Thursday, 16 August 2012

ವಿವಾಹ ವಿಚ್ಛೇದನ


 ಆ ರಾತ್ರಿ ನಾನು ಮನೆಗೆ ತಲುಪಿದಾಗ ನನ್ನ ಪತ್ನಿ ಊಟ ಬಡಿಸಿದಳು. ಆಗ ನಾನು ಅವಳ ಕೈ ಹಿಡಿಯುತ್ತಾ ಹೇಳಿದೆ. “ನಿನ್ನಲ್ಲಿ ನನಗೆ ಒಂದು ವಿಚಾರ ಹೇಳಲಿಕ್ಕಿದೆ.” ಅವಳು ನನ್ನ ಬಳಿ ಕುಳಿತುಕೊಂಡಳು. ನಾನು ಅವಳ ಕಣ್ಣುಗಳನ್ನು ದಿಟ್ಟಿಸಿದೆ. ಹೊಳಸಿತ್ತು ನನ್ನ ಬಾಯಿಯಿಂದ ಮಾತೇ ಹೊರಡಲಿಲ್ಲ. ಆದರೂ ನನ್ನ ಮನದಿಂಗಿತವನ್ನು ಅವಳಿಗೆ ತಿಳಿಸಲೇ ಬೇಕಾಗಿತ್ತು. ನನಗೆ ಅವಳಿಂದ ವಿಚ್ಛೇದನ ಬೇಕಾಗಿತ್ತು. ನಾನು ಮೆಲ್ಲನೆ ನನ್ನ ಕೋರಿಕೆಯನ್ನು ಅವಳ ಮುಂದಿಟ್ಟೆ. ಆದರೆ ಅವಳು `ಯಾಕೆ’ ಎಂಬ ಪ್ರಶ್ನೆಯನ್ನು ಕೇಳಿದಳೇ ಹೊರತು ಅವಳಲ್ಲಿ ಬೇರಾವುದೇ ಪ್ರಭಾವವನ್ನು ನಾನು ಕಾಣಲಿಲ್ಲ. ನಾನು ಅವಳ `ಯಾಕೆ’ ಎಂಬ ಪ್ರಶ್ನೆಯನ್ನು ಕಡೆಗಣಿಸಿದೆ. ಇದು ಅವಳಿಗೆ ಕೋಪ ಬರಿಸಿತು. ತನ್ನ ಕೈಯಲ್ಲಿದ್ದ ಸ್ಪೂನೊಂದನ್ನು ನನ್ನತ್ತ ಎಸೆದು ಚೀರಿಕೊಂಡಳು. “ನೀವು ಮನುಷ್ಯರಲ್ಲ” ಆ ರಾತ್ರಿ ನಾವು ಪರಸ್ಪರ ಮಾತೇ ಆಡಲಿಲ್ಲ.
ಅವಳು ಕಣ್ಣೀರು ಸುರಿಸುತ್ತಿದ್ದಳು. ನಮ್ಮ ದಾಂಪತ್ಯ ಬದುಕಿನಲ್ಲಿ ಏನಾದರೂ ಏಡವಟ್ಟಾಗಿದೆಯೇ ಎಂದು ಮೆಲುಕು ಹಾಕುತ್ತಿದ್ದಳು. ನಾನು ಅವಳಿಗೆ ತೀಕ್ಷ್ಣ ಉತ್ತರವನ್ನು ನೀಡಿದೆ. “ನಿನಗೆ ನನ್ನ ಹೃದಯದಲ್ಲಿ ಜಾಗವಿಲ್ಲ. ಅದನ್ನು ನಾನು ನನ್ನ ಪ್ರೇಯಸಿಗೆ ನೀಡಿದ್ದೇನೆ. ನಾನು ನಿನ್ನನ್ನು ಹೆಚ್ಚೇನೂ ಪ್ರೀತಿಸಿರಲಿಲ್ಲ” ಅತ್ಯಂತ ಆಘಾತಕಾರೀ ಉತ್ತರ!
ಕೊನೆಗೆ ನಾನು ಅವಳಿಗೆ ನಮ್ಮ ಮನೆ, ನನ್ನ ಕಾರು ಮತ್ತು ನನ್ನ ಕಂಪೆನಿಯ 30 ಶೇಕಡಾ ಮಾಲಕತ್ವವನ್ನು ವಿಚ್ಛೇದನ ಪತ್ರದೊಂದಿಗೆ ನೀಡಿದೆ. ಅವಳು ಅದರ ಕಡೆಗೊಮ್ಮೆ ನೋಟ ಬೀರಿ ಅದನ್ನು ಹರಿದು ಚಿಂದಿ ಮಾಡಿದಳು.
ಹತ್ತು ವರ್ಷಗಳಿಗಿಂತಲೂ ಹೆಚ್ಚು ನನ್ನೊಂದಿಗೆ ಜೀವನ ನಡೆಸಿದ ಅವಳು ಈಗ ಅಪರಿಚತೆಯಾದಳು. ಅವಳ ವ್ಯರ್ಥವಾದ ಸಮಯ, ಸಂಪತ್ತು ಮತ್ತು ಎನರ್ಜಿಯ ಕುರಿತು ನನಗೆ ಅಪರಾಧಿ ಮನೋಭಾವ ಮಾಡಿತು. ಅವಳು ನನ್ನ ಮುಂದೆ ನಿಂತು ರೋಧಿಸ ತೊಡಗಿದಳು. ಅವಳ ಆ ಅಳು ನನಗೊಂದು ಮುಕ್ತಿಯಂತೆ ತೋರಿತು. ನನ್ನ ಬಹುದಿನಗಳ ಆಕಾಂಕ್ಷೆಯು ನೆರವೇರುತ್ತದೆಂದು ಸಂತಸಪಟ್ಟೆ.
ಮರುದಿನ ನಾನು ಮನೆಗೆ ಬಹಳ ತಡವಾಗಿ ಹೋದೆ. ಟೇಬಲಿನ ಮುಂದೆ ಕುಳಿತು ಅವಳು ಏನೋ ಬರೆಯುತ್ತಿದ್ದಳು. ಅಲ್ಲಿ ಎಂದಿನಂತೆ ನನಗೆ ಊಟ ಬಡಿಸಿಟ್ಟಿರಲಿಲ್ಲ. ನಾನು ನೇರವಾಗಿ ಬೇಡ್ ರೂಮಿಗೆ ಹೋಗಿ ಮಲಗಿದೆ. ಆ ದಿನವನ್ನು ನನ್ನ ಪ್ರೇಯಸಿಯೊಂದಿಗೆ ಕಳೆದಿದ್ದರಿಂದ ಆಯಾಸವಾಗಿತ್ತು. ಬಹಳ ಬೇಗನೇ ನಿದ್ದೆ ಹತ್ತಿತು. ನನಗೆ ಬೆಳಿಗ್ಗೆ ಎಚ್ಚರವಾದಾಗ ಅವಳು ಬರೆಯುತ್ತಲೇ ಇದ್ದಳು. ನಾನು ಅತ್ತ ಕಡೆ ಗಮನ ಹರಿಸಲಿಲ್ಲ. ಪುನಃ ನಾನು ನಿದ್ದೆಗೆ ಜಾರಿದೆ. ನಾನು ನಿದ್ದೆಯಿಂದ ಎಚ್ಚೆತ್ತ ಬಳಿಕ ಅವಳು ಅವಳ ವಿಚ್ಛೇದನದ ಶರತ್ತುಗಳನ್ನು ನೀಡಿದಳು.
ಅವಳು ನನ್ನಿಂದ ಏನನ್ನೂ ಬಯಸಲಿಲ್ಲ. ವಿಚ್ಛೇದನೆಯ ಒಂದು ತಿಂಗಳ ಮುಂಚೆ ನೆನಪಿಸಬೇಕು ಎಂದು ಮಾತ್ರ ಹೇಳಿದ್ದಳು. ಆ ಒಂದು ತಿಂಗಳಲ್ಲಿ ನಾವು ಜಗಳಗಳಿಲ್ಲದ ಸಾಮಾನ್ಯ ಬದುಕು ಸಾಗಿಸಬೇಕೆಂದೂ ತಿಳಿಸಿದಳು. ಅವಳು ಹಾಗೆ ಹೇಳಲು ಕಾರಣವೂ ಇತ್ತು. ನಮ್ಮ ಮಗನಿಗೆ ಮಾಸಿಕ ಪರೀಕ್ಷೆಯು ನಡೆಯಲಿಕ್ಕಿರುವುದು ಅದೇ ತಿಂಗಳಲ್ಲಾಗಿತ್ತು. ಮಕ್ಕಳಿಗಾಗಿ ಎಲ್ಲಾ ನೋವನ್ನೂ ನುಂಗಿಕೊಳ್ಳಲು ಆ ತಾಯಿ ಸಿದ್ಧಳಾದಳು. ತಮ್ಮ ಈ ಜಗಳದಲ್ಲಿ ಮಗನನ್ನು ಬಲಿಪಶುವಾಗಿಸಲು ಅವಳು ಬಯಸಲಿಲ್ಲ.
ಈ ಶರತ್ತು ನನಗೆ ಒಪ್ಪಿಗೆಯಾಗಿತ್ತು. ಆದರೆ ಅವಳು ಇನ್ನೂ ಹೆಚ್ಚಿನ ಶರತ್ತನ್ನು ಮುಂದಿಟ್ಟಳು. ನಮ್ಮ ಮದುವೆಯ ದಿನ ನಾನು ಅವಳನ್ನು ಬೆಡ್‍ರೂಮಿಗೆ ಬರಮಾಡಿಕೊಂಡಂತೆ ಪುನಃ ಬರಮಾಡಿಕೊಳ್ಳಬೇಕಂತೆ. ಇದನ್ನು ಆ ಕೊನೆಯ ತಿಂಗಳ ಎಲ್ಲಾ ದಿನಗಳಲ್ಲೂ ಮುಂದುವರಿಸಬೇಕೆಂದು ಹೇಳಿದಳು.
ಅವಳು ಮಕ್ಕಳಾಟಿಕೆಯಲ್ಲಿ ತೊಡಗಿದ್ದಾಳೆಂದು ನನಗೆ ಭಾಸವಾಯಿತು. ನಮ್ಮ ಕೊನೆಯ ದಿನಗಳನ್ನು ಅಸಹನೀಯ ಗೊಳಿಸುತ್ತಾಳೆಂದು ಭಾವಿಸಿದೆ. ಆದರೂ ಅವಳ ಈ ವಿಚಿತ್ರ ಬೇಡಿಕೆಯನ್ನು ಒಪ್ಪಿಕೊಂಡೆ. ನಾನು ನನ್ನ ಪ್ರೇಯಸಿಯೊಂದಿಗೆ ಅವಳ ಈ ಬೇಡಿಕೆಯನ್ನು ತಿಳಿಸಿದೆ. ಅವಳು ಬಿದ್ದು ಬಿದ್ದು ನಕ್ಕಳು. “ಅವಳು ಏನೋ ತಂತ್ರ ಹೂಡುತ್ತಾಳೆ. ಹೇಗಿದ್ದರೂ ಅವಳು ವಿಚ್ಛೇದನವನ್ನು ಎದುರಿಸಲೇ ಬೇಕಾಗಿತ್ತು” ಎಂದು ಪ್ರತಿಕ್ರಿಯಿಸಿದಳು.
ನನಗೆ ವಿಚ್ಛೇದನದ ಆಲೋಚನೆ ಬಂದಂದಿನಿಂದ ನಮ್ಮ ಮಧ್ಯೆ ಯಾವುದೇ ಶಾರೀರಿಕ ಸಂಬಂಧವೇರ್ಪಡಲಿಲ್ಲ. ಮೊದಲ ದಿನ ಅವಳ ಬೇಡಿಕೆಯಂತೆ ನಾನು ಅವಳ ಭುಜದ ಮೇಲೆ ಕೈಯಿರಿಸಿ ರೂಮಿನಿಂದ ಹೊರಬಂದೆವು. ನಮ್ಮ ಮಗ ಹಿಂದಿನಿಂದ ಹೊಡೆಯುತ್ತಾ “ಪಪ್ಪಾ, ನೀವು ತುಂಬಾ ಚೂಟಿ” ಎಂದು ಗೇಲಿ ಮಾಡಿದನು. ಅವನ ಆ ಮಾತು ನನ್ನ ಮನಸ್ಸನ್ನು ಕಲಕಿತು. ನಮ್ಮ ನಟನೆಯನ್ನು ಅವನು ನೈಜತೆಯಾಗಿ ಭಾವಿಸಿದ್ದನು. ನಾನು ಅವಳೊಂದಿಗೆ ಸ್ವಲ್ಪ ಮುಂದೆ ಸಾಗಿದಾಗ ಅವಳು ಬಹಳ ದುಃಖದಿಂದ “ವಿಚ್ಛೇದನೆಯ ವಿಚಾರವನ್ನು ಮಗನಿಗೆ ತಿಳಿಸಬೇಡಿ” ಎಂದು ಮೆಲ್ಲನೆ ಹೇಳಿದಳು. ನಾನು ಅಡ್ಡಡ್ಡ ತಲೆಯಾಡಿಸಿ ಒಪ್ಪಿಗೆ ಸೂಚಿಸಿದೆ. ಮನಸ್ಸಿಗೆ ಏನೋ ಒಂದು ರೀತಿಯ ಖಿನ್ನತೆಯ ಅನುಭವವಾಯಿತು.
ಎರಡನೇ ದಿನ ನಾವು ಇನ್ನೂ ಹೆಚ್ಚು ಬಾಂಧವ್ಯದ ನಟನೆ ಮಾಡಿದೆವು. ಅವಳು ನನ್ನ ಎದೆ ಮೇಲೆ ತಲೆ ಇಟ್ಟಳು. ಅಸಹನೆಯಿಂದ ಸಹಿಸಿಕೊಂಡೆ. ನನಗೆ ಹೆಚ್ಚು ಸಮಯ ಇವಳನ್ನು ಉಳಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡೆ. ಅವಳು ಯೌವನವನ್ನು ದಾಡಿದಂತೆ ತೋಚಿತು. ಅವಳ ಕೆನ್ನೆಯ ಮೇಲೆ ಸುಕ್ಕುಗಳು ಬಿದ್ದಿದ್ದವು. ತಲೆಯ ಕೂದಲು ಕಂದು ಬಣ್ಣಕ್ಕೆ ತಿರುಗಿತ್ತು. ವಿವಾಹವು ಅವಳಿಂದ ಯೌವನವನ್ನು ಕಸಿದುಕೊಂಡಿತ್ತು.
ನಾಲ್ಕನೆಯ ದಿನ, ನಾನು ಅವಳೊಂದಿಗೆ ಹೆಜ್ಜೆ ಹಾಕುತ್ತಿದ್ದಾಗ (ನನ್ನ ಒಂದು ಕೈ ಅವಳ ಭುಜದ ಮೇಲಿತ್ತು) ಅನ್ಯೋನ್ಯತೆಯ ಭಾವವೊಂದು ಮರಳಿದಂತೆ ಭಾಸವಾಯಿತು. ತನ್ನ ಜೀವನದಿಂದ 10 ವರ್ಷಗಳನ್ನು ನನಗಾಗಿ ನೀಡಿದವಳು ಇದೇ ಮಹಿಳೆ ಎಂಬ ಗುರುತು ಪ್ರಜ್ಞೆಯು ಜಾಗೃತವಾಯಿತು. ಐದು ಮತ್ತು ಆರನೇ ದಿನ, ನಾವು ಒಟ್ಟಾಗಿ ಸೇರಿ ಈ ಮನೆಯನ್ನು ಸ್ವರ್ಗವಾಗಿಸಿದ್ದು, ಉತ್ತಮ ಸಂತಾನವನ್ನು ಪಡೆದದ್ದು ಎಲ್ಲವೂ ನೆನಪಿಗೆ ಬಂತು.
ಈ ವಿಷಯಗಳೊಂದನ್ನೂ ನಾನೂ ನನ್ನ ಪ್ರೇಯಸಿಯೊಂದಿಗೆ ಹೇಳಲಿಲ್ಲ. ನಾನು ನನ್ನ ಪತ್ನಿಯ ಕುರಿತು ನನಗರಿವಿಲ್ಲದೆಯೇ ಕಾಳಜಿ ವಹಿಸಲು ಪ್ರಾರಂಭಿಸಿದೆ. ವಿಚ್ಛೇದನಕ್ಕೆ ದಿನಗಳು ಉರುಳುತ್ತಿತ್ತು. ಮಗನು ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯುತ್ತಿದ್ದ. ನಮಗೆ ತಿಳಿಯದಂತೆಯೇ ಬದುಕು ಸಾಮಾನ್ಯವಾಗ ತೊಡಗಿತು. ನಾನು ಆಫೀಸಿಗೆ ಹೋಗುವಾಗ ಯಾವ ಬಟ್ಟೆ ಧರಿಸಬೇಕು ಎಂದು ಅವಳು ಹೇಳುತ್ತಿದ್ದಳು. ಅವಳು ದಿನಾಲೂ ಒಂದು ಬಟ್ಟೆ ಧರಿಸುತ್ತಿದ್ದಳು. ಅವಳಲ್ಲಿ ಹಲವು ಬಟ್ಟೆಗಳಿದ್ದರೂ ದಿನಗಳೆದಂತೆ ಅವೆಲ್ಲವೂ ದೊಡ್ಡದಾಯಿತು. ಅಂದರೆ ಅವಳು ತೆಳ್ಳಗಾಗ ತೊಡಗಿದಳು. ಇದು ನನ್ನನ್ನು ಗಾಬರಿಗೊಳಿಸಿತು.
ಮರುದಿನ ಅವಳು ನೋವು ಸಹಿಸುತ್ತಿದ್ದಾಳೆ ಎಂಬಂತೆ ತೋಚಿತು. ನಾನು ನಿಧಾನವಾಗಿ ಅವಳ ಹಣೆಯ ಮೇಲೆ ಕೈಯಿಟ್ಟೆ. ಅದೇ ಸಮಯ ನಮ್ಮ ಮಗ ಅಲ್ಲಿಗೆ ಬಂದನು “ಪಪ್ಪಾ ತಾಯಿಯನ್ನು ಚೆನ್ನಾಗಿ ನೋಡಿಕೋ” ಎಂದು ಕಮೆಂಟನ್ನೂ ಹೊಡೆದನು. ಅವಳು ಅವನನ್ನು ಹತ್ತಿರ ಕರೆದು ಬರಸೆಳೆದು ತಬ್ಬಿಕೊಂಡಳು. ನಾನು ನನ್ನ ಮುಖವನ್ನು ಬೇರೆಡೆಗೆ ತಿರುಗಿಸಿದೆ. ಇದನ್ನು ಕಂಡು ಕೊನೆಯ ಗಳಿಗೆಯಲ್ಲಿ ನನ್ನ ಮನಸ್ಸು ಬದಲಾದರೆ ಎಂದರೆ ಭಯವಾಯಿತು. ನಾನು ಅವಳನ್ನು ಬಳಸುತ್ತಾ ರೂಮಿನಿಂದ ಹೊರಬಂದೆ. ನಾನು ಬಿಗಿಯಾಗಿ ಹಿಡಿದಿದ್ದೆ. ಅದು ನಮ್ಮ ಮದುವೆಯ ಆರಂಭ ದಿನಗಳಂತಿತ್ತು. ಆದರೆ ಈಗ ಅವಳು ತೆಳ್ಳಗಾದುದು ನನ್ನನ್ನು ದುಃಖಕ್ಕೀಡು ಮಾಡಿತು.
ಕೊನೆಯ ದಿನ ನಾವು ಕೈ ಕೈ ಹಿಡಿದು ನಡೆಯುವಾಗ ನನ್ನ ಹೆಜ್ಜೆಯು ಭಾರವಾಗ ತೊಡಗಿತು. ಏನೋ ಅಮೂಲ್ಯವಾದ ಒಂದನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬ ಭಾವನೆ ಮೂಡಿತು. ಅಪರಾಧಿ ಭಾವವು ನನ್ನನ್ನು ಕಿತ್ತು ತಿನ್ನ ತೊಡಗಿತು. ನಾನು ಕಾರು ಚಲಾಯಿಸುತ್ತ ಬೇಗನೇ ನನ್ನ ಪ್ರೇಯಸಿಯ ಬಳಿಗೆ ಹೋದೆ. ಅವಳ ಮನೆಯ ಬಾಗಿಲನ್ನು ತಟ್ಟಿದಾಗ ಅವಳು ಬಾಗಿಲು ತೆರೆದಳು. ನನ್ನನ್ನು ಕಂಡು ಸಂತಸಪಟ್ಟಳು. ನಾನು ಅವಳೊಂದಿಗೆ ಹೇಳಿದೆ. “ಸಾರೀ ಕಣೇ. ನಾನು ನನ್ನ ಪತ್ನಿಯೊಂದಿಗೆ ವಿಚ್ಛೇದನ ಪಡೆಯುತ್ತಿಲ್ಲ” ಇದನ್ನು ಕೇಳಿದ ಅವಳು ನಿಬ್ಬೆರಗಾದಳು. ಅಯೋಮಯವಾಗಿ ನನ್ನ ಹಣೆ ಮೇಲೆ ಕೈಯಿಟ್ಟು  ಕೇಳಿದಳು “ನೀನು ಜ್ವರದಿಂದ ಬಳಲುತ್ತಿದ್ದಿಯಾ?” ನಾನು ಅವಳ ಕೈಯನ್ನು ಸರಿಸಿ ಹೇಳಿದೆ. “ ಇಲ್ಲ ಕಣೆ. ನಾನು ಹೇಳುವುದು ನಿಜ. ನನ್ನ ತಲೆ ಕೆಟ್ಟಿಲ್ಲ. ಇನ್ನು ನಾವು ಒಟ್ಟಾಗಿ ಬಾಳುತ್ತೇವೆ.”
ನನ್ನ ವೈವಾಹಿಕ ಜೀವನವು ಅವಳಿಂದಾಗಿ ಬಹುಶಃ ನೀರಸವಾಗಿರಬಹುದು. ನಾನು ಬದುಕಿನ ಮೌಲ್ಯಗಳನ್ನು ಅರ್ಥಮಾಡಿಕೊಂಡಿರಲಿಲ್ಲ. ಆದರೆ ಈಗ ನನಗೆ ಅರ್ಥವಾಗುತ್ತಿದೆ. ಮದುವೆಯಾಗಿ ಅವಳನ್ನು ಮನೆಗೆ ಕರೆತಂದಂದಿನಿಂದ ಇನ್ನು ಮರಣದ ತನಕ ಅವಳನ್ನು ಕೈಬಿಡಲಾರೆ.
ನನ್ನ ಪ್ರೇಯಸಿಯು ಬಲವಾಗಿ ನನ್ನ ಕೆನ್ನೆಗೆ ಬಾರಿಸಿದಳು. ನನ್ನನ್ನು ಬಾಗಿಲಿನಿಂದ ಹೊರ ದಬ್ಬಿದಳು. ಅವಳು ಕಣ್ಣೀರು ಸುರಿಸಿದಳು. ನನ್ನ ಪತ್ನಿಯ ಪ್ರೀತಿಯ ಮುಂದೆ ಅವಳ ಕಣ್ಣೀರು ನಗಣ್ಯವೆಂದು ತೋರಿತು. ನಾನು ಮನೆಗೆ ಮರಳಿದೆ.
ದಾರಿಯಲ್ಲಿ ಕಾರು ನಿಲ್ಲಿಸಿ ನಾನು ನನ್ನ ಪತ್ನಿಗೋಸ್ಕರ ಒಂದು ಬೊಕ್ಕೆ ಹೂವು ಖರೀದಿಸಿದೆ. ಅಂಗಡಿಯವಳು “ಅದರ ಮೇಲೆ ಏನು ಬರೆಯಲಿ” ಎಂದು ಕೇಳಿದಳು. ನಾನು ಮುಗುಳ್ನಕ್ಕು ಹೇಳಿದೆ, “ಮರಣದ ತನಕ ಪ್ರತೀ ದಿನ ನಿನ್ನ ಆರೈಕೆ ಮಾಡುತ್ತೇನೆ.” ನಾನು ಹೂವು ಹಿಡಿದುಕೊಂಡು ಮನೆಗೆ ತಲುಪಿದೆ. ಮುಖದಲ್ಲಿ ಮುಗುಳ್ನಗು ತರಲು ಮರೆಯಲಿಲ್ಲ. ನಾನು ಬಹಳ ಜತನದಿಂದ ಹೆಜ್ಜೆಯಿರಿಸುತ್ತ ಬೆಡ್‍ರೂಮಿಗೆ ಹೋದೆ. ಅವಳು ಹಾಸಿಗೆಯಲ್ಲಿ ಮಲಗಿದ್ದಳು. ನಾನು ಬಂದ ಸದ್ದು ಕೇಳಿ ಅವಳು ನೋಡಲಿಲ್ಲ. “ಏಕೆ ಚಿನ್ನಾ ಕೋಪವೇ” ಎಂದು ಅವಳು ಮಗ್ಗುಲು ಬದಲಿಸಿ ಕೇಳಿದೆ. ನನಗೆ ಆಕಾಶವೇ ಕಳಚಿಬಿದ್ದಂತಾಯಿತು. ಮೂಗಿನಿಂದ ರಕ್ತ ಹರಿದಿತ್ತು. ಮರಳಿ ಬಾರದ ಲೋಕಕ್ಕೆ ನನ್ನನ್ನು ಬಿಟ್ಟು ಒಂಟಿಯಾಗಿ ಮರಳಿದ್ದಳು.
                                                                        ...........
ಅವಳು ಒಂದು ತಿಂಗಳಿನಿಂದ ಕ್ಯಾನ್ಸರಿನಿಂದ ಬಳಲುತ್ತಿದ್ದಳು. ನಾನು ನನ್ನ ಪ್ರೇಯಸಿಯೊಂದಿಗೆ ನಿಭಿಡತೆಯಿಂದಿರುವಾಗ ಅವಳ ಈ ರೋಗದ ಕಡೆಗೆ ನನ್ನ ಗಮನವೇ ಹರಿಯಲಿಲ್ಲ. ತಾನು ಬೇಗನೇ ಮರಣ ಹೊಂದುತ್ತೇನೆ ಎಂದು ಅವಳಿಗೆ ತಿಳಿದಿತ್ತು. ಆದರೂ ತನ್ನ ಎಲ್ಲಾ ನೋವನ್ನು ಮರೆತು ನನ್ನನ್ನು ಆ ಕೆಡುಕಿನಿಂದ ತಡೆಯಲು ಪ್ರಯತ್ನಿಸಿ ಯಶಸ್ವಿಯೂ ಆಗಿದ್ದಳು. ಆದರೆ ಅದನ್ನು ಕಾಣುವ ಸೌಭಾಗ್ಯ ಅವಳಿಗೆ ದೊರೆಯಲಿಲ್ಲ. ಅಮೂಲ್ಯ ಸಂಪತ್ತು ನನ್ನ ಕೈಯಲ್ಲಿತ್ತು. ಅವರ ಕುರಿತು ನನಗೆ ಪ್ರಜೆ ಇರಲಿಲ್ಲ. ಅದರ ಮೌಲ್ಯವು ಮನವರಿಕೆಯಾಗುವಾಗ ಅದು ನನ್ನಿಂದ ದೂರವಾಯಿತು. ಈಗ ನನಗೆ ಕಣ್ಣೀರೇ ಗತಿಯಾಯಿತು. ಹಣ, ಸಂಪತ್ತು, ಅಂತಸ್ತು, ಅಧಿಕಾರ ಎಲ್ಲವೂ ಪತ್ನಿಯ ಪ್ರೀತಿಯ ಮುಂದೆ ಕ್ಷುಲ್ಲಕ ಎಂಬ ಮಾತು ಎಷ್ಟು ನಿಜ ಅಲ್ಲವೇ?
(ಸತ್ಯ ಆಧಾರಿತ ಕಥೆ)
ಸಂಗ್ರಹ: ಇಮ್ತಿಯಾಝ್ ಪೆರ್ಲ

No comments:

Post a Comment