Wednesday 25 September 2013

`ಈಜಿಪ್ಟ್' ಪ್ರಜಾಪ್ರಭುತ್ವಕ್ಕೆ ಜಯವಾಗಲಿ



ಈಜಿಪ್ಟ್ ಒಂದು ಪುರಾತನ ದೇಶ. ಹಲವಾರು ನಾಗರಿಕತೆಗಳು, ವೈವಿಧ್ಯಮಯ ಸಂಸ್ಕøತಿಗಳು ಹಾಗೂ ವಿವಿಧ ರೀತಿಯ ಘಟನೆಗಳಿಗೆ ಸಾಕ್ಷಿಯಾದ ದೇಶ. ಈ ದೇಶಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಈ ಪುಣ್ಯಭೂಮಿಗೆ ಹಲವು ಪ್ರವಾದಿಗಳು ಬಂದು ಹೋಗಿದ್ದಾರೆ. ಹಿಂದಿನಿಂದಲೂ ಸುದ್ದಿಯಲ್ಲಿರುವ ಈ ದೇಶವು ಇಂದೂ ಕೂಡಾ ಜಗತ್ತಿನ ಗಮನ ಸೆಳೆಯುತ್ತಿದೆ. ಹಲವಾರು ರಾಜರುಗಳ ದಬ್ಬಾಳಿಕೆಗೂ ಉತ್ತಮ ಆಡಳಿತಗಾರರ ಸಮೃದ್ಧ ಆಳ್ವಿಕೆಗೂ ಈ ದೇಶವು ಭೂಮಿಕೆಯಾಗಿದೆ. ಇಲ್ಲಿನ ಜನತೆಯ ಸ್ಥಿತಿಯೂ ಭಿನ್ನವಲ್ಲ.
ಆದರೆ ಈ ದಬ್ಬಾಳಿಕೆಗಳಾವುದೂ ಹೆಚ್ಚು ಕಾಲ ಬಾಳಿಕೆ ಬರುತ್ತಿರಲಿಲ್ಲ. ವ್ಯಕ್ತಿಗಳ ರೂಪದಲ್ಲೂ ಸಂಘಟನೆಗಳ ರೂಪದಲ್ಲೂ ಅಲ್ಲಿನ ಜನತೆಗೆ ನ್ಯಾಯ ಒದಗಿಸಲು ಒಳಿತಿನ ಶಕ್ತಿಗಳು ಉದ್ಭವಗೊಳ್ಳುತ್ತಿದ್ದವು. ಅಂದು ಫಿರ್‍ಔನನ ದಬ್ಬಾಳಿಕೆಗೆ ಒಳಗಾಗಿದ್ದ ಜನತೆಯನ್ನು ರಕ್ಷಿಸಲು ಮೂಸಾ(ಅ) ಆತನ ಅರಮನೆಯಲ್ಲೇ ಬೆಳೆದು ಬಂದಿದ್ದರು. ಫಿರ್‍ಔನನ ಕೆಡುಕಿಗೂ ಪ್ರವಾದಿ ಮೂಸಾರ(ಅ) ಒಳಿತಿಗೂ ಮಧ್ಯೆ ನಡೆದ ನಿರಂತರ ಸಂಘರ್ಷದಲ್ಲಿ ಕೊನೆಗೆ ಮೇಲುಗೈ ಸಾಧಿಸಿದ್ದು ಒಳಿತೇ ವಿನಃ ಕೆಡುಕಲ್ಲ. ಇದರ ಫಲವಾಗಿ ಕೆಡುಕಿನ ಶಕ್ತಿಗಳಿಗೆ ನಾಶ ಖಚಿತ ಎಂದು ಸಾರಿ ಹೇಳಲು ಫಿರ್‍ಔನನ ಜಡ ಶರೀರವು ಇಂದೂ ಈಜಿಪ್ಟಿನ ಮ್ಯೂಝಿಯಮ್‍ನಲ್ಲಿದೆ. ಎಲ್ಲಾ ದುರಾಡಳಿತಗಾರರಿಗೂ "ಮುಂದೊಂದು ದಿನ ನಿಮಗೆ ನಾಶ ಖಚಿತ" ಎಂಬ ಮೆಸೇಜ್ ರವಾನಿಸುತ್ತಿದೆ.
ಹಿಂದೆ ನಡೆದ ಫಿರ್‍ಔನನ ದಬ್ಬಾಳಿಕೆಯು ಇಂದು ಆಧುನಿಕ ರೂಪದಲ್ಲಿ ಈಜಿಪ್ಟಿನಲ್ಲಿ ನಡೆಯುತ್ತಿದೆ. ಈಗ ಮುಸ್ಲಿಮ್ ಬ್ರದರ್‍ಹುಡ್ (ಇಖ್ವಾನುಲ್ ಮುಸ್ಲಿಮೂನ್) ಅಲ್ಲಿನ ಜನತೆಗೆ ನ್ಯಾಯ ಒದಗಿಸಿಕೊಡಲು ಪ್ರಯತ್ನಿಸುತ್ತಿದೆ. ಜನತೆಯ ಕ್ಷೇಮಕ್ಕಾಗಿ ಜೀವವನ್ನೂ ಸಂಪತ್ತನ್ನೂ ತ್ಯಾಗ ಮಾಡುತ್ತಿದೆ. ಮುಸ್ಲಿಮ್ ಬ್ರದರ್‍ಹುಡ್ ಸಂಘಟನೆಯು ಹುಟ್ಟಿಕೊಂಡದ್ದು 1928ರಲ್ಲಾಗಿತ್ತು. ಅದು ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ರಂಗಗಳಲ್ಲಿ ತನ್ನ ಕೈಲಾದ ಕೆಲಸ ನಿರ್ವಹಿಸುತ್ತಿದೆ. ಅಧ್ಯಾಪಕರಾದ ಹಸನುಲ್ ಬನ್ನ ಇದರ ಸ್ಥಾಪಕ ನೇತಾರರಾಗಿದ್ದಾರೆ. ಬೆರಳೆಣಿಕೆಯ ಮಂದಿಯೊಂದಿಗೆ  ಆರಂಭಗೊಂಡ ಈ ಸಂಘಟನೆಯು ಇಂದು ಬೃಹತ್ ಸದಸ್ಯ ಕೂಟವನ್ನು ಹೊಂದಿದೆ. ಈ ಸಂಘಟನೆಯನ್ನು ನಾಮಾವೇಶಗೊಳಿಸುವ ಹಲವಾರು ಪ್ರಯತ್ನಗಳು ಸ್ವೇಚ್ಛಾದಿಪತಿಗಳಾದ ಹಲವಾರು ಆಡಳಿತಗಾರರಿಂದ ನಡೆದಿದೆ. ಆದರೆ ಒಳಿತಿನ ಬೆಳವಣಿಗೆಯ ಚಲನೆಯನ್ನು ನಿಧಾನಗೊಳಿಸಬಹುದೇ ವಿನಃ ಅದನ್ನು ನಾಶಪಡಿಸಲು ಸಾಧ್ಯವಿಲ್ಲ ಎಂಬುದನ್ನು ಆ ದುಷ್ಟ ಶಕ್ತಿಗಳು ಅರಿತಿರಲಿಲ್ಲ. ಆ ಸಂಘಟನೆಯ ಹಲವಾರು ನಾಯಕರು ದುಷ್ಟರ ಕುತಂತ್ರಗಳಿಗೂ, ಆಕ್ರಮಣಗಳಿಗೂ ಬಲಿಯಾದರು. ಓರ್ವ ನೇತಾರನ ಅಂತ್ಯವಾದರೆ ಇನ್ನೋರ್ವ ಸಮರ್ಥ ನಾಯಕನ ಉದಯವು ಈ ಸಂಘಟನೆಯ ವಿಶೇಷತೆಯಾಗಿದೆ. ಈ ಸಂಘಟನೆಯು ಹಲವಾರು ಬಾರಿ ನಿಷೇಧಕ್ಕೆ ಒಳಗಾಗಿದೆ. ಏನೇ ಮಾಡಿದರೂ ಬಗ್ಗದ ಈ ಸಂಘಟನೆಯು ದುಷ್ಟ ಆಡಳಿತಗಾರರಿಗೆ ಇಂದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇಂದು ಈಜಿಪ್ಟಿನಲ್ಲಿ ಶೇಕಡಾ 51ರಷ್ಟು ಮತ ಪಡೆದವರು ಜೈಲಿನಲ್ಲೂ 1.5 ಶೇಕಡಾ ಮತ ಪಡೆದವರು ಅಧಿಕಾರದಲ್ಲಿ ಮೆರೆಯುವ ಆಘಾತಕಾರಿ ಪರಿಸ್ಥಿತಿ ನಿರ್ಮಾಣಗೊಂಡಿದೆ. ಜನರು ಸ್ವ ಇಚ್ಛೆಯೊಂದಿಗೆ ಆರಿಸಿದ ಬ್ರದರ್‍ಹುಡ್‍ನ ಮುಹಮ್ಮದ್ ಮುರ್ಸಿಯವರನ್ನು ಸೇನೆಯು ಬಲವಂತದಿಂದ ಕೆಳಗಿಳಿಸಿ ಅಧಿಕಾರಕ್ಕೇರಿದೆ. ಈ ಕೃತ್ಯವು ಕೇವಲ ಸೇನೆಯಿಂದ ಮಾತ್ರ ನಡೆದದ್ದಲ್ಲ. ಬದಲಾಗಿ ಹೊರಗಿನ ಶಕ್ತಿಗಳು ಇದಕ್ಕಾಗಿ ಕೆಲಸ ಮಾಡಿದೆ. ಮುರ್ಸಿಯವರ ಸರಕಾರವನ್ನು ಬುಡಮೇಲು ಗೊಳಿಸಿದಾಗ ಅಮೇರಿಕಾವು "ಈ ಕೃತ್ಯದ ಹಿಂದೆ ನಮ್ಮ ಕೈವಾಡವಿಲ್ಲ" ಎಂದು ಹೇಳಿಕೆ ನೀಡಿತ್ತು. ಆದರೆ ಕೆಲ ದಿನಗಳ ನಂತರ ಅಲ್ಲಿ ಸೇನೆಗೆ ಅಮೇರಿಕಾವು ರಹಸ್ಯವಾದ ಆರ್ಥಿಕ ನೆರವು ನೀಡಿದ ವಿಷಯವು ಬಹಿರಂಗಗೊಂಡು ಅಮೇರಿಕಾವು ನಾಚಿಕೆಗೀಡಾಯಿತು.
ಈ ಸೇನಾ ಬುಡಮೇಲು ಕೃತ್ಯದ ವಿರುದ್ಧ ಆರಂಭದಲ್ಲಿ ಧ್ವನಿ ಎತ್ತಿದ ಇರಾನ್ ಬಳಿಕ ಮೌನ ತಾಳಿತು. ಹಲವು ಮುಸ್ಲಿಮ್ ರಾಷ್ಟ್ರಗಳ ಈ ಬೆಳವಣಿಗೆಯನ್ನು ಖಂಡಿಸಿದರೂ ಸೌದಿ ಹಾಗೂ ಯು.ಎ.ಇ. ಬಹಿರಂಗವಾಗಿ ಸೇನಾಡಳಿತವನ್ನು ಬೆಂಬಲಿಸಿದವು. ಸೌದಿಯ ಈ ವರ್ತನೆಗೆ ಕಾರಣವೂ ಇತ್ತು. ಸೌದಿಯಲ್ಲಿ ರಾಜರ ಆಳ್ವಿಕೆ ನಡೆಯುತ್ತಿದೆ. ಇದು ಶತಮಾನಗಳಿಂದ ಮುಂದುವರಿಯುತ್ತಾ ಬಂದಿದೆ. ಈಜಿಪ್ಟಿನ ಪ್ರಜಾಪ್ರಭುತ್ವದ ಆಳ್ವಿಕೆಯನ್ನು ಕೊನೆಗಾಣಿಸದಿದ್ದರೆ ನಮ್ಮ ಗದ್ದುಗೆಗೆ ಕುತ್ತು ಬೀಳುವುದು ಇಲ್ಲಿನ ಜನತೆ ದಂಗೆ ಎದ್ದಾರು ಎಂದು ಕಳವಳಗೊಂಡಿತು. ಆದ್ದರಿಂದ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕಲು ಸೇನೆಗೆ ನೆರವು ನೀಡಿತು.
ಆದರೆ ಈಗ ಸೌದಿಯಲ್ಲೂ ದಂಗೆಯ ವಾಸನೆಯು ಬೀಸ ತೊಡಗಿದೆ. ಇದರಿಂದ ಸೌದಿಯು ಭಯಭೀತಗೊಂಡಿದೆ. ಆರಂಭದ ಸರಕಾರದ ವಿರುದ್ಧ ಸೆಟೆದು ನಿಂತಿರುವುದು ಸಾಮಾನ್ಯ ಮಂದಿಯಾಗಿದ್ದರೆ ಸೌದಿಯು ಅದನ್ನು ಯಾವಾಗಲೇ ದಮನಿಸಿರುತ್ತಿತ್ತು. ಖಾಲಿದ್ ಬಿನ್ ಫರ್ಹಾನ್ ಎಂಬ ರಾಜ ಕುಮಾರನೇ ಸರಕಾರದ ನೀತಿಗಳ ವಿರುದ್ಧ ಸೆಟೆದು ನಿಂತದ್ದು ಸೌದಿಗೆ ತಲೆನೋವಾಗಿ ಪರಿಣಮಿಸಿದೆ. ಸೌದಿಯ ಜನತೆಯು ಜಗತ್ತಿನ ಬೆಳವಣಿಗೆಯನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಂತಹ ಬದಲಾವಣೆಗಳು ನಮ್ಮಲ್ಲೂ ಬರಬೇಕು ಎಂದು ಸೌದಿಯ ಜನತೆಯು ಯೋಚಿಸಿದರೆ ಮತ್ತೆ ಅಲ್ಲಿ ರಾಜರ ಆಳ್ವಿಕೆಗೆ ಉಳಿಗಾಲವಿರಲಿಕ್ಕಿಲ್ಲ. ಆದ್ದರಿಂದಲೇ ಸೌದಿ ಸರಕಾರವು ವಿದೇಶಿಗಳನ್ನು ಹೊರಗಟ್ಟಿ ಅಲ್ಲಿನ ಜನರಿಗೆ ಉದ್ಯೋಗ ಕೊಡಿಸಲು ಮುಂದಾಗಿದೆ.
ಅಮೇರಿಕಾವು ಕಪಟತನ ತೋರುತ್ತಿದೆ. ತುರ್ಕಿಯಲ್ಲಿ ಉರ್ದುಗಾನ್ ಮದ್ಯವನ್ನು ನಿಷೇಧಿಸಿದಾಗ ಜನರು ಇಸ್ತಾಂಬುಲಿನಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನಾಕಾರರಿಗೆ ಅಮೇರಿಕಾವು ಬಹಿರಂಗವಾಗಿ ಬೆಂಬಲ ನೀಡಿತ್ತು. ಆದರೆ ಈಜಿಪ್ಟಿನ ರಾಬಿಯಾ ಅದವಿಯ್ಯ ಸೇರಿ ಮೂರು ಸ್ಕ್ವಾರ್‍ಗಳಲ್ಲಿ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಮಂದಿ ರಾತ್ರಿ-ಹಗಲೆನ್ನದೆ ಪ್ರಜಾಪ್ರಭುತ್ವಕ್ಕಾಗಿ ಪ್ರತಿಭಟನೆ ನಡೆಸಿದಾಗ ಅಮೇರಿಕಾವು ಅವರಿಗೆ ಒಮ್ಮೆಯೂ ಬೆಂಬಲ ನೀಡಿಲ್ಲ.
ಯೂರೋಪಿಯನ್ ರಾಷ್ಟ್ರಗಳ ಪೈಕಿ ಜರ್ಮನಿಯು ಮುರ್ಸಿಯವರ ಪರವಾಗಿ ಧ್ವನಿ ಎತ್ತಿತ್ತು. ಈಜಿಪ್ಟಿನ ಹುಸ್ನಿ ಮುಬಾರಕ್‍ರ ಕೈಗೊಂಬೆಗಳಾದ ಪತ್ರಿಕೆಗಳು ಮುರ್ಸಿಯವರನ್ನು ಹಿಟ್ಲರ್‍ನಿಗೆ ಹೋಲಿಸಿತು. 60 ಲಕ್ಷದಷ್ಟು ಯಹೂದಿಯರನ್ನು ಕೊಂದ ಹಿಟ್ಲರ್‍ನಿಗೂ ಯಾವುದೇ ನಿರಪರಾಧಿಯ ಹಕ್ಕುಗಳನ್ನು ದಮನಿಸದ ಮುರ್ಸಿಯವರಿಗೂ ಯಾವ ಹೋಲಿಕೆ ಎಂದು ಜರ್ಮನಿ ಕುಹಕವಾಡಿತು.

ಹಲವಾರು ವಿಶೇಷ ವ್ಯಕ್ತಿಗಳು ಪ್ರತಿಭಟನೆ ನಡೆಯುತ್ತಿದ್ದ ಸ್ಕ್ವಾರ್‍ಗಳಿಗೆ ಭೇಟಿ ನೀಡಿದ್ದರು. ಅಲ್ಲಿನ ಜನರಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದರು. ಪತ್ರಿಕೆಗಳ ವರ್ತನೆಗಳಿಂದಾಗಿ ಹಲವರು ಬೇಸತ್ತು ಹೋಗಿದ್ದರು. ಪತ್ರಿಕೆಗಳು ಇಲ್ಲದ ವಾರ್ತೆಗಳನ್ನು ಸೃಷ್ಟಿಸಿ ದಿನ ಬೆಳಗಾಗುವುದರೊಳಗೆ ಈಜಿಪ್ಟಿನ ಕುರಿತ ಜಗತ್ತಿನ ದೃಷ್ಟಿಕೋನವನ್ನೇ ಬದಲಿಸುತ್ತಿದ್ದವು. ಕ್ರಿಸ್ಪನ್ ಬ್ಲೆಂಟ್ ಈಜಿಪ್ಟಿನ ಪತ್ರಿಕೆಗಳ ಕುರಿತು "ಆಕ್ರಮಣಕಾರಿ ವಾರ್ತೆಗಳೊಂದಿಗೆ ಪ್ರಭಾತದಲ್ಲಿ ಹಾಜರಾಗುವ ದರೋಡೆಕೋರರು" ಎಂದು ಹೇಳಿದ್ದಾರೆ. ಮುರ್ಸಿಯವರು ಅಧಿಕಾರಕ್ಕೆ ಏರಿದಾಗ ಪತ್ರಿಕೆಗಳಿಗೆ ಅವರು ಸ್ವಾತಂತ್ರ್ಯ ನೀಡಿದ್ದರು. ಆದರೆ ಇದೇ ಅವರಿಗೆ ಕುತ್ತಾಯಿತು. ಪತ್ರಿಕೆಗಳು ಮುರ್ಸಿಯವರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನೆಲ್ಲಾ ಹೊರಿಸಿ ಅವರು ಅಧಿಕಾರದಿಂದಿಳಿಯುವಂತೆ ಮಾಡಿದವು.
ದುಷ್ಟ ಶಕ್ತಿಗಳಿಗೆ ಮುರ್ಸಿಯವರು ಬೇಡವಾಗಿದ್ದರು. ಅರಬ್ ವಸಂತದ ಭಾಗವಾಗಿ ನಡೆಯುತ್ತಿದ್ದ ಬೆಳವಣಿಗೆಗಳನ್ನು ಹೊಸಕಿ ಹಾಕುವ ನಿಟ್ಟಿನಲ್ಲಿ ಅಮೇರಿಕಾ ಹಾಗೂ ಯೂರೋಪ್‍ನ ಕೆಲವು ರಾಷ್ಟ್ರಗಳು ಸೇರಿ ಈಜಿಪ್ಟಿನಲ್ಲಿ ಸೇನಾ ಬುಡಮೇಲು ಕೃತ್ಯವನ್ನು ಆಯೋಜಿಸಿದ್ದವು. ಮುರ್ಸಿಯವರು ಅಧಿಕಾರಕ್ಕೇರಿದಾಗ ಕೇವಲ ದೂರವಾಣಿ ಮೂಲಕ ಅಭಿನಂದಿಸಿದವರು ಬಳಿಕ ಸೇನೆಯು ಆಡಳಿತಕ್ಕೇರಿದಾಗ ನೇರವಾಗಿ ಈಜಿಪ್ಟಿಗೆ ಬಂದು ಅಭಿನಂದನೆ ಸಲ್ಲಿಸಿದ್ದರು. ಸೇನೆಯ ಬುಡಮೇಲು ಕೃತ್ಯ ನಡೆಸುವುದಕ್ಕಿಂತ ಮುಂಚೆ ಹೊರಗಿನ ಶಕ್ತಿಗಳ ನೆರವಿನೊಂದಿಗೆ ಅದಕ್ಕಿರುವ ತಯಾರಿಗಳನ್ನು ತೆರೆಮರೆಯಲ್ಲಿ ನಡೆಸಿತ್ತು. ಮುರ್ಸಿಯವರ ಆಡಳಿತ ಕಾಲದಲ್ಲಿ ಸೇನೆಯು ಕೃತಕ ಬರಗಾಲವನ್ನು ಸೃಷ್ಟಿಸಿತ್ತು. ಆರ್ಥಿಕವಾಗಿ ಶೇಕಡಾ 48ರಷ್ಟು ನಿಯಂತ್ರಣ ಹೊಂದಿರುವ ಸೇನೆಯು ಆಹಾರ ಸಾಮಗ್ರಿಗಳನ್ನು ತಡೆ ಹಿಡಿದಿತ್ತು. ಆಗ ಜನರು ಸರಕಾರದ ವಿರುದ್ಧ ದಂಗೆ ಎದ್ದರು. ಬಳಿಕ ಎಲ್ಲವೂ ಸೇನೆಗೆ ಅನುಕೂಲಕರವಾಗಿ ನಡೆಯಿತು. ಆದರೆ ಈಗ ಅಲ್ಲಿನ ಜನರಿಗೆ ಆಹಾರದ ಕೊರತೆಯಿಲ್ಲ. ಆಹಾರ ಸಾಮಗ್ರಿಗಳಿಗೆ ಬೆಲೆ ಕಡಿಮೆಯಾಗಿದೆ. ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲಾಗಿದೆ. ಇವೆಲ್ಲವೂ ಸೇನೆಯ ವಿರುದ್ಧದ ಸಾಮಾನ್ಯ ಜನರ ರೋಷವನ್ನು ತಾತ್ಕಾಲಿಕವಾಗಿ ದಮನಿಸಿದೆ.
ಇಂದು ಈಜಿಪ್ಟಿನಲ್ಲಿ ಹಲವಾರು ಮಂದಿ ಮುರ್ಸಿಯವರನ್ನೇ ಬಯಸುತ್ತಿದ್ದಾರೆ. ಅದಕ್ಕಾಗಿ ಮಹಿಳೆಯರು ಮಕ್ಕಳು ಎಂಬ ಬೇಧವಿಲ್ಲದೆ ಹಗಲು ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸೇನೆಯ ದುರಾಕ್ರಮಣಗಳಿಗೆ ಹಲವಾರು ಮಂದಿ ಜೀವ ತೆತ್ತಿದ್ದಾರೆ. ಮರಳಿ ಬರುತ್ತೇವೆ ಎಂಬ ಯಾವುದೇ ಖಾತ್ರಿಯಿಲ್ಲದೆ ತಾಯಿ ಮಕ್ಕಳು ಮನೆಯಿಂದ ಹೊರಟು ಬಂದಿದ್ದಾರೆ. ಪ್ರತಿಭಟನೆಯಲ್ಲಿ ಬ್ರದರ್‍ಹುಡ್‍ನ ನೇತಾರರ ಮಕ್ಕಳೂ ಪತ್ನಿಯರೂ ಭಾಗವಹಿಸಿದ್ದಾರೆ. ಅಲ್ಲಿ ಮೇಲು ಕೀಳು ಎಂಬ ಭಾವನೆ ಇಲ್ಲ. ಅಲ್ಲಿ ಮುಖ್ಯವಾಗಿರುವುದು ಪ್ರಜಾಫ್ರಭುತ್ವದ ಮರಳಿಕೆ ಮಾತ್ರ.
ರಾಬಿಯಾ ಅದವಿಯ್ಯದಲ್ಲಿ ಪ್ರತಿಭಟನೆಯ ವೇಳೆ ಹುತಾತ್ಮೆಯಾದ ತನ್ನ ಮುದ್ದಿನ ಮಗಳಿಗೆ ಮುಸ್ಲಿಮ್ ಬದ್ರರ್‍ಹುಡ್ ನೇತಾರರಾದ ಮುಹಮ್ಮದ್ ಅಲ್ ಬಲ್‍ದಗಿ ಪತ್ರ ಹೀಗಿದೆ. "ನನ್ನ ಮುದ್ದಿನ ಮಗಳೇ ದುಃಖದಿಂದ ನಿನಸಗೆ ಬೀಳ್ಕೊಡುವುದರ ಬದಲಾಗಿ ನಾಳೆ ಭೇಟಿಯಾಗೋಣ ಎನ್ನುತ್ತೇವೆ. ದುಷ್ಟರ ದುರಾಕ್ರಮಣಗಳಿಗೆ ನೀನು ಧೈರ್ಯದಿಂದ ಎದೆಯೊಡ್ಡಿ ನಿಂತೆ.
ರಾಬಿಯ ಅದವಿಯ್ಯದಲ್ಲಿ ನಾವು ಭೇಟಿಯಾದಾಗ, "ಒಂದೇ ಸ್ಕ್ವಾರ್‍ನಲ್ಲಿದ್ದರೂ ನಾವು ಬಹಳ ದೂರವಾಗಿದ್ದೇವೆ" ಎಂದು ನೀನು ಹೇಳಿದೆಯಲ್ಲವೇ. "ಮಗಳೇ ನಮಗೆ ಅನ್ಯೋನ್ಯವಾಗಿ ಪರಸ್ಪರ ಮಾತನಾಡಲು ಈ ಜೀವನದಲ್ಲಿ ಸಮಯ ಸಿಕ್ಕಿಲ್ಲ. ಆದ್ದರಿಂದ ನಮಗೆ ಸ್ವರ್ಗ ನೀಡಲು ನಾನು ಅಲ್ಲಾಹನೊಂದಿಗೆ ಪ್ರಾರ್ಥಿಸುತ್ತೇನೆ. ನಮಗೆ ಮಾತನಾಡಲು ಅಲ್ಲಿ ಬೇಕಾದಷ್ಟು ಸಮಯ ಸಿಗಬಹುದಲ್ಲವೇ". ಓ ನನ್ನ ಮುದ್ದಿನ ಗಿಣಿಯೇ, ಕೊನೆಯದಾಗಿ ನಾನು ನಿನ್ನನ್ನು ಬೀಳ್ಕೊಡುತ್ತಿಲ್ಲ. ನಾಳೆ ಸ್ವರ್ಗದಲ್ಲಿ ಭೇಟಿಯಾಗೋಣ. ಸ್ವರ್ಗದ ಕೌಸರ್ ಸರೋವರದ ಬಳಿ ಪ್ರವಾದಿಯವರು(ಸ) ಮತ್ತು ಅವರ ಅನುಯಾಯಿಗಳೊಂದಿಗೆ ವಿಹರಿಸೋಣ. ನಾನೂ ನಿನ್ನೊಂದಿಗೆ ಸೇರಿಕೊಳ್ಳುತ್ತೇನೆ. ನನಗಾಗಿ ಕಾಯುತ್ತಿರು."
ಇಂತಹ ಎಷ್ಟೋ ಹೆಣ್ಣು ಮಕ್ಕಳು ಪ್ರಾಣ ತೆತ್ತಿದ್ದಾರೆ. ಹಲವಾರು ಕನಸುಗಳನ್ನು ಹೊತ್ತವರು ಪ್ರತಿಭಟನೆಗಾಗಿ ಹೊರಟು ದೇವ ಮಾರ್ಗದಲ್ಲಿ ಹುತಾತ್ಮರಾಗಿದ್ದಾರೆ. ಇಲ್ಲಿ ಇನ್ನೂ ಕೂಡಾ ಹುತಾತ್ಮರ ಸಂಖ್ಯೆ ಹೆಚ್ಚಬಹುದು. ಬ್ರದರ್‍ಹುಡ್‍ನ ಹೋರಾಟಗಾರರಿಗೆ ಮರಣದ ಭಯವಿಲ್ಲ. ಬಳಿ ನಿಂತವರು ಗುಂಡೇಟಿಗೆ ಧರೆಗುರುಳುವಾಗಲೂ ಅವರ ಪಾದವು ಕಂಪನಗೊಂಡಿಲ್ಲ. ಹುತಾತ್ಮರಿಗೆ ಅಲ್ಲಾಹನು ನೀಡುವ ಪ್ರತಿಫಲವನ್ನು ಅವರು ತಿಳಿದುಕೊಂಡಿದ್ದಾರೆ. ಅವರು ಕುರ್‍ಆನನ್ನು ನಮ್ಮಂತೆ ಓದಿದ್ದಲ್ಲ. ಬದಲಾಗಿ ಅದರ ಆಳಕ್ಕಿಳಿದು ಮನವರಿಕೆ ಮಾಡಿದ್ದಾರೆ. ಸುಮ್ಮನೆ ಕುಳಿತರೆ ಸ್ವರ್ಗ ಪ್ರಾಪ್ತಿ ಅಸಾಧ್ಯ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ಅಲ್ಲಾಹನು ಪ್ರಶ್ನಿಸುತ್ತಾನೆ, "ನೀವು ನಿರಾಯಾಸವಾಗಿ ಸ್ವರ್ಗವನ್ನು ಪ್ರವೇಶಿಸುವಿರೆಂದು ಭಾವಿಸಿರುವಿರಾ? ವಸ್ತುತಃ ನಿಮ್ಮಲ್ಲಿ ಯಾರೆಲ್ಲಾ ಅಲ್ಲಾಹನ ಮಾರ್ಗದಲ್ಲಿ ಹೋರಾಟ ನಡೆಸುವವರು. ಅದಕ್ಕಾಗಿ ಸಹನೆ ಪಡುವವರು ಇದ್ದಾರೆಂದು ಅವನು ಇನ್ನೂ ಕಾಣಲೇ ಇಲ್ಲ." (3: 142)
ಅವರೊಡನೆ ಹೇಳಿರಿ, "ನೀವು ಮರಣ ಅಥವಾ ಹತ್ಯೆಯನ್ನು ಹೆದರಿ ಓಡುವುದಿದ್ದರೆ ನಿಮ್ಮ ಈ ಪಲಾಯನವು ನಿಮಗೇನೂ ಫಲಕಾರಿಯಾಗದು. ಆ ಬಳಿಕ ನಿಮಗೆ ಜೀವನದ ಸುಖವನ್ನು ಅನುಭವಿಸಲು ಅಲ್ಪಕಾಲ ಮಾತ್ರವೇ ಅವಕಾಶ ಸಿಗುವುದು." (33: 16)
ದಬ್ಬಾಳಿಕೆ ನಡೆಸಿದವರು ಇತಿಹಾಸದಲ್ಲಿ ಕೆಟ್ಟ ಹೆಸರಿನಿಂದಲೇ ಗುರುತಿಸಿಕೊಳ್ಳುತ್ತಾರೆ. ಅವರಿಗೆ ಜನರ ಶಾಪವನ್ನು ಮಾತ್ರಗಳಿಸಲು ಸಾಧ್ಯ. ಇತಿಹಾಸದ ಪುಟಗಳನ್ನು ತಿರುವಿದರೆ ಅದಕ್ಕೆ ಹಲವಾರು ಪುರಾವೆಗಳು ಲಭಿಸಬಹುದು. ಹಲವಾರು ಪ್ರವಾದಿಗಳ ಜೀವನವೇ ಅದಕ್ಕೆ ಸಾಕ್ಷಿಯಾಗಿದೆ. ಹೆಚ್ಚೇಕೆ, ಫಿರ್‍ಔನ್‍ನೇ ಅದಕ್ಕೆ ಜ್ವಲಂತ ಸಾಕ್ಷಿಯಾಗಿ ಇಂದು ಈಜಿಪ್ಟಿನಲ್ಲೇ ಪ್ರದರ್ಶಿತಗೊಳ್ಳುತ್ತಿದ್ದಾನೆ. ಎಂದು ಕೂಡಾ ಕೆಡುಕು ಹೆಚ್ಚು ಕಾಲ ಬಾಳ್ವಿಕೆ ಬರುವುದಿಲ್ಲ. ಕೆಡುಕಿನ ಅಂಧಕಾರವನ್ನು ಸೀಳುತ್ತಾ ಒಳಿತಿನ ಕಿರಣಗಳು ಖಂಡಿತವಾಗಿಯೂ ಪ್ರತ್ಯಕ್ಷಗೊಳ್ಳುವುದು. ಅದಕ್ಕಾಗಿರುವ ಪ್ರಯತ್ನದ ಹಾದಿಯಲ್ಲಿ ಹಲವಾರು ತೊಡಕುಗಳು ಎದುರಾಗಬಹುದು. ದೌರ್ಜನ್ಯ, ಅಕ್ರಮಗಳನ್ನು ಸಮರ್ಥವಾಗಿ ಎದುರಿಸದೆ ಒಳಿತಿನ ಉದಯಕ್ಕೆ ಬೇರೆ `ಶಾರ್ಟ್ ಕಟ್'ಗಳಿಲ್ಲ. ಈಜಿಪ್ಟಿನ ಪ್ರಜಾಪ್ರಭುತ್ವ ಪ್ರಿಯ ಜನರು ಅದನ್ನೇ ಮಾಡುತ್ತಿದ್ದಾರೆ.


Thursday 25 April 2013

ತಾಯಿ ಕಥೆ



ಮಕ್ಕಳಿಗೆ ತಂದೆಯೊಂದಿಗೆ ಮಾತನಾಡಲು ಭಯ . ಅವರ ಎಲ್ಲಾ ಬೇಡಿಕೆಗಳನ್ನು ತಾಯಿಗೆ ತಿಳಿಸುತ್ತಿದ್ದರು .ತಾಯಿ ತಂದೆಗೆ ತಿಳಿಸುತ್ತಿದ್ದಳು . ತಾಯಿ ಮಕ್ಕಳ ಪ್ರತಿನಿಧಿಯಂತಿದ್ದಳು . ಒಂದು ದಿನ ತಾಯಿ ಮರಣ ಹೊಂದಿದಳು . ಅದರೊಂದಿಗೆ ಮಕ್ಕಳ ಬೇಡಿಕೆಗಳೂ ನಿಂತವು .

Sunday 21 April 2013

ಅಡುಗೆ ತಯಾರಿ


ಬೆಳಿಗ್ಗೆ ಆಫೀಸಿಗೆ ಹೊರಡುವಾಗ “ಮಧ್ಯಾಹ್ನದ ಬಳಿಕ ರಜೆ ಹಾಕಬೇಕು” ಎಂಬ ಕಟ್ಟಾಜ್ಞೆಯನ್ನು ನನ್ನ ಮುದ್ದಿನ ಪತ್ನಿ ಶಮಾ ನೀಡಿದ್ದಳು. ಅದಕ್ಕೆ ಕಾರಣವೂ ಇತ್ತು. ರಾತ್ರಿ ಮನೆಯಲ್ಲಿ ಔತಣಕೂಟ ಏರ್ಪಾಟಾಗಿತ್ತು. ಗಲ್ಫ್‍ನಿಂದ ಬಂದ ಅವಳ ಅಣ್ಣ ಮತ್ತು ಆತನ ಪತ್ನಿ, ಮಕ್ಕಳು ಬರುವವರಿದ್ದರು. ಗಲ್ಫ್‍ನಲ್ಲೇ ಮನೆ ಮಾಡಿಕೊಂಡಿದ್ದ ಅವರು ಮಕ್ಕಳ ರಜೆಯ ಪ್ರಯುಕ್ತ ಊರಿಗೆ ಬಂದಿದ್ದರು.
ನಾನು ಬೆಳಿಗ್ಗೆ ಆಫೀಸಿಗೆ ತಲುಪಿ ಮಧ್ಯಾಹ್ನ ಮರಳುವುದಕ್ಕಿಂತ ಮುಂಚೆ ಏಳು ಬಾರಿ ಫೋನ್ ಮಾಡಿದ್ದಳು. ನನಗೆ ಮರೆವು ಸ್ವಲ್ಪ ಹೆಚ್ಚಾಗಿರುವುದರಿಂದ ಅವಳು ಆ ತರಹ ಕಾಲ್ ಮಾಡಿದ್ದಳು. ಪ್ರತೀ ಫೋನ್  ಕಾಲ್‍ಗಳು ಕೊನೆಗೊಂಡದ್ದು ಮಧ್ಯಾಹ್ನ ಬೇಗ ಬರಬೇಕು ಎಂಬ ಪ್ರೀತಿಯಿಂದ ಕೂಡಿದ ಮನವಿಯೊಂದಿಗಿತ್ತು. ಹಾಗೆ ನಾನು ಆಫೀಸಿನಲ್ಲಿ ರಜೆ ಪಡೆದು ಮನೆಗೆ ಮರಳಿದೆ. ಅವಳು ಬಾಗಿಲಿನಲ್ಲೇ ಕಾಯುತ್ತಿದ್ದಳು. ನನ್ನನ್ನು ಕಂಡು ಅತೀವ ಸಂತೋಷಗೊಂಡಿದ್ದಳು. ಕಾರಣ ನಾನು ಮಧ್ಯಾಹ್ನ ರಜೆ ಹಾಕಿ ಬರುತ್ತೇನೆಂದು ಅವಳು ನಂಬಿರಲಿಲ್ಲ.
ನನ್ನ ಬ್ಯಾಗನ್ನು ತೆಗೆದಿರಿಸಿ ವಸ್ತ್ರ ಬದಲಿಸಲು ಕಪಾಟಿನಿಂದ ಲುಂಗಿಯನ್ನು ನೀಡಿ ಅಡುಗೆ ಮನೆಗೆ ಹೋದಳು. ನಾನು ಬಟ್ಟೆ ಬದಲಿಸಿ ಊಟಕ್ಕೆ ಹೋದೆ. ಟೇಬಲಿನಲ್ಲಿ ಊಟ ಬಡಿಸಿಟ್ಟಿದ್ದಳು. ರಾತ್ರಿಗಿರುವ ತಯಾರಿಯ ಭರಾಟೆಯಲ್ಲಿ ಪದಾರ್ಥಕ್ಕೆ ಉಪ್ಪು ಸಪ್ಪೆಯಾಗಿತ್ತು. ಅದನ್ನು ಹೇಳಿದರೆ ನಾಲ್ಕು ಬೈಯುವಳೇ ಹೊರತು ಅಡುಗೆಯ ಮೇಲಿನ ಅವಳ ಅಸಾಮಥ್ರ್ಯದ ಕುರಿತು ಒಪ್ಪಿಕೊಳ್ಳಲಿಕ್ಕಿಲ್ಲ. ಅವಳ ಅಡುಗೆಯ ಕುರಿತು ನಾನು ಹೊಗಳಿದರೆ ಅವಳಿಗೆ ಖುಷಿಯೇ ಖುಷಿ. ಅಂದಿಡೀ ನನಗೆ ಪ್ರೀತಿಯ ಭರ್ಜರಿ ವರ್ತನೆ ಲಭ್ಯವಾಗುತ್ತಿತ್ತು. ಆ ಪದಾರ್ಥ ಎಷ್ಟೇ ಸಪ್ಪೆಯಾಗಿದ್ದರೂ ಸರಿ.
ಅವಳು ಕೂಡಾ ತಟ್ಟೆಗೆ ಅನ್ನ ಹಾಕಿ ನನ್ನ ಮುಂದೆ ಕುಳಿತಳು ನಾನು ಅವಳ ಮುಖವನ್ನೇ ನೋಡಿದೆ. ಆ ಸುಂದರ ಮುಖವು ಕೆಲಸದ ಒತ್ತಡದಿಂದ ಮಂಕಾಗಿರುವಂತೆ ಕಂಡಿತು. ಹಣೆಯಲ್ಲಿ ಬೆವರಿತ್ತು. ಅಯ್ಯೋ ಪಾಪ ಅನಿಸಿತು. ಅವಳು ತಿನ್ನುವುದರಲ್ಲೇ ನಿರತಳಾಗಿದ್ದಳು. ಮಧ್ಯೆ ಅವಳು ತಲೆ ಎತ್ತಿ ನೋಡಿದಾಗ ನಾನು ಅವಳನ್ನೇ ನೋಡುತ್ತಿದ್ದೆ.
“ಓಯ್, ಎನ್ರೀ ಹಾಗೆ ಗುರಾಯಿಸ್ತಿದ್ದೀರ. ನೀವು ನನ್ನನ್ನು ಮೊದಲ ಸಾರಿ ಕಂಡಂತೆ ನೋಡುತ್ತಿದ್ದೀರಲ್ಲಾ?”
“ಏನಿಲ್ಲ, ನೀನು ತುಂಬಾ ಮುದ್ದು ಅಲ್ವಾ. ಹಾಗೆ ನೋಡಿದೆ ಅಷ್ಟೇ”
ನಾನು ತಿಂದು ಮುಗಿಸಿದ ಮೇಲೆ ಕೈ ತೊಳೆದು ಬೆಡ್‍ರೂಮಿಗೆ ಹೋಗಿ ಹಾಸಿಗೆಯ ಮೇಲೆ ಮಲಗಿದೆ. ನನಗೆ ಸುಸ್ತಾಗಿತ್ತು. ಸ್ವಲ್ಪ ಹೊತ್ತಾದಾಗ “ಇಕೊಳ್ಳಿ ಎಲ್ಲಿದ್ದೀರಿ” ಎಂದು ಕೇಳುತ್ತಾ ಬಂದಳು. ನಾನು ನಿದ್ರೆ ಹತ್ತಿದವನಂತೆ ನಟಿಸಿದೆ. ಅವಳು ನನ್ನ ಕಾಲನ್ನು ತಟ್ಟುತ್ತಾ “ಹೋಯ್, ನಿಮ್ಮನ್ನು ಮಧ್ಯಾಹ್ನ ರಜೆ ಹಾಕಿ ಬರಲು ಹೇಳಿದ್ದು ಇಲ್ಲಿ ಮಲಗಲಿಕ್ಕಲ್ಲ. ಬೇಗ ರೆಡಿಯಾಗಿ. ಅಂಗಡಿಗೆ ಹೋಗಿ ಸಾಮಾನು ತರಲಿಕ್ಕುಂಟು. ಇನ್ನು ನಿದ್ದೆಯೆಲ್ಲಾ ರಾತ್ರಿ.”
ನಾನು ಒಲ್ಲದ ಮನಸ್ಸಿನಿಂದ ಎದ್ದೆ. ಅವಳು ದೊಡ್ಡ ಚೀಲ ತಂದು ಕೈಗಿತ್ತಳು. ಜೊತೆಗೆ ಯಾವೆಲ್ಲ ಸಾಮಾನು ತರಬೇಕು ಎಂದು ಬರೆದ ಇಷ್ಟುದ್ದದ ಲೀಸ್ಟು. ಅದರ ಕೊನೆಯಲ್ಲಿ ಅಡುಗೆಗೆ ಸಂಬಂಧಿಸದ “ಫೇರ್ ಆಂಡ್ ಲೌಲಿ” ಕ್ರೀಮು ಕೂಡಾ ಬರೆದಿತ್ತು. ಅಡುಗೆ ತಯಾರಿಸಲು ಈ ಕ್ರೀಮು ಯಾಕೆ ಎಂದು ನನಗೆ ಅರ್ಥವೇ ಆಗಲಿಲ್ಲ.
‘ಲೇ ಶಮಾ, ಇದೇನೇ, ಅಡುಗೆ ಸಾಮಾನಿನ ಪಟ್ಟಿಯಲ್ಲಿ ಫೇರ್‍ಆಂಡ್ ಲೌಲಿ. ಪದಾರ್ಥಕ್ಕೆ ಮಿಕ್ಸ್ ಮಾಡಲಿಕ್ಕುಂಟಾ!” ನಾನು ಜಿಜ್ಞಾಸೆ ತಾಳಲಾರದೆ ಕೇಳಿದೆ.
“ಆ ಕ್ರೀಮು ತರಲು ನಾನು ಮೂರು ವಾರಗಳಿಂದ ನಿಮ್ಮಲ್ಲಿ ಹೇಳುತ್ತಿದ್ದೇನೆ. ನೀವು ದಿನಾಲೂ ಅದನ್ನು ಮರೆತು ಬರುತ್ತೀರಿ. ಈಗ ನೀವು ಹೇಗೆ ಮರೀತೀರಿ ಅಂತ ನೋಡ್ತೇನೆ.” ನನ್ನ ಬೆನ್ನ ಹಿಂದಿನಿಂದ ದೂಡುತ್ತಾ ಹೇಳಿದಳು.
ನಾನು ಚೀಲ ಹಿಡಿದು ಅಂಗಡಿಗೆ ಹೊರಟೆ. “ರೀ ಬೇಗ ಬರಬೇಕು. ಇನ್ನು ಪತ್ರಿಕೆ ಓದುತ್ತಾ ಅಲ್ಲೇ ಕೂರಬೇಡಿ” ಎಂಬ ಸಲಹೆಯನ್ನು ನೀಡಿ ಬಾಗಿಲು ಮುಚ್ಚಿಕೊಂಡಳು.
ನಾನು ಅಂಗಡಿಗೆ ಹೋಗಿ ಸಾಮಾನಿನ ಪಟ್ಟಿಯ ಪ್ರಕಾರ ಖರೀದಿಸ ತೊಡಗಿದೆ. ಅರ್ಧ ಗಂಟೆಯ ಬಳಿಕ ಶಮಾ ಫೋನ್ ಮಾಡಿದಳು. “ರೀ ಎಲ್ಲಿದ್ದೀರಿ? ಎನ್ಮಾಡ್ತಿದ್ದೀರ? ಸಾಮಾನೆಲ್ಲಾ ಖರೀದಿಸಿ ಆಯ್ತಾ?” ಹೀಗೆ ಪ್ರಶ್ನೆಗಳ ಸುರಿಮಳೆಗೈದಳು.
“ಬರ್ತೇನೆ ಮಾರಾಯ್ತಿ. ಇಷ್ಟದ್ದದ ಪಟ್ಟಿ ಬರೆದು ಕೊಟ್ಟು ಬೇಗ ಬನ್ನಿ ಎಂದರೆ ಹೇಗೆ? ಎಲ್ಲವನ್ನೂ ಖರೀದಿಸುವುದು ಬೇಡ್ವಾ” ನಾನು ಸ್ವಲ್ಪ ಗರಂ ಆಗಿ ಹೇಳಿದೆ.
ಆಚೆ ಕಡೆಯಿಂದ ಮುಸಿ ಮುಸಿ ನಗು ಕೇಳಿಸಿತು. “ರೀ ಬರುವಾಗ ಜಾಗ್ರತೆ ರಸ್ತೆ ದಾಟುವಾಗ ಆಚೀಚೆ ನೋಡ್ಕೊಳ್ಳಿ ಆಯ್ತಾ! ಓಕೆ ಬಾೈ. ಐ ಲವ್ ಯು” ಎಂದು ಫೋನಿಟ್ಟಳು. ಚಿಕ್ಕ ಮಕ್ಕಳೊಂದಿಗೆ ಹೇಳುವಂತಿದ್ದರೂ ಅವಳಿಗೆ ನನ್ನ ಮೇಲಿನ ಕಾಳಜಿಯನ್ನು ಕಂಡು ಪ್ರೀತಿ ಉಕ್ಕಿ ಬಂತು.
ನಾನು ಸಾಮಾನು ಖರೀದಿಸಿ ತಂದಾಗ ಗಂಟೆ ನಾಲ್ಕಾಗಿತ್ತು. ಶಮಾ ಒಣಗಿದ ಬಟ್ಟೆಗಳನ್ನು ತೆಗೆದು ಒಳ ಹೋಗುತ್ತಿದ್ದಳು. ನನ್ನನ್ನು ಕಂಡು ನಸು ನಕ್ಕು “ಫೇರ್ ಆಂಡ್ ಲೌಲಿ ತಂದಿದ್ದೀರ” ಎಂದು ಕೇಳಿದಳು.
“ಆಯ್ಯೋ, ಸಾರಿ ಕಣೇ, ನಾನು ಮರೆತು ಬಂದೆ” ನಾನು ಮರೆತವನಂತೆ ತಲೆ ಮೇಲೆ ಕೈಯಿರಿಸಿ ಹೇಳಿದೆ.
“ಹೌದಾ! ನೀವು ಒಳಗೆ ಬನ್ನಿ, ಮಾಡ್ತೇನೆ ನಿಮಗೆ” ಒಳಗೆ ಬಂದು ಎದುರಾಗಿ ನಿಂತಳು.
“ಓಹ್, ತಂದಿದ್ದೇನೆ ಮಾರಾಯ್ತಿ. ಇನ್ನು ಒಳಗೆ ಹೊಕ್ಕುವಾಗಲೇ ಕಿವಿಹಿಂಡುವುದು ಬೇಡ” ನಾನು ವ್ಯಂಗ್ಯವಾಗಿ ಹೇಳಿದೆ.
ನಾನು ಚೀಲವನ್ನು ಅಡುಗೆ ಕೋಣೆಯಲ್ಲಿರಿಸಿದೆ. ಅವಳು ಬಟ್ಟೆಯನ್ನು ರೂಮಿನಲ್ಲಿ ಬೆಡ್ ಮೇಳೆ ಹಾಕಿ ಬಂದಳು. ನನ್ನ ಭುಜದ ಮೇಲೆ ಕೈಯಿರಿಸಿ "ಪ್ಲೀಸ್ ರೀ ಆ ಬಟ್ಟೆಯನ್ನೆಲ್ಲಾ ಮಡಚಿಡ್ತೀರಾ?” ಎಂದು ಪ್ರೀತಿಯಿಂದ ಹೇಳಿದಳು.
“ನೀನೊಮ್ಮೆ ಹೋಗು ಮಾರಾಯ್ತಿ. ಸುಮ್ಮನೆ...” ನಾನು ಹುಸಿ ಕೋಪದೊಂದಿಗೆ ಅವಳ ಕೈಯನ್ನು ನನ್ನ ಭುಜದಿಂದ ಕೆಳಗಿರಿಸಿದೆ. ಅವಳು ಕಣ್ಣು ಕಿರಿದಾಗಿಸಿ ಪ್ಲೀಸ್ ಪ್ಲೀಸ್ ಎಂದಾಗ ನಾನು ನಸುನಕ್ಕು ಬೆಡ್‍ರೂಮಿಗೆ ಹೋದೆ.
ಚಹಾ ಕುಡಿದ ನಂತರ ಅಡುಗೆ ಕೆಲಸ ಆರಂಭವಾಯಿತು. ನಾನು ಟಿ.ವಿ. ನೋಡಲು ಕುಳಿತೆ. ಸ್ವಲ್ಪ ಹೊತ್ತಾದಾಗ ಅಡುಗೆ ಮನೆಯಿಂದ “ರೀ ಎಲ್ಲಿದ್ದೀರಿ. ಸ್ವಲ್ಪ ಈ ಕಡೆ ಬರ್ತೀರಾ” ಎಂಬ ಕರೆ ಬಂತು. ನಾನು ಅತ್ತ ಗಮನಹರಿಸಲಿಲ್ಲ. ಟಿ.ವಿ. ನೋಡುವುದರಲ್ಲೇ ತಲ್ಲೀನನಾದೆ. ಬಳಿಕ ಅವಳೇ ಬಂದು ನನ್ನ ಕತ್ತು ಬಳಸಿ ಹೇಳಿದಳು. “ಅಲ್ಲಿ ಅಡುಗೆ ಮನೆಯಲ್ಲಿ ಅಷ್ಟೆಲ್ಲಾ ಕೆಲಸ ಇರುವಾಗ ನೀವು ಇಲ್ಲಿ ಟಿ.ವಿ. ನೋಡ್ತಾ ಕುಳಿತಿದ್ದೀರಾ. ನನಗೆ ಸ್ವಲ್ಪ ಸಹಾಯ ಮಾಡ್ಬಾರ್ದಾ?”
“ಹೌದಾ, ನೀನು ಮೊನ್ನೆ ಹೇಳಿದೆ, ಅಡುಗೆಗೆ ಪುರುಷರ ಕೈತಾಗಿದರೆ ರುಚಿಯೆಲ್ಲಾ ಹೋಗುತ್ತದೆ ಎಂದು. ಈಗ ನಾನು ಬೇಕಾ?” ನಾನು ಚಾನೆಲ್ ಬದಲಿಸುತ್ತಾ ಹೇಳಿದೆ.
“ಅದು ನಾನು ಸುಮ್ಮನೆ ಹೇಳಿದ್ದಲ್ವಾ. ಈಗ ಬನ್ನಿ, ಪ್ಲೀಸ್” ಎಂದು ನನ್ನ ತೋಳು ಹಿಡಿದು ಎಳೆದಳು. ಅವಳ ಕೊಂಡಾಟದ ಮುಂದೆ ನಾನು ಸೋತೆ.
ನನಗೆ ಅಡುಗೆ ಮನೆಯಲ್ಲಿ ತರಕಾರಿ ಹಚ್ಚುವ ಘನ ಜವಾಬ್ದಾರಿ ಸಿಕ್ಕಿತು. ಮೊದಲಿಗೆ ನೀರುಳ್ಳಿಯನ್ನು ಹಚ್ಚಿದೆ. ಕಣ್ಣಿನಲ್ಲಿ ನೀರು ಬರಲು ಪ್ರಾರಂಭಿಸಿತು.
“ಇದೇನ್ರಿ, ಆಮ್ಲೆಟ್ ಮಾಡ್ಲಿಕ್ಕೆ ನೀರುಳ್ಳಿ ಹಚ್ಚುವುದಾ? ನಾನು ಹೇಳಿದ್ದು ಬಿರಿಯಾಣಿ ಮಸಾಲಕ್ಕೆ. ಉದ್ದುದ್ದ ಕೊಯ್ಯಿರಂತೆ” ಆಜ್ಞೆ ನೀಡಿದಳು.
“ಇಲ್ಲಿ ಕಣ್ಣು ಉರೀತಾ ಉಂಟು ಮಾರಾಯ್ತಿ.” ನಾನು ಕಣ್ಣುಜ್ಜುತ್ತಾ ಹೇಳಿದೆ.
“ಅದಕ್ಕೇ, ಬೇಗ ಬೇಗ ಹಚ್ಚಿರಿ. ಈಗ ಗೊತ್ತಾಯ್ತಾ ಅಡುಗೆಯ ಕಷ್ಟ”
ಟೊಮೆಟೋ, ಸೌತೆಕಾಯಿ, ಅಲಸಂಡೆ ಮೊದಲಾದ ತರಕಾರಿಗಳು ನನ್ನ ಮುಂದೆ ಬಿದ್ದವು. ಅದನ್ನು ಹಚ್ಚುವ ರೀತಿಯನ್ನೂ ಹೇಳಿಕೊಟ್ಟಳು. ಯಾವ ತರಕಾರಿ ಯಾವ ಆಕೃತಿಯಲ್ಲಿ ಕೊಯ್ಯಬೇಕು ಎಂದು ಪಾಠ ಹೇಳಿದಂತೆ ಹೇಳಿಕೊಟ್ಟಳು.
ಅವನ್ನೆಲ್ಲಾ ಹೇಗೆ ಕೊಯ್ಯಬೇಕು ಎಂದು ನನಗೆ ಚೆನ್ನಾಗಿ ಗೊತ್ತಿದೆ. ನಾನು ಅಡುಗೆ ಮಾಡುವುದರಲ್ಲಿ ಅಷ್ಟು ಹಿಂದೇನೂ ಅಲ್ಲ. ಮದುವೆಗಿಂತ ಮುಂಚೆಯೇ ನನಗೆ ಅಡುಗೆ ಕಲಿಯುವ ಸಂದರ್ಭ ಬಂದಿತ್ತು. ಅಡುಗೆಯನ್ನೂ ಕಲಿತಿದ್ದೇನೆ. ಆದರೆ ಈ ವಿಷಯವನ್ನು ನಾನು ನನ್ನ ಶಮಾಳಿಗೆ ಈವರೆಗೂ ಹೇಳಲಿಲ್ಲ. ಹೇಳಿದರೆ ಅಡುಗೆಯ ಹಲವು ಕೆಲಸಗಳು ನನ್ನ ತಲೆಗೆ ಬೀಳಬಹುದು. ನನಗೆ ಅಡುಗೆ ಮಾಡಲು ಹೇಳಿ ಅವಳು ತಲೆನೋವೆಂದು ಮಲಗಬಹುದು.
ನಾನು ಮುಳ್ಳುಸೌತೆ ಕೊಯ್ಯುವಾಗ ಮಧ್ಯೆ ಮಧ್ಯೆ ಒಂದೊಂದು ತುಂಡನ್ನು ತಿನ್ನುತ್ತಿದ್ದೆ. “ಏನ್ರೀ ಇದು. ನಿಮ್ಮಲ್ಲಿ ತಿನ್ನಲಿಕ್ಕೆ ಹೇಳಿದ್ದಾ, ಅಲ್ಲ ತರಕಾರಿ ಹಚ್ಚಲಿಕ್ಕೆ ಹೇಳಿದ್ದಾ? ನೀವು ಹೀಗೆ ತಿಂದರೆ ಎರಡು ಕಿಲೋ ಪುನಃ ತರಿಸ್ಬೇಕಾಗಬಹುದು” ಅವಳು ಜೋರು ಮಾಡಿದಳು.
“ಅಲ್ಲ ಕಣೇ ಮುಳ್ಳುಸೌತೆ ಕಹಿ ಉಂಟಾಂತ ನೋಡಿದ್ದು” ನಾನು ಸ್ಪಷ್ಟೀಕರಣ ನೀಡಿದೆ.
“ಅದು ಒಂದು ತುಂಡು ತಿಂದರೆ ತಿಳಿಯುತ್ತೆ. ಅರ್ಧ ಸೌತೆ ತಿನ್ನಬೇಕೆಂದೇನಿಲ್ಲ.”
ಶಮಾ ತೀವ್ರ ಗಡಿಬಿಡಿಯಲ್ಲಿದ್ದಳು. ಅವಳಿಗೆ ನಾಲ್ಕು ಕೈಗಳಿರುತ್ತಿದ್ದರೂ ಅದು ಸಾಕಾಗುತ್ತಿರಲಿಲ್ಲ. ಅವಳು ಗಡಿಬಿಡಿಯಲ್ಲಿ ಬೇವುಸೊಪ್ಪು ತರಲು ಹಿತ್ತಿಲ ಕಡೆಗೆ ಹೋಗುವಾಗ ನಾನು ಕುಳಿತ ಕುರ್ಚಿಯ ಕಾಲು ಅವಳಿಗೆ ತಾಗಿತು. ಎಡವಿ ಬೀಳುವಂತಾದಳು. ತಿರುಗಿ ಬಂದು ನನ್ನ ಬೆನ್ನಿಗೆ ಒಂದು ಗುದ್ದು ನೀಡಿ ಹೇಳಿದಳು. “ನಿಮಗೆ ಕುರ್ಚಿಯನ್ನು ಸರಿ ಇಡಲಿಕ್ಕೆ ಆಗುವುದಿಲ್ಲಾ” ನನಗೆ ಅಯ್ಯೋ ಪಾಪ ಅನಿಸಿತು.
ಅಂತೂ ನೆಂಟರಿಷ್ಟರೆಲ್ಲಾ ಬಂದರು. ಶಮಾ ಅವರನ್ನು ಉಪಚರಿಸುವುದರಲ್ಲೇ ನಿರತಳಾದಳು. ಅಣ್ಣನೊಂದಿಗೆ ಭಾಭಿಯೊಂದಿಗೆಲ್ಲಾ ಹಲವು ವಿಷಯಗಳ ಕುರಿತು ಚರ್ಚಿಸಿದಳು. ಆದರೆ ಆ ವಿಷಯಗಳೆಲ್ಲಾ ನಾನು ಅವಳೊಂದಿಗೆ ಹೇಳಿದ ವಿಚಾರಗಳಾಗಿದ್ದವು. ಅವಳು ದೊಡ್ಡ ತಿಳುವಳಿಕೆ ಇರುವಂತೆ ಮಾತನಾಡುತ್ತಿದ್ದಳು. ಅವರೇನಾದರೂ ಮರು ಪ್ರಶ್ನೆ ಕೇಳಿದರೆ ತಬ್ಬಿಬ್ಬಾಗಿ ವಿಷಯ ಬದಲಾಯಿಸುತ್ತಿದ್ದಳು.
ಭರ್ಜರಿ ಊಟದ ವ್ಯವಸ್ಥೆಯೂ ಆಯಿತು. ಅವರನ್ನು ಉಪಚರಿಸಿ ನನ್ನ ಶಮಾ ಬಳಲಿ ಬೆಂಡಾಗಿದ್ದಳು. ಹಣೆಯಲ್ಲಿ ಬೆವರು ಹನಿಗಟ್ಟಿತ್ತು. ಮುದ್ದು ಮುಖವು ಬಾಡಿತ್ತು. ಹಾಗೆ ಅವರು ನಮ್ಮ ಆತಿಥ್ಯವನ್ನು ಸ್ವೀಕರಿಸಿ ಹೊರಟು ಹೋದರು. ಆಗ ನಾನು ನಿಟ್ಟುಸಿರು ಬಿಟ್ಟೆ. ದೊಡ್ಡ ಯುದ್ಧದಲ್ಲಿ ಭಾಗವಹಿಸಿ ಮರಳಿದಂತಾಗಿತ್ತು.
ಇನ್ನು ಅಡುಗೆ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯ ಬಾಕಿ ಉಳಿದಿತ್ತು. ತೊಳೆಯಬೇಕಾದ ಪಾತ್ರೆಯ ದೊಡ್ಡ ರಾಶಿಯೇ ಬಿದ್ದಿತ್ತು. ಅವಳು ಅದನ್ನು ತೊಳೆಯಲು ಹೊರಟಳು. “ಇಕೊಳ್ಳೇ ಅದನ್ನೆಲ್ಲಾ ಬೆಳಿಗ್ಗೆದ್ದು ತೊಳೆಯುವಾ. ಬೇಕಾದರೆ  ನಾನೂ ಸಹಾಯ ಮಾಡುತ್ತೇನೆ. ಈಗ ನೀನು ಆಯಾಸಗೊಂಡಿದ್ದೀ” ನಾನು ತೊಳೆಯುವ ಭರವಸೆ ನೀಡಿದೆ.
ನನಗೂ ಆಯಾಸವಾಗಿತ್ತು. ಕೈಕಾಲು ಮುಖ ತೊಳೆದು ನಾನು ಮಲಗಿದೆ. ಸ್ವಲ್ಪ ಹೊತ್ತಾದ ಮೇಲೆ ಶಮಾ ಬಂದು ಬಳಿ ಮಲಗಿದಳು.
“ಸುಮ್ಮನೆ ಮಲಗು ಮಾರಾಯ್ತಿ. ಬಾಕಿ ವಿಷಯವೆಲ್ಲಾ ಬೆಳಿಗ್ಗೆ ಮಾತಾಡೋಣ” ಎಂದು ನಾನು ಮಗ್ಗುಲು ಬದಲಿಸಿ ಮಲಗಿದೆ. ಆಯಾಸದಲ್ಲಿ ನಿದ್ದೆ ಹತ್ತಿದ್ದೇ ತಿಳಿಯಲಿಲ್ಲ.

Monday 21 January 2013

ಮಹಿಳೆಯರ ಮಾರ್ಕೆಟ್


ಮಣಿಪುರದ ರಾಜಧಾನಿ ಇಂಫಾಲಿಗೆ ಹೋದರೆ ಆ ಪ್ರದೇಶದ ಹೃದಯಭಾಗದಿಂದ ‘ಇದು ನಮ್ಮ ಏರಿಯಾ’ ಎಂಬ ಅಧಿಕಾರದ ಹೆಣ್ಣು ಧ್ವನಿ ನಿಮಗೆ ಕೇಳಿಸಬಹುದು. ಅಲ್ಲೊಂದು ಮಾರುಕಟ್ಟೆ ಇದೆ. ಅದರ ಹೆಸರು ‘ಇಮಾ ಕೆಯ್ತಲ್’ ಇಲ್ಲಿ ಕೇವಲ ಮಹಿಳಾ ವ್ಯಾಪಾರಿಗಳದ್ದೇ ಕಾರುಬಾರು. ಮಹಿಳಾ ಸಬಲೀಕರಣಕ್ಕೆ ಪ್ರಯತ್ನಿಸುವ ನಿಷ್ಠಾವಂತ ವ್ಯಾಪಾರಿಗಳಿವರು. ಮಹಿಳಾ ವ್ಯಾಪಾರಿಗಳು ಮಾತ್ರವಿರುವ ಜಗತ್ತಿನ ಏಕೈಕ ಮಾರುಕಟ್ಟೆ ಎಂಬ ಖ್ಯಾತಿ ಈ ಕೆಯ್ತಲ್ ಮಾರುಕಟ್ಟೆಗಿದೆ. ಆರ್ಥಿಕ ಸಬಲೀಕರಣದ ಮೂಲಕ ಸಮಾಜದ ಸಬಲೀಕರಣ ಹಾಗೂ ಸ್ವಾತಂತ್ರ್ಯ ಗಳಿಸಿದ ಮಹಿಳೆಯರ ಯಶೋಗಾಥೆ ಈ ಮಾರುಕಟ್ಟೆಗೆ ಹೇಳಲಿಕ್ಕಿದೆ.
ಮಣಿಪುರಿ ಭಾಷೆಯ ಇಮಾ ಎಂಬ ಪದಕ್ಕೆ ತಾಯಿ, ಅಮ್ಮ ಎಂದರ್ಥ. ಹತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರು ಇಲ್ಲಿ ವ್ಯಾಪಾರ ನಡೆಸುತ್ತಾರೆ. ಇವರ ಮಧ್ಯೆ ಸಂಬಂಧದಲ್ಲಿ ಒಡಕಿದ್ದಂತೆ ಕಂಡರೂ ಇವರು ಪರಸ್ಪರ ಒಗ್ಗಟ್ಟಿನಿಂದ ಬಾಳುವವರಾಗಿದ್ದಾರೆ. ಇಲ್ಲಿ ಸಿಗದ ವಸ್ತುಗಳಿಲ್ಲ. ಈ ಮಾರುಕಟ್ಟೆಯ ಒಳಹೊಕ್ಕರೆ ಎಲ್ಲಾ ಕಡೆಗಳಲ್ಲೂ ಮಹಿಳಾ ಮಣಿಗಳ ಸ್ವರವೇ ಕೇಳಿಸುತ್ತದೆ. ಇಲ್ಲಿನ ಮಹಿಳೆಯರು ದಿನ ದೂಡಲಿಕ್ಕಾಗಿ ವ್ಯಾಪಾರ ನಡೆಸುತ್ತಾರೆಯೇ ಹೊರತು ದೊಡ್ಡ ಶ್ರೀಮಂತ ವ್ಯಕ್ತಿಗಳಾಗಬೇಕು ಎಂಬ ಆಶೆಯು ಅವರಲ್ಲಿರುವುದಿಲ್ಲ. ಇವರ ಗಿರಾಕಿಗಳಿಗೂ ಇವರಿಗೂ ಚೌಕಾಸಿ ನಡೆಸುವ ಸಂಪ್ರದಾಯ ಇಲ್ಲವೇ ಇಲ್ಲ. ಬಟ್ಟೆಗಳಿಗೂ ತರಕಾರಿಗಳಿಗೂ, ಹಣ್ಣು ಹಂಪಲುಗಳಿಗೂ ಗೃಹಬಳಕೆಯ ವಸ್ತುಗಳಿಗೂ ಒಣ ವಿೂನಿಗೂ ಹಸಿ ವಿೂನಿಗೂ ಬೇರೆ ಬೇರೆ ವಿಭಾಗಗಳಿವೆ. ಆ ಮಾರ್ಕೆಟಿನ ಒಳ ಹೊಕ್ಕರೆ ಡೊಡ್ಡ ಶಾಪಿಂಗ್ ಮಾಲ್‍ಗಳಿಗೆ ಹೋಗುವುದಕ್ಕಿಂತ ಹೆಚ್ಚಿನ ಸಂತೋಷ ಲಭಿಸುತ್ತದೆ ಎಂಬುದು ಅನುಭವಿಗಳ ಮಾತು. ಮಣಿಪುರದ ಮಹಿಳೆಯರ ಶ್ರಮ ಜೀವನವನ್ನು ಕಂಡು ಶತಮಾನದ ಹಿಂದೆ ಆಗಿನ ರಾಜರು ಈ ಮಾರುಕಟ್ಟೆ ತೆರೆಯಲು ಅನುವು ಮಾಡಿಕೊಟ್ಟಿದ್ದರು. ಕೆಲವು ವರ್ಷಗಳ ಹಿಂದೆ ರಾಜ್ಯ ಸರಕಾರವು ಅವರಿಗೆ ಕಟ್ಟಡಗಳನ್ನು, ಕುಳಿತುಕೊಂಡು ವ್ಯಾಪಾರ ನಡೆಸಲು ಆಸನಗಳನ್ನೂ ನಿರ್ಮಿಸಿಕೊಟ್ಟಿತು.
ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ಮಣಿಪುರವು ಸ್ವರ್ಗದಂತಿದೆ. ತೆಂಗನ್ನು ಹೊರತುಪಡಿಸಿ ಇಲ್ಲಿರುವ ಎಲ್ಲಾ ಸಸ್ಯಗಳೂ ಅಲ್ಲಿವೆ. ಅಲ್ಲಿ ಮಳೆಯು ಧಾರಾಳ ಸುರಿಯುವುದರಿಂದ ಎಲ್ಲೆಲ್ಲೂ ಮನಮುದಗೊಳಿಸುವ ಹಸುರಿನ ಹಾಸು. ಪ್ರಕೃತಿಯ ಮೇಲಿನ ಭೂಮಾಫಿಯಗಳ ಅತ್ಯಾಚಾರಕ್ಕೆ ಮಣಿಪುರವು ಇನ್ನೂ ಬಲಿಪಶುವಾಗಲಿಲ್ಲ ಎಂಬುದನ್ನು ಅಲ್ಲಿನ ಪ್ರಕೃತಿಯು ಸ್ಪಷ್ಟಪಡಿಸುತ್ತದೆ. ಅವರ ಕಿರಾತ ಕೈಗಳಿಗೆ ಮಣಿಪುರವು ಬಲಿಯಾಗದಿರಲಿ.
ಮಣಿಪುರದ ಮಹಿಳೆಯರ ಸಾಮಥ್ರ್ಯದ ಕುರಿತು ಜಗತ್ತು ಬೆರಗುಗಣ್ಣಿನಿಂದ ನೋಡುತ್ತದೆ. ಸೈನಿಕರಿಗೆ ಹೆಚ್ಚಿನ ಅಧಿಕಾರ ನೀಡಿದುದರ ವಿರುದ್ಧ ಕಳೆದ ಹದಿಮೂರು ವರ್ಷಗಳಿಂದ  ಸ್ವಯಂ ಒಂದು ತೊಟ್ಟು ನೀರನ್ನೂ ಕುಡಿಯದೆ ಆಮರಣಾಂತ ಉಪವಾಸ ಆಚರಿಸುತ್ತಿರುವ ಇರೋಮ್ ಶರ್ಮಿಳಾ ಲಂಡನ್ ಒಲಿಂಪಿಕ್ಸ್‍ನಲ್ಲಿ ಬಾಕ್ಸಿಂಗ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ ಮೇರಿ ಕೋಮ್ ಇವರೆಲ್ಲರೂ ಮಣಿಪುರದ ಮಹಿಳಾ ಮಣಿಗಳಾಗಿದ್ದಾರೆ. ಏನಾದರೂ ಮಾಡಲು ಹೊರಟರೆ ಅರ್ಧದಿಂದ ಬಿಟ್ಟೋಡದೆ ಅದನ್ನು ಸಾಧಿಸುವ ವರೆಗೆ ಅವರು ಪಡುವ ಪ್ರಯತ್ನಗಳು ಇಂದು ಜಗತ್ತು ಅವರನ್ನು ಗಮನಿಸುವಂತೆ ಮಾಡಿದೆ. ತನ್ನ ಗುರಿಯನ್ನು ಸಾಧಿಸಲಿಕ್ಕಾಗಿ ಏನು ಮಾಡಲಿಕ್ಕೂ ಅವರು ಸಿದ್ಧರಾಗುತ್ತಾರೆ.
ಭಾರತದ ಸ್ವಾತಂತ್ರ್ಯ ಸಮರದಲ್ಲಿ ಇಂಫಾಲಿನ ಈ ತಾಯಂದಿರ ವ್ಯಾಪಾರದ ಪಾತ್ರವೂ ಇದೆ. ಬ್ರಿಟಿಷರ ವಿರುದ್ಧ ‘ನೂಪಿಲಾನ್’ ಎಂದು ಕರೆಯಲ್ಪಡುವ ಮಹಿಳಾ ಸಮರವು ನಡೆದದ್ದು ಈ ಮಾರುಕಟ್ಟೆಯನ್ನು ಕೇಂದ್ರವಾಗಿಸಿಯಾಗಿತ್ತು. ಬಲಾತ್ಕಾರವಾಗಿ ದುಡಿಸಿದ್ದರ ವಿರುದ್ದ ಮೊದಲ ನೂಪಿಲಾನ್ ಸಮರವು ನಡೆಯಿತು. ಬೆಲೆ ಏರಿಕೆ, ಕಾನೂನು ಬಾಹಿರವಾಗಿ ಅಕ್ಕಿ ಸಾಗಾಟ ಮೊದಲಾದವುಗಳ ವಿರುದ್ಧ ಎರಡನೆ ಕಾಳಗ ನಡೆಯಿತು. ಈ ಎರಡೂ ಸಮರಗಳಲ್ಲಿ ಮಹಿಳೆಯರ ಒಗ್ಗಟ್ಟಿನ ಫಲವಾಗಿ ವಿಜಯವು ಅವರನ್ನು ಬಿಟ್ಟೋಡಲಿಲ್ಲ. ಭಾರತೀಯ ಮಹಿಳೆಯರ ಸಾಮಥ್ರ್ಯವನ್ನು ಕಂಡು ಬ್ರಿಟಿಷರೇ ದಂಗಾದರು.
ಒಂದನೇ ನೂಪಿಲಾನ್:
ಅಂದು ಮಹಾರಾಜರಿಂದ ಅಧಿಕಾರವನ್ನು ಬ್ರಿಟಿಷರು ಬಲಾತ್ಕಾರವಾಗಿ ಪಡೆದಿದ್ದರು. ಇದರ ದ್ವೇಷವು ಮಣಿಪುರಿಗಳ ಹೃದಯದಲ್ಲಿ ಹೊತ್ತಿ ಉರಿಯುತ್ತಿತ್ತು. ಅದು ಪ್ರತಿಕಾರದ ಅಗ್ನಿಯಾಗಿ ಧಗಧಗಿಸಿತು. ಇಂಗ್ಲಿಷ್ ಅಧಿಕಾರಿಯ ಅರಮನೆಗೆ ಸಮಾನವಾದ ಕಟ್ಟಡವನ್ನು ಅವರು ಬೆಂಕಿ ಹಚ್ಚಿ ದ್ವಂಸಗೊಳಿಸಿದರು. ಆ ಅರಮನೆಯನ್ನು ಪುನರ್ನಿರ್ಮಿಸಲು ಮರದ ದಿಮ್ಮಿಗಳನ್ನು ಮಣಿಪುರದ ಪುರುಷರು ಹೊತ್ತುತರಬೇಕೆಂದು ಸರಕಾರವು ಆಜ್ಞೆ ಹೊರಡಿಸಿತು. ಬಲಾತ್ಕಾರವಾಗಿ ಪುಕ್ಕಟೆ ಸೇವೆಗೆ ಪುರುಷರು ಹೊರಟಾಗ ಹಲವು ಮನೆಗಳಲ್ಲಿ ಹಸಿವು ತಾಂಡವವಾಡಿತು. ಆದಾಯ, ಸಂಪಾದನೆ ಇಲ್ಲದ್ದರಿಂದ ಮಾರುಕಟ್ಟೆಯು ಬಿಕೋ ಎನ್ನ ತೊಡಗಿತು. ವ್ಯಾಪಾರಿಗಳಾದ ಅಲ್ಲಿನ ಮಹಿಳೆಯರೆಲ್ಲಾ ಒಗ್ಗಟ್ಟಾದರು. ಒಂದು ದಿನದ ಮಟ್ಟಿಗೆ ಮಾರುಕಟ್ಟೆಯನ್ನು ಬಂದು ಮಾಡಿದರು. ಪ್ರತಿಭಟನೆಯೆಂಬಂತೆ ಬ್ರಿಟಿಷ್ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದರು. ಸೇನೆಯನ್ನು ಕರೆಸಿ ಪ್ರತಿಭಟನೆಯನ್ನು ತಹಬದಿಗೆ ತಂದರೂ, ಬಲಾತ್ಕಾರವಾಗಿ ಕೆಲಸಕ್ಕೆ ನೇಮಿಸಲ್ಪಟ್ಟವರಿಗೆ ವೇತನ ನೀಡಲು ಬ್ರಿಟಿಷ್ ಅಧಿಕಾರಿಗಳು ನಿರ್ಬಂಧಿತರಾದರು.
ಎರಡನೇ ನೂಪಿಲಾನ್
1904ರ ಹೋರಾಟದ ಯಶಸ್ವಿನಿಂದ ಇಮಾ ಕೆಯ್ತಲ್ ಬೀಗಿತ್ತು. 1939ರಲ್ಲಿ ಮಾರುಕಟ್ಟೆಗೆ ದಾನ್ಯಗಳು ತಲುಪದಿರುವುದು ಆ ಮಹಿಳೆಯರಿಗೆ ಕೋಪ ಬರಿಸಿತು. ಕಡಿಮೆ ಬೆಲೆಗೆ ಧಾನ್ಯಗಳನ್ನೆಲ್ಲಾ ಖರೀದಿಸಿ ಹೊರ ನಾಡುಗಳಿಗೆ ರಪ್ತು ಮಾಡುತ್ತಿರುವುದಾಗಿ ಅಲ್ಲಿನ ವ್ಯಾಪಾರಿಗಳಿಗೆ ತಿಳಿಯಿತು. ಮಾರುಕಟ್ಟೆಗೆ ಅಕ್ಕಿ ತಲುಪದ್ದರಿಂದ ಬೆಲೆ ಗಗನಕ್ಕೇರಿತು. ಡಿಸೆಂಬರ್ 12ರಂದು ಆ ತಾಯಂದಿರು ರಂಗಕ್ಕಿಳಿದರು. ಸಾವಿರಾರು ಮಹಿಳೆಯರು ಮೆರವಣಿಗೆ ನಡೆಸಿ ರಾಜ್ಯ ದರ್ಬಾರಿನ ಮುಂದೆ ಜಮಾಯಿಸಿದರು. ರಾಜರ ಆದೇಶದಂತೆ ಧಾನ್ಯಗಳನ್ನು ರಪ್ತು ಮಾಡಲಾಗುತ್ತಿದೆ ಎಂದು ಬ್ರಿಟಿಷ್ ಅಧಿಕಾರಿಗಳು ಜಾಣೆಯ ಉತ್ತರ ನೀಡಿದರು. ಪ್ರವಾಸದಲ್ಲಿದ್ದ ರಾಜರು ತಮ್ಮ ಆಜ್ಞೆಯನ್ನು ಹಿಂಪಡೆಯುವ ವರೆಗೆ ಬ್ರಿಟಿಷ್ ಅಧಿಕಾರಿಯನ್ನು ಕದಲಲು ಆ ಮಹಿಳೆಯರು ಬಿಡಲಿಲ್ಲ. 1940 ಜನವರಿ 1ರ ವರೆಗೆ ಆ ಹೋರಾಟವು ಮುಂದುವರಿಯಿತು. ಆ ರಾಜ್ಯದ ಸಾಮಾಜಿಕ ಬದಲಾವಣೆಯಲ್ಲಿ ಮಹಿಳೆಯರ ಪಾತ್ರ ಏನೆಂಬುದನ್ನು ಆ ಹೋರಾಟಗಳು ಅನಾವರಣಗೊಳಿಸಿದವು.
ಇಮಾ ಕೆಯ್ತಾಲ್ ಮಾರುಕಟ್ಟೆಗೆ ವಸ್ತುಗಳನ್ನು ಖರೀದಿಸಲಿಕ್ಕಾಗಿ ಹೋಗುವವರು ಕೆಲವು ವಿಚಾರಗಳನ್ನು ತಿಳಿದಿರಬೇಕು. ತಾಯಿ ಎಂದು ಅರ್ಥವಿರುವ ಇಮಾ ಎಂದು ಅಲ್ಲಿನ ವ್ಯಾಪಾರಿಗಳನ್ನು ಕರೆಯಲಾಗುತ್ತದೆ. ವ್ಯಾಪಾರಿಗಳು ಮಹಿಳೆಯರು ಎಂದು ಭಾವಿಸಿ ಕೀಟಲೆ ಮಾಡುವುದನ್ನು, ದುಷ್ಟ ನೋಟ ಬೀರುವುದನ್ನು ಅವರು ಸಹಿಸುವುದಿಲ್ಲ. ಅದಕ್ಕೆ ಪ್ರಯತ್ನಿಸಿದವರು ಈ ತಾಯಂದಿರ ಕೈಯ ಬಿಸಿ ತಿಳಿಯುವರು. ತಿಳಿದಿದ್ದಾರೆ. ಆದ್ದರಿಂದ ಎಲ್ಲರೂ ಸಭ್ಯರಾಗಿಯೇ ಅವರೊಂದಿಗೆ ವರ್ತಿಸುತ್ತಾರೆ. ಅವರನ್ನು ಗೌರವಿಸುತ್ತಾರೆ.
ಈಶಾನ್ಯ ರಾಜ್ಯಗಳಲ್ಲಿ ಮುಂಜಾನೆ  4:30ಕ್ಕೆ ಸೂರ್ಯೋದಯವಾಗುತ್ತದೆ. ಆದ್ದರಿಂದಲೇ ಇಲ್ಲಿ ವಾಸಿಸುವ ಮಂದಿಯ ದಿನಚರಿಯು ಬೆಳ್ಳಂಬೆಳಿಗ್ಗೆಯೇ ಆರಂಭವಾಗುತ್ತದೆ. ಮಕ್ಕಳನ್ನು ಶಾಲೆಗೆ ಹೊರಡಿಸಿ, ಪತಿಗೆ ಆಹಾರ ತಯಾರಿಸಿ, ಮನೆಯ ಅತ್ಯಗತ್ಯದ ಕೆಲಸಗಳನ್ನೆಲ್ಲ ನಿರ್ವಹಿಸಿ ಆ ತಾಯಂದಿರು ವ್ಯಾಪಾರಕ್ಕೆ ಹೊರಡುತ್ತಾರೆ. ಒಂಭತ್ತು ಗಂಟೆಯಾಗುವಾಗ ವ್ಯಾಪಾರವು ಭರದಿಂದ ಸಾಗುತ್ತಿರುತ್ತದೆ. ತಂದ ವಸ್ತುಗಳನ್ನು ಒಂದು ಕಡೆ ಇರಿಸಿ ಅಲ್ಲಿ ಕುಳಿತುಕೊಳ್ಳುವರು. ಅದು ಖಾಲಿಯಾದಾಗ ಗಳಿಸಿದ ಅಲ್ಪ ಲಾಭದೊಂದಿಗೆ ಸಂತೋಷವಾಗಿ ಮನೆಗೆ ಮರಳುವರು. ಇಲ್ಲಿನಂತೆ ಅವರು ಯಾರನ್ನೂ ವಂಚಿಸುವುದಿಲ್ಲ. ನಿಯತ್ತಿನ ದುಡಿಮೆ ಅವರದ್ದು.
 ಹೊಲಗದ್ದೆಗಳಿಲ್ಲದವರು ವಿವಿಧ ರೀತಿಯ ಬಟ್ಟೆಬರೆಗಳನ್ನು ಮಾರಲು ತರುತ್ತಾರೆ. ದೊಡ್ಡ-ಪುಟ್ಟ ಹಲವಾರು ಜಲಾಶಯಗಳು ಮಣಿಪುರದಲ್ಲಿವೆ. ಈ ಜಲಾಶಯಗಳಿಂದ ಹಿಡಿದ ಮೀನುಗಳೂ ಈ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತವೆ. ಕೈಗೆಟಕುವ ದರದಲ್ಲಿ ವಿೂನು ಸಿಗುವುದರಿಂದ ಹೆಚ್ಚಿನವರ ಮನೆಯ ಪದಾರ್ಥವೂ ವಿೂನಾಗಿರುತ್ತದೆ.
ಇಂಫಾಲ್ ಮಾತ್ರವಲ್ಲದೆ ಮಣಿಪುರದ ಇತರ ಕಡೆಗಳಲ್ಲೂ ಮಹಿಳೆಯರು ಮಾತ್ರ ವ್ಯಾಪಾರ ನಡೆಸುವ ಮಾರುಕಟ್ಟೆಗಳಿವೆ. ವ್ಯಾಪಾರದ ಸರಕುಗಳನ್ನು ತರಲು ಸರಕಾರವು ಸಾರಿಗೆಯ ವ್ಯವಸ್ಥೆಯನ್ನು ಮಾಡಿದೆ. ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಹೂಡಿಕೆಯಾಗುತ್ತದೆ ಎಂಬ ಮಾತು ಕೇಳಿದಾಗ ಆಗುವ ನಡುಕವೊಂದೂ ಇವರಲ್ಲಿ ಕಾಣಲು ಸಿಗುವುದಿಲ್ಲ. ಯಾರೇ ಬಂದು ವ್ಯಾಪಾರ ನಡೆಸಿದರೂ ಜನರಿಗೆ ಕಡಿಮೆ ಬೆಲೆಯಲ್ಲಿ ಮಾರಬೇಕೆಂಬುದೇ ಇಲ್ಲಿನ ಮಹಿಳಾ ವ್ಯಾಪಾರಿಗಳ ನಿಯಮ. ಇವರಷ್ಟು ಕಡಿಮೆ ಬೆಲೆಗೆ ಯಾವುದೇ ವ್ಯಾಪಾರಿಗಳಿಗೂ ವ್ಯಾಪಾರ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಈ ಮಹಿಳಾ ಮಣಿಗಳು ಸಾಬೀತು ಪಡಿಸಿದ್ದಾರೆ. ಕಾರಣ ಕುಟುಂಬದ ಖರ್ಚುಗಳನ್ನು ನಿಭಾಯಿಸುವ ಕೆಲಸ ಮಹಿಳೆಗಲ್ಲವೇ?