ಆದರೆ ಈ ದಬ್ಬಾಳಿಕೆಗಳಾವುದೂ ಹೆಚ್ಚು ಕಾಲ ಬಾಳಿಕೆ ಬರುತ್ತಿರಲಿಲ್ಲ. ವ್ಯಕ್ತಿಗಳ ರೂಪದಲ್ಲೂ ಸಂಘಟನೆಗಳ ರೂಪದಲ್ಲೂ ಅಲ್ಲಿನ ಜನತೆಗೆ ನ್ಯಾಯ ಒದಗಿಸಲು ಒಳಿತಿನ ಶಕ್ತಿಗಳು ಉದ್ಭವಗೊಳ್ಳುತ್ತಿದ್ದವು. ಅಂದು ಫಿರ್‍ಔನನ ದಬ್ಬಾಳಿಕೆಗೆ ಒಳಗಾಗಿದ್ದ ಜನತೆಯನ್ನು ರಕ್ಷಿಸಲು ಮೂಸಾ(ಅ) ಆತನ ಅರಮನೆಯಲ್ಲೇ ಬೆಳೆದು ಬಂದಿದ್ದರು. ಫಿರ್‍ಔನನ ಕೆಡುಕಿಗೂ ಪ್ರವಾದಿ ಮೂಸಾರ(ಅ) ಒಳಿತಿಗೂ ಮಧ್ಯೆ ನಡೆದ ನಿರಂತರ ಸಂಘರ್ಷದಲ್ಲಿ ಕೊನೆಗೆ ಮೇಲುಗೈ ಸಾಧಿಸಿದ್ದು ಒಳಿತೇ ವಿನಃ ಕೆಡುಕಲ್ಲ. ಇದರ ಫಲವಾಗಿ ಕೆಡುಕಿನ ಶಕ್ತಿಗಳಿಗೆ ನಾಶ ಖಚಿತ ಎಂದು ಸಾರಿ ಹೇಳಲು ಫಿರ್‍ಔನನ ಜಡ ಶರೀರವು ಇಂದೂ ಈಜಿಪ್ಟಿನ ಮ್ಯೂಝಿಯಮ್‍ನಲ್ಲಿದೆ. ಎಲ್ಲಾ ದುರಾಡಳಿತಗಾರರಿಗೂ "ಮುಂದೊಂದು ದಿನ ನಿಮಗೆ ನಾಶ ಖಚಿತ" ಎಂಬ ಮೆಸೇಜ್ ರವಾನಿಸುತ್ತಿದೆ.
ಹಿಂದೆ ನಡೆದ ಫಿರ್‍ಔನನ ದಬ್ಬಾಳಿಕೆಯು ಇಂದು ಆಧುನಿಕ ರೂಪದಲ್ಲಿ ಈಜಿಪ್ಟಿನಲ್ಲಿ ನಡೆಯುತ್ತಿದೆ. ಈಗ ಮುಸ್ಲಿಮ್ ಬ್ರದರ್‍ಹುಡ್ (ಇಖ್ವಾನುಲ್ ಮುಸ್ಲಿಮೂನ್) ಅಲ್ಲಿನ ಜನತೆಗೆ ನ್ಯಾಯ ಒದಗಿಸಿಕೊಡಲು ಪ್ರಯತ್ನಿಸುತ್ತಿದೆ. ಜನತೆಯ ಕ್ಷೇಮಕ್ಕಾಗಿ ಜೀವವನ್ನೂ ಸಂಪತ್ತನ್ನೂ ತ್ಯಾಗ ಮಾಡುತ್ತಿದೆ. ಮುಸ್ಲಿಮ್ ಬ್ರದರ್‍ಹುಡ್ ಸಂಘಟನೆಯು ಹುಟ್ಟಿಕೊಂಡದ್ದು 1928ರಲ್ಲಾಗಿತ್ತು. ಅದು ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ರಂಗಗಳಲ್ಲಿ ತನ್ನ ಕೈಲಾದ ಕೆಲಸ ನಿರ್ವಹಿಸುತ್ತಿದೆ. ಅಧ್ಯಾಪಕರಾದ ಹಸನುಲ್ ಬನ್ನ ಇದರ ಸ್ಥಾಪಕ ನೇತಾರರಾಗಿದ್ದಾರೆ. ಬೆರಳೆಣಿಕೆಯ ಮಂದಿಯೊಂದಿಗೆ ಆರಂಭಗೊಂಡ ಈ ಸಂಘಟನೆಯು ಇಂದು ಬೃಹತ್ ಸದಸ್ಯ ಕೂಟವನ್ನು ಹೊಂದಿದೆ. ಈ ಸಂಘಟನೆಯನ್ನು ನಾಮಾವೇಶಗೊಳಿಸುವ ಹಲವಾರು ಪ್ರಯತ್ನಗಳು ಸ್ವೇಚ್ಛಾದಿಪತಿಗಳಾದ ಹಲವಾರು ಆಡಳಿತಗಾರರಿಂದ ನಡೆದಿದೆ. ಆದರೆ ಒಳಿತಿನ ಬೆಳವಣಿಗೆಯ ಚಲನೆಯನ್ನು ನಿಧಾನಗೊಳಿಸಬಹುದೇ ವಿನಃ ಅದನ್ನು ನಾಶಪಡಿಸಲು ಸಾಧ್ಯವಿಲ್ಲ ಎಂಬುದನ್ನು ಆ ದುಷ್ಟ ಶಕ್ತಿಗಳು ಅರಿತಿರಲಿಲ್ಲ. ಆ ಸಂಘಟನೆಯ ಹಲವಾರು ನಾಯಕರು ದುಷ್ಟರ ಕುತಂತ್ರಗಳಿಗೂ, ಆಕ್ರಮಣಗಳಿಗೂ ಬಲಿಯಾದರು. ಓರ್ವ ನೇತಾರನ ಅಂತ್ಯವಾದರೆ ಇನ್ನೋರ್ವ ಸಮರ್ಥ ನಾಯಕನ ಉದಯವು ಈ ಸಂಘಟನೆಯ ವಿಶೇಷತೆಯಾಗಿದೆ. ಈ ಸಂಘಟನೆಯು ಹಲವಾರು ಬಾರಿ ನಿಷೇಧಕ್ಕೆ ಒಳಗಾಗಿದೆ. ಏನೇ ಮಾಡಿದರೂ ಬಗ್ಗದ ಈ ಸಂಘಟನೆಯು ದುಷ್ಟ ಆಡಳಿತಗಾರರಿಗೆ ಇಂದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇಂದು ಈಜಿಪ್ಟಿನಲ್ಲಿ ಶೇಕಡಾ 51ರಷ್ಟು ಮತ ಪಡೆದವರು ಜೈಲಿನಲ್ಲೂ 1.5 ಶೇಕಡಾ ಮತ ಪಡೆದವರು ಅಧಿಕಾರದಲ್ಲಿ ಮೆರೆಯುವ ಆಘಾತಕಾರಿ ಪರಿಸ್ಥಿತಿ ನಿರ್ಮಾಣಗೊಂಡಿದೆ. ಜನರು ಸ್ವ ಇಚ್ಛೆಯೊಂದಿಗೆ ಆರಿಸಿದ ಬ್ರದರ್‍ಹುಡ್‍ನ ಮುಹಮ್ಮದ್ ಮುರ್ಸಿಯವರನ್ನು ಸೇನೆಯು ಬಲವಂತದಿಂದ ಕೆಳಗಿಳಿಸಿ ಅಧಿಕಾರಕ್ಕೇರಿದೆ. ಈ ಕೃತ್ಯವು ಕೇವಲ ಸೇನೆಯಿಂದ ಮಾತ್ರ ನಡೆದದ್ದಲ್ಲ. ಬದಲಾಗಿ ಹೊರಗಿನ ಶಕ್ತಿಗಳು ಇದಕ್ಕಾಗಿ ಕೆಲಸ ಮಾಡಿದೆ. ಮುರ್ಸಿಯವರ ಸರಕಾರವನ್ನು ಬುಡಮೇಲು ಗೊಳಿಸಿದಾಗ ಅಮೇರಿಕಾವು "ಈ ಕೃತ್ಯದ ಹಿಂದೆ ನಮ್ಮ ಕೈವಾಡವಿಲ್ಲ" ಎಂದು ಹೇಳಿಕೆ ನೀಡಿತ್ತು. ಆದರೆ ಕೆಲ ದಿನಗಳ ನಂತರ ಅಲ್ಲಿ ಸೇನೆಗೆ ಅಮೇರಿಕಾವು ರಹಸ್ಯವಾದ ಆರ್ಥಿಕ ನೆರವು ನೀಡಿದ ವಿಷಯವು ಬಹಿರಂಗಗೊಂಡು ಅಮೇರಿಕಾವು ನಾಚಿಕೆಗೀಡಾಯಿತು.
ಈ ಸೇನಾ ಬುಡಮೇಲು ಕೃತ್ಯದ ವಿರುದ್ಧ ಆರಂಭದಲ್ಲಿ ಧ್ವನಿ ಎತ್ತಿದ ಇರಾನ್ ಬಳಿಕ ಮೌನ ತಾಳಿತು. ಹಲವು ಮುಸ್ಲಿಮ್ ರಾಷ್ಟ್ರಗಳ ಈ ಬೆಳವಣಿಗೆಯನ್ನು ಖಂಡಿಸಿದರೂ ಸೌದಿ ಹಾಗೂ ಯು.ಎ.ಇ. ಬಹಿರಂಗವಾಗಿ ಸೇನಾಡಳಿತವನ್ನು ಬೆಂಬಲಿಸಿದವು. ಸೌದಿಯ ಈ ವರ್ತನೆಗೆ ಕಾರಣವೂ ಇತ್ತು. ಸೌದಿಯಲ್ಲಿ ರಾಜರ ಆಳ್ವಿಕೆ ನಡೆಯುತ್ತಿದೆ. ಇದು ಶತಮಾನಗಳಿಂದ ಮುಂದುವರಿಯುತ್ತಾ ಬಂದಿದೆ. ಈಜಿಪ್ಟಿನ ಪ್ರಜಾಪ್ರಭುತ್ವದ ಆಳ್ವಿಕೆಯನ್ನು ಕೊನೆಗಾಣಿಸದಿದ್ದರೆ ನಮ್ಮ ಗದ್ದುಗೆಗೆ ಕುತ್ತು ಬೀಳುವುದು ಇಲ್ಲಿನ ಜನತೆ ದಂಗೆ ಎದ್ದಾರು ಎಂದು ಕಳವಳಗೊಂಡಿತು. ಆದ್ದರಿಂದ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕಲು ಸೇನೆಗೆ ನೆರವು ನೀಡಿತು.
ಆದರೆ ಈಗ ಸೌದಿಯಲ್ಲೂ ದಂಗೆಯ ವಾಸನೆಯು ಬೀಸ ತೊಡಗಿದೆ. ಇದರಿಂದ ಸೌದಿಯು ಭಯಭೀತಗೊಂಡಿದೆ. ಆರಂಭದ ಸರಕಾರದ ವಿರುದ್ಧ ಸೆಟೆದು ನಿಂತಿರುವುದು ಸಾಮಾನ್ಯ ಮಂದಿಯಾಗಿದ್ದರೆ ಸೌದಿಯು ಅದನ್ನು ಯಾವಾಗಲೇ ದಮನಿಸಿರುತ್ತಿತ್ತು. ಖಾಲಿದ್ ಬಿನ್ ಫರ್ಹಾನ್ ಎಂಬ ರಾಜ ಕುಮಾರನೇ ಸರಕಾರದ ನೀತಿಗಳ ವಿರುದ್ಧ ಸೆಟೆದು ನಿಂತದ್ದು ಸೌದಿಗೆ ತಲೆನೋವಾಗಿ ಪರಿಣಮಿಸಿದೆ. ಸೌದಿಯ ಜನತೆಯು ಜಗತ್ತಿನ ಬೆಳವಣಿಗೆಯನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಂತಹ ಬದಲಾವಣೆಗಳು ನಮ್ಮಲ್ಲೂ ಬರಬೇಕು ಎಂದು ಸೌದಿಯ ಜನತೆಯು ಯೋಚಿಸಿದರೆ ಮತ್ತೆ ಅಲ್ಲಿ ರಾಜರ ಆಳ್ವಿಕೆಗೆ ಉಳಿಗಾಲವಿರಲಿಕ್ಕಿಲ್ಲ. ಆದ್ದರಿಂದಲೇ ಸೌದಿ ಸರಕಾರವು ವಿದೇಶಿಗಳನ್ನು ಹೊರಗಟ್ಟಿ ಅಲ್ಲಿನ ಜನರಿಗೆ ಉದ್ಯೋಗ ಕೊಡಿಸಲು ಮುಂದಾಗಿದೆ.
ಅಮೇರಿಕಾವು ಕಪಟತನ ತೋರುತ್ತಿದೆ. ತುರ್ಕಿಯಲ್ಲಿ ಉರ್ದುಗಾನ್ ಮದ್ಯವನ್ನು ನಿಷೇಧಿಸಿದಾಗ ಜನರು ಇಸ್ತಾಂಬುಲಿನಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನಾಕಾರರಿಗೆ ಅಮೇರಿಕಾವು ಬಹಿರಂಗವಾಗಿ ಬೆಂಬಲ ನೀಡಿತ್ತು. ಆದರೆ ಈಜಿಪ್ಟಿನ ರಾಬಿಯಾ ಅದವಿಯ್ಯ ಸೇರಿ ಮೂರು ಸ್ಕ್ವಾರ್‍ಗಳಲ್ಲಿ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಮಂದಿ ರಾತ್ರಿ-ಹಗಲೆನ್ನದೆ ಪ್ರಜಾಪ್ರಭುತ್ವಕ್ಕಾಗಿ ಪ್ರತಿಭಟನೆ ನಡೆಸಿದಾಗ ಅಮೇರಿಕಾವು ಅವರಿಗೆ ಒಮ್ಮೆಯೂ ಬೆಂಬಲ ನೀಡಿಲ್ಲ.
ಯೂರೋಪಿಯನ್ ರಾಷ್ಟ್ರಗಳ ಪೈಕಿ ಜರ್ಮನಿಯು ಮುರ್ಸಿಯವರ ಪರವಾಗಿ ಧ್ವನಿ ಎತ್ತಿತ್ತು. ಈಜಿಪ್ಟಿನ ಹುಸ್ನಿ ಮುಬಾರಕ್‍ರ ಕೈಗೊಂಬೆಗಳಾದ ಪತ್ರಿಕೆಗಳು ಮುರ್ಸಿಯವರನ್ನು ಹಿಟ್ಲರ್‍ನಿಗೆ ಹೋಲಿಸಿತು. 60 ಲಕ್ಷದಷ್ಟು ಯಹೂದಿಯರನ್ನು ಕೊಂದ ಹಿಟ್ಲರ್‍ನಿಗೂ ಯಾವುದೇ ನಿರಪರಾಧಿಯ ಹಕ್ಕುಗಳನ್ನು ದಮನಿಸದ ಮುರ್ಸಿಯವರಿಗೂ ಯಾವ ಹೋಲಿಕೆ ಎಂದು ಜರ್ಮನಿ ಕುಹಕವಾಡಿತು.
ಹಲವಾರು ವಿಶೇಷ ವ್ಯಕ್ತಿಗಳು ಪ್ರತಿಭಟನೆ ನಡೆಯುತ್ತಿದ್ದ ಸ್ಕ್ವಾರ್‍ಗಳಿಗೆ ಭೇಟಿ ನೀಡಿದ್ದರು. ಅಲ್ಲಿನ ಜನರಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದರು. ಪತ್ರಿಕೆಗಳ ವರ್ತನೆಗಳಿಂದಾಗಿ ಹಲವರು ಬೇಸತ್ತು ಹೋಗಿದ್ದರು. ಪತ್ರಿಕೆಗಳು ಇಲ್ಲದ ವಾರ್ತೆಗಳನ್ನು ಸೃಷ್ಟಿಸಿ ದಿನ ಬೆಳಗಾಗುವುದರೊಳಗೆ ಈಜಿಪ್ಟಿನ ಕುರಿತ ಜಗತ್ತಿನ ದೃಷ್ಟಿಕೋನವನ್ನೇ ಬದಲಿಸುತ್ತಿದ್ದವು. ಕ್ರಿಸ್ಪನ್ ಬ್ಲೆಂಟ್ ಈಜಿಪ್ಟಿನ ಪತ್ರಿಕೆಗಳ ಕುರಿತು "ಆಕ್ರಮಣಕಾರಿ ವಾರ್ತೆಗಳೊಂದಿಗೆ ಪ್ರಭಾತದಲ್ಲಿ ಹಾಜರಾಗುವ ದರೋಡೆಕೋರರು" ಎಂದು ಹೇಳಿದ್ದಾರೆ. ಮುರ್ಸಿಯವರು ಅಧಿಕಾರಕ್ಕೆ ಏರಿದಾಗ ಪತ್ರಿಕೆಗಳಿಗೆ ಅವರು ಸ್ವಾತಂತ್ರ್ಯ ನೀಡಿದ್ದರು. ಆದರೆ ಇದೇ ಅವರಿಗೆ ಕುತ್ತಾಯಿತು. ಪತ್ರಿಕೆಗಳು ಮುರ್ಸಿಯವರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನೆಲ್ಲಾ ಹೊರಿಸಿ ಅವರು ಅಧಿಕಾರದಿಂದಿಳಿಯುವಂತೆ ಮಾಡಿದವು.
ದುಷ್ಟ ಶಕ್ತಿಗಳಿಗೆ ಮುರ್ಸಿಯವರು ಬೇಡವಾಗಿದ್ದರು. ಅರಬ್ ವಸಂತದ ಭಾಗವಾಗಿ ನಡೆಯುತ್ತಿದ್ದ ಬೆಳವಣಿಗೆಗಳನ್ನು ಹೊಸಕಿ ಹಾಕುವ ನಿಟ್ಟಿನಲ್ಲಿ ಅಮೇರಿಕಾ ಹಾಗೂ ಯೂರೋಪ್‍ನ ಕೆಲವು ರಾಷ್ಟ್ರಗಳು ಸೇರಿ ಈಜಿಪ್ಟಿನಲ್ಲಿ ಸೇನಾ ಬುಡಮೇಲು ಕೃತ್ಯವನ್ನು ಆಯೋಜಿಸಿದ್ದವು. ಮುರ್ಸಿಯವರು ಅಧಿಕಾರಕ್ಕೇರಿದಾಗ ಕೇವಲ ದೂರವಾಣಿ ಮೂಲಕ ಅಭಿನಂದಿಸಿದವರು ಬಳಿಕ ಸೇನೆಯು ಆಡಳಿತಕ್ಕೇರಿದಾಗ ನೇರವಾಗಿ ಈಜಿಪ್ಟಿಗೆ ಬಂದು ಅಭಿನಂದನೆ ಸಲ್ಲಿಸಿದ್ದರು. ಸೇನೆಯ ಬುಡಮೇಲು ಕೃತ್ಯ ನಡೆಸುವುದಕ್ಕಿಂತ ಮುಂಚೆ ಹೊರಗಿನ ಶಕ್ತಿಗಳ ನೆರವಿನೊಂದಿಗೆ ಅದಕ್ಕಿರುವ ತಯಾರಿಗಳನ್ನು ತೆರೆಮರೆಯಲ್ಲಿ ನಡೆಸಿತ್ತು. ಮುರ್ಸಿಯವರ ಆಡಳಿತ ಕಾಲದಲ್ಲಿ ಸೇನೆಯು ಕೃತಕ ಬರಗಾಲವನ್ನು ಸೃಷ್ಟಿಸಿತ್ತು. ಆರ್ಥಿಕವಾಗಿ ಶೇಕಡಾ 48ರಷ್ಟು ನಿಯಂತ್ರಣ ಹೊಂದಿರುವ ಸೇನೆಯು ಆಹಾರ ಸಾಮಗ್ರಿಗಳನ್ನು ತಡೆ ಹಿಡಿದಿತ್ತು. ಆಗ ಜನರು ಸರಕಾರದ ವಿರುದ್ಧ ದಂಗೆ ಎದ್ದರು. ಬಳಿಕ ಎಲ್ಲವೂ ಸೇನೆಗೆ ಅನುಕೂಲಕರವಾಗಿ ನಡೆಯಿತು. ಆದರೆ ಈಗ ಅಲ್ಲಿನ ಜನರಿಗೆ ಆಹಾರದ ಕೊರತೆಯಿಲ್ಲ. ಆಹಾರ ಸಾಮಗ್ರಿಗಳಿಗೆ ಬೆಲೆ ಕಡಿಮೆಯಾಗಿದೆ. ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲಾಗಿದೆ. ಇವೆಲ್ಲವೂ ಸೇನೆಯ ವಿರುದ್ಧದ ಸಾಮಾನ್ಯ ಜನರ ರೋಷವನ್ನು ತಾತ್ಕಾಲಿಕವಾಗಿ ದಮನಿಸಿದೆ.
ಇಂದು ಈಜಿಪ್ಟಿನಲ್ಲಿ ಹಲವಾರು ಮಂದಿ ಮುರ್ಸಿಯವರನ್ನೇ ಬಯಸುತ್ತಿದ್ದಾರೆ. ಅದಕ್ಕಾಗಿ ಮಹಿಳೆಯರು ಮಕ್ಕಳು ಎಂಬ ಬೇಧವಿಲ್ಲದೆ ಹಗಲು ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸೇನೆಯ ದುರಾಕ್ರಮಣಗಳಿಗೆ ಹಲವಾರು ಮಂದಿ ಜೀವ ತೆತ್ತಿದ್ದಾರೆ. ಮರಳಿ ಬರುತ್ತೇವೆ ಎಂಬ ಯಾವುದೇ ಖಾತ್ರಿಯಿಲ್ಲದೆ ತಾಯಿ ಮಕ್ಕಳು ಮನೆಯಿಂದ ಹೊರಟು ಬಂದಿದ್ದಾರೆ. ಪ್ರತಿಭಟನೆಯಲ್ಲಿ ಬ್ರದರ್‍ಹುಡ್‍ನ ನೇತಾರರ ಮಕ್ಕಳೂ ಪತ್ನಿಯರೂ ಭಾಗವಹಿಸಿದ್ದಾರೆ. ಅಲ್ಲಿ ಮೇಲು ಕೀಳು ಎಂಬ ಭಾವನೆ ಇಲ್ಲ. ಅಲ್ಲಿ ಮುಖ್ಯವಾಗಿರುವುದು ಪ್ರಜಾಫ್ರಭುತ್ವದ ಮರಳಿಕೆ ಮಾತ್ರ.
ರಾಬಿಯಾ ಅದವಿಯ್ಯದಲ್ಲಿ ಪ್ರತಿಭಟನೆಯ ವೇಳೆ ಹುತಾತ್ಮೆಯಾದ ತನ್ನ ಮುದ್ದಿನ ಮಗಳಿಗೆ ಮುಸ್ಲಿಮ್ ಬದ್ರರ್‍ಹುಡ್ ನೇತಾರರಾದ ಮುಹಮ್ಮದ್ ಅಲ್ ಬಲ್‍ದಗಿ ಪತ್ರ ಹೀಗಿದೆ. "ನನ್ನ ಮುದ್ದಿನ ಮಗಳೇ ದುಃಖದಿಂದ ನಿನಸಗೆ ಬೀಳ್ಕೊಡುವುದರ ಬದಲಾಗಿ ನಾಳೆ ಭೇಟಿಯಾಗೋಣ ಎನ್ನುತ್ತೇವೆ. ದುಷ್ಟರ ದುರಾಕ್ರಮಣಗಳಿಗೆ ನೀನು ಧೈರ್ಯದಿಂದ ಎದೆಯೊಡ್ಡಿ ನಿಂತೆ.
ರಾಬಿಯ ಅದವಿಯ್ಯದಲ್ಲಿ ನಾವು ಭೇಟಿಯಾದಾಗ, "ಒಂದೇ ಸ್ಕ್ವಾರ್‍ನಲ್ಲಿದ್ದರೂ ನಾವು ಬಹಳ ದೂರವಾಗಿದ್ದೇವೆ" ಎಂದು ನೀನು ಹೇಳಿದೆಯಲ್ಲವೇ. "ಮಗಳೇ ನಮಗೆ ಅನ್ಯೋನ್ಯವಾಗಿ ಪರಸ್ಪರ ಮಾತನಾಡಲು ಈ ಜೀವನದಲ್ಲಿ ಸಮಯ ಸಿಕ್ಕಿಲ್ಲ. ಆದ್ದರಿಂದ ನಮಗೆ ಸ್ವರ್ಗ ನೀಡಲು ನಾನು ಅಲ್ಲಾಹನೊಂದಿಗೆ ಪ್ರಾರ್ಥಿಸುತ್ತೇನೆ. ನಮಗೆ ಮಾತನಾಡಲು ಅಲ್ಲಿ ಬೇಕಾದಷ್ಟು ಸಮಯ ಸಿಗಬಹುದಲ್ಲವೇ". ಓ ನನ್ನ ಮುದ್ದಿನ ಗಿಣಿಯೇ, ಕೊನೆಯದಾಗಿ ನಾನು ನಿನ್ನನ್ನು ಬೀಳ್ಕೊಡುತ್ತಿಲ್ಲ. ನಾಳೆ ಸ್ವರ್ಗದಲ್ಲಿ ಭೇಟಿಯಾಗೋಣ. ಸ್ವರ್ಗದ ಕೌಸರ್ ಸರೋವರದ ಬಳಿ ಪ್ರವಾದಿಯವರು(ಸ) ಮತ್ತು ಅವರ ಅನುಯಾಯಿಗಳೊಂದಿಗೆ ವಿಹರಿಸೋಣ. ನಾನೂ ನಿನ್ನೊಂದಿಗೆ ಸೇರಿಕೊಳ್ಳುತ್ತೇನೆ. ನನಗಾಗಿ ಕಾಯುತ್ತಿರು."
ಇಂತಹ ಎಷ್ಟೋ ಹೆಣ್ಣು ಮಕ್ಕಳು ಪ್ರಾಣ ತೆತ್ತಿದ್ದಾರೆ. ಹಲವಾರು ಕನಸುಗಳನ್ನು ಹೊತ್ತವರು ಪ್ರತಿಭಟನೆಗಾಗಿ ಹೊರಟು ದೇವ ಮಾರ್ಗದಲ್ಲಿ ಹುತಾತ್ಮರಾಗಿದ್ದಾರೆ. ಇಲ್ಲಿ ಇನ್ನೂ ಕೂಡಾ ಹುತಾತ್ಮರ ಸಂಖ್ಯೆ ಹೆಚ್ಚಬಹುದು. ಬ್ರದರ್‍ಹುಡ್‍ನ ಹೋರಾಟಗಾರರಿಗೆ ಮರಣದ ಭಯವಿಲ್ಲ. ಬಳಿ ನಿಂತವರು ಗುಂಡೇಟಿಗೆ ಧರೆಗುರುಳುವಾಗಲೂ ಅವರ ಪಾದವು ಕಂಪನಗೊಂಡಿಲ್ಲ. ಹುತಾತ್ಮರಿಗೆ ಅಲ್ಲಾಹನು ನೀಡುವ ಪ್ರತಿಫಲವನ್ನು ಅವರು ತಿಳಿದುಕೊಂಡಿದ್ದಾರೆ. ಅವರು ಕುರ್‍ಆನನ್ನು ನಮ್ಮಂತೆ ಓದಿದ್ದಲ್ಲ. ಬದಲಾಗಿ ಅದರ ಆಳಕ್ಕಿಳಿದು ಮನವರಿಕೆ ಮಾಡಿದ್ದಾರೆ. ಸುಮ್ಮನೆ ಕುಳಿತರೆ ಸ್ವರ್ಗ ಪ್ರಾಪ್ತಿ ಅಸಾಧ್ಯ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ಅಲ್ಲಾಹನು ಪ್ರಶ್ನಿಸುತ್ತಾನೆ, "ನೀವು ನಿರಾಯಾಸವಾಗಿ ಸ್ವರ್ಗವನ್ನು ಪ್ರವೇಶಿಸುವಿರೆಂದು ಭಾವಿಸಿರುವಿರಾ? ವಸ್ತುತಃ ನಿಮ್ಮಲ್ಲಿ ಯಾರೆಲ್ಲಾ ಅಲ್ಲಾಹನ ಮಾರ್ಗದಲ್ಲಿ ಹೋರಾಟ ನಡೆಸುವವರು. ಅದಕ್ಕಾಗಿ ಸಹನೆ ಪಡುವವರು ಇದ್ದಾರೆಂದು ಅವನು ಇನ್ನೂ ಕಾಣಲೇ ಇಲ್ಲ." (3: 142)
ಅವರೊಡನೆ ಹೇಳಿರಿ, "ನೀವು ಮರಣ ಅಥವಾ ಹತ್ಯೆಯನ್ನು ಹೆದರಿ ಓಡುವುದಿದ್ದರೆ ನಿಮ್ಮ ಈ ಪಲಾಯನವು ನಿಮಗೇನೂ ಫಲಕಾರಿಯಾಗದು. ಆ ಬಳಿಕ ನಿಮಗೆ ಜೀವನದ ಸುಖವನ್ನು ಅನುಭವಿಸಲು ಅಲ್ಪಕಾಲ ಮಾತ್ರವೇ ಅವಕಾಶ ಸಿಗುವುದು." (33: 16)
ದಬ್ಬಾಳಿಕೆ ನಡೆಸಿದವರು ಇತಿಹಾಸದಲ್ಲಿ ಕೆಟ್ಟ ಹೆಸರಿನಿಂದಲೇ ಗುರುತಿಸಿಕೊಳ್ಳುತ್ತಾರೆ. ಅವರಿಗೆ ಜನರ ಶಾಪವನ್ನು ಮಾತ್ರಗಳಿಸಲು ಸಾಧ್ಯ. ಇತಿಹಾಸದ ಪುಟಗಳನ್ನು ತಿರುವಿದರೆ ಅದಕ್ಕೆ ಹಲವಾರು ಪುರಾವೆಗಳು ಲಭಿಸಬಹುದು. ಹಲವಾರು ಪ್ರವಾದಿಗಳ ಜೀವನವೇ ಅದಕ್ಕೆ ಸಾಕ್ಷಿಯಾಗಿದೆ. ಹೆಚ್ಚೇಕೆ, ಫಿರ್‍ಔನ್‍ನೇ ಅದಕ್ಕೆ ಜ್ವಲಂತ ಸಾಕ್ಷಿಯಾಗಿ ಇಂದು ಈಜಿಪ್ಟಿನಲ್ಲೇ ಪ್ರದರ್ಶಿತಗೊಳ್ಳುತ್ತಿದ್ದಾನೆ. ಎಂದು ಕೂಡಾ ಕೆಡುಕು ಹೆಚ್ಚು ಕಾಲ ಬಾಳ್ವಿಕೆ ಬರುವುದಿಲ್ಲ. ಕೆಡುಕಿನ ಅಂಧಕಾರವನ್ನು ಸೀಳುತ್ತಾ ಒಳಿತಿನ ಕಿರಣಗಳು ಖಂಡಿತವಾಗಿಯೂ ಪ್ರತ್ಯಕ್ಷಗೊಳ್ಳುವುದು. ಅದಕ್ಕಾಗಿರುವ ಪ್ರಯತ್ನದ ಹಾದಿಯಲ್ಲಿ ಹಲವಾರು ತೊಡಕುಗಳು ಎದುರಾಗಬಹುದು. ದೌರ್ಜನ್ಯ, ಅಕ್ರಮಗಳನ್ನು ಸಮರ್ಥವಾಗಿ ಎದುರಿಸದೆ ಒಳಿತಿನ ಉದಯಕ್ಕೆ ಬೇರೆ `ಶಾರ್ಟ್ ಕಟ್'ಗಳಿಲ್ಲ. ಈಜಿಪ್ಟಿನ ಪ್ರಜಾಪ್ರಭುತ್ವ ಪ್ರಿಯ ಜನರು ಅದನ್ನೇ ಮಾಡುತ್ತಿದ್ದಾರೆ.