ಆಕಾಶದಲ್ಲಿ ಕಾರ್ಮೋಡ ಆವರಿಸಿದ್ದನ್ನು ಕಂಡು ನಾನು ಬೇಗನೇ ಮನೆಗೆ ಹೊರಟೆ. ಆದರೂ ದಾರಿ ಮಧ್ಯೆಯೇ ಮಳೆ ಎದುರಾಯಿತು. ಬೆಳಿಗ್ಗೆ ಹೊರಡುವಾಗ ಶಮಾ ಹಿಡಿ ಬಾಗಿರುವ ಕೊಡೆಯನ್ನು ನನ್ನ ಕಾಲರಿಗೆ ಸಿಕ್ಕಿಸಿ ಪ್ರೀತಿಯಿಂದ ತಲೆ ತಡವುತ್ತಾ ಹೇಳಿದ್ದಳು:
""ರೀ.. ಕೊಡೆ ಹಿಡ್ಕೊಳ್ಳಿ. ಸಂಜೆ ಬರುವಾಗ ಮಳೆಗೆ ನೆನೆದು ಒದ್ದೆಯಾದ ಕೋಳಿಯಂತೆ ಬರ್ಬೇಡಿ. ನಿಮ್ಗೆ ಜ್ವರ-ಗಿರ ಬಂದ್ರೆ ಏನು ಮಾಡುದು.''
""ನನ್ನ ಮೇಲಿನ ನಿನ್ನ ಕಾಳಜಿಗೆ ಥ್ಯಾಕ್ಸ್ '' ಎಂದು ಹೇಳಿ ನಾನು ಹೊರಟಿದ್ದೆ .
ಅವಳು ಒಳ ಹೋದಾಗ ಕೊಡೆಯನ್ನು ಸಿಟೌಟಿನ ಮೇಲಿಟ್ಟು ಬಂದಿದ್ದೆ. ಯಾಕೆಂದರೆ ಬೆಳಿಗ್ಗೆ ಬಿಸಿಲಿತ್ತು. ಮಾತ್ರವಲ್ಲ, ಕೊಡೆ ಹಿಡಿಯುವುದೆಂದರೆ ನನಗೆ ಧರ್ಮ ಸಂಕಟ. ಆದರೆ ಕೊಡೆ ಹಿಡ್ಕೊಂಡಿದ್ದರೆ ಒಳ್ಳೆಯದಿತ್ತು ಎಂದು ಈಗ ತೋಚಿತು. ಹಾಗೆ ನಾನು ಮಳೆಗೆ ನೆನೆಯುತ್ತಾ ಮನೆಗೆ ಬಂದೆ.
ಮಳೆಗೆ ನೆನೆಯುವುದೆಂದರೆ ನನಗೆ ಇಷ್ಟ. ನಾನು ಚಿಕ್ಕವನಿದ್ದಾಗ, ಶಾಲೆ ಬಿಟ್ಟ ಸಂದರ್ಭದಲ್ಲಿ ಮಳೆ ಬರಲು ಕಾದು ನೆನೆಯುತ್ತಾ ಬಂದ ಹಲವು ಸಂದಭ್ರಗಳಿವೆ. ಅಜ್ಜನಿಂದ ಪ್ರೀತಿಯ ಬೈಗುಳ ತಿಂದದ್ದೂ ಇದೆ.
ಮಂಗಳಾರತಿಯ ನಿರೀಕ್ಷೆಯಿಂದಲೇ ಮನೆಗೆ ತಲುಪಿದೆ. ಅವಳ ತಮ್ಮ ಜಲೀಲ್ ಸಿಟೌಟಿನಲ್ಲಿ ನಿಂತು ಒಳಗೆ ಹೋದರೆ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಮುನ್ನೆಚ್ಚರಿಕೆ ನೀಡಲು ನನ್ನನ್ನು ಕಾಯುತ್ತಿದ್ದ.
""ಭಾವ, ಈಗ ಒಳಗೆ ಹೋದರೆ ನಿಮಗೆ ಭವ್ಯ ಸ್ವಾಗತ ಸಿಗುತ್ತೆ. ಅಕ್ಕ ಗರಂ ಆಗಿದ್ದಾಳೆ'' ಅವನು ಮುನ್ನೆಚ್ಚರಿಕೆ ನೀಡಿದ.
ನಮ್ಮ ಮಾತು ಅವಳಿಗೆ ಕೇಳಿಸಿರಬೇಕು. ಟರ್ಕಿ ಟವೆಲನ್ನು ಹೆಗಲಿಗೇರಿಸಿ ಹೊರ ಬಂದಳು. ನಾನು ಒದ್ದೆಯಾಗಿ ಬರುತ್ತೇನೆ ಎಂದು ಅವಳಿಗೆ ವೊದಲೇ ತಿಳಿದಿತ್ತು. ನನ್ನ ಸ್ಥಿತಿಯನ್ನು ನೋಡಿ ಅವಳಿಗೆ ಕನಿಕರವಾದರೂ ಅದನ್ನು ತೊರ್ಪ ಡಿಸದೆ ಹುಸಿಕೋಪ ಪ್ರಕಟಿಸಿದಳು.
""ಎಂಥ ಮಳೆ ಮಾರಾಯ್ತಿ! ನಾನು ಎನಿಸಿರಲಿಲ್ಲ, ಇಷ್ಟು ಮಳೆ ಬರುತ್ತೆ ಅಂತ'' ಬ್ಯಾಗನ್ನು ಅವಳಿಗೆ ನೀಡುತ್ತಾ ಹೇಳಿದೆ.
""ಮಳೆಗಾಲದಲ್ಲಿ ಮಳೆ ಬರದೆ ಮತ್ತೆ ಯಾವಾಗ ಬರುವುದು. ಬೇಸಿಗೆಯಲ್ಲಾ?'' ಸಿಡುಕುತ್ತಾ ಬ್ಯಾಗನ್ನು ಟೇಬಲಿನ ಮೇಲಿಟ್ಟಳು.
ನಾನು ಕುರ್ಚಿ ಯಲ್ಲಿ ಕುಳಿತೆ. ಮೈಯೆಲ್ಲಾ ಒದ್ದೆಯಾಗಿತ್ತು. ಶಮಾ ಟವೆಲು ಹಿಡಿದು ಕುರ್ಚಿಯ ಹಿಂದೆ ನಿಂತು ನನ್ನ ತಲೆ ಒರೆಸಲು ತೊಡಗಿದಳು. ನಾನು ನನ್ನ ಶೂವನ್ನು ಬಿಚ್ಚಲು ಬಾಗಿದೆ.
""ಸರಿ ಕುಳಿತುಕೊಳ್ಳಿ'' ಎಂದು ಬೆನ್ನಿಗೆ ಒಂದು ಗುದ್ದು ಬಿತ್ತು.
ಶಮಾ ನನ್ನ ತಲೆ ಒರೆಸಿ ಅಡುಗೆ ಕೋಣೆಗೆ ಹೋದಳು. ನಾನು ರೂಮಿಗೆ ಹೋಗಿ ಬಟ್ಟೆ ಬದಲಿಸಿ ಬಂದು ಸೋಫಾದಲ್ಲಿ ಕುಳಿತೆ. ಹೊರಗೆ ಧೋ ಅಂತ ಮಳೆ ಸುರಿಯುತ್ತಿತ್ತು. ಜಲೀಲ್ ಕೂಡಾ ನನ್ನ ಬಳಿ ಕುಳಿತುಕೊಂಡನು. ನಾನು ಅವನೊಂದಿಗೆ ಹರಟಲು ಪ್ರಾರಂಭಿಸಿದೆ.
ಶಮಾ ಬಿಸಿ ಬಿಸಿ ಕಾಫಿ ತಂದು ಟೀಪಾಯಿ ಮೇಲಿಟ್ಟು ನಾನು ಕಳಚಿಟ್ಟಿದ್ದ ಶೂವನ್ನು ಹೊರಗೆ ಸ್ಟೇಂಡ್ ಮೇಲಿಟ್ಟಳು. ಮುಖದಲ್ಲಿ ಕೋಪವಿದ್ದರೂ ಅದು ಕೃತಕ ಕೋಪವೆಂದು ತಿಳಿಯುತ್ತಿತ್ತು.
""ಲೇ ಬಂಗಾರಿ, ಕಾಫಿಯೊಂದಿಗೆ ತಿನ್ನಲು ಏನಾದರೂ ಇದೆಯಾ? ವೊನ್ನೆ ಪೆರ್ನಾಲಿಗೆ ಬಗೆ ಬಗೆಯ ತಿಂಡಿ ತಯಾರಿಸಿದ್ದಿ, ಅದೆಲ್ಲಿ..?''
"" ಪೆರ್ನಾಲಿಗೆ ಮಾಡಿದ್ದು ಇಷ್ಟು ದಿನ ಉಳಿಯುತ್ತದಾ?'' ಸಂಕ್ಷಿಪ್ತ ಉತ್ತರ ಬಂತು.
ಕಾಫಿ ಕುಡಿದು ಸೋಫಾದಲ್ಲಿ ಆರಾಮವಾಗಿ ಕುಳಿತೆ. ಟಿ.ವಿ. ಆನ್ ಮಾಡುವ ಹಾಗಿರಲಿಲ್ಲ. ಕಾರಣ ಮಳೆಯ ಹನಿಗಳು ಪಟ ಪಟ ಉದುರಲು ಆರಂಭಿಸಿದಾಗಲೇ ಕರೆಂಟು ಮಾಯವಾಗಿತ್ತು.
""ಭಾವ ನಾಳೆ ನಮ್ಮ ಕಾಲೇಜಿನಲ್ಲಿ ಸ್ಪೋರ್ಟ್ಸ್ ಡೇ. ನೀವು ಖಂಡಿತಾ ಬರ್ಬೇಕು. ನನ್ಗೆ ಇನ್ನೂರು ಮೀಟರ್ ಓಟ ಇದೆ'' ಜಲೀಲ್ ಒತ್ತಾಯ ಪಡಿಸಿದ.
""ನೀನು ಓಡಿ ಕೊನೆಗೆ ತಲುಪುವುದನ್ನು ನೋಡಲು ನಾನು ಬರ್ಬೇಕಾ?''
""ತಮಾಷೆ ಮಾಡುವುದೇನೂ ಬೇಡ. ನೀವು ಬಂದು ನೋಡಿ ನನ್ನ ಪರ್ಫಾಮೆನ್ಸ್ ''
""ನನಗೆ ಸಮಯವಿಲ್ಲ ಮಾರಾಯ. ಆಫೀಸು ಕೆಲಸವೇ ಬೆಟ್ಟದಷ್ಟುಂಟು. ಅದು ದೊಡ್ಡ ಕೆಲಸವೇನಲ್ಲ. ಆದರೆ ನಿನ್ನ ಅಕ್ಕನನ್ನು ಸುಧಾರಿಸುವಲ್ಲಿ ಸಾಕು ಸಾಕಾಗಿ ಹೋಗುತ್ತದೆ''
ನಾನು ಹೇಳಿದ್ದಕ್ಕೂ ಅವಳು ಒಳಗಿನಿಂದ ಬರುವುದಕ್ಕೂ ಸರಿ ಹೋಗಿತ್ತು.
""ನಿಮ್ಗೆ ನಾನು ಒಂದು ಪೀಡೆ ತರ ಆಗುವುದಾದರೆ ನಾನು ಹೋಗ್ತೇನೆ. ಆಗ ನಿಮ್ಗೆ ತಲೆಬಿಸಿ ಮುಗಿಯಬಹುದಲ್ವಾ?''
""ನೀನು ಪೀಡೆ ಅಂತ ಯಾರು ಹೇಳಿದ್ದು?''
""ಯಾರೂ ಹೇಳಲಿಲ್ಲ. ನಿಮ್ಮ ಮನಸ್ಸಿನಲ್ಲಿದ್ದುದನ್ನು ಹೇಳಿದೆ ಅಷ್ಟೇ...''
""ಓಹೋ ನಿನಗೆ ಮನಸ್ಸನ್ನು ಓದಲು ತಿಳಿದಿದೆ ಅಂತ ಕಾಣುತ್ತೆ..''
""ಅದೆಲ್ಲಾ ಇಲ್ರಿ, ಸಾಕು ನಿಮ್ಮ ಪಟ್ಟಾಂಗ. ನೀರು ಬಿಸಿ ಮಾಡಿಟ್ಟಿದ್ದೇನೆ. ಹೋಗಿ ಸ್ನಾನ ಮಾಡಿ ಬನ್ನಿ'' ಆಜೆÕ ಹೊರ ಬಂತು.
""ಸ್ನಾನ ಮಾಡುವುದಾ.... ನನಗೆ ಸ್ವಲ್ಪ ಶೀತ ಆಗುವ ಲಕ್ಷಣ ಕಾಣ್ತಿದೆ. ಗಂಟಲಲ್ಲಿ ಗರಗರ ಆಗ್ತಿದೆ..''
""ಮಳೆಗೆ ಇನ್ನೂ ಸ್ವಲ್ಪ ನೆನೆದು ಬನ್ನಿ. ಆಗ ಎಲ್ಲ ವಾಸಿಯಾಗುತ್ತೆ..'' ನಿರೀಕ್ಷಿಸಿದ ಉತ್ತರವೇ ಅವಳಿಂದ ಬಂತು.
""ನಿಮಗೆ ಒಂದು ನೆಗಡಿಯಾದರೆ ಅಂದು ಮನೆಯವರಿಗೆ ನಿದ್ದೆಯೇ ಇಲ್ಲ. ಬಿಸಿ ನೀರು ತಾ, ಕಷಾಯ ತಾ, ಕಂಬಳಿ ತಾ ಎಂದೆಲ್ಲಾ ಬೊಬ್ಬೆ ಹಾಕ್ತಿತ್ರೀರಿ. ಆದರೆ ನನಗೆ ಜ್ವರ ಬಂದರೂ ತಿರುಗಿ ನೋಡುವವರಿಲ್ಲ. ಈ ಪುರುಷರೇಕೆ ಹೀಗೆ?....'' ಬೈಗುಳದ ಸುರಿಮಳೆಯೇ ಸುರಿಯಿತು. ಶಮಾ ಅಡುಗೆ ಕೋಣೆಗೆ ಹೋದಳು.
ಅವಳು ಹಾಗೇನೆ. ನನ್ನ ಯಾವುದೇ ತಪ್ಪನ್ನು ಪುರುಷ ವರ್ಗದ ಮೇಲೆ ಹೊರಿಸ್ತಾಳೆ.
ಅವಳ ಬೈಗುಳವನ್ನು ಕೇಳಿ ಜಲೀಲ್ ಮುಸಿ ಮುಸಿ ನಕ್ಕನು.
""ಸುಮ್ಮನಿರು ಮಾರಾಯ. ಮುಸುಂಟಿಗೆ ಇಡ್ತೇನೆ ಈಗ..'' ಎಂದು ಗದರಿಸಿ ಎದ್ದು ಅಡುಗೆ ಕೋಣೆಗೆ ಹೋದೆ. ಶಮಾ ಅಡುಗೆ ಕೋಣೆಯನ್ನು ಶುಚಿಗೊಳಿಸುತ್ತಿದ್ದಳು.
""ಲೇ ಚಿನ್ನಾ.. ರಾತ್ರಿಗೆ ಏನು ಮಾಡಿದ್ದಿ?...'' ಕೆಳಗೆ ಬಿದ್ದಿದ್ದ ಕೈ ಬಟ್ಟೆಯನ್ನು ಎತ್ತಿ ಮೇಲಿಡುತ್ತಾ ಕೇಳಿದೆ.
""ನಿಮ್ಗೆ ತಿನ್ನುವುದೇ ಯೋಚನೆ''
""ಹೌದು ಬಂಗಾರಿ, ಬದುಕಬೇಕಲ್ಲಾ''
""ಕೆಲವರು ತಿನ್ನಲಿಕ್ಕಾಗಿ ಬದುಕುತ್ತಾರೆ''
""ಓಹೋ! ಅದು ಯಾರು?''
""ಹಾಗೆ ಬದುಕುವವರಲ್ಲಿ ಹೋಗಿ ಕೇಳಿ ನೋಡಿ'' ಪ್ರಶ್ನೆಗಳಿಗೆ ಚುಟುಕು ಉತ್ತರ ಬರುತ್ತಿತ್ತು.
""ಓಕೆ, ಇವತ್ತು ರಾತ್ರಿಗೆ ಏನೂ ಮಾಡ್ಬೇಡ. ಎಗ್ಸಿಬಿಷನ್ಗೆ ಹೋಗೋಣ. ಅಲ್ಲಿಂದಲೇ ಊಟ ಮಾಡಿ ಬಂದರಾಯಿತು'' ಇದನ್ನು ಕೇಳಿದ್ದೇ ತಡ. ಅವಳ ಮುಖದಲ್ಲಿ ನಗುವೊಂದು ಮಿಂಚಿತು.
""ಓ, ಶ್ಶೂ.... ನಾನು ಆಗಲೇ ಅಡಿಗೆ ಮಾಡಿಟ್ಟಿದ್ದೇನೆ. ನಿಮ್ಗೆ ವೊದಲೇ ಹೇಳ್ಬಾರ್ದಿತ್ತಾ ...'' ಎನ್ನುತ್ತಾ ತಲೆಗೆ ಒಂದು ವೊಟಕಿದಳು. ನಾನು ಅವಳ ಬಳಿ ಬಂದು ನಿಂತೆ.
ಅವಳು ಕೋಪಗೊಂಡಾಗ ಹೊರಗೆ ಸುತ್ತಾಡಿಸಿ ಕೊಂಡು ಬಂದರೆ ಅವಳ ಕೋಪವೆಲ್ಲಾ ಮಾಯವಾಗುತ್ತದೆ. ಆದರೆ ಅವಳಿಗೆ ಕೋಪ ಬಂದ ಕಾರಣ ನಾನು ಅವಳನ್ನು ಹೊರಗೆ ಸುತ್ತಾಡಿಸಲು ಕರೆದುಕೊಂಡು ಹೋಗುವುದು ಎಂದು ಅವಳಿಗೆ ತಿಳಿದಿಲ್ಲ. ಅದು ತಿಳಿದರೆ ಯಾವಾಗಲೂ ಕೋಪ ಬರುವ ಸಾಧ್ಯತೆ ನೂರು ಶೇಕಡಾ ಉಂಟು.
""ಶೀ, ಆಚೆ ಹೋಗಿ. ನಾನು ಇಲ್ಲಿ ಸ್ವಲ್ಪ ಕ್ಲೀನ್ ಮಾಡಿ ಬರ್ತೇನೆ ...''
ಜಲೀಲ್ ಅಡುಗೆ ಕೋಣೆಯ ಹೊರಗೆ ನಿಂತು ಕೆಮ್ಮುವ ಶಬ್ಧ ಕೇಳಿಸಿತು. ನಾನು ಹೊರಗೆ ಬಂದೆ.
""ಭಾವ, ಮಳೆ ನಿಂತಿದೆ. ಹೊರಗೆ ಒಂದು ರೌಂಡ್ ಸುತ್ತಾಡಿ ಬರೋಣ. ನೀವು ತಯಾರಿದ್ದೀರಾ...?''
""ಓ.ಕೆ. ಬತ್ರೇನೆ, ಒಟ್ಟಿಗೆ ಹೋಗೋಣ... ಅವಳೂ ಬರ್ತಾಳಂತೆ..''
ನಾವು ಹೊರಗೆ ಬಂದು ಸಿಟೌಟಿನಲ್ಲಿ ಕುಳಿತುಕೊಂಡೆವು. ಸ್ವಲ್ಪ ಹೊತ್ತಾದ ಮೇಲೆ ಶಮಾ ಬಾತ್ ಟವೆಲನ್ನು ಭುಜಕ್ಕೇರಿಸಿ ಬಂದಳು.
""ರೀ ಹೊರಡ್ಬೇಡ್ವಾ. ನೀವು ಇಲ್ಲಿ ಕೂತು ಪಟ್ಟಾಂಗ ಹೊಡೀತಿದ್ದೀರಿ...'' ಎಂದು ಹೇಳುತ್ತಾ ನನ್ನನ್ನು ತಳ್ಳಿಕೊಂಡು ಹೋಗಿ ಬಾತ್ರೂಮಿಗೆ ಸೇರಿಸಿದಳು.
""ಬೇಗ ಸ್ನಾನ ಮಾಡಿ ಬನ್ನಿ. ನಾನು ಹೊರಟು ನಿಂತಿರ್ತೇನೆ '' ಎಂದು ಹೇಳಿ ಬಾಗಿಲು ಹಾಕಿದಳು. ನಾನು ಸ್ನಾನ ಮಾಡಬೇಕು ಎಂಬ ಅವಳ ಕಾಳಜಿಯ ಬಗ್ಗೆ ಒಳಗೊಳಗೇ ಹೆಮ್ಮೆ ಪಟ್ಟುಕೊಂಡೆ. ಬಹಳ ಉತ್ಸಾಹದಿಂದ ಅವಳು ರೆಡಿಯಾಗುವ ಶಬ್ಧವು ಬಾತ್ರೂಮಿಗೂ ಕೇಳಿಸುತ್ತಿತ್ತು. ಕಪಾಟಿನ ಬಾಗಿಲುಗಳು ಡಬಡಬ ಶಬ್ಧ ಮಾಡುತ್ತಿದ್ದವು....
No comments:
Post a Comment