ನಾನು ಸಂಜೆ ಮೆಲ್ಲನೆ ಮನೆ ತಲುಪಿದೆ. ಇವತ್ತು ನನ್ನವಳನ್ನು ಸ್ವಲ್ಪ ಹೆದರಿಸುವ ಒಂದು ತುಂಟ ಆಲೋಚನೆ ಮನಸ್ಸಿನಲ್ಲಿ ಮೊಳಕೆಯೊಡೆಯಿತು.
ಹಾಗೆ ನಾನು ಕಾಲಿಂಗ್ ಬೆಲ್ ಅದುಮಿ ಓಡಿ ಹೋಗಿ ಅಂಗಳದ ಮೂಲೆಯಲ್ಲಿದ್ದ ಮಲ್ಲಿಗೆ ಬಳ್ಳಿಯ ಮರೆಯಲ್ಲಿ ಅಡಗಿ ಕುಳಿತು ಬಾಗಿಲಿನ ಕಡೆಗೆ ನೋಡತೊಡಗಿದೆ. ಯಾವುದೇ ಪ್ರತಿಕ್ರಿಯೆ ಇಲ್ಲ.
ಸ್ವಲ್ಪ ಹೊತ್ತಾದ ಮೇಲೆ 'ಕಿರ್ರೀ' ಎಂದು ಶಬ್ದ ಮಾಡುತ್ತಾ ಬಾಗಿಲು ತೆರೆದುಕೊಂಡಿತು. ಹಿಂದೆಯೇ ನನ್ನ ಶ್ರೀಮತಿಯವರು ನಿದ್ದೆಯಿಂದ ಎದ್ದು ಬಂದವಳಂತಿದ್ದಳು.
ನಾನು ಅವಳನ್ನು ಮದುವೆಯಾದ ದಿನದಂದೇ ನನಗೆ ಒಂದು ಸಂಶಯ ಬಂದಿದೆ. ಇವಳಿಗೂ ಕುಂಭಕರ್ಣನ ಸಂತತಿಗೂ ಯಾವುದಾದರೂ ಲಿಂಕ್ ಇರಬಹುದೇ ಎಂದು.
ಹೊರಬಂದ ಅವಳು ಆಚೆ ಈಚೆ ನೋಡಿ ಕನಸು ಕಂಡವಳಂತೆ ಒಳನಡೆದಳು. ನಾನು ಎದ್ದು ಬಂದು ಮತ್ತೊಮ್ಮೆ ಬೆಲ್ಲನ್ನು ಅದುಮಿ ಬಾಗಿಲಿಗೆ ಬೆನ್ನು ಹಾಕಿ ನಿಂತೆ.
ಸ್ವಲ್ಪ ಕಳೆದ ನಂತರ ಬಾಗಿಲು ತೆರೆದುಕೊಂಡಿತು. ನನ್ನವಳು ನನ್ನನ್ನು ಪ್ರೀತಿಯಿಂದ ಸ್ವಾಗತಿಸಬಹುದೆಂದು ಭಾವಿಸಿದೆ. ಆದರೆ ನಡೆದದ್ದು ಬೇರೆಯೇ. ಬೆನ್ನಿಗೆ ಎರಡು ಗುದ್ದು ಬಿತ್ತು. ಹಿಂದೆಯೇ ಸಾಲು ಪಟಾಕಿ ಸಿಡಿಸಿದ ಹಾಗೆ ಬೈಗುಳ.
"ಏನ್ರೀ ಕಳ್ಳರ ಹಾಗೆ ಬಂದು ಕಾಲಿಂಗ್ ಬೆಲ್ ಅದುಮಿದ್ದು" ನಾನು ನನ್ನ ಮೇಲಿನ ಆರೋಪವನ್ನು ಸರಿಪಡಿಸಿದೆ.
'ನಿಮ್ಮ ಕರ್ಮ' ಎಂದು ಗೊಣಗುತ್ತಾ ಒಳಹೋದಳು.
ನಮ್ಮ ಈ ಬೀದಿ ಕಾಳಗವನ್ನು ಯಾರಾದರೂ ನೋಡಿದರೋ ಎಂದು ನಾನು ಸುತ್ತ ಮುತ್ತ ಕಣ್ಣು ಹಾಯಿಸಿದೆ. ಆಗ ಎದುರು ಮನೆಯ ಸಾವಿತ್ರಿಯಕ್ಕ ನೋಡಿಯೂ, ನೋಡದಂತೆ ತೆಂಗಿನ ಮರವನ್ನು ದಿಟ್ಟಿಸುತ್ತಿದ್ದರು.
ನಾನು ಬೇಗನೇ ಒಳಹೊಕ್ಕೆ. ನಾನು ಕಳ್ಳರಂತೆ ಹೋಗಲು ಕಾರಣವಿತ್ತು. ಬೆಳಿಗ್ಗೆ ಹೋಗುವಾಗ ಟೀವಿ ಮೇಲೆ ಇಟ್ಟಿದ್ದ ಫ್ಲವರ್ ವಾಝನ್ನು ಒಡೆದು ಹಾಕಿ ಹೋಗಿದ್ದೆ. ಅದು ನನ್ನಿಂದ ಆಕಸ್ಮಿಕವಾಗಿ ಸಂಭವಿಸಿದರೂ ನನ್ನವಳ ದೃಷ್ಟಿಯಲ್ಲಿ ಅಕ್ಷಮ್ಯ ಅಪರಾಧವಾಗಿತ್ತು.
ಆ ವಾಝ್ ಅವಳ ಅಣ್ಣ ದುಬೈಯಿಂದ ಕಳಿಸಿದ್ದಾಗಿತ್ತು. ನನ್ನಲ್ಲಿ ಹಲವಾರು ಬಾರಿ ಹೇಳಿದ್ದಳು, ಅಲಂಕಾರಕ್ಕೆ ಒಂದು ವಾಝ್ ತರಬೇಕೆಂದು ಆದರೆ ನಾನು ಕ್ಯಾರೇ ಮಾಡಲಿಲ್ಲ. ಅಂತಹ ವಾಝನ್ನು ಒಡೆದು ಹಾಕಿದಾಗ ನನ್ನವಳಿಗೆ ಮಾತ್ರವಲ್ಲ ಎಂಥ ವಳಿಗೂ ಕೋಪ ಬರಬಹುದು.
ನಾನು ಅಪರಾಧಿ ಭಾವನೆಯಿಂದ ಮೆಲ್ಲನೆ ಅಡುಗೆ ಮನೆಗೆ ಹೋದೆ. ನನ್ನ ಮೇಲಿದ್ದ ಕೋಪ ಅಲ್ಲಿನ ಪಾತ್ರೆಗಳು ಅನುಭವಿಸುತ್ತಿದ್ದವು. ಒಂದೊಂದು ಪಾತ್ರೆಯೂ ವ್ಯತ್ಯಸ್ಥ ರೂಪ ತಾಳಿದ್ದವು. ಇನ್ನು ಕೊಡಪಾನದ ಅವಸ್ಥೆ ಹೇಳತೀರದು. ಉಪ್ಪಲ್ಲಿ ಹಾಕಿದ ಮಿಡಿ ಮಾವಿನ ಕಾಯಿಯಂತಾಗಿತ್ತು.
ನನ್ನ ಮಗ ಆದಿಲ್ ನಿದ್ರಿಸುತ್ತಿದ್ದುದರಿಂದ ಬಚಾವಾದ. ಇಲ್ಲದಿದ್ದರೆ ಅವಳ ಕೋಪದ ಪ್ರಭಾವ ಅವನ ಮೇಲೆರಗುತ್ತಿತ್ತು. ನನ್ನ ಮೇಲಿದ್ದ ಕೋಪವನ್ನು ಇತರರ ಮೇಲೆ ಪ್ರಯೋಗಿಸುವುದು ಅವಳ ವಾಡಿಕೆ.
"ಏನು ಶ್ರೀಮತಿಯವರೇ ತುಂಬಾ ಗರಂ ಆದಂತೆ ಕಾಣುತ್ತೀರಾ" ನಾನು ಮೆಲ್ಲನೆ ಕೆಣಕಿದೆ.
ಆಗ ನನ್ನೊಂದಿಗೆ ಮೌನವ್ರತ ಆಚರಿಸಿಯಾಗಿತ್ತು. ಯಾವುದೇ ಪ್ರತಿಕ್ರಿಯೆ ಇಲ್ಲ. ಮುಖ ಗಂಟಿಕ್ಕಿತ್ತು.
ನನ್ನವಳಲ್ಲಿದ್ದ ಪ್ಲಸ್ ಪಾಯಿಂಟ್ ಏನೆಂದರೆ ಕೋಪ ಬಂದಾಗ ಮೌನವ್ರತ ಆಚರಿಸುವುದು. ಬಹುಶಃ ಲೋಕದಲ್ಲಿ ಇವಳು ಮೊದಲು ಸೃಷ್ಟಿಯಾಗಿರಬಹುದು.
ನನಗೆ ದಾಂಪತ್ಯ ಜೀವನವು ಬೇಸತ್ತು ಹೋಗಿತ್ತು. ದಿನ ನಿತ್ಯ ಸಣ್ಣಪುಟ್ಟ ವಿಷಯಗಳಿಗೆ ಗಲಾಟೆ. ಹೇಗೂ ನೀರಿಗಿಳಿದಾಗಿದೆ. ಇನ್ನು ಚಳಿಗೆ ಯಾಕೆ ಹೆದರುವುದು. ಆದರೆ ಎಷ್ಟೇ ಗಲಾಟೆ ಮಾಡಿದರೂ ಅವಳ ಮನಸ್ಸಿನ ಮೂಲೆಯಲ್ಲಿ ನನ್ನೊಂದಿಗೆ ಗಾಢವಾದ ಪ್ರೀತಿಯಿದೆ.
ನಾನು ಬಂದು ಟೇಬಲಿನ ಮುಂದೆ ಕುಳಿತೆ. ಸ್ವಲ್ಪ ಹೊತ್ತಾದ ಮೇಲೆ 'ಇಕೊಳ್ಳಿ ಚಾ' ಎಂದು ಟೇಬಲಿನ ಮೇಲೆ ಕುಕ್ಕಿ ಒಂದು ಮೂಲೆಯಲ್ಲಿ ಹೋಗಿ ಕುಳಿತಳು. ಚಹಾ ಅಕ್ಕಿ ತೊಳೆದ ನೀರಿನಂತಿತ್ತು.
ಚಹಾ ಕುಡಿದು ಅವಳನ್ನು ಮಾತಿಗೆಳೆಯಲು ಪ್ರಯತ್ನಿಸಿದೆ.
"ಅಲ್ಲ ಕಣೇ, ಯಾಕೆ ಇಷ್ಟು ಕೋಪ" ಮೆಲ್ಲನೆ ಕೇಳಿದೆ. ಮದವೇರಿದ ಆನೆಯನ್ನು ಮನವೊಲಿಸುವಂತಾಗಿತ್ತು ನನ್ನ ಅವಸ್ಥೆ.
"ಏನ್ರೀ ಒಂದು ವಾಝ್ ತರಲು ಹೇಳಿದಾಗ ನಿಮಗೆ ತರಲಾಗಲಿಲ್ಲ. ಈಗ ನನ್ನ ಅಣ್ಣ ತಂದದ್ದನ್ನು ಮುರಿದು ಹಾಕಿದ್ದೀರಲ್ಲ. ನಾನು ಏನಾದರೂ ತರಲು ಹೇಳಿದಾಗ ನಿಮಗೆ ದುಂದುವೆಚ್ಚ. ನೀವು ಅನಾವಶ್ಯಕವಾಗಿ ಏನು ಬೇಕಾದರೂ ಖರೀದಿಸಬಹುದು." ಕೋಪ ಇಳಿಯುವ ಲಕ್ಷಣ ಕಾಣಿಸಿತು.
"ಸಾರಿ ಕಣೇ. ಅದು ಆಕಸ್ಮಿಕವಾಗಿ ಮುರಿದದ್ದು. ನಾನು ಬೇಕೂಂತಲೇ ಮುರಿದದ್ದಲ್ಲ."
"ತಪ್ಪು ಮಾಡಿ 'ಸಾರಿ' ಹೇಳಿದರೆ ಮುಗಿಯಿತು. ಪುರುಷ ಸಂತಾನವೇ ಹೀಗೆ. ಒಂದು ತಪ್ಪಿತಸ್ಥ ಭಾವನೆಯೇ ಇಲ್ಲ."
ಅವಳು ನನ್ನ ಸವಿೂಪ ಬಂದು ಕುಳಿತಳು. ಕೋಪ ಅರ್ಧ ಇಳಿದಿತ್ತು.
"ನೀನು ನನ್ನ ತಪ್ಪನ್ನು ಪುರುಷ ಜಾತಿಯ ಮೇಲೆ ಹೊರಿಸುವುದು ಸರಿಯಲ್ಲ." ನಾನು ಪುರುಷರ ಪ್ರತಿನಿಧಿಯಂತೆ ವಾದಿಸಿದೆ.
"ಪುರುಷರಂತೆ! ಪುರುಷರು ಕರುಣೆ ಇಲ್ಲದವರು."
"ಆಯಿತು ಕಣೇ. ಪುರುಷರು ಕರುಣೆ ಇಲ್ಲದವರು. ಸ್ತ್ರೀಯರು ಕರುಣಾಮೂರ್ತಿಗಳು" ನಾನು ಅವಳ ವಾದವನ್ನು ಸಮ್ಮತಿಸಿದೆ.
"ಹಾಗೆ ದಾರಿಗೆ ಬನ್ನಿ."
"ಆಯಿತು ಕಣೇ. ಇನ್ನು ರಂಪಾಟ ಸಾಕು."
"ಇದ್ದದ್ದನ್ನು ಹೇಳಿದರೆ ನಿಮಗೆ ಆಗುವುದಿಲ್ಲ" ಎಂದು ಗೊಣಗುತ್ತಾ ಎದ್ದು ಅಡುಗೆ ಕೋಣೆಗೆ ಹೋದಳು.
ಸ್ವಲ್ಪ ಹೊತ್ತಾದ ಮೇಲೆ ನಾನು ಅಡುಗೆ ಕೋಣೆಗೆ ಹೋದೆ. ಅವಳು ಪಾತ್ರೆ ತೊಳೆಯುತ್ತಿದ್ದಳು. ಮುಖ ಕುಂಬಳಕಾಯಿಯಂತಿತ್ತು.
ನಾನು ಹೇಳಿದೆ, "ಸಾರಿ ಕಣೇ ನಾನು ಬೇಕೂಂತಲೇ ಮುರಿದು ಹಾಕಿದ್ದಲ್ಲ. ನೀನು ಏನೂ ಹೆದರಬೇಡ. ಬೇಗ ಹೊರಟು ನಿಲ್ಲು. ಇವತ್ತು ಶಾಪಿಂಗ್‍ಗೆ ಹೋಗುವಾ. ಅಲ್ಲಿಂದ ನೀನು ಬೇಕಾದದ್ದನ್ನು ಖರೀದಿಸಿಕೋ."
ಆಗ ಅವಳ ಸಂತೋಷಕ್ಕೆ ಪಾರವೇ ಇಲ್ಲ.
"ನನಗೆ ಗೊತ್ತಿತ್ತು ನೀವು ಒಳ್ಳೆಯವರು ಎಂದು. ನಿಮಗೆ ಸ್ತ್ರೀಯರ ನೋವನ್ನು ಅರ್ಥಮಾಡಿಕೊಳ್ಳುವಷ್ಟು ಕರುಣೆ ಇದೆ."
ನನಗೆ ಒಂದು ಸಂಶಯ ಬಂತು. ನಾನು ಗಂಡೋ ಹೆಣ್ಣೋ? ಕಾರಣ, ಅವಳು ಹೇಳಿದ್ದಳು, ಪುರುಷರು ಕರುಣೆ ಇಲ್ಲದ ಜಾತಿಗಳು ಎಂದು.
ನಾನು ಬಂದು ಮತ್ತೆ ಪೇಪರು ಓದಲು ಕುಳಿತೆ.
ಬೇಗ ಬೇಗನೇ ಕೆಲಸ ಮುಗಿಸತೊಡಗಿದಳು. ಅವಳಲ್ಲಿ ಯಾವುದೋ ಹಬ್ಬದ ಸಂಭ್ರಮವಿತ್ತು. ಅದಕ್ಕೆ ಕಾರಣವೂ ಇತ್ತು. ನಮ್ಮ ನಾಲ್ಕು ವರ್ಷದ ಸಮರ ಮಿಶ್ರಿತ ಸುಖ ದಾಂಪತ್ಯ ಜೀವನದಲ್ಲಿ ಅವಳನ್ನು ಶಾಪಿಂಗ್‍ಗೆ ಕರೆದುಕೊಂಡು ಹೋಗುವುದು ಇದು ಮೊದಲ ಬಾರಿಯಾಗಿತ್ತು. ಯಾವುದಾದರೂ ಸಭೆ ಸಮಾರಂಭಗಳಿಗೆ ಹೋದರೆ ಒಂದು ಬಸ್ಸಲ್ಲಿ ಹೋಗಿ ಇನ್ನೊಂದು ಬಸ್ಸಲ್ಲಿ ಬರುತ್ತಿದ್ದೆವು.
ಅವಳು ಕೆಲಸ ಮುಗಿಸಿ ನನ್ನ ಸಮೀಪ ಬಂದು ಕುಳಿತು ನನ್ನ ಗುಣಗಾನ ಮಾಡಲು ಪ್ರಾರಂಭಿಸಿದಳು. ಕರಿ ಮೋಡಗಳೆಲ್ಲಾ ಮಾಯವಾಗಿ ಶುಭ್ರ ನೀಲಾಕಾಶದಂತಿತ್ತು ಅವಳ ಮುಖ. "ನೀವು ತುಂಬಾ ಒಳ್ಳೆಯವರು. ನಾನು ನಿಮ್ಮ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಸಾರಿ ಆಯ್ತಾ? ಕ್ಷಮಿಸ್ತೀರಿ ತಾನೇ?
ತುಂಟ ನಗು ಬೀರುತ್ತಾ ತನ್ನ ತಲೆಯನ್ನು ನನ್ನ ಹೆಗಲ ಮೇಲಿಟ್ಟಳು. ಆಗಲೇ ಮಗ ಆದಿಲ್ ನಿದ್ದೆಯಿಂದ ಎದ್ದು ಅಳಲು ಪ್ರಾರಂಭಿಸಿದನು.
ಚೆನ್ನಾಗಿದೆ.
ReplyDeleteಮುಂದಿನ ಭಾಗವೂ ಇದ್ಯಾ ?
ಸ್ವರ್ಣಾ
ಇಲ್ಲ ... ಮುಂದೆ ಬೇರೆ ಸರಸ ಬರೆಯಬೇಕು
Deleteಸರಳವಾದ ನಿರೂಪಣೆ, ಚೆನ್ನಾಗಿದೆ
ReplyDeleteಶುಭವಾಗಲಿ- ಮನೋರಂಜನ್