ಜಗತ್ತಿನಲ್ಲಿ ಹಲವಾರು ರೀತಿಯ ಪ್ರತಿಭೆಗಳನ್ನು ಹೊಂದಿದವರಿರುತ್ತಾರೆ. ಕೆಲವರು ಪಠ್ಯದಲ್ಲಿ ಪ್ರತಿಭೆ ಹೊಂದಿದರೆ ಇನ್ನು ಕೆಲವರು ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಎಲ್ಲರಲ್ಲೂ ಪ್ರತಿಭೆಗಳು ಇರುತ್ತವೆ. ಅವು ಹೊರ ಜಗತ್ತಿಗೆ ತಿಳಿಯಬೇಕಾದರೆ ಅದಕ್ಕೆ ತಕ್ಕಂತೆ ಸಂದರ್ಭ ಒದಗಿಬರಬೇಕು. ಹಲವು ಸನ್ನಿವೇಶಗಳ ಮೂಲಕ ವಿವಿಧ ಪ್ರತಿಭೆಗಳು ಹಲವರಿಂದ ಹೊರಹೊಮ್ಮುತ್ತದೆ. ಅದಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ. ಈ ಸಾಲಿಗೆ ಅರ್ಫಾ ಕರೀ ರಾಂಧವಾ ಸೇರುತ್ತಾಳೆ. ಇವಳು ಜಗತ್ತಿನಲ್ಲೇ ಅತ್ಯಂತ ಕಿರಿಯ ಮೈಕ್ರೋಸೋಫ್ಟ್ ಸರ್ಟಿಫೈಡ್ ಪ್ರೊಫೆಷನಲ್ (ಎಲ್ಸಿಪಿ) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾಳೆ. ಇವಳು ಹುಟ್ಟಿದ್ದು ಪಂಜಾಬ್ನ ಫೈಸಲಾಬಾದ್ನಲ್ಲಿ. ತಂದೆಯ ಹೆಸರು ಅಮ್ಜದ್ ಕರೀಮ್ ರಾಂಧವಾ. ಈಕೆ 9ನೇ ವಯಸ್ಸಿನಲ್ಲಿ ಮೈಕ್ರೋಸೊಫ್ಟ್ನ ಪ್ರಮಾಣ ಪತ್ರ ಪಡೆದಳು.ಜಗತ್ತು ಕಂಡ ಮೈಕ್ರೋಸಾಫ್ಟ್ ದಿಗ್ಗಜ ಬಿಲ್ಗೇಟ್ಸ್ನ ಕುರಿತು ಎಲ್ಲರಿಗೂ ತಿಳಿದಿರಬಹುದು. ಈ ಬಿಲ್ಗೇಟ್ಸ್ ಅರ್ಫಾಳ ಪ್ರತಿಭೆಗೆ ಮಾರು ಹೋಗಿ ಮೈಕ್ರೋಸಾಫ್ಟ್ ಪ್ರಧಾನ ಕಚೇರಿಗೆ ಖುದ್ದಾಗಿ ಕರೆಸಿದ್ದಾರೆಂದಾದರೆ ಅವಳ ಪ್ರತಿಭೆಯನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳಬಹುದು. ಅವಳನ್ನು ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಅವಳ ಸಾಧನೆಯನ್ನು ಗುರುತಿಸಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನೀಡಲಾಗುವ ‘ಫಾತಿಮಾ ಜಿನ್ನಾ’ ಸ್ವರ್ಣ ಪ್ರಶಸ್ತಿಯನ್ನು ಅಂದಿನ ಪಾಕ್ ಪ್ರಧಾನಿ ಶೌಕತ್ ಅಝೀಝ್ರಿಂದ ಪಡೆದುಕೊಂಡಳು. ಅದೇ ವರ್ಷ ‘ಸಲಾಂ ಪಾಕಿಸ್ತಾನ ಯೂತ್’ ಪ್ರಶಸ್ತಿಯನ್ನೂ ಪಡೆದಳು.
ಆಯಾ ಕ್ಷೇತ್ರಗಳಲ್ಲಿನ ಸಾಧನೆಗೆ ನೀಡಲಾಗುವ ‘ಪ್ರೈಡ್ ಆಫ್ ಪರ್ಫಾಮೆನ್ಸ್’ ನಾಗರಿಕ ಪ್ರಶಸ್ತಿಯೂ ಅರ್ಫಾಳಿಗೆ ಬಂದಿತ್ತು. ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ವಯಸ್ಸಿನ ಕಿಶೋರಿ ಎಂಬ ಹೆಗ್ಗಳಿಕೆಗೂ ಪಾತ್ರಳಾದಳು. ಅರ್ಫಾಳ ಸಾಧನೆಯನ್ನು ಗುರುತಿಸಿ 3ಜಿ ವೈಯರ್ಲೆಸ್ ಬ್ರಾಡ್ಬ್ಯಾಂಡ್ ಸರ್ವೀಸ್ ಕಂಪೆನಿಯಾದ ಪಾಕಿಸ್ತಾನ ಟೆಲಿ ಕಮ್ಯೂನಿಕೇಶನ್ ಕಂಪೆನಿಯು ಅವಳನ್ನು ತನ್ನ ರಾಯಭಾರಿಯಾಗಿ ಆಯ್ಕೆ ಮಾಡಿತ್ತು.
ಅರ್ಫಾ ಹಲವಾರು ಅಂತಾರಾಷ್ಟ್ರೀಯ ಸಭೆ ಸಮಾರಂಭಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದಳು. ಇದರಿಂದಾಗಿ ‘ಪಾಕಿಸ್ತಾನ ಇನ್ಫಾರ್ಮೇಷನ್ ಟೆಕ್ನಾಲಜಿ ಪ್ರೊಫೆಷನಲ್ ಫೊರಮ್’ ದುಬೈನಲ್ಲಿ ಎರಡು ವಾರಗಳ ವಾಸದ ಆಹ್ವಾನ ನೀಡಿ ಅರ್ಫಾಳನ್ನು ಗೌರವಿಸಿತ್ತು. ಈ ಸಮಾರಂಭದಲ್ಲಿ ಹಲವಾರು ಗಣ್ಯರು ಸೇರಿದಂತೆ ಪಾಕಿಸ್ತಾನದ ರಾಯಭಾರಿಗಳೆಲ್ಲ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅವಳಿಗೆ ಲ್ಯಾಪ್ಟಾಪ್ ಸೇರಿದಂತೆ ಹಲವಾರು ಬೆಲೆಬಾಳುವ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು. ಬಾರ್ಸಿಲೋನಾದಲ್ಲಿ ಏರ್ಪಡಿಸಲಾಗಿದ್ದ ಟೆಕ್ ಏಂಡ್ ಡೆವಲಪರ್ಸ್ ಸಮ್ಮೇಳನದಲ್ಲಿ ಮೈಕ್ರೋಸಾಫ್ಟ್ ವತಿಯಿಂದ ಆಹ್ವಾನ ಪಡೆದು ಭಾಗವಹಿಸಿದ ಏಕೈಕ ಪಾಕ್ ಪ್ರತಿನಿಧಿ ಎಂಬ ಗೌರವಕ್ಕೂ ಪಾತ್ರಳಾದಳು. ಮಾತ್ರವಲ್ಲ ತನ್ನ ಹತ್ತನೇ ವಯಸ್ಸಿನಲ್ಲಿ ದುಬೈನ ಹಾರಾಟದ ಕ್ಲಬ್ಬೊಂದರಲ್ಲಿ ವಿಮಾನವನ್ನು ಸ್ವತಃ ಹಾರಿಸಿ ಅತ್ಯಂತ ಕಿರಿ ವಯಸ್ಸಿನಲ್ಲಿ ಪ್ರಮಾಣ ಪತ್ರ ಪಡೆದ ಪೈಲೆಟ್ ಎಂಬ ಹೆಗ್ಗಳಿಕೆಗೂ ಪಾತ್ರಳಾದಳು.ಲಾಹೋರ್ ಗ್ರಾಮರ್ ಸ್ಕೂಲ್ನಲ್ಲಿ ಎ-ಲೆವೆಲ್ನಲ್ಲಿ ಎರಡನೇ ವರ್ಷ ವ್ಯಾಸಂಗ ಮಾಡುತ್ತಿದ್ದ ಅರ್ಫಾ 2011ರ ಡಿಸೆಂಬರ್ 22ರಂದು ಅಪಸ್ಮಾರಕ್ಕೆ ತುತ್ತಾಗಿ ಹೃದಯಾಘಾತಕ್ಕೆ ಒಳಗಾದಳು. ಇದರಿಂದಾಗಿ ಆಕೆಯ ಮೆದುಳಿಗೆ ತೀವ್ರ ಹಾನಿಯಾಯಿತು. ಕೂಡಲೇ ಅವಳನ್ನು ಲಾಹೋರಿನ ಕಂಬೈನ್ಡ್ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಅರ್ಫಾಳ ಅನಾರೋಗ್ಯವನ್ನರಿತ ಬಿಲ್ಗೇಟ್ಸ್ ದಿಗ್ಭ್ರಾಂತರಾದರು. ಅವಳ ಚಿಕಿತ್ಸೆಗಾಗಿ ಸ್ವಂತ ಖರ್ಚಿನಲ್ಲೇ ಅಂತಾರಾಷ್ಟ್ರೀಯ ವೈದ್ಯರನ್ನು ನೇಮಿಸಿದರೂ ಅರ್ಫಾಳ ಸ್ಥಿತಿಯು ದಿನದಿಂದ ದಿನಕ್ಕೆ ಹದಗೆಡ ತೊಡಗಿತು. ಕೊನೆಗೆ ವೈದ್ಯರ ಪ್ರಯತ್ನಗಳೆಲ್ಲವೂ ನಿರರ್ಥಕವೆಂಬಂತೆ ಈ ಲೋಕಕ್ಕೆ ಶಾಶ್ವತವಾಗಿ ವಿದಾಯ ಹೇಳಿದಳು. ಇವಳ ಮರಣದಿಂದಾಗಿ ಇಡೀ ಜಗತ್ತೇ ಏನೋ ಅಮೂಲ್ಯವಾದುದನ್ನು ಕಳಕೊಂಡಂತೆ ಚಡಪಡಿಸಿತು. “ಇಂದು ನನ್ನ ಜೀವನ ಅತ್ಯಂತ ದುಃಖದ ದಿನ” ಎಂದು ಅರ್ಫಾಳ ಮರಣದ ಕುರಿತು ಬಿಲ್ಗೇಟ್ಸ್ ಹೇಳಿದ್ದಾರೆಂದಾದರೆ ಅವಳ ಬೆಲೆ ಎಷ್ಟೆಂದು ಭಾಸವಾಗಬಹುದು.
ಕಂಪ್ಯೂಟರ್ ಕ್ಷೇತ್ರದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದ್ದ ಅರ್ಫಾಳು ಹಾರ್ವರ್ಡ್ ವಿಶ್ವಾವಿದ್ಯಾಲಯದಲ್ಲಿ ಮುಂದಿನ ವ್ಯಾಸಾಂಗ ಮಾಡುವ ಮತ್ತು ಮೈಕ್ರೊಸಾಫ್ಟ್ ಕಂಪೆನಿಯಲ್ಲಿ ಸೇವೆ ಸಲ್ಲಿಸಲು ಬಯಸಿದ್ದಳು. ನಂತರ ಪಾಕಿಸ್ತಾನಕ್ಕೆ ತೆರಳಿ ಸ್ಯಾಟಲೈಟ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ತಾಂತ್ರಿಕ ಸಂಶೋಧನೆಗಳನ್ನು ಕೈಗೊಳ್ಳುವ ಹೆಬ್ಬಯಕೆ ಹೊಂದಿದ್ದಳು. ಆದರೆ ವಿಧಿಯಾಟದ ಮುಂದೆ ಎಲ್ಲವೂ ವೊಣಕಾಲೂರಿತು.
ಅರ್ಫಾಳ ಸ್ಮರಣಾರ್ಥ ಲಾಹೋರ್ ಟೆಕ್ನಾಲಜಿ ಪಾರ್ಕನ್ನು ಅರ್ಫಾ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಎಂದು ನಾಮಕರಣ ಮಾಡುವ ಮೂಲಕ ಮುಖ್ಯಮಂತ್ರಿ ಶಹಬಾಝ್ ಶರೀಫ್ ಆಕೆಗೆ ಗೌರವ ಸಲ್ಲಿಸಿದ್ದಾರೆ ಅಂತೂ ಜಗತ್ತಿಗೆ ನವೀನ ಆವಿಷ್ಕಾರಗಳ ಮೂಲಕ ಕೊಡುಗೆಗಳನ್ನು ನೀಡಬೇಕಾಗಿದ್ದ ತಾರೆಯು ಅಸ್ತಮಿಸಿದೆ. ಅರ್ಫಾರಂತಹವರು ಇನ್ನೂ ಹುಟ್ಟಿ ಬರಲಿ ಎಂಬುದು ದೇಶದ ಜನರ ಹಾರೈಕೆ.
No comments:
Post a Comment