ಮಣಿಪುರದ ರಾಜಧಾನಿ ಇಂಫಾಲಿಗೆ ಹೋದರೆ ಆ ಪ್ರದೇಶದ ಹೃದಯಭಾಗದಿಂದ ‘ಇದು ನಮ್ಮ ಏರಿಯಾ’ ಎಂಬ ಅಧಿಕಾರದ ಹೆಣ್ಣು ಧ್ವನಿ ನಿಮಗೆ ಕೇಳಿಸಬಹುದು. ಅಲ್ಲೊಂದು ಮಾರುಕಟ್ಟೆ ಇದೆ. ಅದರ ಹೆಸರು ‘ಇಮಾ ಕೆಯ್ತಲ್’ ಇಲ್ಲಿ ಕೇವಲ ಮಹಿಳಾ ವ್ಯಾಪಾರಿಗಳದ್ದೇ ಕಾರುಬಾರು. ಮಹಿಳಾ ಸಬಲೀಕರಣಕ್ಕೆ ಪ್ರಯತ್ನಿಸುವ ನಿಷ್ಠಾವಂತ ವ್ಯಾಪಾರಿಗಳಿವರು. ಮಹಿಳಾ ವ್ಯಾಪಾರಿಗಳು ಮಾತ್ರವಿರುವ ಜಗತ್ತಿನ ಏಕೈಕ ಮಾರುಕಟ್ಟೆ ಎಂಬ ಖ್ಯಾತಿ ಈ ಕೆಯ್ತಲ್ ಮಾರುಕಟ್ಟೆಗಿದೆ. ಆರ್ಥಿಕ ಸಬಲೀಕರಣದ ಮೂಲಕ ಸಮಾಜದ ಸಬಲೀಕರಣ ಹಾಗೂ ಸ್ವಾತಂತ್ರ್ಯ ಗಳಿಸಿದ ಮಹಿಳೆಯರ ಯಶೋಗಾಥೆ ಈ ಮಾರುಕಟ್ಟೆಗೆ ಹೇಳಲಿಕ್ಕಿದೆ.
ಮಣಿಪುರಿ ಭಾಷೆಯ ಇಮಾ ಎಂಬ ಪದಕ್ಕೆ ತಾಯಿ, ಅಮ್ಮ ಎಂದರ್ಥ. ಹತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರು ಇಲ್ಲಿ ವ್ಯಾಪಾರ ನಡೆಸುತ್ತಾರೆ. ಇವರ ಮಧ್ಯೆ ಸಂಬಂಧದಲ್ಲಿ ಒಡಕಿದ್ದಂತೆ ಕಂಡರೂ ಇವರು ಪರಸ್ಪರ ಒಗ್ಗಟ್ಟಿನಿಂದ ಬಾಳುವವರಾಗಿದ್ದಾರೆ. ಇಲ್ಲಿ ಸಿಗದ ವಸ್ತುಗಳಿಲ್ಲ. ಈ ಮಾರುಕಟ್ಟೆಯ ಒಳಹೊಕ್ಕರೆ ಎಲ್ಲಾ ಕಡೆಗಳಲ್ಲೂ ಮಹಿಳಾ ಮಣಿಗಳ ಸ್ವರವೇ ಕೇಳಿಸುತ್ತದೆ. ಇಲ್ಲಿನ ಮಹಿಳೆಯರು ದಿನ ದೂಡಲಿಕ್ಕಾಗಿ ವ್ಯಾಪಾರ ನಡೆಸುತ್ತಾರೆಯೇ ಹೊರತು ದೊಡ್ಡ ಶ್ರೀಮಂತ ವ್ಯಕ್ತಿಗಳಾಗಬೇಕು ಎಂಬ ಆಶೆಯು ಅವರಲ್ಲಿರುವುದಿಲ್ಲ. ಇವರ ಗಿರಾಕಿಗಳಿಗೂ ಇವರಿಗೂ ಚೌಕಾಸಿ ನಡೆಸುವ ಸಂಪ್ರದಾಯ ಇಲ್ಲವೇ ಇಲ್ಲ. ಬಟ್ಟೆಗಳಿಗೂ ತರಕಾರಿಗಳಿಗೂ, ಹಣ್ಣು ಹಂಪಲುಗಳಿಗೂ ಗೃಹಬಳಕೆಯ ವಸ್ತುಗಳಿಗೂ ಒಣ ವಿೂನಿಗೂ ಹಸಿ ವಿೂನಿಗೂ ಬೇರೆ ಬೇರೆ ವಿಭಾಗಗಳಿವೆ. ಆ ಮಾರ್ಕೆಟಿನ ಒಳ ಹೊಕ್ಕರೆ ಡೊಡ್ಡ ಶಾಪಿಂಗ್ ಮಾಲ್‍ಗಳಿಗೆ ಹೋಗುವುದಕ್ಕಿಂತ ಹೆಚ್ಚಿನ ಸಂತೋಷ ಲಭಿಸುತ್ತದೆ ಎಂಬುದು ಅನುಭವಿಗಳ ಮಾತು. ಮಣಿಪುರದ ಮಹಿಳೆಯರ ಶ್ರಮ ಜೀವನವನ್ನು ಕಂಡು ಶತಮಾನದ ಹಿಂದೆ ಆಗಿನ ರಾಜರು ಈ ಮಾರುಕಟ್ಟೆ ತೆರೆಯಲು ಅನುವು ಮಾಡಿಕೊಟ್ಟಿದ್ದರು. ಕೆಲವು ವರ್ಷಗಳ ಹಿಂದೆ ರಾಜ್ಯ ಸರಕಾರವು ಅವರಿಗೆ ಕಟ್ಟಡಗಳನ್ನು, ಕುಳಿತುಕೊಂಡು ವ್ಯಾಪಾರ ನಡೆಸಲು ಆಸನಗಳನ್ನೂ ನಿರ್ಮಿಸಿಕೊಟ್ಟಿತು.
ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ಮಣಿಪುರವು ಸ್ವರ್ಗದಂತಿದೆ. ತೆಂಗನ್ನು ಹೊರತುಪಡಿಸಿ ಇಲ್ಲಿರುವ ಎಲ್ಲಾ ಸಸ್ಯಗಳೂ ಅಲ್ಲಿವೆ. ಅಲ್ಲಿ ಮಳೆಯು ಧಾರಾಳ ಸುರಿಯುವುದರಿಂದ ಎಲ್ಲೆಲ್ಲೂ ಮನಮುದಗೊಳಿಸುವ ಹಸುರಿನ ಹಾಸು. ಪ್ರಕೃತಿಯ ಮೇಲಿನ ಭೂಮಾಫಿಯಗಳ ಅತ್ಯಾಚಾರಕ್ಕೆ ಮಣಿಪುರವು ಇನ್ನೂ ಬಲಿಪಶುವಾಗಲಿಲ್ಲ ಎಂಬುದನ್ನು ಅಲ್ಲಿನ ಪ್ರಕೃತಿಯು ಸ್ಪಷ್ಟಪಡಿಸುತ್ತದೆ. ಅವರ ಕಿರಾತ ಕೈಗಳಿಗೆ ಮಣಿಪುರವು ಬಲಿಯಾಗದಿರಲಿ.
ಮಣಿಪುರದ ಮಹಿಳೆಯರ ಸಾಮಥ್ರ್ಯದ ಕುರಿತು ಜಗತ್ತು ಬೆರಗುಗಣ್ಣಿನಿಂದ ನೋಡುತ್ತದೆ. ಸೈನಿಕರಿಗೆ ಹೆಚ್ಚಿನ ಅಧಿಕಾರ ನೀಡಿದುದರ ವಿರುದ್ಧ ಕಳೆದ ಹದಿಮೂರು ವರ್ಷಗಳಿಂದ ಸ್ವಯಂ ಒಂದು ತೊಟ್ಟು ನೀರನ್ನೂ ಕುಡಿಯದೆ ಆಮರಣಾಂತ ಉಪವಾಸ ಆಚರಿಸುತ್ತಿರುವ ಇರೋಮ್ ಶರ್ಮಿಳಾ ಲಂಡನ್ ಒಲಿಂಪಿಕ್ಸ್‍ನಲ್ಲಿ ಬಾಕ್ಸಿಂಗ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ ಮೇರಿ ಕೋಮ್ ಇವರೆಲ್ಲರೂ ಮಣಿಪುರದ ಮಹಿಳಾ ಮಣಿಗಳಾಗಿದ್ದಾರೆ. ಏನಾದರೂ ಮಾಡಲು ಹೊರಟರೆ ಅರ್ಧದಿಂದ ಬಿಟ್ಟೋಡದೆ ಅದನ್ನು ಸಾಧಿಸುವ ವರೆಗೆ ಅವರು ಪಡುವ ಪ್ರಯತ್ನಗಳು ಇಂದು ಜಗತ್ತು ಅವರನ್ನು ಗಮನಿಸುವಂತೆ ಮಾಡಿದೆ. ತನ್ನ ಗುರಿಯನ್ನು ಸಾಧಿಸಲಿಕ್ಕಾಗಿ ಏನು ಮಾಡಲಿಕ್ಕೂ ಅವರು ಸಿದ್ಧರಾಗುತ್ತಾರೆ.
ಭಾರತದ ಸ್ವಾತಂತ್ರ್ಯ ಸಮರದಲ್ಲಿ ಇಂಫಾಲಿನ ಈ ತಾಯಂದಿರ ವ್ಯಾಪಾರದ ಪಾತ್ರವೂ ಇದೆ. ಬ್ರಿಟಿಷರ ವಿರುದ್ಧ ‘ನೂಪಿಲಾನ್’ ಎಂದು ಕರೆಯಲ್ಪಡುವ ಮಹಿಳಾ ಸಮರವು ನಡೆದದ್ದು ಈ ಮಾರುಕಟ್ಟೆಯನ್ನು ಕೇಂದ್ರವಾಗಿಸಿಯಾಗಿತ್ತು. ಬಲಾತ್ಕಾರವಾಗಿ ದುಡಿಸಿದ್ದರ ವಿರುದ್ದ ಮೊದಲ ನೂಪಿಲಾನ್ ಸಮರವು ನಡೆಯಿತು. ಬೆಲೆ ಏರಿಕೆ, ಕಾನೂನು ಬಾಹಿರವಾಗಿ ಅಕ್ಕಿ ಸಾಗಾಟ ಮೊದಲಾದವುಗಳ ವಿರುದ್ಧ ಎರಡನೆ ಕಾಳಗ ನಡೆಯಿತು. ಈ ಎರಡೂ ಸಮರಗಳಲ್ಲಿ ಮಹಿಳೆಯರ ಒಗ್ಗಟ್ಟಿನ ಫಲವಾಗಿ ವಿಜಯವು ಅವರನ್ನು ಬಿಟ್ಟೋಡಲಿಲ್ಲ. ಭಾರತೀಯ ಮಹಿಳೆಯರ ಸಾಮಥ್ರ್ಯವನ್ನು ಕಂಡು ಬ್ರಿಟಿಷರೇ ದಂಗಾದರು.
ಒಂದನೇ ನೂಪಿಲಾನ್:
ಅಂದು ಮಹಾರಾಜರಿಂದ ಅಧಿಕಾರವನ್ನು ಬ್ರಿಟಿಷರು ಬಲಾತ್ಕಾರವಾಗಿ ಪಡೆದಿದ್ದರು. ಇದರ ದ್ವೇಷವು ಮಣಿಪುರಿಗಳ ಹೃದಯದಲ್ಲಿ ಹೊತ್ತಿ ಉರಿಯುತ್ತಿತ್ತು. ಅದು ಪ್ರತಿಕಾರದ ಅಗ್ನಿಯಾಗಿ ಧಗಧಗಿಸಿತು. ಇಂಗ್ಲಿಷ್ ಅಧಿಕಾರಿಯ ಅರಮನೆಗೆ ಸಮಾನವಾದ ಕಟ್ಟಡವನ್ನು ಅವರು ಬೆಂಕಿ ಹಚ್ಚಿ ದ್ವಂಸಗೊಳಿಸಿದರು. ಆ ಅರಮನೆಯನ್ನು ಪುನರ್ನಿರ್ಮಿಸಲು ಮರದ ದಿಮ್ಮಿಗಳನ್ನು ಮಣಿಪುರದ ಪುರುಷರು ಹೊತ್ತುತರಬೇಕೆಂದು ಸರಕಾರವು ಆಜ್ಞೆ ಹೊರಡಿಸಿತು. ಬಲಾತ್ಕಾರವಾಗಿ ಪುಕ್ಕಟೆ ಸೇವೆಗೆ ಪುರುಷರು ಹೊರಟಾಗ ಹಲವು ಮನೆಗಳಲ್ಲಿ ಹಸಿವು ತಾಂಡವವಾಡಿತು. ಆದಾಯ, ಸಂಪಾದನೆ ಇಲ್ಲದ್ದರಿಂದ ಮಾರುಕಟ್ಟೆಯು ಬಿಕೋ ಎನ್ನ ತೊಡಗಿತು. ವ್ಯಾಪಾರಿಗಳಾದ ಅಲ್ಲಿನ ಮಹಿಳೆಯರೆಲ್ಲಾ ಒಗ್ಗಟ್ಟಾದರು. ಒಂದು ದಿನದ ಮಟ್ಟಿಗೆ ಮಾರುಕಟ್ಟೆಯನ್ನು ಬಂದು ಮಾಡಿದರು. ಪ್ರತಿಭಟನೆಯೆಂಬಂತೆ ಬ್ರಿಟಿಷ್ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದರು. ಸೇನೆಯನ್ನು ಕರೆಸಿ ಪ್ರತಿಭಟನೆಯನ್ನು ತಹಬದಿಗೆ ತಂದರೂ, ಬಲಾತ್ಕಾರವಾಗಿ ಕೆಲಸಕ್ಕೆ ನೇಮಿಸಲ್ಪಟ್ಟವರಿಗೆ ವೇತನ ನೀಡಲು ಬ್ರಿಟಿಷ್ ಅಧಿಕಾರಿಗಳು ನಿರ್ಬಂಧಿತರಾದರು.
ಎರಡನೇ ನೂಪಿಲಾನ್
1904ರ ಹೋರಾಟದ ಯಶಸ್ವಿನಿಂದ ಇಮಾ ಕೆಯ್ತಲ್ ಬೀಗಿತ್ತು. 1939ರಲ್ಲಿ ಮಾರುಕಟ್ಟೆಗೆ ದಾನ್ಯಗಳು ತಲುಪದಿರುವುದು ಆ ಮಹಿಳೆಯರಿಗೆ ಕೋಪ ಬರಿಸಿತು. ಕಡಿಮೆ ಬೆಲೆಗೆ ಧಾನ್ಯಗಳನ್ನೆಲ್ಲಾ ಖರೀದಿಸಿ ಹೊರ ನಾಡುಗಳಿಗೆ ರಪ್ತು ಮಾಡುತ್ತಿರುವುದಾಗಿ ಅಲ್ಲಿನ ವ್ಯಾಪಾರಿಗಳಿಗೆ ತಿಳಿಯಿತು. ಮಾರುಕಟ್ಟೆಗೆ ಅಕ್ಕಿ ತಲುಪದ್ದರಿಂದ ಬೆಲೆ ಗಗನಕ್ಕೇರಿತು. ಡಿಸೆಂಬರ್ 12ರಂದು ಆ ತಾಯಂದಿರು ರಂಗಕ್ಕಿಳಿದರು. ಸಾವಿರಾರು ಮಹಿಳೆಯರು ಮೆರವಣಿಗೆ ನಡೆಸಿ ರಾಜ್ಯ ದರ್ಬಾರಿನ ಮುಂದೆ ಜಮಾಯಿಸಿದರು. ರಾಜರ ಆದೇಶದಂತೆ ಧಾನ್ಯಗಳನ್ನು ರಪ್ತು ಮಾಡಲಾಗುತ್ತಿದೆ ಎಂದು ಬ್ರಿಟಿಷ್ ಅಧಿಕಾರಿಗಳು ಜಾಣೆಯ ಉತ್ತರ ನೀಡಿದರು. ಪ್ರವಾಸದಲ್ಲಿದ್ದ ರಾಜರು ತಮ್ಮ ಆಜ್ಞೆಯನ್ನು ಹಿಂಪಡೆಯುವ ವರೆಗೆ ಬ್ರಿಟಿಷ್ ಅಧಿಕಾರಿಯನ್ನು ಕದಲಲು ಆ ಮಹಿಳೆಯರು ಬಿಡಲಿಲ್ಲ. 1940 ಜನವರಿ 1ರ ವರೆಗೆ ಆ ಹೋರಾಟವು ಮುಂದುವರಿಯಿತು. ಆ ರಾಜ್ಯದ ಸಾಮಾಜಿಕ ಬದಲಾವಣೆಯಲ್ಲಿ ಮಹಿಳೆಯರ ಪಾತ್ರ ಏನೆಂಬುದನ್ನು ಆ ಹೋರಾಟಗಳು ಅನಾವರಣಗೊಳಿಸಿದವು.
ಇಮಾ ಕೆಯ್ತಾಲ್ ಮಾರುಕಟ್ಟೆಗೆ ವಸ್ತುಗಳನ್ನು ಖರೀದಿಸಲಿಕ್ಕಾಗಿ ಹೋಗುವವರು ಕೆಲವು ವಿಚಾರಗಳನ್ನು ತಿಳಿದಿರಬೇಕು. ತಾಯಿ ಎಂದು ಅರ್ಥವಿರುವ ಇಮಾ ಎಂದು ಅಲ್ಲಿನ ವ್ಯಾಪಾರಿಗಳನ್ನು ಕರೆಯಲಾಗುತ್ತದೆ. ವ್ಯಾಪಾರಿಗಳು ಮಹಿಳೆಯರು ಎಂದು ಭಾವಿಸಿ ಕೀಟಲೆ ಮಾಡುವುದನ್ನು, ದುಷ್ಟ ನೋಟ ಬೀರುವುದನ್ನು ಅವರು ಸಹಿಸುವುದಿಲ್ಲ. ಅದಕ್ಕೆ ಪ್ರಯತ್ನಿಸಿದವರು ಈ ತಾಯಂದಿರ ಕೈಯ ಬಿಸಿ ತಿಳಿಯುವರು. ತಿಳಿದಿದ್ದಾರೆ. ಆದ್ದರಿಂದ ಎಲ್ಲರೂ ಸಭ್ಯರಾಗಿಯೇ ಅವರೊಂದಿಗೆ ವರ್ತಿಸುತ್ತಾರೆ. ಅವರನ್ನು ಗೌರವಿಸುತ್ತಾರೆ.
ಈಶಾನ್ಯ ರಾಜ್ಯಗಳಲ್ಲಿ ಮುಂಜಾನೆ 4:30ಕ್ಕೆ ಸೂರ್ಯೋದಯವಾಗುತ್ತದೆ. ಆದ್ದರಿಂದಲೇ ಇಲ್ಲಿ ವಾಸಿಸುವ ಮಂದಿಯ ದಿನಚರಿಯು ಬೆಳ್ಳಂಬೆಳಿಗ್ಗೆಯೇ ಆರಂಭವಾಗುತ್ತದೆ. ಮಕ್ಕಳನ್ನು ಶಾಲೆಗೆ ಹೊರಡಿಸಿ, ಪತಿಗೆ ಆಹಾರ ತಯಾರಿಸಿ, ಮನೆಯ ಅತ್ಯಗತ್ಯದ ಕೆಲಸಗಳನ್ನೆಲ್ಲ ನಿರ್ವಹಿಸಿ ಆ ತಾಯಂದಿರು ವ್ಯಾಪಾರಕ್ಕೆ ಹೊರಡುತ್ತಾರೆ. ಒಂಭತ್ತು ಗಂಟೆಯಾಗುವಾಗ ವ್ಯಾಪಾರವು ಭರದಿಂದ ಸಾಗುತ್ತಿರುತ್ತದೆ. ತಂದ ವಸ್ತುಗಳನ್ನು ಒಂದು ಕಡೆ ಇರಿಸಿ ಅಲ್ಲಿ ಕುಳಿತುಕೊಳ್ಳುವರು. ಅದು ಖಾಲಿಯಾದಾಗ ಗಳಿಸಿದ ಅಲ್ಪ ಲಾಭದೊಂದಿಗೆ ಸಂತೋಷವಾಗಿ ಮನೆಗೆ ಮರಳುವರು. ಇಲ್ಲಿನಂತೆ ಅವರು ಯಾರನ್ನೂ ವಂಚಿಸುವುದಿಲ್ಲ. ನಿಯತ್ತಿನ ದುಡಿಮೆ ಅವರದ್ದು.
ಹೊಲಗದ್ದೆಗಳಿಲ್ಲದವರು ವಿವಿಧ ರೀತಿಯ ಬಟ್ಟೆಬರೆಗಳನ್ನು ಮಾರಲು ತರುತ್ತಾರೆ. ದೊಡ್ಡ-ಪುಟ್ಟ ಹಲವಾರು ಜಲಾಶಯಗಳು ಮಣಿಪುರದಲ್ಲಿವೆ. ಈ ಜಲಾಶಯಗಳಿಂದ ಹಿಡಿದ ಮೀನುಗಳೂ ಈ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತವೆ. ಕೈಗೆಟಕುವ ದರದಲ್ಲಿ ವಿೂನು ಸಿಗುವುದರಿಂದ ಹೆಚ್ಚಿನವರ ಮನೆಯ ಪದಾರ್ಥವೂ ವಿೂನಾಗಿರುತ್ತದೆ.
ಇಂಫಾಲ್ ಮಾತ್ರವಲ್ಲದೆ ಮಣಿಪುರದ ಇತರ ಕಡೆಗಳಲ್ಲೂ ಮಹಿಳೆಯರು ಮಾತ್ರ ವ್ಯಾಪಾರ ನಡೆಸುವ ಮಾರುಕಟ್ಟೆಗಳಿವೆ. ವ್ಯಾಪಾರದ ಸರಕುಗಳನ್ನು ತರಲು ಸರಕಾರವು ಸಾರಿಗೆಯ ವ್ಯವಸ್ಥೆಯನ್ನು ಮಾಡಿದೆ. ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಹೂಡಿಕೆಯಾಗುತ್ತದೆ ಎಂಬ ಮಾತು ಕೇಳಿದಾಗ ಆಗುವ ನಡುಕವೊಂದೂ ಇವರಲ್ಲಿ ಕಾಣಲು ಸಿಗುವುದಿಲ್ಲ. ಯಾರೇ ಬಂದು ವ್ಯಾಪಾರ ನಡೆಸಿದರೂ ಜನರಿಗೆ ಕಡಿಮೆ ಬೆಲೆಯಲ್ಲಿ ಮಾರಬೇಕೆಂಬುದೇ ಇಲ್ಲಿನ ಮಹಿಳಾ ವ್ಯಾಪಾರಿಗಳ ನಿಯಮ. ಇವರಷ್ಟು ಕಡಿಮೆ ಬೆಲೆಗೆ ಯಾವುದೇ ವ್ಯಾಪಾರಿಗಳಿಗೂ ವ್ಯಾಪಾರ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಈ ಮಹಿಳಾ ಮಣಿಗಳು ಸಾಬೀತು ಪಡಿಸಿದ್ದಾರೆ. ಕಾರಣ ಕುಟುಂಬದ ಖರ್ಚುಗಳನ್ನು ನಿಭಾಯಿಸುವ ಕೆಲಸ ಮಹಿಳೆಗಲ್ಲವೇ?