ತಾಯಿ ಮತ್ತು ಮಕ್ಕಳ ನಡುವಿನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರೀತಿಯ ಹಲವು ರೂಪಗಳು ಕಪಟವಾಗಿದ್ದರೂ ಈ ಪ್ರೀತಿಯು ನಿಷ್ಕಳಂಕವಾಗಿರುತ್ತದೆ. ಮಕ್ಕಳಿಗೆ ನಾನಾ ಕಾರಣಗಳಿಂದ ತಾಯಿಯೊಂದಿಗೆ ಪ್ರೀತಿ ಕಡಿಮೆಯಾದರೂ ತಾಯಿಗೆ ಮಾತ್ರ ಮಕ್ಕಳೊಂದಿಗೆ ಪ್ರೀತಿ ಹೆಚ್ಚಾಗುತ್ತಿರುತ್ತದೆ. ಅದು ಜೀವನದ ಕೊನೆಯವರೆಗೂ ಹಾಗೇ ಮುಂದುವರಿಯುತ್ತದೆ. ತಾಯಿಯು ಮಕ್ಕಳಿಗೋಸ್ಕರ ಸಿಕ್ಕಾಪಟ್ಟೆ ಕಷ್ಟ ಅನುಭವಿಸುತ್ತಾಳೆ. ತಾಯಿಯ ಪ್ರಾರ್ಥನೆಯ ವಸ್ತುವಾಗಿ ಯಾವಾಗಲೂ ಮಕ್ಕಳು ಸ್ಥಾನ ಪಡೆದಿರುತ್ತಾರೆ. ಇಂದು ನಾವು ಹೊರಗಡೆ ಹೋಗಿ ಅಥವಾ ಯಾವುದಾದರೂ ವಾಹನದಲ್ಲಿ ಸುತ್ತಾಡಿ ಸುರಕ್ಷಿತವಾಗಿ ಮನೆಗೆ ತಲುಪುವುದಿದ್ದರೆ ಅದು ತಾಯಿಯ ಪ್ರಾರ್ಥನೆಯ ಫಲ ಎಂದೇ ನಾನು ನಂಬುತ್ತೇನೆ. ಯಾಕೆಂದರೆ ಅವಳ ಪ್ರಾರ್ಥನೆಯಲ್ಲಿ ಸ್ವಾರ್ಥ ಇರುವುದಿಲ್ಲ. ಮಕ್ಕಳಿಗಾಗಿ ಮಿಡಿಯುವ ಹೃದಯದಿಂದ ಹೊರಡುವ ಪ್ರಾರ್ಥನೆಯು ತೀಕ್ಷ್ಣವಾಗಿರುತ್ತದೆ.
ಮಕ್ಕಳು ಸಂಕಷ್ಟ ಅನುಭವಿಸುವಾಗ ಅವರಿಗೆ ನೆನಪಾಗುವುದು ತಾಯಿಯದ್ದಾಗಿದೆ. ತಾಯಿಯ ಸಾಂತ್ವನದ ನುಡಿಗಳು ಅವರ ಅರ್ಧ ಸಂಕಷ್ಟವನ್ನು ದೂರ ಮಾಡುತ್ತವೆ. ಈ ಘಟನೆಯನ್ನೊಮ್ಮೆ ಓದಿ ನೋಡಿ. ಒಂದು ವರ್ಷದ ಹಿಂದೆ ನಡೆದ ಘಟನೆ. ಗೆಳೆಯರೊಂದಿಗೆ ಗೋವಾಕ್ಕೆ ಹೋಗಿ ಮರಳುವಾಗ ನಡೆದ ಕಣ್ಣೀರಿನ ಕಥೆಯಿದು. ಗೋವಾದಿಂದ ಕಲ್ಲಿಕೋಟೆಗಿರುವ ಟ್ರೈನ್ ನಿಮಿಷಗಳ ವ್ಯತ್ಯಾಸದಿಂದ ತಪ್ಪಿ ಹೋಯಿತು. ಮನೆಗೆ ಬೇಗನೇ ತಲುಪಬೇಕು ಎಂಬ ತವಕದಿಂದ ವೊದಲು ಬಂದ ಮಂಗಳೂರು ಕಡೆಗಿರುವ ಗಾಡಿ ಹತ್ತಿ ಮಂಗಳೂರು ತಲುಪಿದೆವು. ಆಗ ರಾತ್ರಿ 11ರ ಸಮಯ. ಜನ ಸಂದಣಿ ಅಷ್ಟೇನೂ ಇರಲಿಲ್ಲ. ಕಲ್ಲಿಕೋಟೆಗಿರುವ ಟ್ರೈನಿನ ಕುರಿತು ಅಲ್ಲಿ ವಿಚಾರಿಸಿದಾಗ, ಮುಂಜಾನೆ 6 ಗಂಟೆಗೆ ಎಂಬ ಕಳವಳಕಾರಿ ಉತ್ತರ ಸಿಕ್ಕಿತು. ನಾವು ಸ್ಟೇಶನಿನಲ್ಲಿ ನಿಂತು, ಕುಳಿತು, ನಡೆದು, ಲ್ಯಾಪ್ಟಾಪಿನಲ್ಲಿ ಗೇಮ್ ಆಡಿ ಸಮಯ ಕಳೆದೆವು. ರಾತ್ರಿ ಮೂರು ಗಂಟೆಯ ಸಮಯ....
ವಿಶ್ರಾಂತಿ ಕೊಠಡಿಯ ಕುರ್ಚಿಯೊಂದರಲ್ಲಿ ನಿದ್ರೆಗೆ ಜಾರಿದ ನಾನು ಮಹಿಳೆಯೋರ್ವಳ ಕಿರುಚಾಟದಿಂದ ಥಟ್ಟನೆ ಎಚ್ಚೆತ್ತುಕೊಂಡೆ. 'ದೇವರೇ ನನ್ನ ಸರ ಕಾಣುತ್ತಿಲ್ಲ' ಎಂದು ಅವಳು ಬೊಬ್ಬೆ ಹೂಡೆಯುತ್ತಿದ್ದಳು. ಏನು ಎಂದು ತಿಳಿಯದೆ ಸೇರಿದ್ದ ಜನರ ಗುಂಪಿನ ಕಡೆಗೆ ನಾನು ಓಟಕ್ಕಿತ್ತೆ. ಅಲ್ಲಿ ಸೇರಿದ್ದ ಜನರ ಮಾತಿನಲ್ಲಿ ಸರ ಕಳ್ಳತನ ನಡೆದಿದೆ ಎಂದು ತಿಳಿಯಿತು. ಅವರು ಯಾವುದೋ ತೀರ್ಥಕ್ಷೇತ್ರಕ್ಕೆ ಹೋಗಿ ಮರಳುವವರಾಗಿದ್ದರು. ಈ ಮಹಿಳೆ ಅಳು ನಿಲ್ಲಿಸಲಿಲ್ಲ. ಪತಿಯು ಅತ್ತಿತ್ತ ನಡೆಯುತ್ತಾ ಯಾರ್ಯಾರನ್ನೋ ನೋಡುತ್ತಿದ್ದಾನೆ. ಓರ್ವ ಕಪು ಅಂಗಿ ಧರಿಸಿದ ಕಳ್ಳನ ಮುಖಭಾವ ಹೊದಿದ್ದ ಒಬ್ಬ ಹೂಡುಗನು ಅತ್ತಿತ್ತ ಅಲೆಯುತ್ತಿದ್ದುದನ್ನು ನಾನು ನೋಡಿದ್ದೇನೆ ಎಂದು ಗುಂಪಿನಲ್ಲಿದ್ದ ಯಾರೋ ಹೇಳಿದರು. ಅಂತಹ ಚಹರೆ ಹೊಂದಿದ ಹುಡುಗನನ್ನು ಹುಡುಕುತ್ತಾ ಎಲ್ಲರ ಕಣ್ಣುಗಳೂ ಅತ್ತಿತ್ತ ಹರಿದಾಡಿದವು. ಆದರೆ ಫಲಿತಾಂಶ ಶೂನ್ಯ.
ಸಮಯವು ಮುಂದೆ ಸಾಗುತ್ತಿತ್ತು.....
ನಾನು ಮತ್ತು ಗೆಳೆಯ ಕುಳಿತು ಲ್ಯಾಪ್ಟಾಪಿನಲ್ಲಿ ಸೀಡಿ ನೋಡುತ್ತಿದ್ದೆವು. ಆಗ ನನ್ನ ಬಳಿ ಕುಳಿತಿದ್ದ ಓರ್ವ ವ್ಯಕ್ತಿಯು ನನ್ನನ್ನು ಕರೆಯುತ್ತಾ ಹೇಳಿದನು. 'ಇಲ್ಲಿ ಕುಳಿತಿದ್ದದ್ದು ಆ ಹುಡುಗ ಅಂತ ಕಾಣುತ್ತೆ. ವಿಚಾರಿಸಿ.' ನಾನು ನೋಡಿದೆ. ಕಪ್ಪು ಅಂಗಿ ಧರಿಸಿದ ಒಬ್ಬ ಹುಡುಗ ನಡೆದುಕೊಂಡು ಹೋಗುತ್ತಿದ್ದನು. ತಡ ಮಾಡದೆ ಆ ಮಹಿಳೆಯ ಗಂಡನಿಗೆ ಮಾಹಿತಿ ನೀಡಿದೆ. ಇದನ್ನು ಕೇಳಿದ್ದೇ ತಡ ಅವನು ಹುಡುಗನನ್ನು ಹಿಡಿಯಲು ಹೊರಗೋಡಿದನು. ಅವನೊಂದಿಗೆ ಹಲವರು ಸೇರಿಕೊಂಡರು. ಲ್ಯಾಪ್ಟಾಪನ್ನು ಮಡಚಿ ನಾನೂ ಕೂಡಾ ಎಲ್ಲರಂತೆ ಓಡಿದೆ. ಆಗಲೇ ಅವರು ಆ ಹುಡುಗನನ್ನು ಹಿಡಿದಾಗಿತ್ತು. ನಾನು ಹುಡುಗನನ್ನೇ ನೋಡಿದೆ. 20ರ ಹರೆಯ ಇರಬಹುದು. ಬಿಳಿ ಮೈ ಬಣ್ಣ, ಅವನು ವಿಪರೀತ ಬೆವರಿದ್ದನು.
'ನೀನಲ್ಲವೇ ಇಲ್ಲಿ ಬಂದು ಸರ ಕದ್ದದ್ದು' ಜನರು ನಾಲ್ಕು ಭಾಗಗಳಿಂದಲೂ ಅವನನ್ನು ಎಳೆದಾಡುತ್ತಾ ಅವನನ್ನು ವಿಚಾರಿಸಿದರು. 'ಇಲ್ಲ, ನಾನು ಕದ್ದಿಲ್ಲ, ನಾನು ಈಗ ಇಲ್ಲಿಗೆ ಬರುತ್ತಿದ್ದೇನಷ್ಟೇ' ಕಣ್ಣೀರು ಸುರಿಸುತ್ತಾ ಅವನು ಹೇಳಿದನು. 'ಸುಳ್ಳು ಹೇಳುತ್ತಿದ್ದೀಯಾ ನನ್ಮಗನೇ' ಎಂದು ಆ ಮಹಿಳೆಯ ಗಂಡ ಅವನ ಮುಖಕ್ಕೊಂದು ಏಟು ನೀಡಿದನು. ಇದನ್ನು ಕಂಡದ್ದೇ ತಡ ಇತರರೂ ಕೂಡಾ ತಮ್ಮ ಕೈಲಾದುದನ್ನು ನೀಡಿದರು. ಪ್ರತೀ ಒದೆ ಬೀಳುವಾಗಲೂ 'ನಾನು ಕದ್ದಿಲ್ಲ... ದೇವರಾಣೆಗೂ ನಾನು ಕದ್ದಿಲ್ಲ... ನನ್ನನ್ನು ಹೊಡೆಯಬೇಡಿ' ಎಂದು ಬೇಡುತ್ತಿದ್ದನು. ಜನರಿಗೆ ಅವನ ಕೂಗು ಕೇಳಿಸಲೇ ಇಲ್ಲ. ಏಟು ಜೋರಾಗಿ ಬೀಳ ತೊಡಗಿದಾಗ ಅವನು ಓಡುವ ವಿಫಲ ಪ್ರಯತ್ನ ನಡೆಸಿದನು. ಇದರಿಂದಾಗಿ ಏಟಿನ ವೇಗವು ಹೆಚ್ಚತೊಡಗಿ ಅವನ ಬಾಯಿಯಿಂದ ರಕ್ತ ಒಸರತೊಡಗಿತು. ಆಗಲೂ ಅವನು 'ನಾನು ಕದ್ದಿಲ್ಲ... ನನ್ನ ತಾಯಿಯಾಣೆ ನಾನು ಕದ್ದಿಲ್ಲ' ಎಂದು ಅಳುತ್ತಿದ್ದನು. ಇದನ್ನೆಲ್ಲಾ ನೋಡುತ್ತಿದ್ದ ನಾನು ಕೇವಲ ಮೂಕ ಪ್ರೇಕ್ಷಕನಾದೆ.
ಯಾರೋ ಪೋಲೀಸರಿಗೆ ಸುದ್ದಿ ಮುಟ್ಟಿಸಿದ್ದರಿಂದ ರೈಲ್ವೇ ಪೋಲೀಸರ ಆಗಮನವಾಯಿತು. ಜನರು ಸರಿದು ದಾರಿ ಮಾಡಿಕೊಟ್ಟರು. ಪೂಲೀಸರು ಅವನೊಂದಿಗೆ ವಿಚಾರಿಸಿದಾಗಲೂ ಅವನು 'ಸಾರ್ ನಾನು ಕದ್ದಿಲ್ಲ. ಈಗಷ್ಟೇ ನಾನು ಈ ದಾರಿಯಾಗಿ ಬಂದದ್ದು' ಎಂದು ಉತ್ತರಿಸಿದನು.
'ನೀನು ಎತ್ತ ಹೋಗುವುದಕ್ಕಾಗಿ ಇತ್ತ ಬಂದೆ' ಪೋಲೀಸಿನವನು ಕೇಳಿದನು.
'ಸಾರ್, ನಾನು ಈ ಮಾರ್ಕೆಟಿನಲ್ಲಿ ತರಕಾರಿಯ ಲಾರಿಯಿಂದ ತರಕಾರಿ ಇಳಿಸಿ ರೂಮಿಗೆ ಹೋಗುವಾಗ ಚಾ ಸೇವಿಸಲು ಈ ದಾರಿಯಾಗಿ ಬಂದೆ... ನನ್ನ ಕೊಠಡಿ ಅಲ್ಲಿದೆ' ಎಂದು ದೂರದಲ್ಲಿದ್ದ ಕಟ್ಟಡದ ಕಡೆಗೆ ಬೆರಳು ತೋರಿಸುತ್ತಾ ಹೇಳಿದನು.
'ಚಹಾ ಕುಡಿಯಲು ಬಂದದ್ದಂತೆ' ಎಂದು ಆರ್ಭಟಿಸುತ್ತಾ ಆ ಮಹಿಳೆಯ ಗಂಡ ಅವನ ತಲೆಗೆ ಬಲವಾಗಿ ಹೊಡೆದನು. ಅವನು ಏಟು ತಾಳಲಾರದೆ ಕೆಳಗೆ ಕುಸಿದನು.
ಪೋಲೀಸರು ಆ ಹುಡುಗನನ್ನು ವಿಚಾರಣೆಗೆ ಒಳಪಡಿಸಿದರು.... ಅವನ ಮನೆ ಕಾಸರಗೋಡಿನಲ್ಲಿ. ಕಳೆದ ಎರಡು ತಿಂಗಳಿನಿಂದ ಸಮೀಪದ ಅಂಗಡಿಗಳಿಗೆ ಬರುವ ತರಕಾರಿಗಳನ್ನು ಲಾರಿಯಿಂದ ಇಳಿಸುವ ಕೆಲಸ ಮಾಡುತ್ತಿದ್ದಾನೆ. ಮನೆಯಲ್ಲಿರುವ ತಾಯಿ ಮತ್ತು ತಂಗಿಯನ್ನು ಸಾಕಲಿಕ್ಕಾಗಿ ಈ ಕೆಲಸಕ್ಕೆ ಸೇರಿದ್ದಾನೆ. ಇವಿಷ್ಟು ವಿಚಾರಣೆಯಿಂದ ತಿಳಿದು ಬಂದ ವಿಚಾರಗಳು. ಬಳಿಕ ಪೋಲೀಸಿನವನು ಹೇಳಿದನು. 'ನೀನು ಸರ ಕದ್ದಿದ್ದರೆ ಅದನ್ನು ಮರಳಿಸು. ಸುಮ್ಮನೆ ಯಾಕೆ ಒದೆ ತಿನ್ನುತ್ತೀ'
'ನಾನು ಕದ್ದಿಲ್ಲ ಸಾರ್. ದೇವರಾಣೆಗೂ ನಾನು ಕದ್ದಿಲ್ಲ' ಅವನು ಕಣ್ಣೀರು ಸುರಿಸುತ್ತಾ ಕೈ ಮುಗಿದು ಬೇಡಿಕೊಂಡನು.
'ಇವನು ಕದಿಯುವುದನ್ನು ನೋಡಿದವರಿದ್ದಾರೆಯೇ' ಪೋಲೀಸರು ಕೇಳಿದರು. 'ಇವನು ಇಲ್ಲಿ ಸುತ್ತಾಡುತ್ತಿರುವುದನ್ನು ಒಬ್ಬನು ನೋಡಿದ್ದಾನೆ' ಎಂದು ಹೇಳುತ್ತಾ ಆ ಮಹಿಳೆ ಮತ್ತು ಆಕೆಯ ಗಂಡ ಪೋಲೀಸರೊಂದಿಗೆ ವಿಶ್ರಾಂತಿ ಕೊಠಡಿಯ ಕಡೆಗೆ ಹೆಜ್ಜೆ ಹಾಕಿದರು. ಆ ಹುಡುಗನನ್ನು ನೋಡಿದವನು ಅಲ್ಲೆಲ್ಲೂ ಕಾಣಲಿಲ್ಲ. 'ಎಲ್ಲಿ ಅವನು' ಪೋಲೀಸರು ಕೇಳಿದರು. 'ಲ್ಯಾಪ್ಟಾಪ್ ಬಿಡಿಸಿ ಕುಳಿತ ಒಬ್ಬ ಯುವಕನೂ ನೋಡಿದ್ದಾನೆ' ಯಾರೋ ಹೇಳಿದರು. ಅವನು ಹೇಳಿದ್ದು ನನ್ನ ಕುರಿತಾಗಿತ್ತು. 'ನಾನು ಕಂಡಿಲ್ಲ. ಇವನು ಹೇಳಿದ್ದನ್ನು ಅವರಿಗೆ ತಿಳಿಸಿದ್ದೇನಷ್ಟೇ' ಎಂದು ಹೇಳಲು ಮುಂದಾದೆ.
ಅವನು ಕದ್ದಿದ್ದಾನೆಯೇ ಎಂದು ನನಗೆ ಹೇಳಲು ಅಸಾಧ್ಯ. ಯಾಕೆಂದರೆ ಅವನು ತೆಗೆಯುವುದನ್ನು ನಾನು ನೋಡಿಲ್ಲ. ಈಗ ನನಗೆ ಏನೂ ಹೇಳಲಾಗದ ಸ್ಥಿತಿ. ಈ ಜನರ ಗುಂಪಿನ ಮಧ್ಯೆ ನಾನು ಮೌನಿಯಾದೆ. ಕದ್ದವನು ಸಿಗದಿದ್ದರೆ ಸಿಕ್ಕಿದವನನ್ನು ಕಳ್ಳನಾಗಿಸುವ ಕಾಲವಲ್ಲವೇ ಇದು!!
ಇವನು ಕದಿಯುವುದನ್ನು ನಾನು ನೋಡಿಲ್ಲ..... ಎಂದು ಹೇಳಲು ಮುಂದಾದಾಗ, ಆ ಮಹಿಳೆಯ ಗಂಡನು ಮತ್ತೊಮ್ಮೆ ತನ್ನ ಅಭಿಪ್ರಾಯವನ್ನು ಘೋಷಿಸಿದನು. 'ಇವನಿಗೆ ಇನ್ನೆರಡು ಬಿಗಿದರೆ ಬಾಯಿ ಬಿಡ್ತಾನೆ ಸಾರ್' ಇದನ್ನು ಕೇಳಿದ್ದೇ ತಡ ಅವನು ಪೋಲೀಸರ ಕೈಯಿಂದ ತಪ್ಪಿಸಿ ಓಡಿದನು. ಜನರೂ ಅವನ ಹಿಂದೆ ಓಡಿದರು. ನಾವು ಅಲ್ಲಿಯೇ ನಿಂತೆವು. ಅವನು ಓಡಿದ ಕಾರಣಕ್ಕಾಗಿ ಎಲ್ಲರೂ ಅವನನ್ನು ಕಳ್ಳನೆಂಬ ಪಟ್ಟ ಕಟ್ಟಿ ಬಿಟ್ಟರು. ನನಗೆ ಅವನ ಕಣ್ಣೀರೇ ಕಣ್ಮುಂದೆ ಬರುತ್ತಿತ್ತು. 'ನಾನು ಕದ್ದಿಲ್ಲ' ಎಂಬ ರೋಧನವು ನನ್ನ ಕಿವಿಯಲ್ಲಿ ಮಾರ್ದನಿಸುತ್ತಿತ್ತು.
ಮುಂಜಾನೆ 5.30ರ ಸಮಯ....
ನಾವು ಹೋಗಬೇಕಾದ ಕಲ್ಲಿಕೋಟೆ ಟ್ರೈನ್ ಬಂತು. ನಾವು ಟ್ರೈನ್ ಹತ್ತಿ ಕುಳಿತು ನಾನು ನೀರಿಗಾಗಿ ಬಾಟಲಿ ಹಿಡಿದು ಹೊರಟೆ. ಸ್ವಲ್ಪ ಮುಂದೆ ಸಾಗಿದಾಗ, ಕತ್ತಲೆ ತುಂಬಿದ ಜಾಗವೊಂದರಿಂದ ಕ್ಷೀಣ ಅಳುವೊಂದು ಕೇಳಿಸಿತು. ನಾನು ಮೆಲ್ಲನೆ ಮುಂದೆ ಸಾಗಿದೆ. ಅದು ಅವನು.... ಜನರ ಮುಂದೆ ಕಳ್ಳನಾದವನು... ಅವನು ಅಳುತ್ತಾ ವೊಬೈಲಿನ ಲ್ಲಿ ಯಾರಿಗೋ ಕಾಲ್ ಮಾಡುತ್ತಿದ್ದಾನೆ. ನಾನು ಅವನ ಮಾತನ್ನು ಆಲಿಸಿದೆ.
'ಹಲೋ, ಅಮ್ಮಾ.... ಇದು ನಾನು' ಅವನು ಬಿಕ್ಕಳಿಸುತ್ತಾ ಹೇಳಿದನು.
'ಅಮ್ಮಾ.... ನಾನು ಕೆಲಸ ಮುಗಿಸಿ ಮರಳುವಾಗ ರೈಲ್ವೇ ಸ್ಟೇಶನಿನಲ್ಲಿ ಎಲ್ಲರೂ ನನ್ನನ್ನು ಹಿಡಿದು ಕಳ್ಳನಾಗಿಸಿದರು' ಅವನ ಸ್ವರ ಗದ್ಗದಿತವಾಯಿತು.
'ಅಮ್ಮಾ... ನಾನು ಕದ್ದಿಲ್ಲ. ಎಲ್ಲರೂ ಸೇರಿ ನನಗೆ ಹೊಡೆದರು. ಅಮ್ಮಾ... ನನ್ನ ಬಾಯಿಂದ ರಕ್ತ ಬರುತ್ತಿದೆ' ಅವನು ಅಳತೊಡಗಿದನು.
'ನನಗೆ ಜೀವಿಸುವ ಆಸೆಯೇ ಹೊರಟು ಹೋಗಿದೆ ಅಮ್ಮಾ. ಅವರೊಂದಿಗೆ ನಾನು ವಾಸವಿರುವ ಸ್ಥಳದ ಕುರಿತು ಹೇಳಿದ್ದೇನೆ. ಅವರು ನನ್ನನ್ನು ಹುಡುಕುತ್ತಾ ಅಲ್ಲಿಗೆ ಬರುವರು. ನಾನು ಕಳ್ಳನಲ್ಲ. ಅಮ್ಮಾ... ನೀನಾದರೂ ನನ್ನನ್ನು ನಂಬು. ನಾನು ಏನನ್ನೂ ಕದ್ದಿಲ್ಲ ಅಮ್ಮಾ....' ಅವನ ಕಣ್ಣಿನಿಂದ ಕಣ್ಣೀರು ಧಾರೆ ಧಾರೆಯಾಗಿ ಇಳಿಯತೊಡಗಿತು. ಇದನ್ನು ಕಂಡ ನನ್ನ ಕಣ್ಣುಗಳಿಗೆ ಸುಮ್ಮನಿರಲಾಗಲಿಲ್ಲ. ನಾನು ಕೂಡಾ ಅತ್ತೆ. ಅವನ ಒಂದೊಂದು ಮಾತೂ ನನ್ನ ಹೃದಯಕ್ಕೆ ಭರ್ಚಿಯಂತೆ ತಿವಿಯುತ್ತಿತ್ತು. ಯಾರೂ ಅವನನ್ನು ನಂಬದ ಸ್ಥಿತಿಯಲ್ಲಿ ಸಮಯವನ್ನು ಲೆಕ್ಕಿಸದೆ ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುವ ತಾಯಿಗೆ ಫೊನ್ ಮಾಡಿ ತಾಯಿಯನ್ನು ನಂಬಿಸುತ್ತಿದ್ದನು. ಎಂಥಾ ಹೃದಯ ವಿದ್ರಾವಕ ಸನ್ನಿವೇಶ!!
ಅಲ್ಲ, ಅವನು ಕಳ್ಳನಲ್ಲ..... ನನ್ನ ಮನಸ್ಸು ಸಾರಿ ಸಾರಿ ಹೇಳುತ್ತಿತ್ತು. ಟ್ರೈನ್ ಹೊರಡಲು ಪ್ರಾರಂಭಿಸಿತು. ನಾನು ಓಡಿ ಹೋಗಿ ಟ್ರೈನ್ ಹತ್ತಿದೆ. ನೀರು ತೆಗೆಯುವುದನ್ನೂ ಮರೆತಿದ್ದೆ. ಅವನಿದ್ದ ಕಡೆಗೆ ನಾನು ನೋಡಿದೆ. ಅವನು ಕಾಣುತ್ತಿಲ್ಲ. ರೈಲು ಮುಂದೆ ಮುಂದೆ ಸಾಗುತ್ತಿದೆ... ಮೂರು ದಿನಗಳ ನಿದ್ದೆ ಹಾಗೂ ಪ್ರವಾಸದ ಆಯಾಸವು ನನ್ನಿಂದ ಮಾಯವಾಗಿತ್ತು. ನಿದ್ರಿಸಬೇಕು ಎಂದು ಕಣ್ಣು ಮುಚ್ಚಿದಾಗ ನನ್ನ ಮನಸ್ಸಿಗೆ ಬರುತ್ತಿದ್ದುದು ಸರ ಕಳೆದುಕೊಂಡ ಆ ಮಹಿಳೆಯ ರೋದನವಲ್ಲ, ಕಳ್ಳನೆಂದು ಜನರಿಂದ ಒದೆ ತಿಂದ ಆ ಹುಡುಗನ ಸ್ಥಿತಿಯಂತೂ ಅಲ್ಲ. ಬದಲಾಗಿ ವೇಳೆಯಲ್ಲದ ವೇಳೆಯಲ್ಲಿ ಮಗನ ಕರೆಗೆ ಓಗೊಟ್ಟ ಆ ವಾತ್ಸಲ್ಯಮಯಿ ತಾಯಿ. ಮಗನನ್ನು ಜನರು ಅಟ್ಟಾಡಿಸಿ ಹೊಡೆದದ್ದನ್ನು , ಮಗನ ಬಾಯಿಂದ ಬಂದ ರಕ್ತವನ್ನು ನೆನೆದು ಮಿಡಿಯುವ ಆ ಮಾತೃ ಹೃದಯ. 'ನನಗೆ ಜೀವಿಸುವ ಆಸೆಯೇ ಹೊರಟು ಹೋಗಿದೆ' ಎಂದು ಮಗನು ಹೇಳುವಾಗ ಆ ತಾಯಿಯ ಪ್ರತಿಕ್ರಿಯೆಯು ಏನಾಗಿರಬಹುದು. ಅವಳು ರೋದಿಸಿರಲಾರಳೇ ,... ಮಗನ ಕಣ್ಣೀರಿನೊಂದಿಗೆ ಅವಳೂ ಕಣ್ಣೀರು ಸುರಿಸಿರಲಾರಳೇ ಅಥವಾ 'ನೀನು ಅಳಬೇಡ ,ನಿನ್ನೊಂದಿಗೆ ತಾಯಿ ಇಲ್ಲವೇ' ಎಂದು ಸಾಂತ್ವನ ನೀಡಿರಲಾರಳೇ
ಮೊದಲಾದ ಉತ್ತರ ಸಿಗದ ಪ್ರಶ್ನೆಗಳು ಇಂದಿಗೂ ನನ್ನನ್ನು ಕಿತ್ತು ತಿನ್ನುತ್ತಿವೆ. ಆದರೂ ನನಗೆ ಈಗಲೂ ಆ ತಾಯಿಯೊಂದಿಗೆ ಹೇಳಲಿಕ್ಕಿರುವುದು ಒಂದೇ ಮಾತು 'ಅಮ್ಮಾ ಕ್ಷಮಿಸು. ಮಗನನ್ನು ಕಳ್ಳನಾಗಿಸಿದ ಜನರ ಗುಂಪಿನಲ್ಲಿ ನಾನೂ ಇದ್ದೆ. ಅವನ ನಿರಪರಾಧಿತ್ವವನ್ನು ಸಾಬೀತು ಪಡಿಸುವ ಸಂದರ್ಭ ಒದಗಿ ಬಂದರೂ ನಾನು ಮೌನಿಯಾದೆ. ಅಮ್ಮಾ .. ನನ್ನ ಕ್ಷಮಿಸಮ್ಮಾ.... (ಇದು ಸಂಗ್ರಹಿತ ಘಟನೆಯಾದ್ದರಿಂದ ಇಲ್ಲಿ 'ನಾನು' ಎಂಬ ಪದವನ್ನು ಬಳಸಿದ್ದೇನೆ.)