Thursday, 25 April 2013

ತಾಯಿ ಕಥೆ



ಮಕ್ಕಳಿಗೆ ತಂದೆಯೊಂದಿಗೆ ಮಾತನಾಡಲು ಭಯ . ಅವರ ಎಲ್ಲಾ ಬೇಡಿಕೆಗಳನ್ನು ತಾಯಿಗೆ ತಿಳಿಸುತ್ತಿದ್ದರು .ತಾಯಿ ತಂದೆಗೆ ತಿಳಿಸುತ್ತಿದ್ದಳು . ತಾಯಿ ಮಕ್ಕಳ ಪ್ರತಿನಿಧಿಯಂತಿದ್ದಳು . ಒಂದು ದಿನ ತಾಯಿ ಮರಣ ಹೊಂದಿದಳು . ಅದರೊಂದಿಗೆ ಮಕ್ಕಳ ಬೇಡಿಕೆಗಳೂ ನಿಂತವು .

Sunday, 21 April 2013

ಅಡುಗೆ ತಯಾರಿ


ಬೆಳಿಗ್ಗೆ ಆಫೀಸಿಗೆ ಹೊರಡುವಾಗ “ಮಧ್ಯಾಹ್ನದ ಬಳಿಕ ರಜೆ ಹಾಕಬೇಕು” ಎಂಬ ಕಟ್ಟಾಜ್ಞೆಯನ್ನು ನನ್ನ ಮುದ್ದಿನ ಪತ್ನಿ ಶಮಾ ನೀಡಿದ್ದಳು. ಅದಕ್ಕೆ ಕಾರಣವೂ ಇತ್ತು. ರಾತ್ರಿ ಮನೆಯಲ್ಲಿ ಔತಣಕೂಟ ಏರ್ಪಾಟಾಗಿತ್ತು. ಗಲ್ಫ್‍ನಿಂದ ಬಂದ ಅವಳ ಅಣ್ಣ ಮತ್ತು ಆತನ ಪತ್ನಿ, ಮಕ್ಕಳು ಬರುವವರಿದ್ದರು. ಗಲ್ಫ್‍ನಲ್ಲೇ ಮನೆ ಮಾಡಿಕೊಂಡಿದ್ದ ಅವರು ಮಕ್ಕಳ ರಜೆಯ ಪ್ರಯುಕ್ತ ಊರಿಗೆ ಬಂದಿದ್ದರು.
ನಾನು ಬೆಳಿಗ್ಗೆ ಆಫೀಸಿಗೆ ತಲುಪಿ ಮಧ್ಯಾಹ್ನ ಮರಳುವುದಕ್ಕಿಂತ ಮುಂಚೆ ಏಳು ಬಾರಿ ಫೋನ್ ಮಾಡಿದ್ದಳು. ನನಗೆ ಮರೆವು ಸ್ವಲ್ಪ ಹೆಚ್ಚಾಗಿರುವುದರಿಂದ ಅವಳು ಆ ತರಹ ಕಾಲ್ ಮಾಡಿದ್ದಳು. ಪ್ರತೀ ಫೋನ್  ಕಾಲ್‍ಗಳು ಕೊನೆಗೊಂಡದ್ದು ಮಧ್ಯಾಹ್ನ ಬೇಗ ಬರಬೇಕು ಎಂಬ ಪ್ರೀತಿಯಿಂದ ಕೂಡಿದ ಮನವಿಯೊಂದಿಗಿತ್ತು. ಹಾಗೆ ನಾನು ಆಫೀಸಿನಲ್ಲಿ ರಜೆ ಪಡೆದು ಮನೆಗೆ ಮರಳಿದೆ. ಅವಳು ಬಾಗಿಲಿನಲ್ಲೇ ಕಾಯುತ್ತಿದ್ದಳು. ನನ್ನನ್ನು ಕಂಡು ಅತೀವ ಸಂತೋಷಗೊಂಡಿದ್ದಳು. ಕಾರಣ ನಾನು ಮಧ್ಯಾಹ್ನ ರಜೆ ಹಾಕಿ ಬರುತ್ತೇನೆಂದು ಅವಳು ನಂಬಿರಲಿಲ್ಲ.
ನನ್ನ ಬ್ಯಾಗನ್ನು ತೆಗೆದಿರಿಸಿ ವಸ್ತ್ರ ಬದಲಿಸಲು ಕಪಾಟಿನಿಂದ ಲುಂಗಿಯನ್ನು ನೀಡಿ ಅಡುಗೆ ಮನೆಗೆ ಹೋದಳು. ನಾನು ಬಟ್ಟೆ ಬದಲಿಸಿ ಊಟಕ್ಕೆ ಹೋದೆ. ಟೇಬಲಿನಲ್ಲಿ ಊಟ ಬಡಿಸಿಟ್ಟಿದ್ದಳು. ರಾತ್ರಿಗಿರುವ ತಯಾರಿಯ ಭರಾಟೆಯಲ್ಲಿ ಪದಾರ್ಥಕ್ಕೆ ಉಪ್ಪು ಸಪ್ಪೆಯಾಗಿತ್ತು. ಅದನ್ನು ಹೇಳಿದರೆ ನಾಲ್ಕು ಬೈಯುವಳೇ ಹೊರತು ಅಡುಗೆಯ ಮೇಲಿನ ಅವಳ ಅಸಾಮಥ್ರ್ಯದ ಕುರಿತು ಒಪ್ಪಿಕೊಳ್ಳಲಿಕ್ಕಿಲ್ಲ. ಅವಳ ಅಡುಗೆಯ ಕುರಿತು ನಾನು ಹೊಗಳಿದರೆ ಅವಳಿಗೆ ಖುಷಿಯೇ ಖುಷಿ. ಅಂದಿಡೀ ನನಗೆ ಪ್ರೀತಿಯ ಭರ್ಜರಿ ವರ್ತನೆ ಲಭ್ಯವಾಗುತ್ತಿತ್ತು. ಆ ಪದಾರ್ಥ ಎಷ್ಟೇ ಸಪ್ಪೆಯಾಗಿದ್ದರೂ ಸರಿ.
ಅವಳು ಕೂಡಾ ತಟ್ಟೆಗೆ ಅನ್ನ ಹಾಕಿ ನನ್ನ ಮುಂದೆ ಕುಳಿತಳು ನಾನು ಅವಳ ಮುಖವನ್ನೇ ನೋಡಿದೆ. ಆ ಸುಂದರ ಮುಖವು ಕೆಲಸದ ಒತ್ತಡದಿಂದ ಮಂಕಾಗಿರುವಂತೆ ಕಂಡಿತು. ಹಣೆಯಲ್ಲಿ ಬೆವರಿತ್ತು. ಅಯ್ಯೋ ಪಾಪ ಅನಿಸಿತು. ಅವಳು ತಿನ್ನುವುದರಲ್ಲೇ ನಿರತಳಾಗಿದ್ದಳು. ಮಧ್ಯೆ ಅವಳು ತಲೆ ಎತ್ತಿ ನೋಡಿದಾಗ ನಾನು ಅವಳನ್ನೇ ನೋಡುತ್ತಿದ್ದೆ.
“ಓಯ್, ಎನ್ರೀ ಹಾಗೆ ಗುರಾಯಿಸ್ತಿದ್ದೀರ. ನೀವು ನನ್ನನ್ನು ಮೊದಲ ಸಾರಿ ಕಂಡಂತೆ ನೋಡುತ್ತಿದ್ದೀರಲ್ಲಾ?”
“ಏನಿಲ್ಲ, ನೀನು ತುಂಬಾ ಮುದ್ದು ಅಲ್ವಾ. ಹಾಗೆ ನೋಡಿದೆ ಅಷ್ಟೇ”
ನಾನು ತಿಂದು ಮುಗಿಸಿದ ಮೇಲೆ ಕೈ ತೊಳೆದು ಬೆಡ್‍ರೂಮಿಗೆ ಹೋಗಿ ಹಾಸಿಗೆಯ ಮೇಲೆ ಮಲಗಿದೆ. ನನಗೆ ಸುಸ್ತಾಗಿತ್ತು. ಸ್ವಲ್ಪ ಹೊತ್ತಾದಾಗ “ಇಕೊಳ್ಳಿ ಎಲ್ಲಿದ್ದೀರಿ” ಎಂದು ಕೇಳುತ್ತಾ ಬಂದಳು. ನಾನು ನಿದ್ರೆ ಹತ್ತಿದವನಂತೆ ನಟಿಸಿದೆ. ಅವಳು ನನ್ನ ಕಾಲನ್ನು ತಟ್ಟುತ್ತಾ “ಹೋಯ್, ನಿಮ್ಮನ್ನು ಮಧ್ಯಾಹ್ನ ರಜೆ ಹಾಕಿ ಬರಲು ಹೇಳಿದ್ದು ಇಲ್ಲಿ ಮಲಗಲಿಕ್ಕಲ್ಲ. ಬೇಗ ರೆಡಿಯಾಗಿ. ಅಂಗಡಿಗೆ ಹೋಗಿ ಸಾಮಾನು ತರಲಿಕ್ಕುಂಟು. ಇನ್ನು ನಿದ್ದೆಯೆಲ್ಲಾ ರಾತ್ರಿ.”
ನಾನು ಒಲ್ಲದ ಮನಸ್ಸಿನಿಂದ ಎದ್ದೆ. ಅವಳು ದೊಡ್ಡ ಚೀಲ ತಂದು ಕೈಗಿತ್ತಳು. ಜೊತೆಗೆ ಯಾವೆಲ್ಲ ಸಾಮಾನು ತರಬೇಕು ಎಂದು ಬರೆದ ಇಷ್ಟುದ್ದದ ಲೀಸ್ಟು. ಅದರ ಕೊನೆಯಲ್ಲಿ ಅಡುಗೆಗೆ ಸಂಬಂಧಿಸದ “ಫೇರ್ ಆಂಡ್ ಲೌಲಿ” ಕ್ರೀಮು ಕೂಡಾ ಬರೆದಿತ್ತು. ಅಡುಗೆ ತಯಾರಿಸಲು ಈ ಕ್ರೀಮು ಯಾಕೆ ಎಂದು ನನಗೆ ಅರ್ಥವೇ ಆಗಲಿಲ್ಲ.
‘ಲೇ ಶಮಾ, ಇದೇನೇ, ಅಡುಗೆ ಸಾಮಾನಿನ ಪಟ್ಟಿಯಲ್ಲಿ ಫೇರ್‍ಆಂಡ್ ಲೌಲಿ. ಪದಾರ್ಥಕ್ಕೆ ಮಿಕ್ಸ್ ಮಾಡಲಿಕ್ಕುಂಟಾ!” ನಾನು ಜಿಜ್ಞಾಸೆ ತಾಳಲಾರದೆ ಕೇಳಿದೆ.
“ಆ ಕ್ರೀಮು ತರಲು ನಾನು ಮೂರು ವಾರಗಳಿಂದ ನಿಮ್ಮಲ್ಲಿ ಹೇಳುತ್ತಿದ್ದೇನೆ. ನೀವು ದಿನಾಲೂ ಅದನ್ನು ಮರೆತು ಬರುತ್ತೀರಿ. ಈಗ ನೀವು ಹೇಗೆ ಮರೀತೀರಿ ಅಂತ ನೋಡ್ತೇನೆ.” ನನ್ನ ಬೆನ್ನ ಹಿಂದಿನಿಂದ ದೂಡುತ್ತಾ ಹೇಳಿದಳು.
ನಾನು ಚೀಲ ಹಿಡಿದು ಅಂಗಡಿಗೆ ಹೊರಟೆ. “ರೀ ಬೇಗ ಬರಬೇಕು. ಇನ್ನು ಪತ್ರಿಕೆ ಓದುತ್ತಾ ಅಲ್ಲೇ ಕೂರಬೇಡಿ” ಎಂಬ ಸಲಹೆಯನ್ನು ನೀಡಿ ಬಾಗಿಲು ಮುಚ್ಚಿಕೊಂಡಳು.
ನಾನು ಅಂಗಡಿಗೆ ಹೋಗಿ ಸಾಮಾನಿನ ಪಟ್ಟಿಯ ಪ್ರಕಾರ ಖರೀದಿಸ ತೊಡಗಿದೆ. ಅರ್ಧ ಗಂಟೆಯ ಬಳಿಕ ಶಮಾ ಫೋನ್ ಮಾಡಿದಳು. “ರೀ ಎಲ್ಲಿದ್ದೀರಿ? ಎನ್ಮಾಡ್ತಿದ್ದೀರ? ಸಾಮಾನೆಲ್ಲಾ ಖರೀದಿಸಿ ಆಯ್ತಾ?” ಹೀಗೆ ಪ್ರಶ್ನೆಗಳ ಸುರಿಮಳೆಗೈದಳು.
“ಬರ್ತೇನೆ ಮಾರಾಯ್ತಿ. ಇಷ್ಟದ್ದದ ಪಟ್ಟಿ ಬರೆದು ಕೊಟ್ಟು ಬೇಗ ಬನ್ನಿ ಎಂದರೆ ಹೇಗೆ? ಎಲ್ಲವನ್ನೂ ಖರೀದಿಸುವುದು ಬೇಡ್ವಾ” ನಾನು ಸ್ವಲ್ಪ ಗರಂ ಆಗಿ ಹೇಳಿದೆ.
ಆಚೆ ಕಡೆಯಿಂದ ಮುಸಿ ಮುಸಿ ನಗು ಕೇಳಿಸಿತು. “ರೀ ಬರುವಾಗ ಜಾಗ್ರತೆ ರಸ್ತೆ ದಾಟುವಾಗ ಆಚೀಚೆ ನೋಡ್ಕೊಳ್ಳಿ ಆಯ್ತಾ! ಓಕೆ ಬಾೈ. ಐ ಲವ್ ಯು” ಎಂದು ಫೋನಿಟ್ಟಳು. ಚಿಕ್ಕ ಮಕ್ಕಳೊಂದಿಗೆ ಹೇಳುವಂತಿದ್ದರೂ ಅವಳಿಗೆ ನನ್ನ ಮೇಲಿನ ಕಾಳಜಿಯನ್ನು ಕಂಡು ಪ್ರೀತಿ ಉಕ್ಕಿ ಬಂತು.
ನಾನು ಸಾಮಾನು ಖರೀದಿಸಿ ತಂದಾಗ ಗಂಟೆ ನಾಲ್ಕಾಗಿತ್ತು. ಶಮಾ ಒಣಗಿದ ಬಟ್ಟೆಗಳನ್ನು ತೆಗೆದು ಒಳ ಹೋಗುತ್ತಿದ್ದಳು. ನನ್ನನ್ನು ಕಂಡು ನಸು ನಕ್ಕು “ಫೇರ್ ಆಂಡ್ ಲೌಲಿ ತಂದಿದ್ದೀರ” ಎಂದು ಕೇಳಿದಳು.
“ಆಯ್ಯೋ, ಸಾರಿ ಕಣೇ, ನಾನು ಮರೆತು ಬಂದೆ” ನಾನು ಮರೆತವನಂತೆ ತಲೆ ಮೇಲೆ ಕೈಯಿರಿಸಿ ಹೇಳಿದೆ.
“ಹೌದಾ! ನೀವು ಒಳಗೆ ಬನ್ನಿ, ಮಾಡ್ತೇನೆ ನಿಮಗೆ” ಒಳಗೆ ಬಂದು ಎದುರಾಗಿ ನಿಂತಳು.
“ಓಹ್, ತಂದಿದ್ದೇನೆ ಮಾರಾಯ್ತಿ. ಇನ್ನು ಒಳಗೆ ಹೊಕ್ಕುವಾಗಲೇ ಕಿವಿಹಿಂಡುವುದು ಬೇಡ” ನಾನು ವ್ಯಂಗ್ಯವಾಗಿ ಹೇಳಿದೆ.
ನಾನು ಚೀಲವನ್ನು ಅಡುಗೆ ಕೋಣೆಯಲ್ಲಿರಿಸಿದೆ. ಅವಳು ಬಟ್ಟೆಯನ್ನು ರೂಮಿನಲ್ಲಿ ಬೆಡ್ ಮೇಳೆ ಹಾಕಿ ಬಂದಳು. ನನ್ನ ಭುಜದ ಮೇಲೆ ಕೈಯಿರಿಸಿ "ಪ್ಲೀಸ್ ರೀ ಆ ಬಟ್ಟೆಯನ್ನೆಲ್ಲಾ ಮಡಚಿಡ್ತೀರಾ?” ಎಂದು ಪ್ರೀತಿಯಿಂದ ಹೇಳಿದಳು.
“ನೀನೊಮ್ಮೆ ಹೋಗು ಮಾರಾಯ್ತಿ. ಸುಮ್ಮನೆ...” ನಾನು ಹುಸಿ ಕೋಪದೊಂದಿಗೆ ಅವಳ ಕೈಯನ್ನು ನನ್ನ ಭುಜದಿಂದ ಕೆಳಗಿರಿಸಿದೆ. ಅವಳು ಕಣ್ಣು ಕಿರಿದಾಗಿಸಿ ಪ್ಲೀಸ್ ಪ್ಲೀಸ್ ಎಂದಾಗ ನಾನು ನಸುನಕ್ಕು ಬೆಡ್‍ರೂಮಿಗೆ ಹೋದೆ.
ಚಹಾ ಕುಡಿದ ನಂತರ ಅಡುಗೆ ಕೆಲಸ ಆರಂಭವಾಯಿತು. ನಾನು ಟಿ.ವಿ. ನೋಡಲು ಕುಳಿತೆ. ಸ್ವಲ್ಪ ಹೊತ್ತಾದಾಗ ಅಡುಗೆ ಮನೆಯಿಂದ “ರೀ ಎಲ್ಲಿದ್ದೀರಿ. ಸ್ವಲ್ಪ ಈ ಕಡೆ ಬರ್ತೀರಾ” ಎಂಬ ಕರೆ ಬಂತು. ನಾನು ಅತ್ತ ಗಮನಹರಿಸಲಿಲ್ಲ. ಟಿ.ವಿ. ನೋಡುವುದರಲ್ಲೇ ತಲ್ಲೀನನಾದೆ. ಬಳಿಕ ಅವಳೇ ಬಂದು ನನ್ನ ಕತ್ತು ಬಳಸಿ ಹೇಳಿದಳು. “ಅಲ್ಲಿ ಅಡುಗೆ ಮನೆಯಲ್ಲಿ ಅಷ್ಟೆಲ್ಲಾ ಕೆಲಸ ಇರುವಾಗ ನೀವು ಇಲ್ಲಿ ಟಿ.ವಿ. ನೋಡ್ತಾ ಕುಳಿತಿದ್ದೀರಾ. ನನಗೆ ಸ್ವಲ್ಪ ಸಹಾಯ ಮಾಡ್ಬಾರ್ದಾ?”
“ಹೌದಾ, ನೀನು ಮೊನ್ನೆ ಹೇಳಿದೆ, ಅಡುಗೆಗೆ ಪುರುಷರ ಕೈತಾಗಿದರೆ ರುಚಿಯೆಲ್ಲಾ ಹೋಗುತ್ತದೆ ಎಂದು. ಈಗ ನಾನು ಬೇಕಾ?” ನಾನು ಚಾನೆಲ್ ಬದಲಿಸುತ್ತಾ ಹೇಳಿದೆ.
“ಅದು ನಾನು ಸುಮ್ಮನೆ ಹೇಳಿದ್ದಲ್ವಾ. ಈಗ ಬನ್ನಿ, ಪ್ಲೀಸ್” ಎಂದು ನನ್ನ ತೋಳು ಹಿಡಿದು ಎಳೆದಳು. ಅವಳ ಕೊಂಡಾಟದ ಮುಂದೆ ನಾನು ಸೋತೆ.
ನನಗೆ ಅಡುಗೆ ಮನೆಯಲ್ಲಿ ತರಕಾರಿ ಹಚ್ಚುವ ಘನ ಜವಾಬ್ದಾರಿ ಸಿಕ್ಕಿತು. ಮೊದಲಿಗೆ ನೀರುಳ್ಳಿಯನ್ನು ಹಚ್ಚಿದೆ. ಕಣ್ಣಿನಲ್ಲಿ ನೀರು ಬರಲು ಪ್ರಾರಂಭಿಸಿತು.
“ಇದೇನ್ರಿ, ಆಮ್ಲೆಟ್ ಮಾಡ್ಲಿಕ್ಕೆ ನೀರುಳ್ಳಿ ಹಚ್ಚುವುದಾ? ನಾನು ಹೇಳಿದ್ದು ಬಿರಿಯಾಣಿ ಮಸಾಲಕ್ಕೆ. ಉದ್ದುದ್ದ ಕೊಯ್ಯಿರಂತೆ” ಆಜ್ಞೆ ನೀಡಿದಳು.
“ಇಲ್ಲಿ ಕಣ್ಣು ಉರೀತಾ ಉಂಟು ಮಾರಾಯ್ತಿ.” ನಾನು ಕಣ್ಣುಜ್ಜುತ್ತಾ ಹೇಳಿದೆ.
“ಅದಕ್ಕೇ, ಬೇಗ ಬೇಗ ಹಚ್ಚಿರಿ. ಈಗ ಗೊತ್ತಾಯ್ತಾ ಅಡುಗೆಯ ಕಷ್ಟ”
ಟೊಮೆಟೋ, ಸೌತೆಕಾಯಿ, ಅಲಸಂಡೆ ಮೊದಲಾದ ತರಕಾರಿಗಳು ನನ್ನ ಮುಂದೆ ಬಿದ್ದವು. ಅದನ್ನು ಹಚ್ಚುವ ರೀತಿಯನ್ನೂ ಹೇಳಿಕೊಟ್ಟಳು. ಯಾವ ತರಕಾರಿ ಯಾವ ಆಕೃತಿಯಲ್ಲಿ ಕೊಯ್ಯಬೇಕು ಎಂದು ಪಾಠ ಹೇಳಿದಂತೆ ಹೇಳಿಕೊಟ್ಟಳು.
ಅವನ್ನೆಲ್ಲಾ ಹೇಗೆ ಕೊಯ್ಯಬೇಕು ಎಂದು ನನಗೆ ಚೆನ್ನಾಗಿ ಗೊತ್ತಿದೆ. ನಾನು ಅಡುಗೆ ಮಾಡುವುದರಲ್ಲಿ ಅಷ್ಟು ಹಿಂದೇನೂ ಅಲ್ಲ. ಮದುವೆಗಿಂತ ಮುಂಚೆಯೇ ನನಗೆ ಅಡುಗೆ ಕಲಿಯುವ ಸಂದರ್ಭ ಬಂದಿತ್ತು. ಅಡುಗೆಯನ್ನೂ ಕಲಿತಿದ್ದೇನೆ. ಆದರೆ ಈ ವಿಷಯವನ್ನು ನಾನು ನನ್ನ ಶಮಾಳಿಗೆ ಈವರೆಗೂ ಹೇಳಲಿಲ್ಲ. ಹೇಳಿದರೆ ಅಡುಗೆಯ ಹಲವು ಕೆಲಸಗಳು ನನ್ನ ತಲೆಗೆ ಬೀಳಬಹುದು. ನನಗೆ ಅಡುಗೆ ಮಾಡಲು ಹೇಳಿ ಅವಳು ತಲೆನೋವೆಂದು ಮಲಗಬಹುದು.
ನಾನು ಮುಳ್ಳುಸೌತೆ ಕೊಯ್ಯುವಾಗ ಮಧ್ಯೆ ಮಧ್ಯೆ ಒಂದೊಂದು ತುಂಡನ್ನು ತಿನ್ನುತ್ತಿದ್ದೆ. “ಏನ್ರೀ ಇದು. ನಿಮ್ಮಲ್ಲಿ ತಿನ್ನಲಿಕ್ಕೆ ಹೇಳಿದ್ದಾ, ಅಲ್ಲ ತರಕಾರಿ ಹಚ್ಚಲಿಕ್ಕೆ ಹೇಳಿದ್ದಾ? ನೀವು ಹೀಗೆ ತಿಂದರೆ ಎರಡು ಕಿಲೋ ಪುನಃ ತರಿಸ್ಬೇಕಾಗಬಹುದು” ಅವಳು ಜೋರು ಮಾಡಿದಳು.
“ಅಲ್ಲ ಕಣೇ ಮುಳ್ಳುಸೌತೆ ಕಹಿ ಉಂಟಾಂತ ನೋಡಿದ್ದು” ನಾನು ಸ್ಪಷ್ಟೀಕರಣ ನೀಡಿದೆ.
“ಅದು ಒಂದು ತುಂಡು ತಿಂದರೆ ತಿಳಿಯುತ್ತೆ. ಅರ್ಧ ಸೌತೆ ತಿನ್ನಬೇಕೆಂದೇನಿಲ್ಲ.”
ಶಮಾ ತೀವ್ರ ಗಡಿಬಿಡಿಯಲ್ಲಿದ್ದಳು. ಅವಳಿಗೆ ನಾಲ್ಕು ಕೈಗಳಿರುತ್ತಿದ್ದರೂ ಅದು ಸಾಕಾಗುತ್ತಿರಲಿಲ್ಲ. ಅವಳು ಗಡಿಬಿಡಿಯಲ್ಲಿ ಬೇವುಸೊಪ್ಪು ತರಲು ಹಿತ್ತಿಲ ಕಡೆಗೆ ಹೋಗುವಾಗ ನಾನು ಕುಳಿತ ಕುರ್ಚಿಯ ಕಾಲು ಅವಳಿಗೆ ತಾಗಿತು. ಎಡವಿ ಬೀಳುವಂತಾದಳು. ತಿರುಗಿ ಬಂದು ನನ್ನ ಬೆನ್ನಿಗೆ ಒಂದು ಗುದ್ದು ನೀಡಿ ಹೇಳಿದಳು. “ನಿಮಗೆ ಕುರ್ಚಿಯನ್ನು ಸರಿ ಇಡಲಿಕ್ಕೆ ಆಗುವುದಿಲ್ಲಾ” ನನಗೆ ಅಯ್ಯೋ ಪಾಪ ಅನಿಸಿತು.
ಅಂತೂ ನೆಂಟರಿಷ್ಟರೆಲ್ಲಾ ಬಂದರು. ಶಮಾ ಅವರನ್ನು ಉಪಚರಿಸುವುದರಲ್ಲೇ ನಿರತಳಾದಳು. ಅಣ್ಣನೊಂದಿಗೆ ಭಾಭಿಯೊಂದಿಗೆಲ್ಲಾ ಹಲವು ವಿಷಯಗಳ ಕುರಿತು ಚರ್ಚಿಸಿದಳು. ಆದರೆ ಆ ವಿಷಯಗಳೆಲ್ಲಾ ನಾನು ಅವಳೊಂದಿಗೆ ಹೇಳಿದ ವಿಚಾರಗಳಾಗಿದ್ದವು. ಅವಳು ದೊಡ್ಡ ತಿಳುವಳಿಕೆ ಇರುವಂತೆ ಮಾತನಾಡುತ್ತಿದ್ದಳು. ಅವರೇನಾದರೂ ಮರು ಪ್ರಶ್ನೆ ಕೇಳಿದರೆ ತಬ್ಬಿಬ್ಬಾಗಿ ವಿಷಯ ಬದಲಾಯಿಸುತ್ತಿದ್ದಳು.
ಭರ್ಜರಿ ಊಟದ ವ್ಯವಸ್ಥೆಯೂ ಆಯಿತು. ಅವರನ್ನು ಉಪಚರಿಸಿ ನನ್ನ ಶಮಾ ಬಳಲಿ ಬೆಂಡಾಗಿದ್ದಳು. ಹಣೆಯಲ್ಲಿ ಬೆವರು ಹನಿಗಟ್ಟಿತ್ತು. ಮುದ್ದು ಮುಖವು ಬಾಡಿತ್ತು. ಹಾಗೆ ಅವರು ನಮ್ಮ ಆತಿಥ್ಯವನ್ನು ಸ್ವೀಕರಿಸಿ ಹೊರಟು ಹೋದರು. ಆಗ ನಾನು ನಿಟ್ಟುಸಿರು ಬಿಟ್ಟೆ. ದೊಡ್ಡ ಯುದ್ಧದಲ್ಲಿ ಭಾಗವಹಿಸಿ ಮರಳಿದಂತಾಗಿತ್ತು.
ಇನ್ನು ಅಡುಗೆ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯ ಬಾಕಿ ಉಳಿದಿತ್ತು. ತೊಳೆಯಬೇಕಾದ ಪಾತ್ರೆಯ ದೊಡ್ಡ ರಾಶಿಯೇ ಬಿದ್ದಿತ್ತು. ಅವಳು ಅದನ್ನು ತೊಳೆಯಲು ಹೊರಟಳು. “ಇಕೊಳ್ಳೇ ಅದನ್ನೆಲ್ಲಾ ಬೆಳಿಗ್ಗೆದ್ದು ತೊಳೆಯುವಾ. ಬೇಕಾದರೆ  ನಾನೂ ಸಹಾಯ ಮಾಡುತ್ತೇನೆ. ಈಗ ನೀನು ಆಯಾಸಗೊಂಡಿದ್ದೀ” ನಾನು ತೊಳೆಯುವ ಭರವಸೆ ನೀಡಿದೆ.
ನನಗೂ ಆಯಾಸವಾಗಿತ್ತು. ಕೈಕಾಲು ಮುಖ ತೊಳೆದು ನಾನು ಮಲಗಿದೆ. ಸ್ವಲ್ಪ ಹೊತ್ತಾದ ಮೇಲೆ ಶಮಾ ಬಂದು ಬಳಿ ಮಲಗಿದಳು.
“ಸುಮ್ಮನೆ ಮಲಗು ಮಾರಾಯ್ತಿ. ಬಾಕಿ ವಿಷಯವೆಲ್ಲಾ ಬೆಳಿಗ್ಗೆ ಮಾತಾಡೋಣ” ಎಂದು ನಾನು ಮಗ್ಗುಲು ಬದಲಿಸಿ ಮಲಗಿದೆ. ಆಯಾಸದಲ್ಲಿ ನಿದ್ದೆ ಹತ್ತಿದ್ದೇ ತಿಳಿಯಲಿಲ್ಲ.