸ್ವಾತಂತ್ರ್ಯ ಬಂದಾಗಿನಿಂದ ನೆಮ್ಮದಿಯಾಗಿಲ್ಲ. ಸ್ವಾತಂತ್ರ್ಯ ಎಂಬ ಪದದ ಅಥ್ರವೇ ಗೊತ್ತಿಲ್ಲದಷ್ಟು ಅಲ್ಲಿನ ಜನರು ಅಭದ್ರತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಈ ಸ್ವಾತಂತ್ರ್ಯಕ್ಕಿಂತ ಬ್ರಿಟಿಷರ ಆಡಳಿತವೇ ಮೇಲು ಎಂಬ ಭಾವನೆ ಅವರ ಮನಸ್ಸಿನಲ್ಲಿ ಬರದಿರಲಿಕ್ಕಿಲ್ಲ. ಭಾರತದ ಆಡಳಿತದಿಂದಾಗಿ ಅವರು ಅಷ್ಟು ಬೇಸತ್ತಿದ್ದಾರೆ.
ನಮ್ಮ ಕೇಂದ್ರ ಸರಕಾರವು ಮಣಿಪುರವನ್ನು ಗಲಭೆಗ್ರಸ್ಥ ಪ್ರದೇಶ ಎಂದು ಗುರುತಿಸಿದೆ. ಹಾಗಾಗಿ ಅಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು 1985ರಲ್ಲಿ ಜಾರಿಗೊಳಿಸಲಾಯಿತು. ಇದರಿಂದಾಗಿ ಅಲ್ಲಿನ ಜನರ ಬದುಕು ಮೂರಾ ಬಟ್ಟೆಯಾಗಿ ಹೋಗಿದೆ.
ಈ ಕಾಯ್ದೆಯು ದೇಶದ ಇತರ ಕ್ರೂರ ಕಾಯ್ದೆಗಳಿಗೆ ತಾಯಿಯಿದ್ದಂತೆ. ಸರಳವಾಗಿ ಹೇಳುವುದಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಮಿಲಿಟರಿ ಆಡಳಿತ. ಈ ಕಾಯ್ದೆಯ ಪ್ರಕಾರ ಯಾರನ್ನು ಬೇಕಾದರೂ ವಾರೆಂಟ್ ಇಲ್ಲದೆ ಬಂಧಿಸಲು ಸಾಧ್ಯವಾಗುತ್ತದೆ. ಯಾವುದೇ ಮನೆಗಳಿಗೂ, ಕಛೇರಿಗಳಿಗೂ ಯಾವ ಮಧ್ಯರಾತ್ರಿಯಲ್ಲಿ ಬೇಕಾದರೂ ಹೋಗಿ ಬಂಧಿಸುವ ವಿಶೇಷ ಅಧಿಕಾರವನ್ನು ಸೇನೆಗೆ ನೀಡಲಾಗಿದೆ. ಒಂದು ವೇಳೆ ಸೇನಾ ಪಡೆಗಳಿಂದ ನಡೆಯುವ ಅಮಾಯಕರ ಮೇಲಿನ ದೌಜ್ರನ್ಯವನ್ನು ರಾಜ್ಯ ಸರಕಾರಕ್ಕೂ, ಪೋಲೀಸ್ ಇಲಾಖೆಗೂ ಕೇಂದ್ರ ಸರಕಾರದ ಅನುಮತಿ ಇಲ್ಲದೆ ತನಿಖೆ ನಡೆಸಲು ಸಾಧ್ಯವಿಲ್ಲ.
ಇಂತಹ ಕ್ರೂರ ಕಾಯ್ದೆಯನ್ನು ಮಣಿಪುರಿಗಳ ಮೇಲೆ ಹೇರಿದಾಗ ಬ್ರಿಟಿಷರಿಂದ ಸಿಕ್ಕಿದ ಸ್ವಾತಂತ್ರ್ಯವು ಕಸಿಯಲ್ಪಟ್ಟಿತು. ನಮ್ಮನ್ನು ಯಾವಾಗ ಬಂಧಿಸುವರೋ ಎಂಬ ಭೀತಿಯಲ್ಲಿ ಬದುಕತೊಡಗಿದರು. ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು ಎಂಬ ಒಂದೇ ಒಂದು ಬೇಡಿಕೆಗಾಗಿ ಶರ್ಮಿಳ ಉಪವಾಸ ಆಚರಿಸಿದ್ದು. ಇದು ಓರ್ವ ಮಹಿಳೆ ನಡೆಸುವ ಸಾಟಿಯಿಲ್ಲದ ಪ್ರತಿಭಟನೆಯಾಗಿದೆ.
ಶರ್ಮಿಳ ಉಪವಾಸ ಸತ್ಯಾಗ್ರಹ ಆರಂಭಿಸಿದಾಗ ಇದು ಹೆಚ್ಚು ದಿನ ನಡೆಯುವುದಿಲ್ಲ ಎಂದು ಜನರು ಭಾವಿಸಿದ್ದರು. ಆದರೆ ಅವಳ ಉಪವಾಸವು ಕೊನೆಯಿಲ್ಲದೆ ಸಾಗಿದಾಗ ಮಣಿಪುರ ಸರಕಾರ ನಿಧಾನವಾಗಿ ತಲೆಕೆಡಿಸತೊಡಗಿತು. ನಂತರ ಆಕೆಯ ವಿರುದ್ಧ ‘ಆತ್ಮಹತ್ಯಾ’ ಯತ್ನದ ಅಪರಾಧ ಹೊರಿಸಲಾಯಿತು. ಈ ಅಪರಾಧದಡಿಯಲ್ಲಿ ಓರ್ವ ವ್ಯಕ್ತಿಗೆ ಗರಿಷ್ಠ ಒಂದು ವರ್ಷ ಶಿಕ್ಷೆ ಲಭಿಸುವುದು. ಆಸ್ಪತ್ರೆಯೇ ಜೈಲಾದ ಶರ್ಮಿಳಾಳಿಗೆ ಇಂತಹ ಒಂದು ವಷ್ರದ ಜೈಲು ಶಿಕ್ಷೆಯನ್ನು ಹಲವು ಬಾರಿ ಅನುಭವಿಸಬೇಕಾಯಿತು.
ಶರ್ಮಿಳಳ ಈ ಉಪವಾಸವನ್ನು ಸರಕಾರವು ಕೊನೆಗೊಳಿಸುವ ಲಕ್ಷಣ ಕಾಣಿಸುತ್ತಿಲ್ಲ. ಬಂದೂಕು, ಬಾಂಬು ಹಿಡಿದು ಪ್ರತಿಭಟಿಸಿದರೆ ಗಮನಿಸುವ ಈ ದೇಶದಲ್ಲಿ ನಿರಾಹಾರ ಪ್ರತಿಭಟನೆಯನ್ನು ಗಮನಿಸುವ ಮನಸ್ಸು ಸರಕಾರಕ್ಕಿದ್ದರಲ್ಲವೇ? ಇನ್ನು ಈ ಸಹೋದರಿಯ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವುದು ಈಕೆಯ ಮರಣವಾಗಿರಬಹುದೇನೋ?
2008 ಜುಲೈ 15ರಂದು ಭಾರತೀಯ ಭೂಸೇನೆಯ ಭಾಗವಾಗಿರುವ ಅಸ್ಸಾಮ್ ರೈಫಲ್ಸ್ನ 17ನೇ ಬೆಟಾಲಿಯನ್ ಕೇಂದ್ರ ಸ್ಥಾನದ ಎದುರು ಕೆಲವು ಮಹಿಳೆಯರು ಪ್ರತಿಭಟನೆ ನಡೆಸಿದರು. ಪ್ಲೇಕಾರ್ಡುಗಳನ್ನು ಹಿಡಿದು ಘೋಷಣೆ ಕೂಗುವ ಕೇವಲ ಪ್ರತಿಭಟನೆಯಾಗಿರಲಿಲ್ಲ. ಈ ಹೆಣ್ಣು ಮಕ್ಕಳು ಸಂಪೂರ್ಣ ಬೆತ್ತಲೆಯಾಗಿ ನಿಂತು ಪ್ರತಿಭಟಿಸಿದರು. ‘ಇಂಡಿಯನ್ ಆರ್ಮಿ ರೇಪ್ ಅಸ್, ಇಂಡಿಯನ್ ಆರ್ಮಿ ಟೇಕ್ ಅವರ್ ಫ್ಲೆಷ್’ ಎಂದು ಬರೆಯಲಾದ ಬ್ಯಾನರುಗಳು ಅವರ ಪ್ರತಿಭಟನೆಯ ಕಾರಣವನ್ನು ತಿಳಿಸುತ್ತಿತ್ತು. ಭಾರತದ ಈ ನಾರಿಯರು ವಿವಸ್ತ್ರವಾಗಿ ಪ್ರತಿಭಟನೆ ನಡೆಸಿದಾಗ ‘ಪ್ರಕಾಶಿಸುವ ಭಾರತ’ದ ಕರಾಳ ಮುಖವನ್ನು ಜಗತ್ತು ಬಹಳ ಹತ್ತಿರದಿಂದ ದರ್ಶಿಸಿತು. ಈ ಪ್ರತಿಭಟನೆಯ ಕಾರಣಕರ್ತರು ಅದೇ ಅಸ್ಸಾಂ ರೈಫಲ್ಸ್ ಪಡೆ. ಜುಲೈ 10ರಂದು ತಂಗ್ಜಮ್ ಮನೋರಮಾ ದೇವಿ ಎಂಬ 22 ವರ್ಷ ದ ಹೆಣ್ಣು ಮಗಳನ್ನು ಇದೇ ಪಡೆಯು ಅಮಾನುಷವಾಗಿ ಕೊಂದುಹಾಕಿತು. ಇವರು ಕೇವಲ ಕೊಲೆ ಮಾಡಿದ್ದಲ್ಲ. ಭೀಕರ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಮಾಡಲಾಗಿತ್ತು. ಮಧ್ಯರಾತ್ರಿಯಲ್ಲಿ ಮನೆಗೆ ನುಗ್ಗಿ ಮನೋರಮಾಳನ್ನು ಕೊಂಡುಹೋದ ರೈಫಲ್ಸ್ ಪಡೆ ಬೆಳಗಿನ ಜಾವ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಹೀಗೆ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುವಾಗ ಈ ಹೆಣ್ಣು ಮಕ್ಕಳ ನಗ್ನ ಪ್ರತಿಭಟನೆಯು ಧೈಯ್ರವಿದ್ದರೆ ಸಾರ್ವ ಜನಿಕವಾಗಿ ಅತ್ಯಾಚಾರವೆಸಗಿ ಎಂಬ ಸೇನೆಗಿರುವ ಸವಾಲಾಗಿತ್ತು.
ಮನೋರಮಾ ಮತ್ತು ಶಮ್ರಿಳಾ ಇಂದು ಮಣಿಪುರಿಗಳ ದೇವತೆಯಾಗಿದ್ದಾರೆ. ಮನೋರಮಾಳ ಮನೆಯ ಮುಂದೆ ಅವಳ ಹೆಸರಿನಲ್ಲಿಯೇ ಒಂದು ದೇವಾಲಯ ನಿರ್ಮಾಣಗೊಂಡಿವೆ. ಈ ಇಬ್ಬರು ಹೆಣ್ಣು ಮಕ್ಕಳು ಮಣಿಪುರದ ಸಮಸ್ಯೆಗಳಿಗೆ ಸಂಕೇತವಾಗಿದ್ದಾರೆ. ಜಗತ್ತು ಅಲ್ಲಿನ ಸಮಸ್ಯೆಗಳನ್ನು ಗಮನಿಸುತ್ತಿರುವುದು ಈ ಇಬ್ಬರು ಹೆಣ್ಣು ಮಕ್ಕಳ ಮೂಲಕವಾಗಿದೆ.
ಇಂದು ಭಾರತದಲ್ಲಿ ಅಮೇರಿಕನ್ ಪಡೆಗಳ ಅತ್ಯಾಚಾರವನ್ನೂ, ಇತರ ದೇಶಗಳ ತಪ್ಪುಗಳನ್ನು ಸ್ಟೇಜುಗಳಲ್ಲೂ, ಪೇಜುಗಳಲ್ಲೂ ವಿಮರ್ಶಿ ಸುತ್ತಿದ್ದಾರೆ. ವಾರ್ತಾ ಮಾಧ್ಯಮಗಳು ಸಕ್ಕತ್ತಾಗಿ ಕವರೇಜು ನೀಡುತ್ತಿದೆ. ಆದರೆ ಇವರುಗಳು ನಮ್ಮ ದೇಶದ ಸ್ಥಿತಿಯನ್ನು ಗಮನಿಸುವುದೇ ಇಲ್ಲ. ಅಸ್ಸಾಮಿನಲ್ಲೂ, ಕಾಶ್ಮೀರದಲ್ಲೂ ಸೇನೆಯ ಹಲವು ಅತ್ಯಾಚಾರಗಳನ್ನೆಸಗಿದ ಘಟನೆಗಳು ಅಪ್ಪಿತಪ್ಪಿ ಹೊರಬಿದ್ದಿದೆ. ಆದರೆ ಇದು ಯಾವುದೂ ಇವರಿಗೆ ಸುದ್ದಿಯಾಗಲಿಲ್ಲ. ನಮ್ಮ ದೇಶದ ಕುರಿತು ಬರೆದರೆ ಪೇಜುಗಳೂ ಸಾಕಾಗಲಿಕ್ಕಿಲ್ಲ.
ಸಹೋದರಿ ಶರ್ಮಿಳಳ ದೈಹಿಕ ಸ್ಥಿತಿಯು ಕ್ಷೀಣಿಸುತ್ತಾ ಸಾಗುತ್ತಿದೆ. ಬಲವಂತವಾಗಿ ಮೂಗಿನ ಮೂಲಕ ಆಹಾರ ನೀಡಲಾಗುತ್ತಿದ್ದರೂ ಆರೋಗ್ಯವು ದಿನದಿಂದ ದಿನಕ್ಕೆ ಹದಗೆಡುತ್ತಾ ಇದೆ. ಅವಳ ಮರಣವು ಅವಳಿಗೆ ಜಯ ದೊರಕಿಸದೆ ಹತ್ತಿರವಾಗುತ್ತಿದೆ. ವೈದ್ಯರ ಪ್ರಕಾರ ಅವಳ ಶರೀರದ ಕೆಲವು ಅಂಗಗಳು ಸ್ಪಂದಿಸುತ್ತಿಲ್ಲ. ಅವಳು ಇನ್ನು ಎಷ್ಟು ದಿನ ಬದುಕುತ್ತಾಳೋ ಆ ದೇವನೇ ಬಲ್ಲ. ಸರಕಾರವು ಅವಳ ಬೇಡಿಕೆಯನ್ನು ಈಡೇರಿಸುವಂತೆ ಕಾಣುತ್ತಿಲ್ಲ. ಅವಳು ತನ್ನ ಪ್ರತಿಭಟನೆಯನ್ನು ನಿಲ್ಲಿಸಲಿಕ್ಕೂ ಇಲ್ಲ. ಪ್ರತೀ ಮನಸ್ಸುಗಳೂ ಈ ಶಾಂತ ಶೈಲಿಯ, ಮಾದರಿ ಪ್ರತಿಭಟನೆಗೆ ಬೆಂಬಲ ಸೂಚಿಸಬೇಕಾಗಿದೆ. ಇಂದು ಮನೋರಮಾ ದೇವಿ ಸತ್ತು ಜೀವಿಸುತ್ತಿದ್ದರೆ ಶರ್ಮಿಳ ಸಾಯುತ್ತಿದ್ದಾಳೆ. ಮುಂದೆ ಏನು ಸಂಭವಿಸುವುದೋ ಎಂದು ಕಾದು ನೋಡಬೇಕಾಗಿದೆ.
Wednesday, 29 February 2012
ನೀನು "ಪೀಡೆ' ಅಂತ ಯಾರು ಹೇಳಿದ್ದು?
ಆಕಾಶದಲ್ಲಿ ಕಾರ್ಮೋಡ ಆವರಿಸಿದ್ದನ್ನು ಕಂಡು ನಾನು ಬೇಗನೇ ಮನೆಗೆ ಹೊರಟೆ. ಆದರೂ ದಾರಿ ಮಧ್ಯೆಯೇ ಮಳೆ ಎದುರಾಯಿತು. ಬೆಳಿಗ್ಗೆ ಹೊರಡುವಾಗ ಶಮಾ ಹಿಡಿ ಬಾಗಿರುವ ಕೊಡೆಯನ್ನು ನನ್ನ ಕಾಲರಿಗೆ ಸಿಕ್ಕಿಸಿ ಪ್ರೀತಿಯಿಂದ ತಲೆ ತಡವುತ್ತಾ ಹೇಳಿದ್ದಳು:
""ರೀ.. ಕೊಡೆ ಹಿಡ್ಕೊಳ್ಳಿ. ಸಂಜೆ ಬರುವಾಗ ಮಳೆಗೆ ನೆನೆದು ಒದ್ದೆಯಾದ ಕೋಳಿಯಂತೆ ಬರ್ಬೇಡಿ. ನಿಮ್ಗೆ ಜ್ವರ-ಗಿರ ಬಂದ್ರೆ ಏನು ಮಾಡುದು.''
""ನನ್ನ ಮೇಲಿನ ನಿನ್ನ ಕಾಳಜಿಗೆ ಥ್ಯಾಕ್ಸ್ '' ಎಂದು ಹೇಳಿ ನಾನು ಹೊರಟಿದ್ದೆ .
ಅವಳು ಒಳ ಹೋದಾಗ ಕೊಡೆಯನ್ನು ಸಿಟೌಟಿನ ಮೇಲಿಟ್ಟು ಬಂದಿದ್ದೆ. ಯಾಕೆಂದರೆ ಬೆಳಿಗ್ಗೆ ಬಿಸಿಲಿತ್ತು. ಮಾತ್ರವಲ್ಲ, ಕೊಡೆ ಹಿಡಿಯುವುದೆಂದರೆ ನನಗೆ ಧರ್ಮ ಸಂಕಟ. ಆದರೆ ಕೊಡೆ ಹಿಡ್ಕೊಂಡಿದ್ದರೆ ಒಳ್ಳೆಯದಿತ್ತು ಎಂದು ಈಗ ತೋಚಿತು. ಹಾಗೆ ನಾನು ಮಳೆಗೆ ನೆನೆಯುತ್ತಾ ಮನೆಗೆ ಬಂದೆ.
ಮಳೆಗೆ ನೆನೆಯುವುದೆಂದರೆ ನನಗೆ ಇಷ್ಟ. ನಾನು ಚಿಕ್ಕವನಿದ್ದಾಗ, ಶಾಲೆ ಬಿಟ್ಟ ಸಂದರ್ಭದಲ್ಲಿ ಮಳೆ ಬರಲು ಕಾದು ನೆನೆಯುತ್ತಾ ಬಂದ ಹಲವು ಸಂದಭ್ರಗಳಿವೆ. ಅಜ್ಜನಿಂದ ಪ್ರೀತಿಯ ಬೈಗುಳ ತಿಂದದ್ದೂ ಇದೆ.
ಮಂಗಳಾರತಿಯ ನಿರೀಕ್ಷೆಯಿಂದಲೇ ಮನೆಗೆ ತಲುಪಿದೆ. ಅವಳ ತಮ್ಮ ಜಲೀಲ್ ಸಿಟೌಟಿನಲ್ಲಿ ನಿಂತು ಒಳಗೆ ಹೋದರೆ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಮುನ್ನೆಚ್ಚರಿಕೆ ನೀಡಲು ನನ್ನನ್ನು ಕಾಯುತ್ತಿದ್ದ.
""ಭಾವ, ಈಗ ಒಳಗೆ ಹೋದರೆ ನಿಮಗೆ ಭವ್ಯ ಸ್ವಾಗತ ಸಿಗುತ್ತೆ. ಅಕ್ಕ ಗರಂ ಆಗಿದ್ದಾಳೆ'' ಅವನು ಮುನ್ನೆಚ್ಚರಿಕೆ ನೀಡಿದ.
ನಮ್ಮ ಮಾತು ಅವಳಿಗೆ ಕೇಳಿಸಿರಬೇಕು. ಟರ್ಕಿ ಟವೆಲನ್ನು ಹೆಗಲಿಗೇರಿಸಿ ಹೊರ ಬಂದಳು. ನಾನು ಒದ್ದೆಯಾಗಿ ಬರುತ್ತೇನೆ ಎಂದು ಅವಳಿಗೆ ವೊದಲೇ ತಿಳಿದಿತ್ತು. ನನ್ನ ಸ್ಥಿತಿಯನ್ನು ನೋಡಿ ಅವಳಿಗೆ ಕನಿಕರವಾದರೂ ಅದನ್ನು ತೊರ್ಪ ಡಿಸದೆ ಹುಸಿಕೋಪ ಪ್ರಕಟಿಸಿದಳು.
""ಎಂಥ ಮಳೆ ಮಾರಾಯ್ತಿ! ನಾನು ಎನಿಸಿರಲಿಲ್ಲ, ಇಷ್ಟು ಮಳೆ ಬರುತ್ತೆ ಅಂತ'' ಬ್ಯಾಗನ್ನು ಅವಳಿಗೆ ನೀಡುತ್ತಾ ಹೇಳಿದೆ.
""ಮಳೆಗಾಲದಲ್ಲಿ ಮಳೆ ಬರದೆ ಮತ್ತೆ ಯಾವಾಗ ಬರುವುದು. ಬೇಸಿಗೆಯಲ್ಲಾ?'' ಸಿಡುಕುತ್ತಾ ಬ್ಯಾಗನ್ನು ಟೇಬಲಿನ ಮೇಲಿಟ್ಟಳು.
ನಾನು ಕುರ್ಚಿ ಯಲ್ಲಿ ಕುಳಿತೆ. ಮೈಯೆಲ್ಲಾ ಒದ್ದೆಯಾಗಿತ್ತು. ಶಮಾ ಟವೆಲು ಹಿಡಿದು ಕುರ್ಚಿಯ ಹಿಂದೆ ನಿಂತು ನನ್ನ ತಲೆ ಒರೆಸಲು ತೊಡಗಿದಳು. ನಾನು ನನ್ನ ಶೂವನ್ನು ಬಿಚ್ಚಲು ಬಾಗಿದೆ.
""ಸರಿ ಕುಳಿತುಕೊಳ್ಳಿ'' ಎಂದು ಬೆನ್ನಿಗೆ ಒಂದು ಗುದ್ದು ಬಿತ್ತು.
ಶಮಾ ನನ್ನ ತಲೆ ಒರೆಸಿ ಅಡುಗೆ ಕೋಣೆಗೆ ಹೋದಳು. ನಾನು ರೂಮಿಗೆ ಹೋಗಿ ಬಟ್ಟೆ ಬದಲಿಸಿ ಬಂದು ಸೋಫಾದಲ್ಲಿ ಕುಳಿತೆ. ಹೊರಗೆ ಧೋ ಅಂತ ಮಳೆ ಸುರಿಯುತ್ತಿತ್ತು. ಜಲೀಲ್ ಕೂಡಾ ನನ್ನ ಬಳಿ ಕುಳಿತುಕೊಂಡನು. ನಾನು ಅವನೊಂದಿಗೆ ಹರಟಲು ಪ್ರಾರಂಭಿಸಿದೆ.
ಶಮಾ ಬಿಸಿ ಬಿಸಿ ಕಾಫಿ ತಂದು ಟೀಪಾಯಿ ಮೇಲಿಟ್ಟು ನಾನು ಕಳಚಿಟ್ಟಿದ್ದ ಶೂವನ್ನು ಹೊರಗೆ ಸ್ಟೇಂಡ್ ಮೇಲಿಟ್ಟಳು. ಮುಖದಲ್ಲಿ ಕೋಪವಿದ್ದರೂ ಅದು ಕೃತಕ ಕೋಪವೆಂದು ತಿಳಿಯುತ್ತಿತ್ತು.
""ಲೇ ಬಂಗಾರಿ, ಕಾಫಿಯೊಂದಿಗೆ ತಿನ್ನಲು ಏನಾದರೂ ಇದೆಯಾ? ವೊನ್ನೆ ಪೆರ್ನಾಲಿಗೆ ಬಗೆ ಬಗೆಯ ತಿಂಡಿ ತಯಾರಿಸಿದ್ದಿ, ಅದೆಲ್ಲಿ..?''
"" ಪೆರ್ನಾಲಿಗೆ ಮಾಡಿದ್ದು ಇಷ್ಟು ದಿನ ಉಳಿಯುತ್ತದಾ?'' ಸಂಕ್ಷಿಪ್ತ ಉತ್ತರ ಬಂತು.
ಕಾಫಿ ಕುಡಿದು ಸೋಫಾದಲ್ಲಿ ಆರಾಮವಾಗಿ ಕುಳಿತೆ. ಟಿ.ವಿ. ಆನ್ ಮಾಡುವ ಹಾಗಿರಲಿಲ್ಲ. ಕಾರಣ ಮಳೆಯ ಹನಿಗಳು ಪಟ ಪಟ ಉದುರಲು ಆರಂಭಿಸಿದಾಗಲೇ ಕರೆಂಟು ಮಾಯವಾಗಿತ್ತು.
""ಭಾವ ನಾಳೆ ನಮ್ಮ ಕಾಲೇಜಿನಲ್ಲಿ ಸ್ಪೋರ್ಟ್ಸ್ ಡೇ. ನೀವು ಖಂಡಿತಾ ಬರ್ಬೇಕು. ನನ್ಗೆ ಇನ್ನೂರು ಮೀಟರ್ ಓಟ ಇದೆ'' ಜಲೀಲ್ ಒತ್ತಾಯ ಪಡಿಸಿದ.
""ನೀನು ಓಡಿ ಕೊನೆಗೆ ತಲುಪುವುದನ್ನು ನೋಡಲು ನಾನು ಬರ್ಬೇಕಾ?''
""ತಮಾಷೆ ಮಾಡುವುದೇನೂ ಬೇಡ. ನೀವು ಬಂದು ನೋಡಿ ನನ್ನ ಪರ್ಫಾಮೆನ್ಸ್ ''
""ನನಗೆ ಸಮಯವಿಲ್ಲ ಮಾರಾಯ. ಆಫೀಸು ಕೆಲಸವೇ ಬೆಟ್ಟದಷ್ಟುಂಟು. ಅದು ದೊಡ್ಡ ಕೆಲಸವೇನಲ್ಲ. ಆದರೆ ನಿನ್ನ ಅಕ್ಕನನ್ನು ಸುಧಾರಿಸುವಲ್ಲಿ ಸಾಕು ಸಾಕಾಗಿ ಹೋಗುತ್ತದೆ''
ನಾನು ಹೇಳಿದ್ದಕ್ಕೂ ಅವಳು ಒಳಗಿನಿಂದ ಬರುವುದಕ್ಕೂ ಸರಿ ಹೋಗಿತ್ತು.
""ನಿಮ್ಗೆ ನಾನು ಒಂದು ಪೀಡೆ ತರ ಆಗುವುದಾದರೆ ನಾನು ಹೋಗ್ತೇನೆ. ಆಗ ನಿಮ್ಗೆ ತಲೆಬಿಸಿ ಮುಗಿಯಬಹುದಲ್ವಾ?''
""ನೀನು ಪೀಡೆ ಅಂತ ಯಾರು ಹೇಳಿದ್ದು?''
""ಯಾರೂ ಹೇಳಲಿಲ್ಲ. ನಿಮ್ಮ ಮನಸ್ಸಿನಲ್ಲಿದ್ದುದನ್ನು ಹೇಳಿದೆ ಅಷ್ಟೇ...''
""ಓಹೋ ನಿನಗೆ ಮನಸ್ಸನ್ನು ಓದಲು ತಿಳಿದಿದೆ ಅಂತ ಕಾಣುತ್ತೆ..''
""ಅದೆಲ್ಲಾ ಇಲ್ರಿ, ಸಾಕು ನಿಮ್ಮ ಪಟ್ಟಾಂಗ. ನೀರು ಬಿಸಿ ಮಾಡಿಟ್ಟಿದ್ದೇನೆ. ಹೋಗಿ ಸ್ನಾನ ಮಾಡಿ ಬನ್ನಿ'' ಆಜೆÕ ಹೊರ ಬಂತು.
""ಸ್ನಾನ ಮಾಡುವುದಾ.... ನನಗೆ ಸ್ವಲ್ಪ ಶೀತ ಆಗುವ ಲಕ್ಷಣ ಕಾಣ್ತಿದೆ. ಗಂಟಲಲ್ಲಿ ಗರಗರ ಆಗ್ತಿದೆ..''
""ಮಳೆಗೆ ಇನ್ನೂ ಸ್ವಲ್ಪ ನೆನೆದು ಬನ್ನಿ. ಆಗ ಎಲ್ಲ ವಾಸಿಯಾಗುತ್ತೆ..'' ನಿರೀಕ್ಷಿಸಿದ ಉತ್ತರವೇ ಅವಳಿಂದ ಬಂತು.
""ನಿಮಗೆ ಒಂದು ನೆಗಡಿಯಾದರೆ ಅಂದು ಮನೆಯವರಿಗೆ ನಿದ್ದೆಯೇ ಇಲ್ಲ. ಬಿಸಿ ನೀರು ತಾ, ಕಷಾಯ ತಾ, ಕಂಬಳಿ ತಾ ಎಂದೆಲ್ಲಾ ಬೊಬ್ಬೆ ಹಾಕ್ತಿತ್ರೀರಿ. ಆದರೆ ನನಗೆ ಜ್ವರ ಬಂದರೂ ತಿರುಗಿ ನೋಡುವವರಿಲ್ಲ. ಈ ಪುರುಷರೇಕೆ ಹೀಗೆ?....'' ಬೈಗುಳದ ಸುರಿಮಳೆಯೇ ಸುರಿಯಿತು. ಶಮಾ ಅಡುಗೆ ಕೋಣೆಗೆ ಹೋದಳು.
ಅವಳು ಹಾಗೇನೆ. ನನ್ನ ಯಾವುದೇ ತಪ್ಪನ್ನು ಪುರುಷ ವರ್ಗದ ಮೇಲೆ ಹೊರಿಸ್ತಾಳೆ.
ಅವಳ ಬೈಗುಳವನ್ನು ಕೇಳಿ ಜಲೀಲ್ ಮುಸಿ ಮುಸಿ ನಕ್ಕನು.
""ಸುಮ್ಮನಿರು ಮಾರಾಯ. ಮುಸುಂಟಿಗೆ ಇಡ್ತೇನೆ ಈಗ..'' ಎಂದು ಗದರಿಸಿ ಎದ್ದು ಅಡುಗೆ ಕೋಣೆಗೆ ಹೋದೆ. ಶಮಾ ಅಡುಗೆ ಕೋಣೆಯನ್ನು ಶುಚಿಗೊಳಿಸುತ್ತಿದ್ದಳು.
""ಲೇ ಚಿನ್ನಾ.. ರಾತ್ರಿಗೆ ಏನು ಮಾಡಿದ್ದಿ?...'' ಕೆಳಗೆ ಬಿದ್ದಿದ್ದ ಕೈ ಬಟ್ಟೆಯನ್ನು ಎತ್ತಿ ಮೇಲಿಡುತ್ತಾ ಕೇಳಿದೆ.
""ನಿಮ್ಗೆ ತಿನ್ನುವುದೇ ಯೋಚನೆ''
""ಹೌದು ಬಂಗಾರಿ, ಬದುಕಬೇಕಲ್ಲಾ''
""ಕೆಲವರು ತಿನ್ನಲಿಕ್ಕಾಗಿ ಬದುಕುತ್ತಾರೆ''
""ಓಹೋ! ಅದು ಯಾರು?''
""ಹಾಗೆ ಬದುಕುವವರಲ್ಲಿ ಹೋಗಿ ಕೇಳಿ ನೋಡಿ'' ಪ್ರಶ್ನೆಗಳಿಗೆ ಚುಟುಕು ಉತ್ತರ ಬರುತ್ತಿತ್ತು.
""ಓಕೆ, ಇವತ್ತು ರಾತ್ರಿಗೆ ಏನೂ ಮಾಡ್ಬೇಡ. ಎಗ್ಸಿಬಿಷನ್ಗೆ ಹೋಗೋಣ. ಅಲ್ಲಿಂದಲೇ ಊಟ ಮಾಡಿ ಬಂದರಾಯಿತು'' ಇದನ್ನು ಕೇಳಿದ್ದೇ ತಡ. ಅವಳ ಮುಖದಲ್ಲಿ ನಗುವೊಂದು ಮಿಂಚಿತು.
""ಓ, ಶ್ಶೂ.... ನಾನು ಆಗಲೇ ಅಡಿಗೆ ಮಾಡಿಟ್ಟಿದ್ದೇನೆ. ನಿಮ್ಗೆ ವೊದಲೇ ಹೇಳ್ಬಾರ್ದಿತ್ತಾ ...'' ಎನ್ನುತ್ತಾ ತಲೆಗೆ ಒಂದು ವೊಟಕಿದಳು. ನಾನು ಅವಳ ಬಳಿ ಬಂದು ನಿಂತೆ.
ಅವಳು ಕೋಪಗೊಂಡಾಗ ಹೊರಗೆ ಸುತ್ತಾಡಿಸಿ ಕೊಂಡು ಬಂದರೆ ಅವಳ ಕೋಪವೆಲ್ಲಾ ಮಾಯವಾಗುತ್ತದೆ. ಆದರೆ ಅವಳಿಗೆ ಕೋಪ ಬಂದ ಕಾರಣ ನಾನು ಅವಳನ್ನು ಹೊರಗೆ ಸುತ್ತಾಡಿಸಲು ಕರೆದುಕೊಂಡು ಹೋಗುವುದು ಎಂದು ಅವಳಿಗೆ ತಿಳಿದಿಲ್ಲ. ಅದು ತಿಳಿದರೆ ಯಾವಾಗಲೂ ಕೋಪ ಬರುವ ಸಾಧ್ಯತೆ ನೂರು ಶೇಕಡಾ ಉಂಟು.
""ಶೀ, ಆಚೆ ಹೋಗಿ. ನಾನು ಇಲ್ಲಿ ಸ್ವಲ್ಪ ಕ್ಲೀನ್ ಮಾಡಿ ಬರ್ತೇನೆ ...''
ಜಲೀಲ್ ಅಡುಗೆ ಕೋಣೆಯ ಹೊರಗೆ ನಿಂತು ಕೆಮ್ಮುವ ಶಬ್ಧ ಕೇಳಿಸಿತು. ನಾನು ಹೊರಗೆ ಬಂದೆ.
""ಭಾವ, ಮಳೆ ನಿಂತಿದೆ. ಹೊರಗೆ ಒಂದು ರೌಂಡ್ ಸುತ್ತಾಡಿ ಬರೋಣ. ನೀವು ತಯಾರಿದ್ದೀರಾ...?''
""ಓ.ಕೆ. ಬತ್ರೇನೆ, ಒಟ್ಟಿಗೆ ಹೋಗೋಣ... ಅವಳೂ ಬರ್ತಾಳಂತೆ..''
ನಾವು ಹೊರಗೆ ಬಂದು ಸಿಟೌಟಿನಲ್ಲಿ ಕುಳಿತುಕೊಂಡೆವು. ಸ್ವಲ್ಪ ಹೊತ್ತಾದ ಮೇಲೆ ಶಮಾ ಬಾತ್ ಟವೆಲನ್ನು ಭುಜಕ್ಕೇರಿಸಿ ಬಂದಳು.
""ರೀ ಹೊರಡ್ಬೇಡ್ವಾ. ನೀವು ಇಲ್ಲಿ ಕೂತು ಪಟ್ಟಾಂಗ ಹೊಡೀತಿದ್ದೀರಿ...'' ಎಂದು ಹೇಳುತ್ತಾ ನನ್ನನ್ನು ತಳ್ಳಿಕೊಂಡು ಹೋಗಿ ಬಾತ್ರೂಮಿಗೆ ಸೇರಿಸಿದಳು.
""ಬೇಗ ಸ್ನಾನ ಮಾಡಿ ಬನ್ನಿ. ನಾನು ಹೊರಟು ನಿಂತಿರ್ತೇನೆ '' ಎಂದು ಹೇಳಿ ಬಾಗಿಲು ಹಾಕಿದಳು. ನಾನು ಸ್ನಾನ ಮಾಡಬೇಕು ಎಂಬ ಅವಳ ಕಾಳಜಿಯ ಬಗ್ಗೆ ಒಳಗೊಳಗೇ ಹೆಮ್ಮೆ ಪಟ್ಟುಕೊಂಡೆ. ಬಹಳ ಉತ್ಸಾಹದಿಂದ ಅವಳು ರೆಡಿಯಾಗುವ ಶಬ್ಧವು ಬಾತ್ರೂಮಿಗೂ ಕೇಳಿಸುತ್ತಿತ್ತು. ಕಪಾಟಿನ ಬಾಗಿಲುಗಳು ಡಬಡಬ ಶಬ್ಧ ಮಾಡುತ್ತಿದ್ದವು....
Subscribe to:
Posts (Atom)