ಜಿಮ್ಮಿ ಕಾರ್ಬೆಟರ ಬೇಟೆಯ ಕುರಿತ ಪುಸ್ತಕವೊಂದನ್ನು ಓದುತ್ತಾ ಮಹಡಿಯ ಮೇಲೆ ತೂಗು ಸೋಫಾದಲ್ಲಿ ಕುಳಿತಿದ್ದೆ. ಅಮೇಜಾನ್ ಕಾಡಿಗೆ ಬೇಟೆಯಾಡಲು ಹೋದ ಲೇಖಕರು ಹಾವುಗಳ ಮಧ್ಯೆ ಸಿಲುಕಿಕೊಂಡಿದ್ದರು. ಆ ವೇಳೆ ನನ್ನ ಮನಸ್ಸು ಆ ಕಾಡಿನಲ್ಲಿತ್ತು. ನಾನು ಬಹಳ ಏಕಾಗ್ರತೆಯಿಂದ ಓದುತ್ತಿದ್ದೆ. ಹಾಗೆ ಓದುತ್ತಿರುವಾಗ ನನ್ನ ಕುತ್ತಿಗೆಯ ಹಿಂಭಾಗದಲ್ಲಿ ಏನೋ ಹರಿದಾಡಿದಂತಾಯಿತು. ಬೆಚ್ಚಿ ಬಿದ್ದು ಪುಸ್ತಕವನ್ನೆಸೆದೆ. ತಿರುಗಿ ನೋಡಿದಾಗ ನನ್ನ ಪ್ರಿಯ ಸಂಗಾತಿ ಶಮಾ ಮೂವತ್ತೆರಡು ಹಲ್ಲುಗಳನ್ನು ತೋರಿಸಿ ನಗುತ್ತಿದ್ದಳು.
'ರೀ, ನೀವ್ಯಾಕೆ ಪುಸ್ತಕ ಬಿಸಾಡಿದ್ದು' ಭುಜದ ಮೇಲೆದ್ದ ಶಾಲನ್ನು ತಲೆಗೆ ಹಾಕುತ್ತಾ ಕೇಳಿದಳು.
'ಓ ಅದಾ, ಪುಸ್ತಕ ಓದಿ ಆಯ್ತು. ಹಾಗೆ ಬಿಸಾಡಿದ್ದು. ಅದಿರ್ಲಿ, ನಾನು ನಿನ್ನಲ್ಲಿ ಎಷ್ಟೋ ಸಾರಿ ಹೇಳಿದ್ದೇನೆ. ಓದುವಾಗ ಹಾಗೆ ಉಪದ್ರ ಮಾಡಬಾರದು ಅಂತ ' ನಾನು ಎದೆ ಬಡಿತವನ್ನು ಸ್ಥಿಮಿತಕ್ಕೆ ತಂದುಕೊಳ್ಳುತ್ತಾ ಹೇಳಿದೆ.
'ಹಾಗಾದರೆ ಏನಾದರೂ ಬಹುಮುಖ್ಯ ವಿಷಯ ಹೇಳಲಿಕ್ಕಿದ್ದರೆ ಎಂಥ ಮಾಡುವುದು' ಶಮಾ ಕಣ್ಣರಳಿಸಿ ಹೇಳಿದಳು.
'ಅಂಥ ವಿಷಯಗಳಿದ್ದರೆ ಬಂದು ಕರೆಯಬೇಕು. ಅದಲ್ಲದೆ ಹೀಗೆ ಬಂದು ಮೈ ಮುಟ್ಟುದಲ್ಲ ' ನಾನು ಅವಳ ಕೈ ಹಿಡಿದು ಹತ್ತಿರ ಕುಳ್ಳಿರಿಸಿ ಕೈ ಬಳೆಯನ್ನು ಎರಡು ಸುತ್ತು ತಿರುಗಿಸಿದೆ.
ನಾನು ಓದಲು ಕುಳಿತರೆ ಪರಿಸರದ ಪರಿವೆಯೇ ಇರುವುದಿಲ್ಲ. ಏನೇ ಗದ್ದಲಗಳಿರುತ್ತಿದ್ದರೂ ನನ್ನ ಓದುವಿಕೆಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಪ್ರಯಾಣಿಸುವಾಗ ಓದಲು ಕುಳಿತು ಇಳಿಯ ಬೇಕಾದ ಜಾಗ ಬಿಟ್ಟು ಮುಂದೆ ಹೋದದ್ದೂ ಇದೆ. 'ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ' ಎಂಬ ಹಾಡೊಂದಿದೆ. ಆದರೆ ಇದು ನನ್ನ ಪಾಲಿಗೆ 'ಪುಸ್ತಕವೊಂದು ನನ್ನಲ್ಲಿದ್ದರೆ ನನಗದು ಕೋಟಿ ರೂಪಾಯಿಗಳು' ಎಂದಾಗಿದೆ. ಈ ಹಾಡನ್ನು ಶಮಾಳ ಮುಂದೆ ಹಾಡಿ ಬೆನ್ನಿಗೆ ಎರಡು ಗುದ್ದು ಬಿದ್ದ ಫಜೀತಿಯೂ ನಡೆದಿದೆ.
'ಶೀ ಕೈಬಿಡಿ ' ಶಮಾ ಕೈ ಕೊಸರಿಕೊಂಡು ಬಿದ್ದಿದ್ದ ಪುಸ್ತಕವನ್ನು ಎತ್ತಿ ಸೋಫಾದ ಮೇಲಿಟ್ಟಳು. ನನ್ನ ಬಳಿ ಕುಳಿತು ನನ್ನ ಅಂಗಿಯ ಗುಂಡಿ ತಿರುಗಿಸತೊಡಗಿದಳು. ಇದು ಯಾವುದೇ ಬೇಡಿಕೆಗಿರುವ ಮುನ್ನುಡಿ ಎಂದು ತಿಳಿಯಿತು. ಅವಳ ಈ ವರ್ತನೆಯಿಂದ ನನ್ನ ಅಂಗಿಯ ಗುಂಡಿಗಳು ಪೂರ್ಣ ಆಯುಷ್ಯದೊಂದಿಗೆ ಸತ್ತ ಇತಿಹಾಸವೇ ಇಲ್ಲ.
'ಆ ಗುಂಡಿಯನ್ನು ಬದುಕಲು ಬಿಡು ಮಾರಾಯ್ತಿ' ನಾನು ಅವಳ ಕೈಯನ್ನು ಗುಂಡಿಯಿಂದ ಬಿಡಿಸಿದೆ.
'ರೀ, ನಿಮ್ಮಲ್ಲಿ ನನಗೆ ಒಂದು ವಿಷಯ ಕೇಳಲಿಕ್ಕೆ ಉಂಟು. ನೀವು ಒಪ್ತೀರಾ'
'ವೊದಲು ಕೇಳು. ಆ ಮೇಲೆ ತೀರ್ಮಾನಿಸುವ ಒಪ್ಪಬೇಕೋ ಬೇಡವೋ ಅಂಥ '
ಶಮಾ ತನ್ನ ಅರ್ಧ ಭಾರವನ್ನು ನನ್ನ ಮೇಲೆ ಹಾಕಿದಳು. ಆದ್ದರಿಂದ ಇದು ಬಹಳ ಭಾರದ ಬೇಡಿಕೆ ಇರಬಹುದೆಂದು ಭಾವಿಸಿದೆ.
'ರೀ, ನನ್ನ ತಮ್ಮ ಇದ್ದಾನಲ್ಲಾ......'
'ಹೌದು ಇದ್ದಾನೆ. ಏನಾಯಿತು ಅವನಿಗೆ' ನಾನು ಮಧ್ಯದಲ್ಲಿ ಬಾಯಿ ಹಾಕಿದೆ.
'ವೊದಲು ನಾನು ಹೇಳುವುದನ್ನು ಪೂರ್ತಿಯಾಗಿ ಕೇಳಿ. ಆ ಮೇಲೆ ನಿಮ್ಮ ಕಮೆಂಟ್' ಎಂದು ನನ್ನ ತಲೆಗೆ ವೊಟಕಿದಳು.
'ಓ.ಕೆ, ಓ.ಕೆ ನೀನು ಹೇಳು'
'ನನ್ನ ತಮ್ಮ ಇನ್ನು ಮುಂದೆ ಇಲ್ಲಿ ಉಳಕೊಂಡು ಕಾಲೇಜಿಗೆಹೋದರೆ ಹೇಗೆ' ಅವಳ ಬೇಡಿಕೆಯ ಮಂಡನೆಯಾಯಿತು.
ರೋಗಿ ಬಯಸಿದ್ದೂ ಹಾಲು ವೈದ್ಯರು ಕೊಟ್ಟದ್ದೂ ಹಾಲು ಎಂಬಂತಾಯಿತು. ಅವನನ್ನು ಮನೆಯಲ್ಲಿ ನಿಲ್ಲಿಸಬೇಕೆಂಬ ಹಂಬಲ ನನಗೆ ವೊದಲೇ ಇತ್ತು. ಆದರೆ ಇದನ್ನು ಅವಳಲ್ಲಿ ಹೇಳಿರಲಿಲ್ಲ. ಅವನು ನನಗೆ ಅಳಿಯ ಮಾತ್ರವಲ್ಲ, ಉತ್ತಮ ಗೆಳೆಯನೂ ಆಗಿದ್ದ. ಉತ್ತಮ ಸ್ವಭಾವವೂ ಅವನಲ್ಲಿತ್ತು. ನಾನು ಶಮಾಳನ್ನು ಮದುವೆಯಾದುದರಲ್ಲಿ ಅವನ ನಡವಳಿಕೆಯ ಪಾತ್ರವೂ ಇತ್ತು.
'ಇಲ್ಲಿಂದ ಹೋದರೂ ಮನೆಯಿಂದ ಹೋದರೂ ತಲುಪುವುದು ಕಾಲೇಜಿಗಲ್ಲವೇ' ನಾನು ಕೈಯ್ಯಗಲಿಸಿ ಸೋಫಾದಲ್ಲಿ ಒರಗಿಕೊಳ್ಳುತ್ತಾ ಹೇಳಿದೆ.
'ನಾನು ಏನೇ ಹೇಳಿದರೂ ನಿಮಗೆ ಕೇರ್ಲೆಸ್. ನಿಮ್ಮ ಮುಂದೆ ನನ್ನ ಮಾತಿಗೆ ಬೆಲೆಯೇ ಇಲ್ಲ ' ನನ್ನ ಮಾತು ಕೇಳಿ ಶಮಾ ಸ್ವಲ್ಪ ಗರಮ್ ಆದಳು.
'ಯಾರು ಹಾಗೆ ಅಂದದ್ದು'
'ಮತ್ತೆ ನೀವು ಹಾಗೆ ಯಾಕೆ ವರ್ತಿಸುವುದು'
ಶಮಾ ಹಠ ಹಿಡಿದರೆ ಅದನ್ನು ಸಾಧಿಸುವವರೆಗೆ ಗರಿಷ್ಟ ಪ್ರಯತ್ನ ಮಾಡುತ್ತಿದ್ದಳು. ಅವಳ ಹಠ ಯಶಸ್ವಿಯಾಗದಿದ್ದರೆ ಅವಳಿಗೆ ಬೇಸರವೇನೂ ಆಗುತ್ತಿರಲಿಲ್ಲ. ಅದು ಅವಳಲ್ಲಿರುವ ಪ್ಲಸ್ ಪಾಯಿಂಟುಗಳಲ್ಲೊಂದು. ನಾನು ಅವಳನ್ನು ಮದುವೆಯಾದ ಸಂದರ್ಭದಲ್ಲಿ ಅತ್ತೆ ಹೇಳಿದ್ದರು. 'ನೋಡು, ಇವಳಿಗೆ ಕೋಪ ಸ್ವಲ್ಪ ಜಾಸ್ತಿ. ಇವಳ ತಂದೆಯ ಕೊಂಡಾಟದಿಂದ ಹೀಗಾಗಿದೆ. ಆದರೆ, ಈ ಕೋಪ ಹೆಚ್ಚು ಹೊತ್ತು ನಿಲ್ಲುವುದಿಲ್ಲ .'
'ಕೋಪ ಹೆಚ್ಚು ಹೊತ್ತು ನಿಲ್ಲುವುದಿಲ್ಲು ಎಂದು ಹೇಳಿದ್ದನ್ನು ಕೇಳಿ ನನಗೆ ಸ್ವಲ್ಪ ಸಮಾಧಾನವಾಗಿತ್ತು. ಅತ್ತೆ ಒಂದು ತಪ್ಪು ಮಾಡಿದ್ದರು. ಶಮಾಳಿಗೆ ಯಾವೆಲ್ಲಾ ಸಂದರ್ಭಗಳಲ್ಲಿ ಕೋಪ ಬರುತ್ತದೆಂದು ಪಟ್ಟಿ ತಯಾರಿಸಿ ಕೊಟ್ಟಿದ್ದರೆ ನನ್ನ ಬೆನ್ನಿಗೆ ಬೀಳುವ ಗುದ್ದುಗಳನ್ನೂ ಪಾತ್ರೆಗಳ ಮೇಲಾಗುವ ಅಮಾನುಷ ವರ್ತನೆಗಳನ್ನೂ ಕಡಿಮೆ ಮಾಡಬಹುದಾಗಿತ್ತು.
'ನೋಡು ಬಂಗಾರಿ, ನೀನು ನನ್ನ ಮುಂದಿಟ್ಟ ಯಾವುದೇ ಬೇಡಿಕೆಗಳನ್ನು ನಾನು ತಿರಸ್ಕರಿಸಿದ್ದೇನೆಯೇ? ಈ ಹುಡ್ಗಿರೇ ಹೀಗೆ. ಪತ್ನಿ ಹೇಳಿದ ಹಾಗೆ ಕೇಳಿದರೂ, ಕೊನೆಗೆ ಹೇಳ್ತಾರೆ ನೀವು ನನಗೆ ಏನೂ ಮಾಡಿಕೊಡಲಿಲ್ಲ ಎಂದು. ಹಾಗೆ ಹೇಳುವಾಗ, ಎಷ್ಟು ಬೇಜರಾಗುತ್ತದೆ ಗೊತ್ತಾ' ನಾನು ಮುಖ ಬಾಡಿಸಿ ಹೇಳಿದೆ.
'ಓ..... ಸಾಕು ನಿಮ್ಮ ನಾಟಕ . ಪುರುಷರೆಲ್ಲ ಯಾಕೆ ಹೀಗೆ' ಅವಳು ಹುಸಿ ಕೋಪದಿಂದ ಮುಖ ತಿರುಗಿಸಿದಳು.
'ಓಕೆ. ಪುರುಷರಿಗೆ ಕರುಣೆ ಇಲ್ಲ. ಒಪ್ಪಿಕೊಳ್ತೇನೆ ' ತರ್ಕವನ್ನು ಮುಂದುವರಿಸಲು ನನಗೆ ಆಸಕ್ತಿ ಇರಲಿಲ್ಲ. ಹಾಗೆ ನಾನು ಅವಳ ವಾದವನ್ನು ಒಪ್ಪಿಕೊಂಡೆ.
'ಹಾಗೆ ದಾರಿಗೆ ಬನ್ನಿ ' ಕೋರ್ಟಿನಲ್ಲಿ ವಾದಿಸಿ ಕೇಸು ಜಯಿಸಿದಂತಹ ಗೆಲುವಿನ ನಗೆ ಶಮಾಳ ಸುಂದರ ವದನದಲ್ಲಿತ್ತು.
'ನಿನಗೆ ಒಂದು ವಿಷಯ ಗೊತ್ತುಂಟಾ' ನಾನು ಅವಳಲ್ಲಿ ಕೇಳಿದೆ.
'ಹೇಳಿದರಲ್ಲವೇ ಗೊತ್ತಾಗುವುದು' ರೆಡಿಮೇಡ್ ಪ್ರತಿಕ್ರಿಯೆ ಬಂತು.
'ನೀವು ಹೆಂಗಸರನ್ನು ಹೊಗಳಿ ಅಟ್ಟದಲ್ಲಿರಿಸ್ತಿಯಲ್ಲ. ಹೆಂಗಸರಿಗೆ ಬಯಸುವಾಗ ಅಳಲು ಸಾಧ್ಯ, ಆದರೆ ನಗಲು ಸಾಧ್ಯವಿಲ್ಲ.'
ನಾನು ಹೇಳಿದ್ದು ಸತ್ಯ ಅಂತ ಅವಳಿಗೆ ಗೊತ್ತಾಗಿತ್ತು. ಅವಳು ನನ್ನ ತೊಡೆ ಮೇಲೆ ಗುದ್ದಿ ಹೇಳಿದಳು. ಅದೆಲ್ಲಾ ಇರಲಿ, ನಾನು ಹೇಳಿದ ವಿಷಯ ಏನಾಯಿತು'
'ಯಾವ ವಿಷಯ' ನಾನು ಗೊತ್ತಿಲ್ಲದವನಂತೆ ಕೇಳಿದೆ.
'ನನ್ನ ತಮ್ಮನ ವಿಚಾರ '
'ಓ ಅದಾ, ನೋಡು ಶಮಾ ಅವನನ್ನು ಇಲ್ಲಿ ನಿಲ್ಲಿಸಿ ನಮ್ಮ ಗಲಾಟೆಗಳನ್ನು ತೋರಿಸುವುದೇಕೆ'
'ಹಾಗಾದರೆ ಆ ಪ್ರಜ್ಞೆ ಉಂಟಲ್ಲಾ. ಇನ್ನಾದರೂ ನೀವು ನನ್ನೊಂದಿಗೆ ಗಲಾಟೆ ಮಾಡುವುದನ್ನು ನಿಲ್ಲಿಸಬಹುದು ' ಯಾವುದೋ ದೊಡ್ಡ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಂತೆ ಶಮಾ ಕಣ್ಣರಳಿಸಿ ಹೇಳಿದಳು.
ನಾನು ಒಳಗೊಳಗೇ ನಕ್ಕೆ. ಯಾಕೆಂದರೆ ಈ ವರೆಗೆ ನಾನು ಏಕಾಂಗಿಯಾಗಿ ಹೋರಾಡುತ್ತಿದ್ದೆ. ಇನ್ನು ಅಳಿಯನಿಂದಾಗಿ ನನಗೆ ಆನೆ ಬಲ ಬಂದಂತಾಗಬಹುದು.
'ರೀ ನೀವು ಒಪ್ತೀರೋ, ಇಲ್ವೋ ಫಸ್ಟ್ ಅದು ಹೇಳಿ ' ಅವಳು ತನ್ನ ಪಟ್ಟು ಸಡಿಲಿಸಲಿಲ್ಲ.
'ನನಗೆ ಗೊತ್ತಿತ್ತು ನೀವು ಒಪ್ತೀರಿ ಅಂತ '
'ಒಪ್ಪದೆ ಬೇರೆ ದಾರಿಯಿದ್ದರಲ್ಲವೇ' ನಿನ್ನ ಪ್ರತಿಭಟನೆಯ ಮುಂದೆ ತಲೆಬಾಗದಿರಲಾಗುತ್ತದಾ, ನೀನು ಸ್ವಾತಂತ್ರ್ಯ ಸಂಗ್ರಾಮಗಳಲ್ಲಿರುತ್ತಿದ್ದರೆ, ನಮ್ಮ ದೇಶವು 1947ಕ್ಕಿಂತ ವೊದಲೇ ಸ್ವತಂತ್ರವಾಗುತ್ತಿತ್ತೋ ಏನೋ '
'ಸಾಕು ಸಾಕು ನಿಮ್ಮ ಸೋಪಿಂಗ್'
ಶಮಾ ನನ್ನ ಭುಜದ ಮೇಲೆ ತಲೆ ಒರಗಿಸಿದಳು. ಹಗಲೆಲ್ಲಾ ಮಾಡಿದ ಕೆಲಸದ ಆಯಾಸವು ಅದರಲ್ಲಿ ತಿಳಿಯುತ್ತಿತ್ತು.
'ರೀ, ನೀವು ನನ್ನನ್ನು ಪ್ರೀತಿಸ್ತಿದ್ದೀರಾ' ನನ್ನ ಕೈ ಮೇಲೆ ಕೈಯಿಟ್ಟು ಕೇಳಿದಳು.
ಈ ಹುಡುಗಿಯರು ಹೀಗೇನೆ. ಹುಚ್ಚು ಮನಸ್ಸು. ಗಂಡ ಪ್ರೀತಿಸ್ತಾನೆ ಅಂತ ಗೊತ್ತಿದ್ದರೂ ಅದನ್ನು ಆಗಾಗ ಕನ್ಫರ್ಮ್ ಮಾಡುತ್ತಿರುತ್ತಾರೆ.
'ಯಾಕೆ ಮಾರಾಯ್ತಿ ಈಗ ಇಂತಹ ಪ್ರಶ್ನೆ' ನಾನು ಅವಳ ಕೂದಲಲ್ಲಿ ಕೈಯಾಡಿಸುತ್ತಾ ಕೇಳಿದೆ.
'ಹೀಗೆ ಸುಮ್ಮನೆ ಕೇಳಿದ್ದು, ರೀ ನಂಗೆ ನಿದ್ದೆ ಬರ್ತದೆ. ನಾನು ಹೋಗ್ತೇನೆ. ಓದಿದ್ದು ಸಾಕು. ಬೇಗ ಬನ್ನಿ ' ಶಮಾ ಎದ್ದು ರೂಮಿನ ಕಡೆಗೆ ಹೋದಳು. ಅವಳು ಎದ್ದು ಹೋಗುವಾಗ ನಾನೂ ಕೂಡಾ ಅವಳ ಹಿಂದೆ ಹೋಗಬಹುದೆಂದು ಭಾವಿಸಿದ್ದಳು. ಅವಳ ಆಲೋಚನೆ ಉಲ್ಟಾ ಹೊಡೆಯಿತು. ನಾನು ಏಳದ್ದನ್ನು ಕಂಡು ಅವಳು ಹೇಳಿದಳು.
'ರೀ ನೀವು ಬರ್ತೀರೋ ಇಲ್ವೋ'
'ನೀನು ಹೋಗು. ನನಗೆ ಸ್ವಲ್ಪ ಓದ್ಲಿಕ್ಕುಂಟು' ಅವಳನ್ನು ಓರೆಗಣ್ಣಿನಿಂದ ನೋಡುತ್ತಾ ಹೇಳಿದೆ.
'ನೀವು ಬೆಳಿಗ್ಗೆ ವರೆಗೆ ಓದುತ್ತಾ ಇರಿ. ನಾನು ಬಾಗಿಲು ಹಾಕಿ ಮಲಗುತ್ತೇನೆ. ಮತ್ತೆ ಬಂದು ಬಾಗಿಲು ತಟ್ಟಿದರೆ ನಾನು ತೆರೆಯಲಿಕ್ಕಿಲ್ಲ. ಹೊರಗೆ ಮಲಗಬೇಕು'
'ಓ.ಕೆ '
ಶಮಾ ಸಿಡುಕಿನಿಂದ ಹೋದಳು. ನಾನು ನೆಪ ಮಾತ್ರಕ್ಕೆ ಓಕೆ ಅಂದ್ರೂ ಅವಳ ಹಿಂದೇನೇ ಎದ್ದು ಹೋದೆ. ಯಾಕೆಂದರೆ ಇಲ್ಲಿ ತನಕ ನಾನು ಹೊರಗೆ ಮಲಗಲಿಲ್ಲ. ಇನ್ನು ಹೊಸದಾಗಿ ಆ ಅನುಭವ ಆಗುವುದು ಬೇಡ ಎಂಬ ಮುಂಜಾಗ್ರತಾ ಕ್ರಮ....
ಗಂಡ ಹೆಂಡಿರ ಸರಸ ಸಲ್ಲಾಪ, ಹುಸಿ ಕೋಪ ಎಲ್ಲ ಸುಂದರ.. ಊಟದಲ್ಲಿ ಉಪ್ಪು ಖಾರ ಸಿಹಿ ಎಲ್ಲ ಸರಿ ಪ್ರಮಾಣದಲ್ಲಿ ಇದ್ದಾಗಲೇ ರುಚಿ.. ಬಹಳ ಉತ್ತಮ ಶೈಲಿ. ಶುಭವಾಗಲಿ :)
ReplyDelete