Friday 19 October 2012

ಮಲಾಲಳಿಗಾಗಿ ಮಿಡಿಯಿತು ಜಗತ್ತು



ಪಾಕಿಸ್ತಾನದ ಮಲಾಲ ಯೂಸುಫ್ ಝಾಯ್ ಎಂಬ ಬಾಲೆಯು ಈಗ ಜಗತ್ತಿನಾದ್ಯಂತ ಚರ್ಚಾ ವಿಷಯವಾಗಿದ್ದಾಳೆ. ಎಲ್ಲರ ಗಮನವೂ ಅವಳತ್ತ ಸರಿದಿದೆ. ಹಿರಿಯರು ಕಿರಿಯರು ಎಂಬ ಭೇದವಿಲ್ಲದೆ ಹಲವರು ಅವಳ ಪರವಾಗಿ ಬೀದಿಗಿಳಿದಿದ್ದಾರೆ. ಹಲವರು ತಮ್ಮ ಪ್ರಾರ್ಥನೆಯಲ್ಲಿ ಅವಳನ್ನು ಸೇರಿಸಿಕೊಂಡಿದ್ದಾರೆ.
ಹೌದು, ತಾಲಿಬಾನಿಗಳ ಕೆಂಗಣ್ಣಿಗೆ ಗುರಿಯಾದ ಮಲಾಲ ಶಾಲೆಯಿಂದ ಮರಳುವಾಗ ಅವರ ಗುಂಡೇಟಿಗೆ ಗುರಿಯಾದಳು. ತಲೆಗೂ ಕುತ್ತಿಗೆಗೂ ಗುಂಡು ತಗಲಿ ಮಾರಣಾಂತಿಕವಾಗಿ ಗಾಯಗೊಂಡಳು. ತಾಲಿಬಾನಿಗಳ ಈ ಆಕ್ರಮಣಕ್ಕೂ ಕಾರಣವಿತ್ತು. ಪಾಕಿಸ್ತಾನದಲ್ಲಿ ತಾಲಿಬಾನಿಗಳ ಕ್ರೌರ್ಯವನ್ನು ಈಕೆ ಜಗತ್ತಿನ ಮುಂದೆ ತೆರೆದಿಟ್ಟಳು. ಅವರು ನಡೆಸುವ ಕ್ರೂರ ವರ್ತನೆಗಳು ಪಾಕಿಸ್ತಾನದ ಹೊರಗಿನವರಿಗೂ ಮನದಟ್ಟಾಯಿತು. ತಾಲಿಬಾನಿಗಳ ಪ್ರಕಾರ ಹೆಣ್ಣು ಮಕ್ಕಳು ಶಾಲೆಗೆ ಹೋಗುವಂತಿಲ್ಲ. ಇನ್ನು ಶಾಲೆಗೆ ಹೋಗುವುದಾದರೆ ಜೀವದ ಹಂಗು ತೊರೆದಿರಬೇಕು. ಇಂತಹ ಪರಿಸ್ಥಿತಿ ನಿರ್ಮಾಣವಾಗುವಾಗ ಮಲಾಲಳಿಗೆ ಕೇವಲ ಹನ್ನೊಂದು ವರ್ಷ. ಈಕೆ ಡೈರಿಯಲ್ಲಿ ದೈನಂದಿನ ಅನುಭವಗಳನ್ನು ಶುರು ಮಾಡಿದಳು. ಉರ್ದು ಭಾಷೆ ಚೆನ್ನಾಗಿ ಬಲ್ಲ ಆಕೆ ತನ್ನ ಅನುಭವಗಳ ಬರವಣಿಗೆಗೂ ಅದೇ ಭಾಷೆ ಬಳಸಿಕೊಂಡಳು. ಆ ಬರಹಗಳೆಲ್ಲ್ಲವೂ ಹೃದಯಕ್ಕೆ ನಾಟುವಂತಿದ್ದವು. ಆಕೆಯ ಡೈರಿಯ ಕೆಲವು ತುಣುಕುಗಳು ಇಲ್ಲ್ಲಿವೆ.
ಜನವರಿ 3 ಶನಿವಾರ, ತಲೆಬರಹ: ‘ಭಯವಾಗುತ್ತಿದೆ’.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಲಾಲ 
ಕನಸಿನಲ್ಲಿ ಮಿಲಿಟರಿ ಹೆಲಿಕಾಪ್ಟರ್‍ಗಳು ಮತ್ತು ತಾಲಿಬಾನಿಗಳು ಬರುತ್ತಿದ್ದಾರೆ. ನಮ್ಮ ಸ್ವಾತ್ ಜಿಲ್ಲೆಯಲ್ಲಿ ಸೈನಿಕ ಕಾರ್ಯಾಚರಣೆ ಪ್ರಾರಂಭವಾದಂದಿನಿಂದ ಇಂತಹ ಭಯಾನಕ ಕನಸುಗಳು ಬೀಳುತ್ತಿವೆ. ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ತಾಲಿಬಾನಿಗಳು ನಿಷೇಧಿಸಿದ್ದರಿಂದ ನನಗೆ ಭಯವಾಗುತ್ತಿದೆ. 27 ಮಂದಿಯಲ್ಲಿ 11 ಮಂದಿ ಮಾತ್ರ ಕ್ಲಾಸಿಗೆ ಹಾಜರಾಗಿದ್ದರು. ತಾಲಿಬಾನಿಗಳ ಆದೇಶದಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿತ್ತು. ನನ್ನ ಮೂವರು ಗೆಳತಿಯರು ಹೆದರಿಕೆಯಿಂದ ಕುಟುಂಬದೊಂದಿಗೆ ಇಲ್ಲಿಂದ ಹೊರಟು ಹೋಗಿದ್ದಾರೆ.
ಒಮ್ಮೆ ನಾನು ಶಾಲೆಯಿಂದ ಮರಳಿ ಬರುವಾಗ “ನಿನ್ನನ್ನು ಸಾಯಿಸ್ತೀನಿ” ಎಂದು ಹಿಂದಿನಿಂದ ಓರ್ವ ವ್ಯಕ್ತಿ ಕಿರುಚುವುದು ಕೇಳಿಸಿತು. ನಾನು ಗಾಬರಿಯಾಗಿ ನಡೆಯುವ ವೇಗ ಹೆಚ್ಚಿಸಿದೆ. ಸ್ವಲ್ಪ ಮುಂದೆ ಸಾಗಿ ತಿರುಗಿ ನೋಡಿದೆ. ಆತ ನನ್ನನ್ನು ಹಿಂಬಾಲಿಸುತ್ತಿಲ್ಲ ಎಂದು ಸಮಾಧಾನವಾಯಿತು. ಆತ ಫೋನಿನಲ್ಲಿ ಯಾರಿಗೋ ಬೆದರಿಕೆ ಹಾಕುತ್ತಿದ್ದ ಎಂಬುದನ್ನು ಅರಿತು ನಿರಾಳಳಾದೆ.
ಜನವರಿ 4 ಆದಿತ್ಯವಾರ, ತಲೆಬಹರಹ: ಶಾಲೆಗೆ ಹೋಗಬೇಕು.
ಇಂದು ಶಾಲೆಗೆ ರಜೆ. ಹಾಗಾಗಿ ತಡಮಾಡಿ ಎದ್ದೆ. ಆಗ ಹತ್ತುಗಂಟೆಯಾಗಿತ್ತು. ಗ್ರೀನ್ ಚೌಕದಲ್ಲಿ ಕೊಲ್ಲಲ್ಪಟ್ಟ ಮೂವರ ಕುರಿತು ತಂದೆಯವರು ಮಾತನಾಡುತ್ತಿದ್ದುದನ್ನು ಕೇಳಿ ಬೇಸರವಾಯಿತು. ಸೈನಿಕ ಕಾರ್ಯಾಚರಣೆ ಆರಂಭಗೊಳ್ಳುವುದಕ್ಕಿಂತ ಮುಂಚೆ ಆದಿತ್ಯವಾರ ನಾವೆಲ್ಲರೂ ಎಲ್ಲಿಗಾದರೂ ಸುತ್ತಾಡಲು ಹೋಗುತ್ತಿದ್ದೆವು. ಆದರೆ ಈಗ ಅದು ಅಸಾಧ್ಯವಾಗಿದೆ. ಪಿಕ್ನಿಕ್ಕಿಗೆ ತೆರಳಿ ವರ್ಷದ ಮೇಲಾಯಿತು.
ರಾತ್ರಿ ಊಟದ ಬಳಿಕ ಒಂದಿಷ್ಟು ತಿರುಗಾಡಿ ಬರುತ್ತಿದ್ದೇವು. ಈ ಸೂರ್ಯನು ಮುಳುಗುವುದರೊಂದಿಗೆ ನಾವು ಕೂಡಾ ಮನೆ ಸೇರಬೇಕು. ಇಂದು ನಾನು ತಾಯಿಗೆ ಮನೆಕೆಲಸಕ್ಕೆ ನೆರವಾಗಿ ಹೋಮ್ ವರ್ಕ್ ಮುಗಿಸಿ ತಮ್ಮನ ಜೊತೆ ಸ್ವಲ್ಪ ಆಟವಾಡಿದೆ. ನಾಳೆ ಶಾಲೆಗೆ ಹೋಗುವಾಗ ಏನಾಗುತ್ತದೋ ಎಂದು ನೆನೆಸುವಾಗಲೇ ಮೈ ಜುಂಮ್ಮೆನ್ನುತ್ತದೆ.
ಜನವರಿ 5 ಸೋಮವಾರ, ತಲೆಬರಹ: ಬಣ್ಣದ ಬಟ್ಟೆಗಳನ್ನೂ ಧರಿಸಬಾರದು.
ಶಾಲೆಗೆ ಹೋಗುವ ನಿಟ್ಟಿನಲ್ಲಿ ಯೂನಿಫಾರ್ಮ್ ಧರಿಸಲು ಅಣಿಯಾದಾಗ ಪ್ರಿನ್ಸಿಪಾಲ್ ಮುಂಚಿನ ದಿನ ಹೇಳಿದ್ದು ನೆನಪಾಯಿತು. “ಸಮವಸ್ತ್ರ ಧರಿಸಿ ನಾಳೆ ಬರಬೇಡಿ ಸಾದಾ ಉಡುಪಿನಲ್ಲೇ ಬನ್ನಿ” ಎಂದಿದ್ದರು. ನಾನು ನನ್ನ ಗುಲಾಬಿ ಬಣ್ಣದ ಬಟ್ಟೆ ತೊಟ್ಟು ಹೋದೆ. ಸಹಪಾಠಿಗಳೆಲ್ಲ ಬಣ್ಣ ಬಣ್ಣದ ವಸ್ತ್ರ ಧರಿಸಿದ್ದರು.
ಶಾಲೆಯಿಂದ ಬಂದು ಊಟ ಮುಗಿಸಿ ಟ್ಯೂಷನ್ನಿಗೆ ಹೋಗಿ ಬಂದೆ. ರಾತ್ರಿ ವಾರ್ತೆ ವೀಕ್ಷಿಸಿದಾಗ ಕಳೆದ 15 ದಿನಗಳಿಂದ ವಿಧಿಸಿದ್ದ ಕಫ್ರ್ಯೂ ಹಿಂತೆಗೆದುಕೊಂಡ ವಿಚಾರ ತಿಳಿದು ಸಂತಸವಾಯಿತು. ಕಾರಣ ನನ್ನ ಇಂಗ್ಲಿಷ್ ಟೀಚರ್ ಅಲ್ಲಿ ವಾಸವಾಗಿದ್ದರು. ಬಹುಶಃ ಅವರು ನಾಳೆ ಶಾಲೆಗೆ ಬರಬಹುದು.
ಜನವರಿ 7 ಬುಧವಾರ, ತಲೆಬರಹ: ಗುಂಡಿನ ಸದ್ದಿಲ್ಲ. ಭಯವೂ ಇಲ್ಲ.
ಮೊಹರ್ರಮ್ ರಜೆಯ ಪ್ರಯುಕ್ತ ಬುನೈರಿಗೆ ಕುಟುಂಬ ಸಮೇತ ಬಂದಿದ್ದೇನೆ. ಹಸಿರಿನಿಂದ ಕಂಗೊಳಿಸುವ ಅದು ನನ್ನ ಪ್ರಿಯವಾದ ತಾಣ. ನನ್ನ ಸ್ವಾತ್ ಕಣಿಯೂ ಸೌಂದರ್ಯದಲ್ಲಿ ಕಡಿಮೆಯೇನಿಲ್ಲ. ಆದರೆ ಅಲ್ಲಿ ಶಾಂತತೆಯಿಲ್ಲ. ಬುನೈರಿನಲ್ಲಿ ಶಾಂತಿಯಿದೆ, ನೆಮ್ಮದಿಯಿದೆ. ಗುಂಡಿನ ಸದ್ದು ಕೇಳಿಸುವುದಿಲ್ಲ. ಯಾವ ಭಯವೂ ಇಲ್ಲ. ನಾವು ಸಂತಸದಿಂದಿದ್ದೇವೆ. ಅಲ್ಲಿ ಹಲವಾರು ಅಂಗಡಿಗಳಿದ್ದವು. ನಾನು ಏನನ್ನೂ ಖರೀದಿಸಲಿಲ್ಲ. ಅಮ್ಮ ಕಿವಿಯೋಲೆ ಮತ್ತು ಬಳೆ ಖರೀದಿಸಿದರು.
ಜನವರಿ 9 ಶುಕ್ರವಾರ, ತಲೆಬರಹ: ಮೌಲಾನಾ ರಜೆ ಹಾಕಿದ್ದೀರಾ?
ಇವತ್ತು ಶಾಲೆಯಲ್ಲಿ ನಾನು ನನ್ನ ಬುನೈರ್ ಪಿಕ್‍ನಿಕ್‍ನ ಬಗ್ಗೆ ಗೆಳತಿಯರಲ್ಲಿ ಮಾತನಾಡಿದೆ. ಅವರು ಅದಕ್ಕೆ ಗಮನ ಕೊಡಲಿಲ್ಲ. ಅಲ್ಲಿನ ಕಥೆ ಕೇಳಿ ಕೇಳಿ ಸಾಕಾಯಿತು ಎಂದರು. ಎಫ್.ಎಮ್. ರೇಡಿಯೋದಲ್ಲಿ ಭಾಷಣ ಮಾಡುತ್ತಿದ್ದ ಮೌಲಾನಾ ಶಾಹ್ ದುರಾನ್‍ರ ಮರಣದ ಬಗ್ಗೆ ಹರಡಿದ್ದ ವದಂತಿಗಳ ಬಗ್ಗೆ ಮಾತನಾಡಿದೆವು. ಹೆಣ್ಮಕ್ಕಳು ಶಾಲೆಗೆ ಹೋಗಬಾರದೆಂದು ಘೋಷಿಸಿದ್ದು ಇದೇ ಮೌಲಾನಾ. ಅವರು ರಜೆಯ ಮೇರೆಗೆ ಊರಿಗೆ ಹೋಗಿದ್ದಾರೆ ಎಂದು ಓರ್ವಳು ತಿಳಿಸಿದಳು.
ಜನವರಿ 14 ಬುಧವಾರ, ತಲೆಬರಹ ಮತ್ತೆ ಶಾಲೆಗೆ ಹೋಗುವುದು ಅನುಮಾನ.
ಇಂದು ಶಾಲೆಗೆ ಹೋಗುವಾಗ ಮನಸ್ಸು ತಳಮಳಗೊಂಡಿತ್ತು. ನಾಳೆಯಿಂದ ಚಳಿಗಾಲದ ರಜೆ ಪ್ರಾರಂಭವಾಗುತ್ತದೆ. ಪ್ರಿನ್ಸಿಪಾಲರು ರಜೆ ಆರಂಭಗೊಳ್ಳುವುದರ ಬಗ್ಗೆ ಹೇಳಿದ್ದಾರೆ. ಆದರೆ ಯಾವಾಗ ಪುನರಾರಂಭವಾಗುತ್ತದೆ ಎಂಬ ಬಗ್ಗೆ ಏನೂ ಹೇಳಿಲ್ಲ. ನನ್ನ ಅಂದಾಜಿನ ಪ್ರಕಾರ ಜನವರಿ 15 ರಿಂದ ಹುಡುಗಿಯರ ಶಿಕ್ಷಣವನ್ನು ತಾಲಿಬಾನ್ ನಿಷೇಧಿಸಿರುವುದೇ ಪ್ರಿನ್ಸಿಪಾಲರ ಈ ಮೌನಕ್ಕೆ ಕಾರಣವಾಗಿರಬಹುದು.
ಈ ಬಾರಿ ನಮಗಾರಿಗೂ ರಜೆಯ ಬಗ್ಗೆ ಸಂತಸವಾಗಲಿಲ್ಲ. ತಾಲಿಬಾನ್ ಆದೇಶ ಜಾರಿಗೆ ಬಂದರೆ ಮತ್ತೆ ನಮಗೆ ಶಾಲೆಯ ಮೆಟ್ಟಿಲು ಹತ್ತುವಂತಿಲ್ಲ. ಅದೇ ಬೇಸರ ಎಲ್ಲರಿಗೂ ಕಾಡುತ್ತಿತ್ತು. ಕೆಲವು ಹುಡುಗಿಯರು ಸ್ವಾತ್ ಪ್ರದೇಶದಿಂದ ಬೇರೆಡೆಗೆ ಹೋಗುವುದಾಗಿ ತಿಳಿಸಿದರು. ಕೊನೆಯ ದಿನವಾದ ಕಾರಣ ಎಂದಿಗಿಂತ ಹೆಚ್ಚು ಸಮಯ ಮೈದಾನದಲ್ಲಿ ಆಟ ವಾಡಿದೆವು. ಶಾಲೆ ಮತ್ತೆ ಆರಂಭವಾಗುತ್ತದೆಂದು ನನ್ನ ನಂಬಿಕೆಯಾಗಿತ್ತು. ಆದರೂ ಶಾಲೆಯಿಂದ ಮರಳುವಾಗ ಇನ್ನೆಂದೂ ಇಲ್ಲಿಗೆ ಬರಲಾರನೆಂಬ ಭಾವನೆಯಿಂದ ಕಟ್ಟ ಕಡೆಗೆ ನಮ್ಮ ಶಾಲೆಯ ಕಡೆಗೊಮ್ಮೆ ನೋಟ ಬೀರಿದೆ.
ಇವೆಲ್ಲವೂ ಆ ಪುಟ್ಟ ಹುಡುಗಿಯ ಮನಸ್ಸಿನಲ್ಲಿ ಉದಯಿಸಿದ ತೀಕ್ಷ್ಣ ಭಾವನೆಗಳು. ಸ್ವಾತ್ ಕಣಿವೆಯಲ್ಲಿ ತಾಲಿಬಾನಿಗಳ ಪ್ರಭುತ್ವ ತಾರಕಕ್ಕೇರಿದ ಸಂದರ್ಭದಲ್ಲಿ ಮಲಾಲಳ ಡೈರಿಯ ಈ ಸಾಲುಗಳನ್ನು ಬಿಬಿಸಿಯ ಉರ್ದು ವಿಭಾಗವು ಪ್ರಕಟಿಸಲು ಒಲವು ತೋರಿತು. ಅವಳ ತಂದೆ ಓರ್ವ ಅಧ್ಯಾಪಕರಾಗಿದ್ದರು. ಅವರು ಮಗಳ ಬೆಂಬಲಕ್ಕೆ ನಿಂತರು. ಮಲಾಲಳ ಸ್ವಂತ ಹೆಸರಿನಲ್ಲಿ ಅದನ್ನು ಪ್ರಕಟಿಸುವಂತಿರಲಿಲ್ಲ. ಹಾಗೇನಾದರೂ ಪ್ರಕಟಿಸಿದರೆ ಅವಳ ಜೀವಕ್ಕೇ ಕುತ್ತು. ಆದ್ದರಿಂದ ‘ಗುಲ್ ಮಕಾಯಿ’ ಎಂಬ ಕಾವ್ಯನಾಮದೊಂದಿಗೆ ಪ್ರಕಟವಾಯಿತು. ಇದರೊಂದಿಗೆ ತಾಲಿಬಾನಿಗಳ ಕುರಿತು ಜಗತ್ತು ತಿಳಿಯಿತು. ತಾಲಿಬಾನಿಗಳಿಗೆ ಅಜ್ಞಾತ ಬರಹಗಾರ್ತಿ ನುಂಗಲಾರದ ತುತ್ತಾದಳು. ಅವಳ ತಂದೆ ಹೇಳುತ್ತಿದ್ದರಂತೆ. “ಕೆಲವು ದಿನಗಳ ಹಿಂದೆ ಡೈರಿಯ ಪ್ರಿಂಟ್ ಔಟನ್ನು ಯಾರೋ ಒಬ್ಬರು ತೆಗೆದುಕೊಂಡು ಬಂದು ಎಷ್ಟು ಸುಂದರವಾಗಿ ಬರೆದಿದ್ದಾಳಲ್ವ ಎಂದು ಹೊಗಳುತ್ತಿದ್ದರಂತೆ. ಅದು ಬರೆದಿರುವುದು ನನ್ನ ಮಗಳು ಎಂದು ಹೇಳಿಕೊಳ್ಳಲಾರದೆ ತಂದೆ ಮುಗುಳ್ನಗೆ ಬೀರಿ ಸುಮ್ಮನಾದರಂತೆ.”
ತಾಲಿಬಾನಿಗಳ ಹಿಡಿತದಲ್ಲಿದ್ದ ಸ್ವಾತ್ ಕಣಿವೆಯು “ಫ್ಲಶ್ ಔಟ್ ತಾಲಿಬಾನ್” ಎಂಬ ಯೋಜನೆಯಿಂದಾಗಿ ಸರಕಾರದ ಸ್ವಾಧೀನಕ್ಕೆ ಬಂತು. ಆಗ “ಗುಲ್ ಮಕಾಯ್” ಎಂಬ ಹೆಸರಿನೊಂದಿಗೆ ತೆರೆಯ ಹಿಂದೆ ನಿಂತು ಬರೆಯುತ್ತಿದ್ದವಳು ಮಲಾಲ ಆಗಿ ಸಮಾಜದ ಮುಂದೆ ಬಂದಳು. ಇದನ್ನು ಕಂಡು ಜಗತ್ತು ಬೆರಗುಗಣ್ಣಿನಿಂದ ನೋಡಿತು. 13ರ ಪೋರಿಯ ಈ ಸಾಧನೆಗೆ, ಸ್ಥೈರ್ಯಕ್ಕೆ ತಲೆದೂಗಿತು. ಇದರಿಂದಾಗಿ ಹಲವಾರು ಪ್ರಶಸ್ತಿಗಳು ಅವಳನ್ನು ಅರಿಸಿ ಬಂದುವು.
ಮಲಾಲಾ ಈಗ ದೇಶಾದ್ಯಂತ ಪ್ರಸಿದ್ದಿ ಪಡೆದಳು. ಆಕೆ ಮಹಿಳೆಯರ ಶಿಕ್ಷಣದ ಕುರಿತು ಮಾತನಾಡಿದಳು. ಇಸ್ಲಾಮ್ ಮಹಿಳೆಯರಿಗೆ ನೀಡುವ ಸ್ಥಾನಮಾನದ ಕುರಿತು ವಿವರಿಸಿದಳು. ಇಸ್ಲಾಮಿನ ಕುರಿತ ತಾಲಿಬಾನಿಗಳ ವ್ಯಾಖ್ಯೆಯನ್ನು ವಿರೋಧಿಸಿದಳು. ರಾಜಕಾರಣಿಗಳಿಗೆ ನಿಸ್ವಾರ್ಥ ಸೇವೆ ಮಾಡಲು ಸಾಧ್ಯವಿಲ್ಲದಿದ್ದರೆ ನಾನೇ ರಾಜಕೀಯಕ್ಕಿಳಿಯುತ್ತೇನೆ ಎಂದು ಸವಾಲು ಹಾಕಿದಳು. ಇಷ್ಟೆಲ್ಲ ಮಾತನಾಡುವಾಗ ಮಲಾಲಗಳಿಗೆ ಕೇವಲ 14 ವರ್ಷ. 
ಧಾರವಾಹಿ ನೋಡಿಯೋ ಗೇಮ್ಸ್ ಆಡಿಯೋ ಕಾಲಹರಣ ಮಾಡುವ ಈ ವಯಸ್ಸಿನಲ್ಲಿ ಮಲಾಲ ಸುಂದರ ರಾಷ್ಟ್ರದ ಕನಸು ಕಂಡಳು. “ನನ್ನ ಕನಸಿನ ಪ್ರಕಾರ ಪಾಕಿಸ್ತಾನದಲ್ಲಿ ಸದಾ ಶಾಂತಿ ನೆಲೆಸಿರಬೇಕು. ನೆರೆ ರಾಷ್ಟ್ರದೊಂದಿಗೆ ಸೌಹಾರ್ದತೆ ಇರಬೇಕು. ನನ್ನ ಪಾಕಿಸ್ತಾನದಲ್ಲಿ ಭ್ರಷ್ಟಾಚಾರ, ಹಗರಣಗಳಿರಬಾರದು. ಅದು ಅಜಾತ ಶತ್ರು ರಾಷ್ಟ್ರವಾಗಿರಬೇಕು.” ಇವು ಮಲಾಲಳ ಮನದಾಳದ ಇಂಗಿತವಾಗಿತ್ತು. ಇಂದು ಎಲ್ಲಾ ಪ್ರಾಯದವರಿಗೂ ಅವಳ ಧೈರ್ಯ, ಸ್ಥೈರ್ಯ, ಛಲದಲ್ಲಿ ಮಾದರಿಯಿದೆ. ಸತ್ಯ ಹೇಳುವವರಿಗೆ ಈ ಜಗತ್ತಿನಲ್ಲಿ ಕ್ರೌರ್ಯವೇ ಪ್ರತಿಫಲವಾಗಿ ದೊರೆಯುತ್ತದೆ. ಮಲಾಲಳ ಸ್ಥಿತಿಯೂ ಅಂತೆಯೇ ಆಗಿದೆ. ಹಾಗಂತ ಸತ್ಯವನ್ನು ಅಡಗಿಸಿಡಬೇಕು ಅಂತಲ್ಲ. ತಡವಾಗಿಯಾದರೂ ಸತ್ಯಕ್ಕೆ ಗೆಲುವು ಲಭಿಸಿಯೇ ತೀರುವುದು. ನೂರು ದಿನ ಇಲಿಯಾಗಿ ಬಾಳುವುದಕ್ಕಿಂತ ಒಂದು ದಿನ ಹುಲಿಯಾಗಿ ಬದುಕುವುದು ನಮ್ಮ ಜನ್ಮಕ್ಕೆ ನೀಡುವ ಗೌರವವಲ್ಲವೇ?