ನಾನು ಗೇಟು ತೆರೆದು ಬೇಗನೆ ಮನೆಗೆ ಬಂದು ಟಿ.ವಿ. ಓನ್ ಮಾಡಿ ಕುಳಿತೆ. ಇಂಡಿಯಾ, ಶ್ರೀಲಂಕಾ ಮಧ್ಯೆ ಮ್ಯಾಚ್ ನಡೆಯುತ್ತಿತ್ತು. ಅದು ರೋಮಾಂಚನಕಾರಿ ಘಟ್ಟ ತಲುಪಿತ್ತು. ಉಡುಪನ್ನು ಮಡಚಿಟ್ಟುಕೊಳ್ಳುತ್ತಿದ್ದ ಶಮಾ ಟಿ.ವಿ.ಯ ಶಬ್ಧಕ್ಕೆ ಹೊರ ಬಂದಳು. ಸಾವಿರ ತೂತಿರುವ ನನ್ನ ಬನಿಯನ್ ಅವಳ ಕೈಯಲ್ಲಿತ್ತು.
'ನೀವು ಯಾವಾಗ ಬಂದದ್ದು...' ರಾಗ ಎಳೆದಳು.
ನಾನು ಮೌನ ವಹಿಸಿ ಮ್ಯಾಚ್ ನೋಡುತ್ತಾ ಕುಳಿತೆ. ಮಾತಾಡದ್ದನ್ನು ಕಂಡು ಕೈಯ್ಯಲ್ಲಿದ್ದ ಬನಿಯಾನನ್ನು ಎತ್ತಿ ಎಸೆದಳು. ಬೇಡ ಎಸೆದ ಬಲೆಯಂತೆ ಅದು ನನ್ನ ಮೇಲೆ ಬಂದು ಬಿತ್ತು.
'ಏನು ಮಾರಾಯ್ತಿ. ಮನೆಗೆ ಬಂದವರನ್ನು ಓಡಿಸ್ತಿಯಾ' ನಾನು ಪ್ರತಿಕ್ರಿಯಿಸಿದೆ.
'ಮನೆಗೆ ಬರುವುದು ಹೀಗಾ...ಕಳ್ಳರು ಕೂಡಾ ಹೀಗೆ ಬರುವುದಿಲ್ಲ ' ಗರಂ ಆಗಿಯೇ ಉತ್ತರ ಕೊಟ್ಟು ಒಳ ಹೋದಳು.
ನಾನು ಟಿ.ವಿ. ನೋಡುತ್ತಾ ಕುಳಿತೆ. ಶಮಾ ವಸ್ತ್ರ ಮಡಚಿಟ್ಟು ಕಾಫಿ ತಯಾರಿಸಲು ಅಡುಗೆ ಕೋಣೆಗೆ ಹೋದಳು. ಕಾಫಿಗೆ ನೀರಿಟ್ಟು ನನ್ನ ಸಮೀಪ ಬಂದು ಕುಳಿತಳು. ಆಗಲೇ ನನಗೆ ಮನದಟ್ಟಾಯಿತು. ಇದು ಯಾವುದೋ ಒಂದು ಬೇಡಿಕೆಯನ್ನು ನನ್ನ ಮುಂದಿಡಲಿಕ್ಕಿರುವ ಮುನ್ನುಡಿ ಎಂದು.
'ರೀ.. ನನಗೆ ಒಂದು ಚಪ್ಪಲ್ ಬೇಕು. ಇದ್ದ ಚಪ್ಪಲಿ ಸವೆದು ಹೋಗಿದೆ.' ತನ್ನ ಬೇಡಿಕೆ ಮುಂದಿಟ್ಟಳು.
'ಏನು ಚಪ್ಪಲಾ ...! ವೊನ್ನೆಯಲ್ವಾ ತೆಗೆದು ಕೊಟ್ಟದ್ದು. ಅದು ಹೇಗೆ ಸವೆದು ಹೋಗುವುದು. ನೀನೇನು ಪೋಸ್ಟ್ ಮ್ಯಾನ್ ಕೆಲಸ ಮಾಡ್ತಿಯಾ' ನಾನು ಸ್ವಲ್ಪ ಜೋರಾಗಿಯೇ ಉತ್ತರ ನೀಡಿದೆ.
'ಹೋಂ .. ಮೊನ್ನೆಯಂತೆ ವೊನ್ನೆ.... ಕಳೆದ ಬಕ್ರೀದಿಗಲ್ವಾ ನೀವು ತೆಗೆದು ಕೊಟ್ಟದ್ದು. ಈಗ ಒಂದು ವರ್ಷವಾಗುತ್ತಾ ಬಂತು' ಅವಳು ಕೂಡಾ ಸ್ವರವೇರಿಸಿ ಮಾತಿಗಿಳಿದಳು.
ನಾನು ಸ್ವಲ್ಪ ತಣ್ಣಗಾದೆ. ಇನ್ನು ಮಾತನಾಡಿದರೆ ನೆರೆಕರೆಯವರು ಓಡಿ ಬರುವುದು ಗ್ಯಾರಂಟಿ.
ನನ್ನವಳ ಸ್ವರ ಸ್ವಲ್ಪ ಇಂಪು. ಒವ್ಮೊಮ್ಮೆ ನಾನು ಒತ್ತಾಯಿಸಿದರೆ ಹಾಡ್ತಾಳೆ. ಶಾಲೆಯಲ್ಲಿ ಅವಳಿಗೆ ಹಾಡುಗಾರಿಕೆಯಲ್ಲಿ ಬಹು ಮಾನ ಸಿಕ್ಕಿದೆಯಂತೆ. ಆದರೆ ಅವಳಿಗೆ ಕೋಪ ಬಂದು ಸ್ವರವೇರಿಸಿ ಮಾತನಾಡಿದರೆ ಇಂಪೆಲ್ಲಾ ಹೋಗಿ ದೊಡ್ಡ ಯಕ್ಷಗಾನವಾಗುತ್ತದೆ.
'ಏನೇ ಈಗ ಚಪ್ಪಲಿಯ ಅಗತ್ಯ. ಹೊರಗೆ ಸುತ್ತಾಡಲು ಹೋಗುತ್ತಿಯಾ' ಉರಿಯುವ ಬೆಂಕಿಗೆ ತುಪ್ಪ ಸುರಿದೆ. ಆದರೆ ಅದು ಉರಿಯುವ ಬದಲು ನಂದಿ ಹೋಯಿತು. ಅವಳ ಪ್ರತಿಕ್ರಿಯೆಯನ್ನು ಎದುರಿಸಲು ಸಜ್ಜಾಗಿ ನಿಂತ ನನಗೆ ಕೇವಲ ಅವಳ ಕಣ್ಣೀರನ್ನೇ ನೋಡಬೇಕಾಯಿತು. ಪಾಪ ಅವಳು ಕಣ್ಣೀರು ಸುರಿಸುತ್ತಾ ಒಳನಡೆದಳು.
ಅವಳನ್ನು ಸಮಾಧಾನ ಪಡಿಸುವ ಮನಸ್ಸಾಯಿತು. ಆದರೆ ಈ ಮ್ಯಾಚನ್ನು ಬಿಟ್ಟು ಹೋಗುವುದು ಹೇಗೆ. ಆದದ್ದಾಗಲಿ ಮ್ಯಾಚ್ ನೋಡಿ ಮುಗಿಸುವ ಎಂದು ಕುಳಿತೆ.
ಸ್ವಲ್ಪ ಹೊತ್ತಿನ ನಂತರ ಶಮಾ ಚಹಾದೊಂದಿಗೆ ಬಂದಳು.'ಮಳೆ ನಿಂತು ಹೊದ ಮೇಲೆ ಹನಿಯೊಂದು ಮೂಡಿದೆ ' ಎಂಬಂತೆ ಒಂದು ಹನಿ ಕಣ್ಣೀರು ಕೆನ್ನೆಯ ಮೇಲೆಯೇ ಇತ್ತು. ನಾನು ಎಷ್ಟೇ ಸತಾಯಿಸಿದರೂ ಅವಳಿಗೆ ನನ್ನೊಡನಿದ್ದ ಪ್ರೀತಿಯು ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಲಿಲ್ಲ. ಅದೇ ನನ್ನ ದೊಡ್ಡ ಅದೃಷ್ಟ.
'ಇಕೊಳ್ಳಿ ಚಾ' ಎಂದು ಟೀಪಾಯ್ ಮೇಲೆ ಕುಕ್ಕಿ ಅಡುಗೆ ಮನೆ ಕಡೆಗೆ ಹೋದಳು.
'ಈಗ ಚಹಾ ಯಾರು ಕೇಳಿದರು' ನಾನು ಮೆಲ್ಲನೆ ಗುನುಗಿದೆ. ಅದು ಅವಳಿಗೆ ಕೇಳಿಸಿರಬೇಕು.
'ಏನು ನೀವು ಹೇಳಿದ್ದು' ಹೋಗುತ್ತಿದ್ದವಳು ತಿರುಗಿ ಬಂದಳು.
'ಏನಿಲ್ಲ, ನಾನು ಕೇಳದೆಯೇ ನೀನು ಚಹಾ ತಂದಿಯಲ್ಲ ಥ್ಯಾಂಕ್ಸ್'
'ಏನು ನನಗೆ ಕಿವಿ ಕೇಳಿಸ್ತದೆ. ನಿಮಗೆ ಪ್ರೀತಿ ಇಲ್ಲದಿದ್ದರೂ ನನಗೆ ನಿಮ್ಮಲ್ಲಿ ಪ್ರೀತಿ ಇದೆ. ಪತ್ನಿಯರ ಬಾಧ್ಯತೆಯ ಕುರಿತು ದೊಡ್ಡ ದೊಡ್ಡದು ಬರೀತಿರಲ್ಲಾ ' ಕೊನೆಯ ಅಸ್ತ್ರವನ್ನು ಪ್ರಯೋಗಿಸಿದಳು. ಇವಳ ಗಲಾಟೆಯಲ್ಲಿ ಲಾಸ್ಟ್ ಬ್ಯಾಟ್ಸ್ ಮನ್ ಶ್ರೀಶಾಂತ್ ಬೌಲ್ಡ್ ಆದದ್ದು ಗೊತ್ತೇ ಆಗಲಿಲ್ಲ.
'ಆಯ್ತು ಕಣೆ ನೀನು ಹೇಳಿದ್ದೇ ಸರಿ '
'ನಾನು ಯಾವಾಗಲೂ ಸರಿಯನ್ನೇ ಹೇಳುವುದು. ಇದ್ದದ್ದನ್ನು ಹೇಳಿದರೆ ನಿಮಗಾಗುವುದಿಲ್ಲ ' ಸಿಡುಕುತ್ತಾ ಅಡುಗೆ ಕೋಣೆಗೆ ಹೋದಳು.
ಹೇಗೂ ಇಂಡಿಯಾದ ಹಣೆಬರಹ ಗೊತ್ತಾಯಿತು. ಇನ್ನು ನೋಡಿ ಏನು ಪ್ರಯೋಜನ. ನಾನು ಟಿ.ವಿ. ಆಫ್ ಮಾಡಿ ಚಾ ಕುಡಿದ ಗ್ಲಾಸನ್ನು ಹಿಡಿದು ಅಡುಗೆ ಮನೆಗೆ ಹೊರಟೆ.
'ಇಕೊಳ್ಳೆ, ಎಲ್ಲಿದ್ದಿ' ನಾನು ಸಂಧಾನ ಮಾತುಕತೆಗೆ ಪ್ರಾರಂಭಿಸಿದೆ.
'ಬಂದು ನೋಡಿ. ಎಲ್ಲಿದ್ದೀನೀಂತ ' ಅಡುಗೆ ಕೋಣೆಯಿಂದ ಉತ್ತರ ಬಂತು
'ಅವನೆಲ್ಲಿ'
...................
'ನಿನ್ನಲ್ಲಿ ಕೇಳಿದ್ದು'
'ಯಾರು?'
'ನಿನ್ನ ಮಗ '
'ಓ' ನನಗೆ ಅವನು ಮಗ. ನಿಮಗೆ ಏನಾಗಬೇಕು'
ಅವಳಿಂದ ಉಲ್ಟಾ ಉತ್ತರ ಬರಲು ಶುರುವಾಯಿತು. ಅಂತಹ ಉತ್ತರ ಬರತೊಡಗಿದರೆ ಅದು ಕೋಪ ಇಳಿಯುವುದರ ಸೂಚನೆ.
'ಏನು ಮಾರಾಯ್ತಿ. ನೀನು ಇಲ್ಲಿರಬೇಕಾದವಳಲ್ಲ ಹೈಕೋರ್ಟ್ನಲ್ಲೋ, ಸುಪ್ರೀಮ್ ಕೋರ್ಟ್ನಲ್ಲೋ ಲಾಯರಾಗಬೇಕಿತ್ತು''
'ನಾನು ಲಾಯರಾಗುತ್ತಿದ್ದರೆ ನಿಮ್ಮನ್ನು ಮದುವೆಯಾಗುತ್ತಿರಲಿಲ್ಲ '
'ಹೌದು, ಹೌದು ನೀನು ಲಾಯರಾಗದಿದ್ದುದು ಒಳ್ಳೆದೇ ಆಯಿತು. ಆಗಿದ್ದರೆ ನೀನು ನನಗೆ ಸಿಗುತ್ತಿರಲಿಲ್ಲ ' ಅವಳ ಮುಖದಲ್ಲಿ ನಗು ಮಿನುಗಿತು. ಆದರೂ ನನಗೆ ತೋರ್ಪಡಿಸದೆ ತಿರುಗಿ ನಿಂತು ನಕ್ಕಳು.
'ಅಲ್ಲ ಕಣೇ, ನಮ್ಮ ಮಗ ಎಲ್ಲಿ'?
'ಎಲ್ಲೋ ಹೊರಗೆ ಆಡ್ತಿರಬೇಕು. ಹೋಗಿ ನೋಡಿ ' ಉತ್ತರ ಕೊಟ್ಟಳು. ಅಳಿದುಳಿದ ಕೋಪ ಮಾತ್ರ ಬಾಕಿ ಇತ್ತು.
ನಾನು ಮೂಲೆಯಲ್ಲಿಟ್ಟಿದ್ದ ಫ್ರಿಜ್ಜ್ ನ ಬಾಗಿಲು ತೆರೆಯುತ್ತಾ ಹೇಳಿದೆ.
'ಇಂದು ರಾತ್ರಿ ಅಡುಗೆ ಮಾಡ್ಬೇಡ ಕಣೇ'
'ಯಾಕೆ? ಉಪವಾಸ ಕೂರ್ಬೇಕಾ'
'ಅಲ್ಲ, ಇಂದಿನ ಡಿನ್ನರ್ ಹೊರಗೆ. ಬೇಗ ರೆಡಿಯಾಗು'
ಅಷ್ಟು ಹೇಳಿದ್ದೇ ತಡ. ಅವಳ ಸಂತೋಷಕ್ಕೆ ಪಾರವೇ ಇಲ್ಲ. ನನ್ನೊಂದಿಗೆ ಹೊರಗೆ ಕೈಕೈ ಹಿಡಿದು ಸುತ್ತಾಡುವುದೆಂದರೆ ಅವಳಿಗೆ ಪಂಚಪ್ರಾಣ. ಆದರೆ ನನಗೆ ಪುರುಸೊತ್ತಿರಬೇಕಲ್ವಾ'
ಅವಳು ನನ್ನ ಬಳಿ ಬಂದಳು. ಅಮವಾಸೆಯಂತಿದ್ದ ಮುಖ ಈಗ ಹುಣ್ಣಿಮೆಯಂತಾಗಿತ್ತು. ಆದರೆ ಕೋಪ ಬಂದಿತ್ತು ಎಂಬುದರ ಕುರುಹಾಗಿ ಮೂಗಿನ ಕೆಂಪು ಇನ್ನೂ ಮಾಸಿರಲಿಲ್ಲ.
'ರೀ ನೋವಾಯ್ತಾ'
'ಏನು? ನೋವಾಗಲು ನೀನು ಇಂಜೆಕ್ಷನ್ ಕೊಟ್ಟಿದ್ದಿಯಾ'
'ಅಲ್ಲರೀ, ನಿಮ್ಮ ಮನಸ್ಸಿಗೆ ನೋವಾಯ್ತಾ'
'ಎಂಥ ನೋವು ಮಾರಾಯ್ತಿ. ನನಗೆ ಎಷ್ಟೇ ನೋವಾದರೂ ನೀನೇ ಮುಲಾಮು ಹಚ್ಚುತ್ತಿ. ಮತ್ತೆ ಯಾಕೆ ಹೆದರಿಕೆ'
'ಐ ಯಾಂ ರಿಯಲಿ ಸಾರಿ ಆಯ್ತಾ' ನನ್ನ ತೋಳು ಬಳಸಿದಳು.
'ಏ... ರೋಮ್ಯಾನ್ಸೆಲ್ಲ ಮತ್ತೆ. ಈಗ ಹೋಗಿ ರೆಡಿಯಾಗು' ನಾನು ಎಚ್ಚರಿಸಿದೆ. ಅವಳು ಚಿಗರೆಯಂತೆ ಓಡಿದಳು.
ನಾನು ಹೋಗಿ ಸೋಫಾದಲ್ಲಿ ಕುಳಿತು ಟಿ.ವಿ. ಆನ್ ಮಾಡಿದೆ. ಆದರೆ, ಕೇಬಲ್ ಕಟ್ಟಾಗಿತ್ತು.
'ರೀ, ಇಲ್ಲಿ ಬನ್ನಿಯಂತೆ ' ಒಳಗಿನಿಂದ ಕೂಗಿದಳು.
ನಾನು ಹೋಗಿ ನೋಡಿದೆ. ಬಚ್ಚಲಿನ ಬಾಗಿಲಲ್ಲಿ ಡ್ರೆಸ್ ಹಿಡಿದು ನಿಂತಿದ್ದಳು.
'ಇಲ್ಲ ಕಣೆ ನಾನು ಸ್ನಾನ ಮಾಡುವುದಿಲ್ಲ. ನೀನು ಮಾಡಿ ಬಾ' ನಾನು ಸಂದರ್ಭೋಚಿತವಾಗಿ ಹೇಳಿದೆ.
'ಛೀ ನೀವೊಂದು... ಅದಕ್ಕಲ್ಲರೀ'
'ಮತ್ಯಾವುದಕ್ಕೆ?'
'ನೀವು ಬರ್ತಿರೋ ಇಲ್ವೋ'
ನಾನು ಅವಳ ಬಳಿ ಹೋದೆ. ಅವಳು ಮುಖವನ್ನು ನನ್ನ ಕಿವಿಯ ಬಳಿ ತಂದು ಹೇಳಿದಳು.'ರೀ, ಚಪ್ಪಲಿ ಕೊಳ್ಳಲು ಮರೆಯಬಾರದು'' ಮುಗ್ದ ಹುಡುಗಿ.
ಬೇಗನೆ ಬಾಗಿಲು ಮುಚ್ಚಿ, 'ನೀವು ಬೇಗ ಮಗನನ್ನು ಕರೆದು ತನ್ನಿ.' ಎಂದು ರಾಗ ಎಳೆದಳು.
ಹೊರಗೆ ಆಡುತ್ತಿದ್ದ ಮಗ ಆದಿಲ್ನನ್ನು ಕರೆಯಲು ನಾನು ಹೊರಟೆ.
wah super sir, tumba chennagide... originality in love...
ReplyDeletethanka ashwath
DeleteSuper, the way you narrate the conversation is the strength of your writing. keep going buddy.
ReplyDeletethanks asnthu
Delete