Monday, 19 March 2012

ಉಪವಾಸದ ಹನ್ನೆರಡನೇ ವರ್ಷಕ್ಕೆ ಕಾಲಿಟ್ಟ ಇರೋಂ ಶರ್ಮಿಳಾ


ಇಂದು ಜಗತ್ತಿನಲ್ಲಿ ಹಲವಾರು ರೀತಿಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಮೆರವಣಿಗೆ ನಡೆಸುವುದು, ಅಂಗಡಿ ಮುಂಗಟ್ಟುಗಳಿಗೆ ಕಲ್ಲೆಸೆಯುವುದು, ಧರಣಿ ಕೂರುವುದು, ಗಳಿಸಿದ ಪ್ರಶಸ್ತಿಗಳನ್ನು ಮರಳಿಸುವುದು ಹೀಗೆ ಪ್ರತಿಭಟನೆಗಳ ಪಟ್ಟಿಯು ಬೆಳೆಯುತ್ತಾ ಹೋಗುತ್ತದೆ. ಕೆಲವರು ಹಿಂಸೆಯ ಮಾರ್ಗ ತುಳಿದರೆ ಇನ್ನು ಕೆಲವರು ಅಹಿಂಸೆಯ ಮಾರ್ಗ ಸ್ವೀಕರಿಸುತ್ತಾರೆ. ಕೆಲವರು ಅನಿರ್ದಿಷ್ಟಾವಧಿ ನಿರಾಹಾರ ಎಂದು ಹೇಳಿ ಕೆಲವು ದಿನಗಳವರೆಗೆ ಮುಂದುವರಿಸುತ್ತಾರೆ.
ಆದರೆ ಇರೋಮ್ ಶರ್ಮಿಳ ಚಾನು ಎಂಬ ಮಹಿಳೆಯ ಪ್ರತಿಭಟನೆಗೆ ಸರಿಸಾಟಿಯಾಗಿ ಯಾರೂ ಪ್ರತಿಭಟನೆ ನಡೆಸಲಿಲ್ಲ. ಇನ್ನು ನಡೆಸಲಿಕ್ಕೂ ಇಲ್ಲ. ಈಕೆಯ ಪ್ರತಿಭಟನೆಗೆ ಹತ್ತು ವಷ್ರ ಕಳೆಯಿತು. ಶರಮಿಳಾ ಮಾಡುತ್ತಿರುವುದೇನೆಂದರೆ ಈಕೆ ಆಹಾರ ಸೇವಿಸುತ್ತಿಲ್ಲ. ಅಂದರೆ ಆಮರಣಾಂತ ಉಪವಾಸ ಆಚರಿಸಿದ್ದಾಳೆ. ಇದು ಕೇವಲ ಒಂದೆರಡು ದಿನಗಳ ಉಪವಾಸವಲ್ಲ. ತಿಂಗಳುಗಳ ಉಪವಾಸವೂ ಅಲ್ಲ. ಈಕೆ ಸುದೀರ್ಘ  ಹನ್ನೆರಡು  ವರ್ಷಗಳಿಂದ ಉಪವಾಸ ಆಚರಿಸುತ್ತಿದ್ದಾಳೆ. ಈ  ವರ್ಷ ಗಳಲ್ಲಿ ಈಕೆ ಏನನ್ನೂ ಸೇವಿಸಿಲ್ಲ ಎಂದರೆ ನೀವು ನಂಬಲೇಬೇಕು. ಯಾಕೆಂದರೆ ಇದೊಂದು ವಾಸ್ತವವಾಗಿದೆ. 2000 ಇಸವಿಯ ನವೆಂಬರ್ ತಿಂಗಳಿನಲ್ಲಿ ಆರಂಭಿಸಿದ ಉಪವಾಸವು ಇಂದಿಗೂ ಮುಂದುವರಿಯುತ್ತಲೇ ಇದೆ.
ಶರ್ಮಿಳ ಆತಂಕವಾದಿಯಲ್ಲ, ಬಂಡುಕೋರಳಲ್ಲ, ಸಮಾಜಘಾತುಕಳೂ ಅಲ್ಲ, ಈಕೆ ನಮ್ಮ-ನಿಮ್ಮ ಮನೆ
ಯ ಹೆಣ್ಣು ಮಕ್ಕಳಂಥವಳು. ಅಪ್ಪಟ ಭಾರತೀಯ ನಾರಿ. ಭಾರತದ ಆಭರಣ ಎಂದು ಕರೆಯಲ್ಪಡುವ ಮಣಿಪುರ ರಾಜ್ಯದವಳು.
ಇಡೀ ಜಗತ್ತಿನ ಇತಿಹಾಸದಲ್ಲಿ ಕೇವಲ ಒಂದು ಬೇಡಿಕೆ ಇರಿಸಿ ಇಷ್ಟು  ವರ್ಷ ಗಳ ಕಾಲ ಆಮರಣಾಂತರ ಉಪವಾಸ ಆಚರಿಸಿದ ಉದಾಹರಣೆಯೇ ಇಲ್ಲ. ಯಾವ ಪ್ರತಿಭಟನೆಕಾರರೂ ಮುಟ್ಟಲಾಗದ ಎತ್ತರವನ್ನು ಶರ್ಮಿಳ ಏರಿದ್ದಾಳೆ. ಬಹುಶಃ ಇನ್ನೊಂದು ಶರ್ಮಿಳ ಜಗತ್ತಿನಲ್ಲಿರಲು ಸಾಧ್ಯವೇ ಇಲ್ಲ. ಮುಂದೆ ಹುಟ್ಟಲೂ ಸಾಧ್ಯವಿಲ್ಲ. ಹಾಗಾಗಿ ಸಮಸ್ತ ಮಣಿಪುರವೇ ಶರ್ಮಿಳ ಬದುಕುವಂತಾಗಲಿ ಎಂದು ಬಯಸುತ್ತಿದೆ.
ಈ ಸಂದಭ್ರದಲ್ಲಿ ಮಣಿಪು ರದ ಹಿನ್ನಲೆ ಏನು ಎಂಬುವುದನ್ನು ತಿಳಿಯುವುದು ಸೂಕ್ತವೆನಿಸುತ್ತದೆ. ನೀಲಿ ಬಣ್ಣದ ಪರ್ವತ ಶ್ರೇಣಿಗಳಿಂದಾವೃತವಾದ ನಿಸರ್ಗ ರಮಣೀಯ ಮಣಿಪುರವು ಮ್ಯಾನ್ಮಾರ್ ಗಡಿಗೆ ತಾಗಿಕೊಂಡಿದೆ. 1881ರಲ್ಲಿ ಬ್ರಿಟಿಷರು ಯುದ್ಧದ ಮೂಲಕ ಈ ನಾಡನ್ನು ವಶಪಡಿಸಿಕೊಂಡರು. ನಂತರ 1947ರಲ್ಲಿ ಭಾರತದ ಗಣರಾಜ್ಯಕ್ಕೆ ಸೇರ್ಪಡೆಗೊಂಡಿತು. 1972ರ ಜನವರಿ 21ರಂದು ಮಣಿಪುರಕ್ಕೆ ಪೂರ್ಣ  ಪ್ರಮಾಣದ ರಾಜ್ಯಸ್ಥಾನ ದೊರೆಯಿತು. ವಿವಿಧ ಕಲೆ, ಸಂಸ್ಕ್ರತಿ ಹೊಂದಿರುವ ಮಣಿಪು ರವು ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಸಿದ್ದಹಸ್ತವಾಗಿದೆ.
ಇಂತಹಮಣಿಪುರವು ಸ್ವಾತಂತ್ರ್ಯ ಬಂದಾಗಿನಿಂದ ನೆಮ್ಮದಿಯಾಗಿಲ್ಲ. ಸ್ವಾತಂತ್ರ್ಯ ಎಂಬ ಪದದ ಅಥ್ರವೇ ಗೊತ್ತಿಲ್ಲದಷ್ಟು ಅಲ್ಲಿನ ಜನರು ಅಭದ್ರತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಈ ಸ್ವಾತಂತ್ರ್ಯಕ್ಕಿಂತ ಬ್ರಿಟಿಷರ ಆಡಳಿತವೇ ಮೇಲು ಎಂಬ ಭಾವನೆ ಅವರ ಮನಸ್ಸಿನಲ್ಲಿ ಬರದಿರಲಿಕ್ಕಿಲ್ಲ. ಭಾರತದ ಆಡಳಿತದಿಂದಾಗಿ ಅವರು ಅಷ್ಟು ಬೇಸತ್ತಿದ್ದಾರೆ.
ನಮ್ಮ ಕೇಂದ್ರ ಸರಕಾರವು ಮಣಿಪುರವನ್ನು ಗಲಭೆಗ್ರಸ್ಥ ಪ್ರದೇಶ ಎಂದು ಗುರುತಿಸಿದೆ. ಹಾಗಾಗಿ ಅಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು 1985ರಲ್ಲಿ ಜಾರಿಗೊಳಿಸಲಾಯಿತು. ಇದರಿಂದಾಗಿ ಅಲ್ಲಿನ ಜನರ ಬದುಕು ಮೂರಾ ಬಟ್ಟೆಯಾಗಿ ಹೋಗಿದೆ.
ಈ ಕಾಯ್ದೆಯು ದೇಶದ ಇತರ ಕ್ರೂರ ಕಾಯ್ದೆಗಳಿಗೆ ತಾಯಿಯಿದ್ದಂತೆ. ಸರಳವಾಗಿ ಹೇಳುವುದಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಮಿಲಿಟರಿ ಆಡಳಿತ. ಈ ಕಾಯ್ದೆಯ ಪ್ರಕಾರ ಯಾರನ್ನು ಬೇಕಾದರೂ ವಾರೆಂಟ್ ಇಲ್ಲದೆ ಬಂಧಿಸಲು ಸಾಧ್ಯವಾಗುತ್ತದೆ. ಯಾವುದೇ ಮನೆಗಳಿಗೂ, ಕಛೇರಿಗಳಿಗೂ ಯಾವ ಮಧ್ಯರಾತ್ರಿಯಲ್ಲಿ ಬೇಕಾದರೂ ಹೋಗಿ ಬಂಧಿಸುವ ವಿಶೇಷ ಅಧಿಕಾರವನ್ನು ಸೇನೆಗೆ ನೀಡಲಾಗಿದೆ. ಒಂದು ವೇಳೆ ಸೇನಾ ಪಡೆಗಳಿಂದ ನಡೆಯುವ ಅಮಾಯಕರ ಮೇಲಿನ ದೌಜ್ರನ್ಯವನ್ನು ರಾಜ್ಯ ಸರಕಾರಕ್ಕೂ, ಪೋಲೀಸ್  ಇಲಾಖೆಗೂ ಕೇಂದ್ರ ಸರಕಾರದ ಅನುಮತಿ ಇಲ್ಲದೆ ತನಿಖೆ ನಡೆಸಲು ಸಾಧ್ಯವಿಲ್ಲ.
ಇಂತಹ ಕ್ರೂರ ಕಾಯ್ದೆಯನ್ನು ಮಣಿಪುರಿಗಳ ಮೇಲೆ ಹೇರಿದಾಗ ಬ್ರಿಟಿಷರಿಂದ ಸಿಕ್ಕಿದ ಸ್ವಾತಂತ್ರ್ಯವು ಕಸಿಯಲ್ಪಟ್ಟಿತು. ನಮ್ಮನ್ನು ಯಾವಾಗ ಬಂಧಿಸುವರೋ ಎಂಬ ಭೀತಿಯಲ್ಲಿ ಬದುಕತೊಡಗಿದರು.  ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು ಎಂಬ ಒಂದೇ ಒಂದು ಬೇಡಿಕೆಗಾಗಿ ಶರ್ಮಿಳ ಉಪವಾಸ ಆಚರಿಸಿದ್ದು. ಇದು ಓರ್ವ ಮಹಿಳೆ ನಡೆಸುವ ಸಾಟಿಯಿಲ್ಲದ ಪ್ರತಿಭಟನೆಯಾಗಿದೆ.
ಶರ್ಮಿಳ ಉಪವಾಸ ಸತ್ಯಾಗ್ರಹ ಆರಂಭಿಸಿದಾಗ ಇದು ಹೆಚ್ಚು ದಿನ ನಡೆಯುವುದಿಲ್ಲ ಎಂದು ಜನರು ಭಾವಿಸಿದ್ದರು. ಆದರೆ ಅವಳ ಉಪವಾಸವು ಕೊನೆಯಿಲ್ಲದೆ ಸಾಗಿದಾಗ ಮಣಿಪುರ ಸರಕಾರ ನಿಧಾನವಾಗಿ ತಲೆಕೆಡಿಸತೊಡಗಿತು. ನಂತರ ಆಕೆಯ ವಿರುದ್ಧ ‘ಆತ್ಮಹತ್ಯಾ’ ಯತ್ನದ ಅಪರಾಧ ಹೊರಿಸಲಾಯಿತು. ಈ ಅಪರಾಧದಡಿಯಲ್ಲಿ ಓರ್ವ  ವ್ಯಕ್ತಿಗೆ ಗರಿಷ್ಠ ಒಂದು ವರ್ಷ  ಶಿಕ್ಷೆ ಲಭಿಸುವುದು. ಆಸ್ಪತ್ರೆಯೇ ಜೈಲಾದ ಶರ್ಮಿಳಾಳಿಗೆ ಇಂತಹ ಒಂದು ವಷ್ರದ ಜೈಲು ಶಿಕ್ಷೆಯನ್ನು ಹಲವು ಬಾರಿ ಅನುಭವಿಸಬೇಕಾಯಿತು.

ಶರ್ಮಿಳಳ ಈ ಉಪವಾಸವನ್ನು ಸರಕಾರವು ಕೊನೆಗೊಳಿಸುವ ಲಕ್ಷಣ ಕಾಣಿಸುತ್ತಿಲ್ಲ. ಬಂದೂಕು, ಬಾಂಬು ಹಿಡಿದು ಪ್ರತಿಭಟಿಸಿದರೆ ಗಮನಿಸುವ ಈ ದೇಶದಲ್ಲಿ ನಿರಾಹಾರ ಪ್ರತಿಭಟನೆಯನ್ನು ಗಮನಿಸುವ ಮನಸ್ಸು ಸರಕಾರಕ್ಕಿದ್ದರಲ್ಲವೇ? ಇನ್ನು ಈ ಸಹೋದರಿಯ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವುದು ಈಕೆಯ ಮರಣವಾಗಿರಬಹುದೇನೋ?
2008 ಜುಲೈ 15ರಂದು ಭಾರತೀಯ ಭೂಸೇನೆಯ ಭಾಗವಾಗಿರುವ ಅಸ್ಸಾಮ್ ರೈಫಲ್ಸ್ನ 17ನೇ ಬೆಟಾಲಿಯನ್ ಕೇಂದ್ರ ಸ್ಥಾನದ ಎದುರು ಕೆಲವು ಮಹಿಳೆಯರು ಪ್ರತಿಭಟನೆ ನಡೆಸಿದರು. ಪ್ಲೇಕಾರ್ಡುಗಳನ್ನು ಹಿಡಿದು ಘೋಷಣೆ ಕೂಗುವ ಕೇವಲ ಪ್ರತಿಭಟನೆಯಾಗಿರಲಿಲ್ಲ. ಈ ಹೆಣ್ಣು ಮಕ್ಕಳು ಸಂಪೂರ್ಣ  ಬೆತ್ತಲೆಯಾಗಿ ನಿಂತು ಪ್ರತಿಭಟಿಸಿದರು. ‘ಇಂಡಿಯನ್ ಆರ್ಮಿ  ರೇಪ್ ಅಸ್, ಇಂಡಿಯನ್ ಆರ್ಮಿ  ಟೇಕ್ ಅವರ್ ಫ್ಲೆಷ್’ ಎಂದು ಬರೆಯಲಾದ ಬ್ಯಾನರುಗಳು ಅವರ ಪ್ರತಿಭಟನೆಯ ಕಾರಣವನ್ನು ತಿಳಿಸುತ್ತಿತ್ತು. ಭಾರತದ ಈ ನಾರಿಯರು ವಿವಸ್ತ್ರವಾಗಿ ಪ್ರತಿಭಟನೆ ನಡೆಸಿದಾಗ ‘ಪ್ರಕಾಶಿಸುವ ಭಾರತ’ದ ಕರಾಳ ಮುಖವನ್ನು ಜಗತ್ತು ಬಹಳ ಹತ್ತಿರದಿಂದ ದರ್ಶಿಸಿತು. ಈ ಪ್ರತಿಭಟನೆಯ ಕಾರಣಕರ್ತರು ಅದೇ ಅಸ್ಸಾಂ ರೈಫಲ್ಸ್   ಪಡೆ. ಜುಲೈ 10ರಂದು ತಂಗ್ಜಮ್ ಮನೋರಮಾ ದೇವಿ ಎಂಬ 22 ವರ್ಷ ದ ಹೆಣ್ಣು ಮಗಳನ್ನು ಇದೇ ಪಡೆಯು ಅಮಾನುಷವಾಗಿ ಕೊಂದುಹಾಕಿತು. ಇವರು ಕೇವಲ ಕೊಲೆ ಮಾಡಿದ್ದಲ್ಲ. ಭೀಕರ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಮಾಡಲಾಗಿತ್ತು.  ಮಧ್ಯರಾತ್ರಿಯಲ್ಲಿ ಮನೆಗೆ ನುಗ್ಗಿ ಮನೋರಮಾಳನ್ನು ಕೊಂಡುಹೋದ ರೈಫಲ್ಸ್   ಪಡೆ ಬೆಳಗಿನ ಜಾವ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಹೀಗೆ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುವಾಗ ಈ ಹೆಣ್ಣು ಮಕ್ಕಳ ನಗ್ನ ಪ್ರತಿಭಟನೆಯು ಧೈಯ್ರವಿದ್ದರೆ ಸಾರ್ವ ಜನಿಕವಾಗಿ ಅತ್ಯಾಚಾರವೆಸಗಿ ಎಂಬ ಸೇನೆಗಿರುವ ಸವಾಲಾಗಿತ್ತು.
ಮನೋರಮಾ ಮತ್ತು ಶಮ್ರಿಳಾ ಇಂದು ಮಣಿಪುರಿಗಳ ದೇವತೆಯಾಗಿದ್ದಾರೆ. ಮನೋರಮಾಳ ಮನೆಯ ಮುಂದೆ ಅವಳ ಹೆಸರಿನಲ್ಲಿಯೇ ಒಂದು ದೇವಾಲಯ ನಿರ್ಮಾಣಗೊಂಡಿವೆ. ಈ ಇಬ್ಬರು ಹೆಣ್ಣು ಮಕ್ಕಳು ಮಣಿಪುರದ ಸಮಸ್ಯೆಗಳಿಗೆ ಸಂಕೇತವಾಗಿದ್ದಾರೆ. ಜಗತ್ತು ಅಲ್ಲಿನ ಸಮಸ್ಯೆಗಳನ್ನು ಗಮನಿಸುತ್ತಿರುವುದು ಈ ಇಬ್ಬರು ಹೆಣ್ಣು ಮಕ್ಕಳ ಮೂಲಕವಾಗಿದೆ.
ಇಂದು ಭಾರತದಲ್ಲಿ ಅಮೇರಿಕನ್ ಪಡೆಗಳ ಅತ್ಯಾಚಾರವನ್ನೂ, ಇತರ ದೇಶಗಳ ತಪ್ಪುಗಳನ್ನು  ಸ್ಟೇಜುಗಳಲ್ಲೂ, ಪೇಜುಗಳಲ್ಲೂ ವಿಮರ್ಶಿ ಸುತ್ತಿದ್ದಾರೆ. ವಾರ್ತಾ  ಮಾಧ್ಯಮಗಳು ಸಕ್ಕತ್ತಾಗಿ ಕವರೇಜು ನೀಡುತ್ತಿದೆ. ಆದರೆ ಇವರುಗಳು ನಮ್ಮ ದೇಶದ ಸ್ಥಿತಿಯನ್ನು ಗಮನಿಸುವುದೇ ಇಲ್ಲ. ಅಸ್ಸಾಮಿನಲ್ಲೂ, ಕಾಶ್ಮೀರದಲ್ಲೂ ಸೇನೆಯ ಹಲವು ಅತ್ಯಾಚಾರಗಳನ್ನೆಸಗಿದ ಘಟನೆಗಳು ಅಪ್ಪಿತಪ್ಪಿ ಹೊರಬಿದ್ದಿದೆ. ಆದರೆ ಇದು ಯಾವುದೂ ಇವರಿಗೆ ಸುದ್ದಿಯಾಗಲಿಲ್ಲ. ನಮ್ಮ ದೇಶದ ಕುರಿತು ಬರೆದರೆ ಪೇಜುಗಳೂ ಸಾಕಾಗಲಿಕ್ಕಿಲ್ಲ.
ಸಹೋದರಿ ಶರ್ಮಿಳಳ ದೈಹಿಕ ಸ್ಥಿತಿಯು ಕ್ಷೀಣಿಸುತ್ತಾ ಸಾಗುತ್ತಿದೆ. ಬಲವಂತವಾಗಿ ಮೂಗಿನ ಮೂಲಕ ಆಹಾರ ನೀಡಲಾಗುತ್ತಿದ್ದರೂ ಆರೋಗ್ಯವು ದಿನದಿಂದ ದಿನಕ್ಕೆ ಹದಗೆಡುತ್ತಾ ಇದೆ. ಅವಳ ಮರಣವು ಅವಳಿಗೆ ಜಯ ದೊರಕಿಸದೆ ಹತ್ತಿರವಾಗುತ್ತಿದೆ. ವೈದ್ಯರ ಪ್ರಕಾರ ಅವಳ ಶರೀರದ ಕೆಲವು ಅಂಗಗಳು ಸ್ಪಂದಿಸುತ್ತಿಲ್ಲ. ಅವಳು ಇನ್ನು ಎಷ್ಟು ದಿನ ಬದುಕುತ್ತಾಳೋ ಆ ದೇವನೇ ಬಲ್ಲ. ಸರಕಾರವು ಅವಳ ಬೇಡಿಕೆಯನ್ನು ಈಡೇರಿಸುವಂತೆ ಕಾಣುತ್ತಿಲ್ಲ. ಅವಳು ತನ್ನ ಪ್ರತಿಭಟನೆಯನ್ನು ನಿಲ್ಲಿಸಲಿಕ್ಕೂ ಇಲ್ಲ. ಪ್ರತೀ ಮನಸ್ಸುಗಳೂ ಈ ಶಾಂತ ಶೈಲಿಯ, ಮಾದರಿ ಪ್ರತಿಭಟನೆಗೆ ಬೆಂಬಲ ಸೂಚಿಸಬೇಕಾಗಿದೆ. ಇಂದು ಮನೋರಮಾ ದೇವಿ ಸತ್ತು ಜೀವಿಸುತ್ತಿದ್ದರೆ ಶರ್ಮಿಳ ಸಾಯುತ್ತಿದ್ದಾಳೆ. ಮುಂದೆ ಏನು ಸಂಭವಿಸುವುದೋ ಎಂದು ಕಾದು ನೋಡಬೇಕಾಗಿದೆ.

No comments:

Post a Comment