Monday, 18 June 2012

ರೀ .... ಚಪ್ಪಲಿ ಮರೆಯಬೇಡಿ



ನಾನು ಗೇಟು ತೆರೆದು ಬೇಗನೆ ಮನೆಗೆ ಬಂದು ಟಿ.ವಿ. ಓನ್ ಮಾಡಿ ಕುಳಿತೆ. ಇಂಡಿಯಾ, ಶ್ರೀಲಂಕಾ ಮಧ್ಯೆ ಮ್ಯಾಚ್ ನಡೆಯುತ್ತಿತ್ತು. ಅದು ರೋಮಾಂಚನಕಾರಿ ಘಟ್ಟ ತಲುಪಿತ್ತು. ಉಡುಪನ್ನು ಮಡಚಿಟ್ಟುಕೊಳ್ಳುತ್ತಿದ್ದ ಶಮಾ ಟಿ.ವಿ.ಯ ಶಬ್ಧಕ್ಕೆ ಹೊರ ಬಂದಳು. ಸಾವಿರ ತೂತಿರುವ ನನ್ನ ಬನಿಯನ್ ಅವಳ ಕೈಯಲ್ಲಿತ್ತು.
'ನೀವು ಯಾವಾಗ ಬಂದದ್ದು...' ರಾಗ ಎಳೆದಳು.
ನಾನು ಮೌನ ವಹಿಸಿ ಮ್ಯಾಚ್ ನೋಡುತ್ತಾ ಕುಳಿತೆ. ಮಾತಾಡದ್ದನ್ನು ಕಂಡು ಕೈಯ್ಯಲ್ಲಿದ್ದ ಬನಿಯಾನನ್ನು ಎತ್ತಿ ಎಸೆದಳು. ಬೇಡ ಎಸೆದ ಬಲೆಯಂತೆ ಅದು ನನ್ನ ಮೇಲೆ ಬಂದು ಬಿತ್ತು.
'ಏನು ಮಾರಾಯ್ತಿ. ಮನೆಗೆ ಬಂದವರನ್ನು ಓಡಿಸ್ತಿಯಾ' ನಾನು ಪ್ರತಿಕ್ರಿಯಿಸಿದೆ.
'ಮನೆಗೆ ಬರುವುದು ಹೀಗಾ...ಕಳ್ಳರು ಕೂಡಾ ಹೀಗೆ ಬರುವುದಿಲ್ಲ ' ಗರಂ ಆಗಿಯೇ ಉತ್ತರ ಕೊಟ್ಟು ಒಳ ಹೋದಳು.
ನಾನು ಟಿ.ವಿ. ನೋಡುತ್ತಾ ಕುಳಿತೆ. ಶಮಾ ವಸ್ತ್ರ ಮಡಚಿಟ್ಟು ಕಾಫಿ ತಯಾರಿಸಲು ಅಡುಗೆ ಕೋಣೆಗೆ ಹೋದಳು. ಕಾಫಿಗೆ ನೀರಿಟ್ಟು ನನ್ನ ಸಮೀಪ ಬಂದು ಕುಳಿತಳು. ಆಗಲೇ ನನಗೆ ಮನದಟ್ಟಾಯಿತು. ಇದು ಯಾವುದೋ ಒಂದು ಬೇಡಿಕೆಯನ್ನು ನನ್ನ ಮುಂದಿಡಲಿಕ್ಕಿರುವ ಮುನ್ನುಡಿ ಎಂದು.
'ರೀ.. ನನಗೆ ಒಂದು ಚಪ್ಪಲ್ ಬೇಕು. ಇದ್ದ ಚಪ್ಪಲಿ ಸವೆದು ಹೋಗಿದೆ.' ತನ್ನ ಬೇಡಿಕೆ ಮುಂದಿಟ್ಟಳು.
'ಏನು ಚಪ್ಪಲಾ ...! ವೊನ್ನೆಯಲ್ವಾ ತೆಗೆದು ಕೊಟ್ಟದ್ದು. ಅದು ಹೇಗೆ ಸವೆದು ಹೋಗುವುದು. ನೀನೇನು ಪೋಸ್ಟ್  ಮ್ಯಾನ್  ಕೆಲಸ ಮಾಡ್ತಿಯಾ' ನಾನು ಸ್ವಲ್ಪ ಜೋರಾಗಿಯೇ ಉತ್ತರ ನೀಡಿದೆ.
'ಹೋಂ .. ಮೊನ್ನೆಯಂತೆ ವೊನ್ನೆ.... ಕಳೆದ ಬಕ್ರೀದಿಗಲ್ವಾ ನೀವು ತೆಗೆದು ಕೊಟ್ಟದ್ದು. ಈಗ ಒಂದು ವರ್ಷವಾಗುತ್ತಾ ಬಂತು' ಅವಳು ಕೂಡಾ ಸ್ವರವೇರಿಸಿ ಮಾತಿಗಿಳಿದಳು.
ನಾನು ಸ್ವಲ್ಪ ತಣ್ಣಗಾದೆ. ಇನ್ನು ಮಾತನಾಡಿದರೆ ನೆರೆಕರೆಯವರು ಓಡಿ ಬರುವುದು ಗ್ಯಾರಂಟಿ.
ನನ್ನವಳ ಸ್ವರ ಸ್ವಲ್ಪ ಇಂಪು. ಒವ್ಮೊಮ್ಮೆ ನಾನು ಒತ್ತಾಯಿಸಿದರೆ ಹಾಡ್ತಾಳೆ. ಶಾಲೆಯಲ್ಲಿ ಅವಳಿಗೆ ಹಾಡುಗಾರಿಕೆಯಲ್ಲಿ ಬಹು ಮಾನ ಸಿಕ್ಕಿದೆಯಂತೆ. ಆದರೆ ಅವಳಿಗೆ ಕೋಪ ಬಂದು ಸ್ವರವೇರಿಸಿ ಮಾತನಾಡಿದರೆ ಇಂಪೆಲ್ಲಾ ಹೋಗಿ ದೊಡ್ಡ ಯಕ್ಷಗಾನವಾಗುತ್ತದೆ.
'ಏನೇ ಈಗ ಚಪ್ಪಲಿಯ ಅಗತ್ಯ. ಹೊರಗೆ ಸುತ್ತಾಡಲು ಹೋಗುತ್ತಿಯಾ' ಉರಿಯುವ ಬೆಂಕಿಗೆ ತುಪ್ಪ ಸುರಿದೆ. ಆದರೆ ಅದು ಉರಿಯುವ ಬದಲು ನಂದಿ ಹೋಯಿತು. ಅವಳ ಪ್ರತಿಕ್ರಿಯೆಯನ್ನು ಎದುರಿಸಲು ಸಜ್ಜಾಗಿ ನಿಂತ ನನಗೆ ಕೇವಲ ಅವಳ ಕಣ್ಣೀರನ್ನೇ ನೋಡಬೇಕಾಯಿತು. ಪಾಪ ಅವಳು ಕಣ್ಣೀರು ಸುರಿಸುತ್ತಾ ಒಳನಡೆದಳು.
ಅವಳನ್ನು ಸಮಾಧಾನ ಪಡಿಸುವ ಮನಸ್ಸಾಯಿತು. ಆದರೆ ಈ ಮ್ಯಾಚನ್ನು ಬಿಟ್ಟು ಹೋಗುವುದು ಹೇಗೆ. ಆದದ್ದಾಗಲಿ ಮ್ಯಾಚ್ ನೋಡಿ ಮುಗಿಸುವ ಎಂದು ಕುಳಿತೆ.
ಸ್ವಲ್ಪ ಹೊತ್ತಿನ ನಂತರ ಶಮಾ ಚಹಾದೊಂದಿಗೆ ಬಂದಳು.'ಮಳೆ ನಿಂತು ಹೊದ ಮೇಲೆ ಹನಿಯೊಂದು ಮೂಡಿದೆ ' ಎಂಬಂತೆ ಒಂದು ಹನಿ ಕಣ್ಣೀರು ಕೆನ್ನೆಯ ಮೇಲೆಯೇ ಇತ್ತು. ನಾನು ಎಷ್ಟೇ ಸತಾಯಿಸಿದರೂ ಅವಳಿಗೆ ನನ್ನೊಡನಿದ್ದ ಪ್ರೀತಿಯು ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಲಿಲ್ಲ. ಅದೇ ನನ್ನ ದೊಡ್ಡ ಅದೃಷ್ಟ.
'ಇಕೊಳ್ಳಿ ಚಾ' ಎಂದು ಟೀಪಾಯ್ ಮೇಲೆ ಕುಕ್ಕಿ ಅಡುಗೆ ಮನೆ ಕಡೆಗೆ ಹೋದಳು.
'ಈಗ ಚಹಾ ಯಾರು ಕೇಳಿದರು' ನಾನು ಮೆಲ್ಲನೆ ಗುನುಗಿದೆ. ಅದು ಅವಳಿಗೆ ಕೇಳಿಸಿರಬೇಕು.
'ಏನು ನೀವು ಹೇಳಿದ್ದು' ಹೋಗುತ್ತಿದ್ದವಳು ತಿರುಗಿ ಬಂದಳು.
'ಏನಿಲ್ಲ, ನಾನು ಕೇಳದೆಯೇ ನೀನು ಚಹಾ ತಂದಿಯಲ್ಲ ಥ್ಯಾಂಕ್ಸ್'
'ಏನು ನನಗೆ ಕಿವಿ ಕೇಳಿಸ್ತದೆ. ನಿಮಗೆ ಪ್ರೀತಿ ಇಲ್ಲದಿದ್ದರೂ ನನಗೆ ನಿಮ್ಮಲ್ಲಿ ಪ್ರೀತಿ ಇದೆ. ಪತ್ನಿಯರ ಬಾಧ್ಯತೆಯ ಕುರಿತು ದೊಡ್ಡ ದೊಡ್ಡದು ಬರೀತಿರಲ್ಲಾ ' ಕೊನೆಯ ಅಸ್ತ್ರವನ್ನು ಪ್ರಯೋಗಿಸಿದಳು. ಇವಳ ಗಲಾಟೆಯಲ್ಲಿ ಲಾಸ್ಟ್ ಬ್ಯಾಟ್ಸ್ ಮನ್ ಶ್ರೀಶಾಂತ್ ಬೌಲ್ಡ್ ಆದದ್ದು ಗೊತ್ತೇ ಆಗಲಿಲ್ಲ. 
'ಆಯ್ತು ಕಣೆ ನೀನು ಹೇಳಿದ್ದೇ ಸರಿ '
'ನಾನು ಯಾವಾಗಲೂ ಸರಿಯನ್ನೇ ಹೇಳುವುದು. ಇದ್ದದ್ದನ್ನು ಹೇಳಿದರೆ ನಿಮಗಾಗುವುದಿಲ್ಲ ' ಸಿಡುಕುತ್ತಾ ಅಡುಗೆ ಕೋಣೆಗೆ ಹೋದಳು.
ಹೇಗೂ ಇಂಡಿಯಾದ ಹಣೆಬರಹ ಗೊತ್ತಾಯಿತು. ಇನ್ನು ನೋಡಿ ಏನು ಪ್ರಯೋಜನ. ನಾನು ಟಿ.ವಿ. ಆಫ್ ಮಾಡಿ ಚಾ ಕುಡಿದ ಗ್ಲಾಸನ್ನು ಹಿಡಿದು ಅಡುಗೆ ಮನೆಗೆ ಹೊರಟೆ.
'ಇಕೊಳ್ಳೆ, ಎಲ್ಲಿದ್ದಿ' ನಾನು ಸಂಧಾನ ಮಾತುಕತೆಗೆ ಪ್ರಾರಂಭಿಸಿದೆ.
'ಬಂದು ನೋಡಿ. ಎಲ್ಲಿದ್ದೀನೀಂತ ' ಅಡುಗೆ ಕೋಣೆಯಿಂದ ಉತ್ತರ ಬಂತು
'ಅವನೆಲ್ಲಿ'
...................
'ನಿನ್ನಲ್ಲಿ ಕೇಳಿದ್ದು'
'ಯಾರು?'
'ನಿನ್ನ ಮಗ '
'ಓ' ನನಗೆ ಅವನು ಮಗ. ನಿಮಗೆ ಏನಾಗಬೇಕು'
ಅವಳಿಂದ ಉಲ್ಟಾ ಉತ್ತರ ಬರಲು ಶುರುವಾಯಿತು. ಅಂತಹ ಉತ್ತರ ಬರತೊಡಗಿದರೆ ಅದು ಕೋಪ ಇಳಿಯುವುದರ ಸೂಚನೆ.
'ಏನು ಮಾರಾಯ್ತಿ. ನೀನು ಇಲ್ಲಿರಬೇಕಾದವಳಲ್ಲ ಹೈಕೋರ್ಟ್ನಲ್ಲೋ, ಸುಪ್ರೀಮ್ ಕೋರ್ಟ್ನಲ್ಲೋ ಲಾಯರಾಗಬೇಕಿತ್ತು''
'ನಾನು ಲಾಯರಾಗುತ್ತಿದ್ದರೆ ನಿಮ್ಮನ್ನು ಮದುವೆಯಾಗುತ್ತಿರಲಿಲ್ಲ '
'ಹೌದು, ಹೌದು ನೀನು ಲಾಯರಾಗದಿದ್ದುದು ಒಳ್ಳೆದೇ ಆಯಿತು. ಆಗಿದ್ದರೆ ನೀನು ನನಗೆ ಸಿಗುತ್ತಿರಲಿಲ್ಲ ' ಅವಳ ಮುಖದಲ್ಲಿ ನಗು ಮಿನುಗಿತು. ಆದರೂ ನನಗೆ ತೋರ್ಪಡಿಸದೆ ತಿರುಗಿ ನಿಂತು ನಕ್ಕಳು.
'ಅಲ್ಲ ಕಣೇ, ನಮ್ಮ ಮಗ ಎಲ್ಲಿ'?
'ಎಲ್ಲೋ ಹೊರಗೆ ಆಡ್ತಿರಬೇಕು. ಹೋಗಿ ನೋಡಿ ' ಉತ್ತರ ಕೊಟ್ಟಳು. ಅಳಿದುಳಿದ ಕೋಪ ಮಾತ್ರ ಬಾಕಿ ಇತ್ತು.
ನಾನು ಮೂಲೆಯಲ್ಲಿಟ್ಟಿದ್ದ ಫ್ರಿಜ್ಜ್ ನ  ಬಾಗಿಲು ತೆರೆಯುತ್ತಾ ಹೇಳಿದೆ.
'ಇಂದು ರಾತ್ರಿ ಅಡುಗೆ ಮಾಡ್ಬೇಡ ಕಣೇ'
'ಯಾಕೆ?  ಉಪವಾಸ ಕೂರ್ಬೇಕಾ'
'ಅಲ್ಲ, ಇಂದಿನ ಡಿನ್ನರ್ ಹೊರಗೆ. ಬೇಗ ರೆಡಿಯಾಗು'
ಅಷ್ಟು ಹೇಳಿದ್ದೇ ತಡ. ಅವಳ ಸಂತೋಷಕ್ಕೆ ಪಾರವೇ ಇಲ್ಲ. ನನ್ನೊಂದಿಗೆ ಹೊರಗೆ ಕೈಕೈ ಹಿಡಿದು ಸುತ್ತಾಡುವುದೆಂದರೆ ಅವಳಿಗೆ ಪಂಚಪ್ರಾಣ. ಆದರೆ ನನಗೆ ಪುರುಸೊತ್ತಿರಬೇಕಲ್ವಾ'
ಅವಳು ನನ್ನ ಬಳಿ ಬಂದಳು. ಅಮವಾಸೆಯಂತಿದ್ದ ಮುಖ ಈಗ ಹುಣ್ಣಿಮೆಯಂತಾಗಿತ್ತು. ಆದರೆ ಕೋಪ ಬಂದಿತ್ತು ಎಂಬುದರ ಕುರುಹಾಗಿ ಮೂಗಿನ ಕೆಂಪು ಇನ್ನೂ ಮಾಸಿರಲಿಲ್ಲ.
'ರೀ ನೋವಾಯ್ತಾ'
'ಏನು? ನೋವಾಗಲು ನೀನು ಇಂಜೆಕ್ಷನ್ ಕೊಟ್ಟಿದ್ದಿಯಾ'
'ಅಲ್ಲರೀ, ನಿಮ್ಮ ಮನಸ್ಸಿಗೆ ನೋವಾಯ್ತಾ'
'ಎಂಥ ನೋವು ಮಾರಾಯ್ತಿ. ನನಗೆ ಎಷ್ಟೇ ನೋವಾದರೂ ನೀನೇ ಮುಲಾಮು ಹಚ್ಚುತ್ತಿ. ಮತ್ತೆ ಯಾಕೆ ಹೆದರಿಕೆ'
'ಐ ಯಾಂ ರಿಯಲಿ ಸಾರಿ ಆಯ್ತಾ' ನನ್ನ ತೋಳು ಬಳಸಿದಳು.
'ಏ... ರೋಮ್ಯಾನ್ಸೆಲ್ಲ ಮತ್ತೆ. ಈಗ ಹೋಗಿ ರೆಡಿಯಾಗು' ನಾನು ಎಚ್ಚರಿಸಿದೆ. ಅವಳು ಚಿಗರೆಯಂತೆ ಓಡಿದಳು.
ನಾನು ಹೋಗಿ ಸೋಫಾದಲ್ಲಿ ಕುಳಿತು ಟಿ.ವಿ. ಆನ್ ಮಾಡಿದೆ. ಆದರೆ, ಕೇಬಲ್ ಕಟ್ಟಾಗಿತ್ತು.
'ರೀ, ಇಲ್ಲಿ ಬನ್ನಿಯಂತೆ ' ಒಳಗಿನಿಂದ ಕೂಗಿದಳು.
ನಾನು ಹೋಗಿ ನೋಡಿದೆ. ಬಚ್ಚಲಿನ ಬಾಗಿಲಲ್ಲಿ ಡ್ರೆಸ್ ಹಿಡಿದು ನಿಂತಿದ್ದಳು.
'ಇಲ್ಲ ಕಣೆ ನಾನು ಸ್ನಾನ ಮಾಡುವುದಿಲ್ಲ. ನೀನು ಮಾಡಿ ಬಾ' ನಾನು ಸಂದರ್ಭೋಚಿತವಾಗಿ  ಹೇಳಿದೆ.
'ಛೀ ನೀವೊಂದು... ಅದಕ್ಕಲ್ಲರೀ'
'ಮತ್ಯಾವುದಕ್ಕೆ?'
'ನೀವು ಬರ್ತಿರೋ ಇಲ್ವೋ'
ನಾನು ಅವಳ ಬಳಿ ಹೋದೆ. ಅವಳು ಮುಖವನ್ನು ನನ್ನ ಕಿವಿಯ ಬಳಿ ತಂದು ಹೇಳಿದಳು.'ರೀ, ಚಪ್ಪಲಿ ಕೊಳ್ಳಲು ಮರೆಯಬಾರದು'' ಮುಗ್ದ ಹುಡುಗಿ.
ಬೇಗನೆ ಬಾಗಿಲು ಮುಚ್ಚಿ, 'ನೀವು ಬೇಗ ಮಗನನ್ನು ಕರೆದು ತನ್ನಿ.' ಎಂದು ರಾಗ ಎಳೆದಳು.
ಹೊರಗೆ ಆಡುತ್ತಿದ್ದ ಮಗ ಆದಿಲ್ನನ್ನು ಕರೆಯಲು ನಾನು ಹೊರಟೆ.

Thursday, 14 June 2012

ರೀ, ನೀವು ನನ್ನನ್ನು ಪ್ರೀತಿಸ್ತಿದ್ದೀರಾ


 ಜಿಮ್ಮಿ ಕಾರ್ಬೆಟರ  ಬೇಟೆಯ ಕುರಿತ ಪುಸ್ತಕವೊಂದನ್ನು ಓದುತ್ತಾ ಮಹಡಿಯ ಮೇಲೆ ತೂಗು ಸೋಫಾದಲ್ಲಿ ಕುಳಿತಿದ್ದೆ. ಅಮೇಜಾನ್ ಕಾಡಿಗೆ ಬೇಟೆಯಾಡಲು ಹೋದ ಲೇಖಕರು ಹಾವುಗಳ ಮಧ್ಯೆ ಸಿಲುಕಿಕೊಂಡಿದ್ದರು. ಆ ವೇಳೆ ನನ್ನ ಮನಸ್ಸು ಆ ಕಾಡಿನಲ್ಲಿತ್ತು. ನಾನು ಬಹಳ ಏಕಾಗ್ರತೆಯಿಂದ ಓದುತ್ತಿದ್ದೆ. ಹಾಗೆ ಓದುತ್ತಿರುವಾಗ ನನ್ನ ಕುತ್ತಿಗೆಯ ಹಿಂಭಾಗದಲ್ಲಿ ಏನೋ ಹರಿದಾಡಿದಂತಾಯಿತು. ಬೆಚ್ಚಿ ಬಿದ್ದು ಪುಸ್ತಕವನ್ನೆಸೆದೆ. ತಿರುಗಿ ನೋಡಿದಾಗ ನನ್ನ ಪ್ರಿಯ ಸಂಗಾತಿ ಶಮಾ ಮೂವತ್ತೆರಡು ಹಲ್ಲುಗಳನ್ನು ತೋರಿಸಿ ನಗುತ್ತಿದ್ದಳು.
'ರೀ, ನೀವ್ಯಾಕೆ ಪುಸ್ತಕ ಬಿಸಾಡಿದ್ದು'  ಭುಜದ ಮೇಲೆದ್ದ ಶಾಲನ್ನು ತಲೆಗೆ ಹಾಕುತ್ತಾ ಕೇಳಿದಳು.
'ಓ ಅದಾ, ಪುಸ್ತಕ ಓದಿ ಆಯ್ತು. ಹಾಗೆ ಬಿಸಾಡಿದ್ದು. ಅದಿರ್ಲಿ, ನಾನು ನಿನ್ನಲ್ಲಿ ಎಷ್ಟೋ ಸಾರಿ ಹೇಳಿದ್ದೇನೆ. ಓದುವಾಗ ಹಾಗೆ ಉಪದ್ರ ಮಾಡಬಾರದು ಅಂತ ' ನಾನು ಎದೆ ಬಡಿತವನ್ನು ಸ್ಥಿಮಿತಕ್ಕೆ ತಂದುಕೊಳ್ಳುತ್ತಾ ಹೇಳಿದೆ.
'ಹಾಗಾದರೆ ಏನಾದರೂ ಬಹುಮುಖ್ಯ ವಿಷಯ ಹೇಳಲಿಕ್ಕಿದ್ದರೆ ಎಂಥ ಮಾಡುವುದು' ಶಮಾ ಕಣ್ಣರಳಿಸಿ ಹೇಳಿದಳು.
'ಅಂಥ ವಿಷಯಗಳಿದ್ದರೆ ಬಂದು ಕರೆಯಬೇಕು. ಅದಲ್ಲದೆ ಹೀಗೆ ಬಂದು ಮೈ ಮುಟ್ಟುದಲ್ಲ ' ನಾನು ಅವಳ ಕೈ ಹಿಡಿದು ಹತ್ತಿರ ಕುಳ್ಳಿರಿಸಿ ಕೈ ಬಳೆಯನ್ನು ಎರಡು ಸುತ್ತು ತಿರುಗಿಸಿದೆ.
ನಾನು ಓದಲು ಕುಳಿತರೆ ಪರಿಸರದ ಪರಿವೆಯೇ ಇರುವುದಿಲ್ಲ. ಏನೇ ಗದ್ದಲಗಳಿರುತ್ತಿದ್ದರೂ ನನ್ನ ಓದುವಿಕೆಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಪ್ರಯಾಣಿಸುವಾಗ ಓದಲು ಕುಳಿತು ಇಳಿಯ ಬೇಕಾದ ಜಾಗ ಬಿಟ್ಟು ಮುಂದೆ ಹೋದದ್ದೂ ಇದೆ.  'ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ' ಎಂಬ  ಹಾಡೊಂದಿದೆ. ಆದರೆ ಇದು ನನ್ನ ಪಾಲಿಗೆ 'ಪುಸ್ತಕವೊಂದು ನನ್ನಲ್ಲಿದ್ದರೆ ನನಗದು ಕೋಟಿ ರೂಪಾಯಿಗಳು' ಎಂದಾಗಿದೆ. ಈ ಹಾಡನ್ನು ಶಮಾಳ ಮುಂದೆ ಹಾಡಿ ಬೆನ್ನಿಗೆ ಎರಡು ಗುದ್ದು ಬಿದ್ದ ಫಜೀತಿಯೂ ನಡೆದಿದೆ.
'ಶೀ ಕೈಬಿಡಿ ' ಶಮಾ ಕೈ ಕೊಸರಿಕೊಂಡು ಬಿದ್ದಿದ್ದ ಪುಸ್ತಕವನ್ನು ಎತ್ತಿ ಸೋಫಾದ ಮೇಲಿಟ್ಟಳು. ನನ್ನ ಬಳಿ ಕುಳಿತು ನನ್ನ ಅಂಗಿಯ ಗುಂಡಿ ತಿರುಗಿಸತೊಡಗಿದಳು. ಇದು ಯಾವುದೇ ಬೇಡಿಕೆಗಿರುವ ಮುನ್ನುಡಿ ಎಂದು ತಿಳಿಯಿತು. ಅವಳ ಈ ವರ್ತನೆಯಿಂದ ನನ್ನ ಅಂಗಿಯ ಗುಂಡಿಗಳು ಪೂರ್ಣ ಆಯುಷ್ಯದೊಂದಿಗೆ ಸತ್ತ ಇತಿಹಾಸವೇ ಇಲ್ಲ.
'ಆ ಗುಂಡಿಯನ್ನು ಬದುಕಲು ಬಿಡು ಮಾರಾಯ್ತಿ'   ನಾನು ಅವಳ ಕೈಯನ್ನು ಗುಂಡಿಯಿಂದ ಬಿಡಿಸಿದೆ.
'ರೀ, ನಿಮ್ಮಲ್ಲಿ ನನಗೆ ಒಂದು ವಿಷಯ ಕೇಳಲಿಕ್ಕೆ ಉಂಟು. ನೀವು ಒಪ್ತೀರಾ'
'ವೊದಲು ಕೇಳು. ಆ ಮೇಲೆ ತೀರ್ಮಾನಿಸುವ ಒಪ್ಪಬೇಕೋ ಬೇಡವೋ ಅಂಥ '
ಶಮಾ ತನ್ನ ಅರ್ಧ ಭಾರವನ್ನು ನನ್ನ ಮೇಲೆ ಹಾಕಿದಳು. ಆದ್ದರಿಂದ ಇದು ಬಹಳ ಭಾರದ ಬೇಡಿಕೆ ಇರಬಹುದೆಂದು ಭಾವಿಸಿದೆ.
'ರೀ, ನನ್ನ ತಮ್ಮ ಇದ್ದಾನಲ್ಲಾ......'
'ಹೌದು ಇದ್ದಾನೆ. ಏನಾಯಿತು ಅವನಿಗೆ' ನಾನು ಮಧ್ಯದಲ್ಲಿ ಬಾಯಿ ಹಾಕಿದೆ.
'ವೊದಲು ನಾನು ಹೇಳುವುದನ್ನು ಪೂರ್ತಿಯಾಗಿ ಕೇಳಿ. ಆ ಮೇಲೆ ನಿಮ್ಮ ಕಮೆಂಟ್' ಎಂದು ನನ್ನ ತಲೆಗೆ ವೊಟಕಿದಳು.
'ಓ.ಕೆ, ಓ.ಕೆ ನೀನು ಹೇಳು'
'ನನ್ನ ತಮ್ಮ ಇನ್ನು ಮುಂದೆ ಇಲ್ಲಿ ಉಳಕೊಂಡು ಕಾಲೇಜಿಗೆಹೋದರೆ ಹೇಗೆ' ಅವಳ ಬೇಡಿಕೆಯ ಮಂಡನೆಯಾಯಿತು.
ರೋಗಿ ಬಯಸಿದ್ದೂ ಹಾಲು ವೈದ್ಯರು ಕೊಟ್ಟದ್ದೂ ಹಾಲು ಎಂಬಂತಾಯಿತು. ಅವನನ್ನು ಮನೆಯಲ್ಲಿ ನಿಲ್ಲಿಸಬೇಕೆಂಬ ಹಂಬಲ ನನಗೆ ವೊದಲೇ ಇತ್ತು. ಆದರೆ ಇದನ್ನು ಅವಳಲ್ಲಿ ಹೇಳಿರಲಿಲ್ಲ. ಅವನು ನನಗೆ ಅಳಿಯ ಮಾತ್ರವಲ್ಲ, ಉತ್ತಮ ಗೆಳೆಯನೂ ಆಗಿದ್ದ. ಉತ್ತಮ ಸ್ವಭಾವವೂ ಅವನಲ್ಲಿತ್ತು. ನಾನು ಶಮಾಳನ್ನು ಮದುವೆಯಾದುದರಲ್ಲಿ ಅವನ ನಡವಳಿಕೆಯ ಪಾತ್ರವೂ ಇತ್ತು.
'ಇಲ್ಲಿಂದ ಹೋದರೂ ಮನೆಯಿಂದ ಹೋದರೂ ತಲುಪುವುದು ಕಾಲೇಜಿಗಲ್ಲವೇ' ನಾನು ಕೈಯ್ಯಗಲಿಸಿ ಸೋಫಾದಲ್ಲಿ ಒರಗಿಕೊಳ್ಳುತ್ತಾ ಹೇಳಿದೆ.
'ನಾನು ಏನೇ ಹೇಳಿದರೂ ನಿಮಗೆ ಕೇರ್ಲೆಸ್. ನಿಮ್ಮ ಮುಂದೆ ನನ್ನ ಮಾತಿಗೆ ಬೆಲೆಯೇ ಇಲ್ಲ ' ನನ್ನ ಮಾತು ಕೇಳಿ ಶಮಾ ಸ್ವಲ್ಪ ಗರಮ್ ಆದಳು.
'ಯಾರು ಹಾಗೆ ಅಂದದ್ದು'
'ಮತ್ತೆ ನೀವು ಹಾಗೆ ಯಾಕೆ ವರ್ತಿಸುವುದು'
ಶಮಾ ಹಠ ಹಿಡಿದರೆ ಅದನ್ನು ಸಾಧಿಸುವವರೆಗೆ ಗರಿಷ್ಟ  ಪ್ರಯತ್ನ ಮಾಡುತ್ತಿದ್ದಳು. ಅವಳ ಹಠ ಯಶಸ್ವಿಯಾಗದಿದ್ದರೆ ಅವಳಿಗೆ ಬೇಸರವೇನೂ ಆಗುತ್ತಿರಲಿಲ್ಲ. ಅದು ಅವಳಲ್ಲಿರುವ ಪ್ಲಸ್ ಪಾಯಿಂಟುಗಳಲ್ಲೊಂದು. ನಾನು ಅವಳನ್ನು ಮದುವೆಯಾದ ಸಂದರ್ಭದಲ್ಲಿ ಅತ್ತೆ ಹೇಳಿದ್ದರು. 'ನೋಡು, ಇವಳಿಗೆ ಕೋಪ ಸ್ವಲ್ಪ ಜಾಸ್ತಿ. ಇವಳ ತಂದೆಯ ಕೊಂಡಾಟದಿಂದ ಹೀಗಾಗಿದೆ. ಆದರೆ, ಈ ಕೋಪ ಹೆಚ್ಚು ಹೊತ್ತು ನಿಲ್ಲುವುದಿಲ್ಲ .'
'ಕೋಪ ಹೆಚ್ಚು ಹೊತ್ತು ನಿಲ್ಲುವುದಿಲ್ಲು ಎಂದು ಹೇಳಿದ್ದನ್ನು ಕೇಳಿ ನನಗೆ ಸ್ವಲ್ಪ ಸಮಾಧಾನವಾಗಿತ್ತು. ಅತ್ತೆ ಒಂದು ತಪ್ಪು  ಮಾಡಿದ್ದರು. ಶಮಾಳಿಗೆ ಯಾವೆಲ್ಲಾ ಸಂದರ್ಭಗಳಲ್ಲಿ ಕೋಪ ಬರುತ್ತದೆಂದು ಪಟ್ಟಿ ತಯಾರಿಸಿ ಕೊಟ್ಟಿದ್ದರೆ ನನ್ನ ಬೆನ್ನಿಗೆ ಬೀಳುವ ಗುದ್ದುಗಳನ್ನೂ ಪಾತ್ರೆಗಳ ಮೇಲಾಗುವ ಅಮಾನುಷ ವರ್ತನೆಗಳನ್ನೂ ಕಡಿಮೆ ಮಾಡಬಹುದಾಗಿತ್ತು.
'ನೋಡು ಬಂಗಾರಿ, ನೀನು ನನ್ನ ಮುಂದಿಟ್ಟ ಯಾವುದೇ ಬೇಡಿಕೆಗಳನ್ನು ನಾನು ತಿರಸ್ಕರಿಸಿದ್ದೇನೆಯೇ? ಈ ಹುಡ್ಗಿರೇ ಹೀಗೆ. ಪತ್ನಿ ಹೇಳಿದ ಹಾಗೆ ಕೇಳಿದರೂ, ಕೊನೆಗೆ ಹೇಳ್ತಾರೆ ನೀವು ನನಗೆ ಏನೂ ಮಾಡಿಕೊಡಲಿಲ್ಲ ಎಂದು. ಹಾಗೆ ಹೇಳುವಾಗ, ಎಷ್ಟು ಬೇಜರಾಗುತ್ತದೆ ಗೊತ್ತಾ' ನಾನು ಮುಖ ಬಾಡಿಸಿ ಹೇಳಿದೆ.
'ಓ..... ಸಾಕು ನಿಮ್ಮ ನಾಟಕ . ಪುರುಷರೆಲ್ಲ ಯಾಕೆ ಹೀಗೆ' ಅವಳು ಹುಸಿ ಕೋಪದಿಂದ ಮುಖ ತಿರುಗಿಸಿದಳು.
'ಓಕೆ. ಪುರುಷರಿಗೆ ಕರುಣೆ ಇಲ್ಲ. ಒಪ್ಪಿಕೊಳ್ತೇನೆ ' ತರ್ಕವನ್ನು ಮುಂದುವರಿಸಲು ನನಗೆ ಆಸಕ್ತಿ ಇರಲಿಲ್ಲ. ಹಾಗೆ ನಾನು ಅವಳ ವಾದವನ್ನು ಒಪ್ಪಿಕೊಂಡೆ.
'ಹಾಗೆ ದಾರಿಗೆ ಬನ್ನಿ ' ಕೋರ್ಟಿನಲ್ಲಿ ವಾದಿಸಿ ಕೇಸು ಜಯಿಸಿದಂತಹ ಗೆಲುವಿನ ನಗೆ ಶಮಾಳ ಸುಂದರ ವದನದಲ್ಲಿತ್ತು.
'ನಿನಗೆ ಒಂದು ವಿಷಯ ಗೊತ್ತುಂಟಾ' ನಾನು ಅವಳಲ್ಲಿ ಕೇಳಿದೆ.
'ಹೇಳಿದರಲ್ಲವೇ ಗೊತ್ತಾಗುವುದು' ರೆಡಿಮೇಡ್ ಪ್ರತಿಕ್ರಿಯೆ ಬಂತು.
'ನೀವು ಹೆಂಗಸರನ್ನು ಹೊಗಳಿ ಅಟ್ಟದಲ್ಲಿರಿಸ್ತಿಯಲ್ಲ. ಹೆಂಗಸರಿಗೆ ಬಯಸುವಾಗ ಅಳಲು ಸಾಧ್ಯ, ಆದರೆ ನಗಲು ಸಾಧ್ಯವಿಲ್ಲ.'
ನಾನು ಹೇಳಿದ್ದು ಸತ್ಯ ಅಂತ ಅವಳಿಗೆ ಗೊತ್ತಾಗಿತ್ತು. ಅವಳು ನನ್ನ ತೊಡೆ ಮೇಲೆ ಗುದ್ದಿ ಹೇಳಿದಳು. ಅದೆಲ್ಲಾ ಇರಲಿ, ನಾನು ಹೇಳಿದ ವಿಷಯ ಏನಾಯಿತು'
'ಯಾವ ವಿಷಯ' ನಾನು ಗೊತ್ತಿಲ್ಲದವನಂತೆ ಕೇಳಿದೆ.
'ನನ್ನ ತಮ್ಮನ ವಿಚಾರ '
'ಓ ಅದಾ, ನೋಡು ಶಮಾ ಅವನನ್ನು ಇಲ್ಲಿ ನಿಲ್ಲಿಸಿ ನಮ್ಮ ಗಲಾಟೆಗಳನ್ನು ತೋರಿಸುವುದೇಕೆ'
'ಹಾಗಾದರೆ ಆ ಪ್ರಜ್ಞೆ ಉಂಟಲ್ಲಾ. ಇನ್ನಾದರೂ ನೀವು ನನ್ನೊಂದಿಗೆ ಗಲಾಟೆ ಮಾಡುವುದನ್ನು ನಿಲ್ಲಿಸಬಹುದು ' ಯಾವುದೋ ದೊಡ್ಡ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಂತೆ ಶಮಾ ಕಣ್ಣರಳಿಸಿ ಹೇಳಿದಳು.
ನಾನು ಒಳಗೊಳಗೇ ನಕ್ಕೆ. ಯಾಕೆಂದರೆ ಈ ವರೆಗೆ ನಾನು ಏಕಾಂಗಿಯಾಗಿ ಹೋರಾಡುತ್ತಿದ್ದೆ. ಇನ್ನು ಅಳಿಯನಿಂದಾಗಿ ನನಗೆ ಆನೆ ಬಲ ಬಂದಂತಾಗಬಹುದು.
'ರೀ ನೀವು ಒಪ್ತೀರೋ, ಇಲ್ವೋ ಫಸ್ಟ್ ಅದು ಹೇಳಿ ' ಅವಳು ತನ್ನ ಪಟ್ಟು ಸಡಿಲಿಸಲಿಲ್ಲ.
'ನನಗೆ ಗೊತ್ತಿತ್ತು ನೀವು ಒಪ್ತೀರಿ ಅಂತ '
'ಒಪ್ಪದೆ ಬೇರೆ ದಾರಿಯಿದ್ದರಲ್ಲವೇ' ನಿನ್ನ ಪ್ರತಿಭಟನೆಯ ಮುಂದೆ ತಲೆಬಾಗದಿರಲಾಗುತ್ತದಾ, ನೀನು ಸ್ವಾತಂತ್ರ್ಯ ಸಂಗ್ರಾಮಗಳಲ್ಲಿರುತ್ತಿದ್ದರೆ, ನಮ್ಮ ದೇಶವು 1947ಕ್ಕಿಂತ ವೊದಲೇ ಸ್ವತಂತ್ರವಾಗುತ್ತಿತ್ತೋ ಏನೋ '
'ಸಾಕು ಸಾಕು ನಿಮ್ಮ ಸೋಪಿಂಗ್'
ಶಮಾ ನನ್ನ ಭುಜದ ಮೇಲೆ ತಲೆ ಒರಗಿಸಿದಳು. ಹಗಲೆಲ್ಲಾ ಮಾಡಿದ ಕೆಲಸದ ಆಯಾಸವು ಅದರಲ್ಲಿ ತಿಳಿಯುತ್ತಿತ್ತು.
'ರೀ, ನೀವು ನನ್ನನ್ನು ಪ್ರೀತಿಸ್ತಿದ್ದೀರಾ' ನನ್ನ ಕೈ ಮೇಲೆ ಕೈಯಿಟ್ಟು ಕೇಳಿದಳು.
  ಈ ಹುಡುಗಿಯರು ಹೀಗೇನೆ. ಹುಚ್ಚು ಮನಸ್ಸು. ಗಂಡ ಪ್ರೀತಿಸ್ತಾನೆ ಅಂತ ಗೊತ್ತಿದ್ದರೂ ಅದನ್ನು ಆಗಾಗ ಕನ್ಫರ್ಮ್ ಮಾಡುತ್ತಿರುತ್ತಾರೆ.
'ಯಾಕೆ ಮಾರಾಯ್ತಿ ಈಗ ಇಂತಹ ಪ್ರಶ್ನೆ' ನಾನು ಅವಳ ಕೂದಲಲ್ಲಿ ಕೈಯಾಡಿಸುತ್ತಾ ಕೇಳಿದೆ.
'ಹೀಗೆ ಸುಮ್ಮನೆ ಕೇಳಿದ್ದು, ರೀ ನಂಗೆ ನಿದ್ದೆ ಬರ್ತದೆ. ನಾನು ಹೋಗ್ತೇನೆ. ಓದಿದ್ದು ಸಾಕು. ಬೇಗ ಬನ್ನಿ ' ಶಮಾ ಎದ್ದು ರೂಮಿನ ಕಡೆಗೆ ಹೋದಳು. ಅವಳು ಎದ್ದು ಹೋಗುವಾಗ ನಾನೂ ಕೂಡಾ ಅವಳ ಹಿಂದೆ ಹೋಗಬಹುದೆಂದು ಭಾವಿಸಿದ್ದಳು. ಅವಳ ಆಲೋಚನೆ ಉಲ್ಟಾ ಹೊಡೆಯಿತು. ನಾನು ಏಳದ್ದನ್ನು ಕಂಡು ಅವಳು ಹೇಳಿದಳು.
'ರೀ ನೀವು ಬರ್ತೀರೋ ಇಲ್ವೋ'
'ನೀನು ಹೋಗು. ನನಗೆ ಸ್ವಲ್ಪ ಓದ್ಲಿಕ್ಕುಂಟು' ಅವಳನ್ನು ಓರೆಗಣ್ಣಿನಿಂದ ನೋಡುತ್ತಾ ಹೇಳಿದೆ.
'ನೀವು ಬೆಳಿಗ್ಗೆ ವರೆಗೆ ಓದುತ್ತಾ ಇರಿ. ನಾನು ಬಾಗಿಲು ಹಾಕಿ ಮಲಗುತ್ತೇನೆ. ಮತ್ತೆ ಬಂದು ಬಾಗಿಲು ತಟ್ಟಿದರೆ ನಾನು ತೆರೆಯಲಿಕ್ಕಿಲ್ಲ. ಹೊರಗೆ ಮಲಗಬೇಕು'
'ಓ.ಕೆ '
ಶಮಾ ಸಿಡುಕಿನಿಂದ ಹೋದಳು. ನಾನು ನೆಪ ಮಾತ್ರಕ್ಕೆ ಓಕೆ ಅಂದ್ರೂ ಅವಳ ಹಿಂದೇನೇ ಎದ್ದು ಹೋದೆ. ಯಾಕೆಂದರೆ ಇಲ್ಲಿ ತನಕ ನಾನು ಹೊರಗೆ ಮಲಗಲಿಲ್ಲ. ಇನ್ನು ಹೊಸದಾಗಿ ಆ ಅನುಭವ ಆಗುವುದು ಬೇಡ ಎಂಬ ಮುಂಜಾಗ್ರತಾ ಕ್ರಮ....

Sunday, 10 June 2012

ಬಾಲ್ಯದ ನೆನಪು

ಮಳೆಯ ಹನಿಗಳು ತಟಪಟ ಉದುರುತ್ತಿದ್ದಂತೆ 

ಮನವು ಬಾಲ್ಯದ ಕಡೆಗೆ  ಕಾಲ್ಕಿತ್ತಿತು 

ಎಷ್ಟೊಂದು ಸುಂದರ ಆ ಬಾಳು 

ಆದರೆ ಇಂದು ಅದು.....

ಬರೇ ನೆನಪು  ಮಾತ್ರ 

ಮಳೆಗೆ ನೆನೆದು ತಾಯಿ ಕೊಟ್ಟ ಪೆಟ್ಟು 

ಇಂದಿಗೂ ಹಚ್ಚ ಹಸುರಾಗಿ ಉಳಿದಿದೆ 

ನಾನು ಈಜಿ ಆಡಿದ ತೋಡು ,


ಉಯ್ಯಾಲೆ ಕಟ್ಟಿದ್ದ ಗೀರು ಮರದ ರೆಂಬೆ 

ಹತ್ತಿ ಇಳಿದ ಮಾವು , ಪೇರಳೆ ಮರಗಳು 

ನನ್ನ ಕೈ ಬೀಸಿ ಕರೆಯುತಿವೆ  ..... 

ನನಗೆ ಹೋಗಲು ಮುಜುಗರ 

ಯಾಕೆಂದರೆ ನಾನೀಗ ಯುವಕ 

ಈ ಆಟವೆಲ್ಲಾ ಬಾಲ್ಯಕ್ಕೆ ಸೀಮಿತವಲ್ಲವೇ??? 

Wednesday, 30 May 2012

ನಮ್ಮ ಜನ ದುನಿಯಾನೆ ಚೇಂಜ್ ಮಾಡ್ತಾರೆ ಕಣ್ರೀ



ನಮ್ಮ ಸರಕಾರ, ನಮ್ಮ ಕಾನೂನು ಹೊರಡಿಸೋ ಹೊಸ ಹೊಸ ರೂಲ್ಸ್ ಗಳನ್ನ ಕೆಲವೊಮ್ಮೆ ಮನಸ್ಸಿಗೆ ಒಪ್ಪದಿದ್ದರೂ ವಿಧಿ ಇಲ್ಲದೆ ಒಪ್ಪಿಕೊಳ್ಳಬೇಕಾಗುತ್ತೆ. ಕಾನೂನು ಪುಸ್ತಕದಲ್ಲಿ ಇರುತ್ತೆ ಮಾರಾಯ… ಕಾನೂನು ಇರೋದೇ ರೂಲ್ಸ್ ತರೋಕೆ  ಅನ್ನೋದು ನಮ್ಮ ಸಮಾಜದಲ್ಲಿ ಹೆಚ್ಚು ಜನರ  ಮಾತು. ರೂಲ್ಸ್ ಪಾಲಿಸುತ್ತಾರೆ ಆದರೆ ರೂಲ್ಸ್  ಪಾಲಿಸೋ ರೀತಿ ವಿಭಿನ್ನವಾಗಿರುತ್ತೆ. ಇದಕ್ಕೆ ತಾಜಾ ಉದಾಹರಣೆಯಾಗಿ ಸಿಕ್ಕ ಒಂದು ಫೋಟೋ ಇದು.
ನಮ್ಮವರು ಪಾಲಿಸೋ ರೂಲ್ಸ್ ಗೆ ಹಿಡಿದ ಕನ್ನಡಿಯಂತಿದೆ. ಸುಪ್ರಿಂ ಕೋರ್ಟ್ ಇತ್ತೀಚಿಗೆ  ವಾಹನಗಳಿಗೆ ಕೂಲ್ ಗ್ಲಾಸ್ ಗಳನ್ನ ಬಳಸಬಾರದು ಅನ್ನೋ ಕಾನೂನು ಜಾರಿಮಾಡಿತು. ಯುವಜನರಲ್ಲಂತೂ ಶೋಕ ತುಂಬಿದ ಮುಖಭಾವ. ಶೋಕಿವಾಲ ಜನರಿಗೆ  ಇದು ನುಂಗಲಾರದ ತುತ್ತಾಗಿತ್ತು,  ನಮ್ಮ ವಾಹನದ ಸೌದರ್ಯ ಕೂಲ್ ಗ್ಲಾಸ್ ನಲ್ಲಿ ಅಡಗಿದೆ ಅನ್ನೋ ಶೋಕಿಲಾಲ ಜನರು ಅದಕ್ಕೊಂದು ಸೂಕ್ತ  ದಾರಿಯನ್ನು ಕಂಡುಕೊಂಡಿದ್ದಾರೆ. ಅವರ ಅನ್ವೇಷಣೆ ಅದ್ಬುತ  ಆಚೆಗೆ ಕಾನೂನಿಗೂ ಸಾಲಂ ತಮ್ಮ ಶೋಕಿ ಜೀವನಕ್ಕೂ ಗುಲಾಂ ಅನ್ನೋ ರಿತಿಯಲ್ಲಿದೆ ಅವರ ಹೊಸ ಅನ್ವೇಷಣೆ. 
ಸುಪ್ರಿಂ ಕೋರ್ಟ್ ಕೂಲ್ ಗ್ಲಾಸ್  ನಿಷೇದಿಸಿದೆ  ಆದರೆ ಸ್ಕ್ರೀನ್ ಹಾಕೋದನ್ನ ನಿಷೆದಿಸಲು ಮರತೆಬಿಟ್ಟಿದೆ. ಹೌದು ಈ ಹೊಸ ಅನ್ವೆಷನೆಯೇ ಸ್ಕ್ರೀನ್.. ಮನಸ್ಸಿಗೆ ಒಪ್ಪದಿದ್ದರೂ, ಹಿರಿಯರ  ಮಾತನ್ನ ಪಾಲಿಸಿ ಹಿರಿಯರಿಗೆ ಗೌರವಕೊಡುವಂತಹ ಕೆಲಸ ಇದೆ ತಾನೇ ….. ಮುಂದಿನ ಸುಪ್ರಿಂ ಕೋರ್ಟ್  ನಿಷೇದ ಯಾವುದರ ಮೇಲೆ ಇರಬಹುದು ನೀವು ಹೇಳಿ ನೋಡೋಣ ? ಸ್ಕ್ರೀನ್ ಮೇಲಾ ಅಥವ ಶೋಕಿ ವಾಹನಗಳ ಮೇಲೇನಾ ?..
 ನಿತಿನ್ ರೈ, ಕುಕ್ಕುವಳ್ಳಿ. (ವರದಿಗಾರರು, ವಿಕೆ ನ್ಯೂಸ್)

Monday, 28 May 2012

ಅರಳುವ ವೊದಲೇ ಮುದುಡಿದ ಅರ್ಫಾ


ಜಗತ್ತಿನಲ್ಲಿ ಹಲವಾರು ರೀತಿಯ ಪ್ರತಿಭೆಗಳನ್ನು ಹೊಂದಿದವರಿರುತ್ತಾರೆ. ಕೆಲವರು ಪಠ್ಯದಲ್ಲಿ ಪ್ರತಿಭೆ ಹೊಂದಿದರೆ ಇನ್ನು ಕೆಲವರು ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಎಲ್ಲರಲ್ಲೂ ಪ್ರತಿಭೆಗಳು ಇರುತ್ತವೆ. ಅವು ಹೊರ ಜಗತ್ತಿಗೆ ತಿಳಿಯಬೇಕಾದರೆ ಅದಕ್ಕೆ ತಕ್ಕಂತೆ ಸಂದರ್ಭ ಒದಗಿಬರಬೇಕು. ಹಲವು ಸನ್ನಿವೇಶಗಳ ಮೂಲಕ ವಿವಿಧ ಪ್ರತಿಭೆಗಳು ಹಲವರಿಂದ ಹೊರಹೊಮ್ಮುತ್ತದೆ. ಅದಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ. ಈ ಸಾಲಿಗೆ ಅರ್ಫಾ ಕರೀ ರಾಂಧವಾ ಸೇರುತ್ತಾಳೆ. ಇವಳು ಜಗತ್ತಿನಲ್ಲೇ ಅತ್ಯಂತ ಕಿರಿಯ ಮೈಕ್ರೋಸೋಫ್ಟ್ ಸರ್ಟಿಫೈಡ್  ಪ್ರೊಫೆಷನಲ್ (ಎಲ್ಸಿಪಿ) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾಳೆ. ಇವಳು ಹುಟ್ಟಿದ್ದು ಪಂಜಾಬ್ನ ಫೈಸಲಾಬಾದ್ನಲ್ಲಿ. ತಂದೆಯ ಹೆಸರು ಅಮ್ಜದ್ ಕರೀಮ್ ರಾಂಧವಾ. ಈಕೆ 9ನೇ ವಯಸ್ಸಿನಲ್ಲಿ ಮೈಕ್ರೋಸೊಫ್ಟ್ನ ಪ್ರಮಾಣ ಪತ್ರ ಪಡೆದಳು.
ಎಲ್ಲ ಮಕ್ಕಳು ಆಟವಾಡುವ, ಕಾರ್ಟೂನ್ಗಳಲ್ಲಿ ಮುಳುಗುವ, ಗೇಮ್ಗಳಲ್ಲಿ ತಲ್ಲೀನರಾಗುವ 7,8 ವಯಸ್ಸಿನಲ್ಲಿ ಅರ್ಫಾಳ ಆಸಕ್ತಿಯು ಬೇರೆಯೇ ಆಗಿತ್ತು. ಸಣ್ಣ ವಯಸ್ಸಿನಿಂದಲೇ ಅವಳ ಆಸಕ್ತಿಯು ವೊಬೈಲ್, ಕಂಪ್ಯೂಟರ್ಗಳ ಕಡೆಗೆ ವಾಲಿತ್ತು. ಯಾವುದೇ ಪ್ರತಿಭೆಯನ್ನು ಹೊರತರಲು ಹೆತ್ತವರ ಸಹಕಾರವು ಬಹಳ ಮುಖ್ಯವಷ್ಟೇ. ಅಂತೆಯೇ ಅವಳ ತಂದೆ ಈ ಆಸಕ್ತಿಗೆ ತಣ್ಣೀರೆರಚದೆ ಅವಳ ವೈಯಕ್ತಿಕ ಬಳಕೆಗಾಗಿ ಒಂದು ಪುಟ್ಟ ಕಂಪ್ಯೂಟರನ್ನೇ ಖರೀದಿಸಿ ಕೊಟ್ಟರು. ಆದರೆ ಅರ್ಫಾ ಎಲ್ಲ ಮಕ್ಕಳಂತೆ ಗೇಮ್ಗಳನ್ನು ಆಡಿ, ಸಿನೆಮಾ ಸಿ.ಡಿ.ಗಳನ್ನು ಕಂಡು ಸಮಯ ಹಾಳು ಮಾಡಲಿಲ್ಲ. ಅವಳು ಆ ಕಂಪ್ಯೂಟರನ್ನು ಪ್ರೊಗ್ರಾಮಿಂಗ್ ಮಾಡಲು ಬಳಸಿದಳು. ಅಲ್ಲಿಂದ ಎತ್ತರಕ್ಕೆ ಬೆಳೆಯ ತೊಡಗಿದಳು. ಅದು ಒಂಭತ್ತನೇ ವಯಸ್ಸಿನಲ್ಲಿಯೇ ಸಾಫ್ಟ್ವೇರ್ ಕ್ಷೇತ್ರದಲ್ಲಿ ಪ್ರಮಾಣ ಪತ್ರ ಪಡೆಯುವ ಮಟ್ಟಕ್ಕೆ ಬೆಳೆಯಿತು. ಯಾರೂ ಬೆಳೆದಿಲ್ಲದ ಉನ್ನತ ಮಟ್ಟಕ್ಕೆ ಅರ್ಫಾ ತಲುಪಿದ್ದಳು. ಎಂ.ಸಿ.ಪಿ.ಯಂತಹ ಅರ್ಹತಾ ಪತ್ರ ಪಡೆಯಬೇಕಾದವರು ನೆಟ್ ವಿಷ್ಯೂವಲ್ ಸ್ಟುಡಿಯೋ 6.0 ಮತ್ತು ವಿಂಡೋಸ್ ಸರ್ವರ್ 2003ರಂತಹ ವೃತ್ತಿ ಶಿಕ್ಷಣದಲ್ಲಿ ತಾಂತ್ರಿಕ ಜ್ಞಾನ ಪಡೆದಿರಬೇಕು. ಇವೆಲ್ಲವನ್ನು ಕರಗತ ಮಾಡಿದ ಅರ್ಫಾಳ ಜ್ಞಾನ ಭಂಡಾರ ಎಷ್ಟಿರಬಹುದೆಂದು ಊಹಿಸಬಹುದು.
ಜಗತ್ತು ಕಂಡ ಮೈಕ್ರೋಸಾಫ್ಟ್ ದಿಗ್ಗಜ ಬಿಲ್ಗೇಟ್ಸ್ನ ಕುರಿತು ಎಲ್ಲರಿಗೂ ತಿಳಿದಿರಬಹುದು. ಈ ಬಿಲ್ಗೇಟ್ಸ್ ಅರ್ಫಾಳ ಪ್ರತಿಭೆಗೆ ಮಾರು ಹೋಗಿ ಮೈಕ್ರೋಸಾಫ್ಟ್ ಪ್ರಧಾನ ಕಚೇರಿಗೆ ಖುದ್ದಾಗಿ ಕರೆಸಿದ್ದಾರೆಂದಾದರೆ ಅವಳ ಪ್ರತಿಭೆಯನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳಬಹುದು. ಅವಳನ್ನು ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಅವಳ ಸಾಧನೆಯನ್ನು ಗುರುತಿಸಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನೀಡಲಾಗುವ ‘ಫಾತಿಮಾ ಜಿನ್ನಾ’ ಸ್ವರ್ಣ ಪ್ರಶಸ್ತಿಯನ್ನು ಅಂದಿನ ಪಾಕ್ ಪ್ರಧಾನಿ ಶೌಕತ್ ಅಝೀಝ್ರಿಂದ ಪಡೆದುಕೊಂಡಳು. ಅದೇ ವರ್ಷ ‘ಸಲಾಂ ಪಾಕಿಸ್ತಾನ ಯೂತ್’ ಪ್ರಶಸ್ತಿಯನ್ನೂ ಪಡೆದಳು.
ಆಯಾ ಕ್ಷೇತ್ರಗಳಲ್ಲಿನ ಸಾಧನೆಗೆ ನೀಡಲಾಗುವ ‘ಪ್ರೈಡ್ ಆಫ್ ಪರ್ಫಾಮೆನ್ಸ್’ ನಾಗರಿಕ ಪ್ರಶಸ್ತಿಯೂ ಅರ್ಫಾಳಿಗೆ ಬಂದಿತ್ತು. ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ವಯಸ್ಸಿನ ಕಿಶೋರಿ ಎಂಬ ಹೆಗ್ಗಳಿಕೆಗೂ ಪಾತ್ರಳಾದಳು. ಅರ್ಫಾಳ ಸಾಧನೆಯನ್ನು ಗುರುತಿಸಿ 3ಜಿ ವೈಯರ್ಲೆಸ್ ಬ್ರಾಡ್ಬ್ಯಾಂಡ್ ಸರ್ವೀಸ್ ಕಂಪೆನಿಯಾದ ಪಾಕಿಸ್ತಾನ ಟೆಲಿ ಕಮ್ಯೂನಿಕೇಶನ್ ಕಂಪೆನಿಯು ಅವಳನ್ನು ತನ್ನ ರಾಯಭಾರಿಯಾಗಿ ಆಯ್ಕೆ ಮಾಡಿತ್ತು.
ಅರ್ಫಾ ಹಲವಾರು ಅಂತಾರಾಷ್ಟ್ರೀಯ ಸಭೆ ಸಮಾರಂಭಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದಳು. ಇದರಿಂದಾಗಿ ‘ಪಾಕಿಸ್ತಾನ ಇನ್ಫಾರ್ಮೇಷನ್ ಟೆಕ್ನಾಲಜಿ ಪ್ರೊಫೆಷನಲ್ ಫೊರಮ್’ ದುಬೈನಲ್ಲಿ ಎರಡು ವಾರಗಳ ವಾಸದ ಆಹ್ವಾನ ನೀಡಿ ಅರ್ಫಾಳನ್ನು ಗೌರವಿಸಿತ್ತು. ಈ ಸಮಾರಂಭದಲ್ಲಿ ಹಲವಾರು ಗಣ್ಯರು ಸೇರಿದಂತೆ ಪಾಕಿಸ್ತಾನದ ರಾಯಭಾರಿಗಳೆಲ್ಲ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅವಳಿಗೆ ಲ್ಯಾಪ್ಟಾಪ್ ಸೇರಿದಂತೆ ಹಲವಾರು ಬೆಲೆಬಾಳುವ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು. ಬಾರ್ಸಿಲೋನಾದಲ್ಲಿ ಏರ್ಪಡಿಸಲಾಗಿದ್ದ ಟೆಕ್ ಏಂಡ್ ಡೆವಲಪರ್ಸ್ ಸಮ್ಮೇಳನದಲ್ಲಿ ಮೈಕ್ರೋಸಾಫ್ಟ್ ವತಿಯಿಂದ ಆಹ್ವಾನ ಪಡೆದು ಭಾಗವಹಿಸಿದ ಏಕೈಕ ಪಾಕ್ ಪ್ರತಿನಿಧಿ ಎಂಬ ಗೌರವಕ್ಕೂ ಪಾತ್ರಳಾದಳು. ಮಾತ್ರವಲ್ಲ ತನ್ನ ಹತ್ತನೇ ವಯಸ್ಸಿನಲ್ಲಿ ದುಬೈನ ಹಾರಾಟದ ಕ್ಲಬ್ಬೊಂದರಲ್ಲಿ ವಿಮಾನವನ್ನು ಸ್ವತಃ ಹಾರಿಸಿ ಅತ್ಯಂತ ಕಿರಿ ವಯಸ್ಸಿನಲ್ಲಿ  ಪ್ರಮಾಣ ಪತ್ರ ಪಡೆದ ಪೈಲೆಟ್ ಎಂಬ ಹೆಗ್ಗಳಿಕೆಗೂ ಪಾತ್ರಳಾದಳು.
ಇಷ್ಟೆಲ್ಲಾ ಪ್ರತಿಭೆಗಳನ್ನು ಇಷ್ಟು ಕಿರಿ ಪ್ರಾಯದಲ್ಲೇ ಹೊಂದಿದ ಅರ್ಫಾಳು ದೊಡ್ಡವಳಾದ ಮೇಲೆ ಏನಾಗಬಹುದು ಎಂದು ನೀವು ಊಹಿಸುತ್ತಿರಬಹುದು. ಆದರೆ ನಿಮ್ಮ ಊಹೆ ತಪ್ಪು. ಜಗತ್ತಿಗೆ ಹಲವಾರು ಹೊಸ ಹೊಸ ಆವಿಷ್ಕಾರಗಳನ್ನು ನೀಡಬೇಕಾದ ಅರ್ಫಾಳು ಇತ್ತೀಚೆಗೆ ಮರಳಿಬಾರದ ಲೋಕಕ್ಕೆ ಹೊರಟು ಹೋಗಿದ್ದಾಳೆ. ವಿಧಿಯ ಮುಂದೆ ಎಲ್ಲವೂ ಕ್ಷುಲ್ಲಕ. ಮರಣಕ್ಕೆ ಶ್ರೀಮಂತ-ಬಡವ, ಪ್ರತಿಭಾವಂತ-ದಡ್ಡ ಎಂಬ ಯಾವುದೇ ಬೇಧಬಾವ ಇಲ್ಲ. ಅಂತೆಯೇ ಅರ್ಫಾಳು ಕೂಡಾ ಮರಣದ ಕರೆಗೆ ಓಗೊಟ್ಟಳು.
ಲಾಹೋರ್ ಗ್ರಾಮರ್ ಸ್ಕೂಲ್ನಲ್ಲಿ ಎ-ಲೆವೆಲ್ನಲ್ಲಿ ಎರಡನೇ ವರ್ಷ ವ್ಯಾಸಂಗ ಮಾಡುತ್ತಿದ್ದ ಅರ್ಫಾ 2011ರ ಡಿಸೆಂಬರ್ 22ರಂದು ಅಪಸ್ಮಾರಕ್ಕೆ ತುತ್ತಾಗಿ ಹೃದಯಾಘಾತಕ್ಕೆ ಒಳಗಾದಳು. ಇದರಿಂದಾಗಿ ಆಕೆಯ ಮೆದುಳಿಗೆ ತೀವ್ರ ಹಾನಿಯಾಯಿತು. ಕೂಡಲೇ ಅವಳನ್ನು ಲಾಹೋರಿನ ಕಂಬೈನ್ಡ್ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಅರ್ಫಾಳ ಅನಾರೋಗ್ಯವನ್ನರಿತ ಬಿಲ್ಗೇಟ್ಸ್ ದಿಗ್ಭ್ರಾಂತರಾದರು. ಅವಳ ಚಿಕಿತ್ಸೆಗಾಗಿ ಸ್ವಂತ ಖರ್ಚಿನಲ್ಲೇ ಅಂತಾರಾಷ್ಟ್ರೀಯ ವೈದ್ಯರನ್ನು ನೇಮಿಸಿದರೂ ಅರ್ಫಾಳ ಸ್ಥಿತಿಯು ದಿನದಿಂದ ದಿನಕ್ಕೆ ಹದಗೆಡ ತೊಡಗಿತು. ಕೊನೆಗೆ ವೈದ್ಯರ ಪ್ರಯತ್ನಗಳೆಲ್ಲವೂ ನಿರರ್ಥಕವೆಂಬಂತೆ ಈ ಲೋಕಕ್ಕೆ ಶಾಶ್ವತವಾಗಿ ವಿದಾಯ ಹೇಳಿದಳು. ಇವಳ ಮರಣದಿಂದಾಗಿ ಇಡೀ ಜಗತ್ತೇ ಏನೋ ಅಮೂಲ್ಯವಾದುದನ್ನು ಕಳಕೊಂಡಂತೆ ಚಡಪಡಿಸಿತು. “ಇಂದು ನನ್ನ ಜೀವನ ಅತ್ಯಂತ ದುಃಖದ ದಿನ” ಎಂದು ಅರ್ಫಾಳ ಮರಣದ ಕುರಿತು ಬಿಲ್ಗೇಟ್ಸ್ ಹೇಳಿದ್ದಾರೆಂದಾದರೆ ಅವಳ ಬೆಲೆ ಎಷ್ಟೆಂದು ಭಾಸವಾಗಬಹುದು.
ಕಂಪ್ಯೂಟರ್ ಕ್ಷೇತ್ರದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದ್ದ ಅರ್ಫಾಳು ಹಾರ್ವರ್ಡ್ ವಿಶ್ವಾವಿದ್ಯಾಲಯದಲ್ಲಿ ಮುಂದಿನ ವ್ಯಾಸಾಂಗ ಮಾಡುವ ಮತ್ತು ಮೈಕ್ರೊಸಾಫ್ಟ್ ಕಂಪೆನಿಯಲ್ಲಿ ಸೇವೆ ಸಲ್ಲಿಸಲು ಬಯಸಿದ್ದಳು. ನಂತರ ಪಾಕಿಸ್ತಾನಕ್ಕೆ ತೆರಳಿ ಸ್ಯಾಟಲೈಟ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ತಾಂತ್ರಿಕ ಸಂಶೋಧನೆಗಳನ್ನು ಕೈಗೊಳ್ಳುವ ಹೆಬ್ಬಯಕೆ ಹೊಂದಿದ್ದಳು. ಆದರೆ ವಿಧಿಯಾಟದ ಮುಂದೆ ಎಲ್ಲವೂ ವೊಣಕಾಲೂರಿತು.
ಅರ್ಫಾಳ ಸ್ಮರಣಾರ್ಥ ಲಾಹೋರ್ ಟೆಕ್ನಾಲಜಿ ಪಾರ್ಕನ್ನು ಅರ್ಫಾ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಎಂದು ನಾಮಕರಣ ಮಾಡುವ ಮೂಲಕ ಮುಖ್ಯಮಂತ್ರಿ ಶಹಬಾಝ್ ಶರೀಫ್ ಆಕೆಗೆ ಗೌರವ ಸಲ್ಲಿಸಿದ್ದಾರೆ ಅಂತೂ ಜಗತ್ತಿಗೆ ನವೀನ ಆವಿಷ್ಕಾರಗಳ ಮೂಲಕ ಕೊಡುಗೆಗಳನ್ನು ನೀಡಬೇಕಾಗಿದ್ದ ತಾರೆಯು ಅಸ್ತಮಿಸಿದೆ. ಅರ್ಫಾರಂತಹವರು ಇನ್ನೂ ಹುಟ್ಟಿ ಬರಲಿ ಎಂಬುದು ದೇಶದ ಜನರ ಹಾರೈಕೆ.

Wednesday, 11 April 2012

ಲೋಟ, ಬಟ್ಟಲು ಸಾಲದೇ?


ಹಿಂದಿನ ಕಾಲದಲ್ಲಿ ಮಕ್ಕಳು ಅಳುವಾಗ ಸಮಾಧಾನ ಪಡಿಸಲಿಕ್ಕಾಗಿ ಸ್ಟೀಲಿನ ಲೋಟವನ್ನೋ, ಬಟ್ಟಲನ್ನೋ ನೀಡುತ್ತಿದ್ದೆವು. ಮಕ್ಕಳು ಅದನ್ನು ನೆಲಕ್ಕೆ ಬಡಿದು ಸದ್ದು ಮಾಡುತ್ತಾ ಆಟವಾಡುತ್ತಿದ್ದವು. ಆದರೆ ಇಂದು ಕಾಲವೇ ಬದಲಾಗಿದೆ. ಇಂದು ಲೋಟ, ಬಟ್ಟಲುಗಳ ಸ್ಥಾನವನ್ನು ರೆಡಿಮೇಡ್ ಆಟಿಕೆಗಳು ಆಕ್ರಮಿಸಿಕೊಂಡಿವೆ. ಪ್ಲಾಸ್ಟಿಕ್, ಫೈಬರ್ನಿಂದ ತಯಾರಿಸಲಾದ ಆಟಿಕೆಗಳು ವಿವಿಧ ಸದ್ದನ್ನು ಮಾಡುತ್ತಾ ಮಕ್ಕಳ ಅಳುವನ್ನು ನಿಲ್ಲಿಸುತ್ತದೆ. ವಿವಿಧ ಬಣ್ಣದ, ವೈವಿಧ್ಯಮಯ ಆಟಿಕೆಗಳು ಮಕ್ಕಳನ್ನೂ ಹೆತ್ತವರನ್ನೂ ಬಲುಬೇಗನೇ ಆಕಷ್ರಿಸುತ್ತವೆ. ಎಷ್ಟೇ ಬೆಲೆ ತೆತ್ತಾದರೂ ಹೆತ್ತವರು ಅವುಗಳನ್ನು ಖರೀದಿಸಿ ತರುತ್ತಾರೆ.
ಆದರೆ ಹೆಚ್ಚಿನವರು ಅದರ ಹಿಂದಿರುವ ಆಘಾತಕಾರಿ ವಿಷಯಗಳನ್ನು ತಿಳಿದಿಲ್ಲ. ವಿವಿಧ ಕಂಪೆನಿಗಳು ತಯಾರಿಸುತ್ತಿರುವ ಆಟಕೆಗಳಲ್ಲಿ ಹಲವು ರೀತಿಯ ರಾಸಾಯನಿಕ ವಸ್ತುಗಳು ತುಂಬಿರುತ್ತವೆ. ಕಂಪೆನಿಗಳು ಪರಸ್ಪರ ಪೈಪೋಟಿಗಾಗಿ, ಲಾಭ ಗಳಿಸುವ ದುರಾಸೆಯಿಂದಲೂ ಏನನ್ನೂ ಮಾಡಲು ಹೇಸುವುದಿಲ್ಲ. ಆಟಿಕೆಗಳಿಗೆ ಆಕಷ್ರಕ ಬಣ್ಣವನ್ನು ನೀಡಲು ಹಲವು ರೀತಿಯ ವಣ್ರ ವಧ್ರಕ ರಾಸಾಯನಿಕ ವಸ್ತುಗಳನ್ನು ಬೆರೆಸುತ್ತಾರೆ. ಪುಟ್ಟ  ಮಕ್ಕಳು ಈ ಆಟಿಕೆಗಳಿಂದ ಆಟವಾಡುವಾಗ ಅವುಗಳನ್ನು ಬಾಯಿಗೆ ಹಾಕುತ್ತವೆ. ಜೊಲ್ಲುರಸವು ಈ ಆಟಿಕೆಗಳಿಗೆ ತಾಗಿ ಅದರಿಂದ ವಿಶಕಾರಕ ರಾಸಾಯನಿಕಗಳು ಬಿಡುಗಡೆ ಹೊಂದಿ ಮಗುವಿನ ಹೊಟ್ಟೆಗೆ ಸೇರುತ್ತವೆ. ಇದು  ಪುಟ್ಟ   ಮಕ್ಕಳ ದೇಹದಲ್ಲಿ ಬಹು ಬೇಗನೇ ತನ್ನ ತಾಕತ್ತನ್ನು ಪ್ರದಶ್ರಿಸುತ್ತದೆ. ಇದರಿಂದಾಗಿ ಮಕ್ಕಳಲ್ಲಿ ಹಲವು ರೀತಿ ಶಾರೀರಿಕ ಹಾಗೂ ಮಾನಸಿಕ ರೋಗಗಳು ಕಂಡು ಬರುತ್ತವೆ. ಮಾತ್ರವಲ್ಲ, ಇದು ನಿರಂತರವಾಗಿ ದೇಹಕ್ಕೆ ಪ್ರವೇಶಿಸುವುದರಿಂದ ಪ್ರಾಣಕ್ಕೂ ಅಪಾಯವಿದೆ.
ದೀಕ್ಷಾ ಎಂಬ ಮಗು ಬಹಳ ಚುರುಕಾಗಿದ್ದಳು. ಮಾತ್ರವಲ್ಲ ತುಂಟಿಯಾಗಿದ್ದಳು. ಎಲ್ಲರಿಗೂ ಪ್ರೀತಿ ಪಾತ್ರಳಾಗಿದ್ದಳು. ಅವಳ ತುಂಟತನದ ತೊದಲು ನುಡಿಗೆ ಎಲ್ಲರೂ ಮರುಳಾಗುತ್ತಿದ್ದರು. ಆದರೆ ಕ್ರಮೇಣ ಅವಳಲ್ಲಿ ಬದಲಾವಣೆಗಳು ಗೋಚರಿಸಲಾರಂಭಿಸಿದವು. ಅವಳ ಸೌಂದಯ್ರವು ಕುಗ್ಗ ತೊಡಗಿತು. ಹೊಟ್ಟೆಗೆ ತಿನ್ನುವುದನ್ನು ನಿಲ್ಲಿಸತೊಡಗಿದಳು. ಸದಾ ಖಿನ್ನಳಾಗಿರುತ್ತಿದ್ದಳು. ಇತರ ಮಕ್ಕಳು ಆಡುವುದನ್ನು ನೋಡಿದರೂ ಅವರ ಬಳಿಗೆ ಹೋಗುತ್ತಿರಲಿಲ್ಲ.
ಆತಂಕಗೊಂಡ ಹೆತ್ತವರು ಅವಳನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋದರು. ಪರೀಕ್ಷಿಸಿದ ವೈದ್ಯರು ನಿಮ್ಮ ಮಗುವಿನ ಕಿಡ್ನಿ ವಿಫಲವಾಗಿದೆ ಎಂಬ ಆತಂಕಕಾರಿ ವಾತ್ರೆಯನ್ನು ತಿಳಿಸಿದರು. ಹೆಚ್ಚಿನ ಪರೀಕ್ಷೆ ನಡೆಸಿದಾಗ ಮಗುವಿನ ಶರೀರದಲ್ಲಿ ಪೋಲಿ ವೆನೈಲ್ ಕ್ಲೋರೈಡ್ ಎಂಬ ರಾಸಾಯನಿಕ ಪತ್ತೆಯಾಯಿತು. ಇದು ಮಗುವಿನ ಶರೀರಕ್ಕೆ ಹೇಗೆ ಪ್ರವೇಶಿಸಿತು ಎಂದು ವೈದ್ಯರ ತಲೆಗೆ ಹತ್ತಲಿಲ್ಲ. ಕೊನೆಗೆ ಆ ಮಗುವಿನ ಆಟಿಕೆಯನ್ನು ಪರೀಕ್ಷಿಸಿದಾಗ ಬೊಂಬೆಯೊಂದರಲ್ಲಿ ಈ ರಾಸಾಯನಿಕ ಇರುವುದು ಪತ್ತೆಯಾಯಿತು.
ಇಂತಹ ಹಲವು ರಾಸಾಯನಿಕ ವಸ್ತುಗಳು ಇಂದು ತಯಾರಾಗುತ್ತಿರುವ ಆಟಿಕೆಗಳಲ್ಲಿ ವಿವಿಧ ಪ್ರಮಾಣದಲ್ಲಿವೆ. ಆದ್ದರಿಂದ ನಾವು ದುಬಾರಿ ಬೆಲೆ ತೆತ್ತು ಆಟಿಕೆಗಳನ್ನು ತರುವಾಗ ಅದರೊಂದಿಗೆ ರೋಗವನ್ನೂ ಹೊತ್ತು ತರುತ್ತೇವೆ ಎಂಬ ಪ್ರಜ್ನೆಯು  ನಮ್ಮಲ್ಲಿ ಜಾಗೃತವಾಗಬೇಕು. ಲಾಭ, ಪೈಪೋಟಿಗಳ ಈ ಜಗತ್ತಿನಲ್ಲಿ ಆರೋಗ್ಯ, ಪ್ರಕೃತಿಗೆ ಬೆಲೆ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ನಮ್ಮ ಮಗುವಿನ ಆರೋಗ್ಯ ಹದಗೆಡಲು ನಾವು ಕಾರಣಕತ್ರರಾಗಬಾರದು. ಮಗುವಿನ ಮೇಲಿನ ಅತಿಯಾದ ಮಮತೆಯು ಮಗುವಿಗೆ ಕಂಟಕವಾಗಬಾರದು.

Monday, 19 March 2012

ಉಪವಾಸದ ಹನ್ನೆರಡನೇ ವರ್ಷಕ್ಕೆ ಕಾಲಿಟ್ಟ ಇರೋಂ ಶರ್ಮಿಳಾ


ಇಂದು ಜಗತ್ತಿನಲ್ಲಿ ಹಲವಾರು ರೀತಿಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಮೆರವಣಿಗೆ ನಡೆಸುವುದು, ಅಂಗಡಿ ಮುಂಗಟ್ಟುಗಳಿಗೆ ಕಲ್ಲೆಸೆಯುವುದು, ಧರಣಿ ಕೂರುವುದು, ಗಳಿಸಿದ ಪ್ರಶಸ್ತಿಗಳನ್ನು ಮರಳಿಸುವುದು ಹೀಗೆ ಪ್ರತಿಭಟನೆಗಳ ಪಟ್ಟಿಯು ಬೆಳೆಯುತ್ತಾ ಹೋಗುತ್ತದೆ. ಕೆಲವರು ಹಿಂಸೆಯ ಮಾರ್ಗ ತುಳಿದರೆ ಇನ್ನು ಕೆಲವರು ಅಹಿಂಸೆಯ ಮಾರ್ಗ ಸ್ವೀಕರಿಸುತ್ತಾರೆ. ಕೆಲವರು ಅನಿರ್ದಿಷ್ಟಾವಧಿ ನಿರಾಹಾರ ಎಂದು ಹೇಳಿ ಕೆಲವು ದಿನಗಳವರೆಗೆ ಮುಂದುವರಿಸುತ್ತಾರೆ.
ಆದರೆ ಇರೋಮ್ ಶರ್ಮಿಳ ಚಾನು ಎಂಬ ಮಹಿಳೆಯ ಪ್ರತಿಭಟನೆಗೆ ಸರಿಸಾಟಿಯಾಗಿ ಯಾರೂ ಪ್ರತಿಭಟನೆ ನಡೆಸಲಿಲ್ಲ. ಇನ್ನು ನಡೆಸಲಿಕ್ಕೂ ಇಲ್ಲ. ಈಕೆಯ ಪ್ರತಿಭಟನೆಗೆ ಹತ್ತು ವಷ್ರ ಕಳೆಯಿತು. ಶರಮಿಳಾ ಮಾಡುತ್ತಿರುವುದೇನೆಂದರೆ ಈಕೆ ಆಹಾರ ಸೇವಿಸುತ್ತಿಲ್ಲ. ಅಂದರೆ ಆಮರಣಾಂತ ಉಪವಾಸ ಆಚರಿಸಿದ್ದಾಳೆ. ಇದು ಕೇವಲ ಒಂದೆರಡು ದಿನಗಳ ಉಪವಾಸವಲ್ಲ. ತಿಂಗಳುಗಳ ಉಪವಾಸವೂ ಅಲ್ಲ. ಈಕೆ ಸುದೀರ್ಘ  ಹನ್ನೆರಡು  ವರ್ಷಗಳಿಂದ ಉಪವಾಸ ಆಚರಿಸುತ್ತಿದ್ದಾಳೆ. ಈ  ವರ್ಷ ಗಳಲ್ಲಿ ಈಕೆ ಏನನ್ನೂ ಸೇವಿಸಿಲ್ಲ ಎಂದರೆ ನೀವು ನಂಬಲೇಬೇಕು. ಯಾಕೆಂದರೆ ಇದೊಂದು ವಾಸ್ತವವಾಗಿದೆ. 2000 ಇಸವಿಯ ನವೆಂಬರ್ ತಿಂಗಳಿನಲ್ಲಿ ಆರಂಭಿಸಿದ ಉಪವಾಸವು ಇಂದಿಗೂ ಮುಂದುವರಿಯುತ್ತಲೇ ಇದೆ.
ಶರ್ಮಿಳ ಆತಂಕವಾದಿಯಲ್ಲ, ಬಂಡುಕೋರಳಲ್ಲ, ಸಮಾಜಘಾತುಕಳೂ ಅಲ್ಲ, ಈಕೆ ನಮ್ಮ-ನಿಮ್ಮ ಮನೆ
ಯ ಹೆಣ್ಣು ಮಕ್ಕಳಂಥವಳು. ಅಪ್ಪಟ ಭಾರತೀಯ ನಾರಿ. ಭಾರತದ ಆಭರಣ ಎಂದು ಕರೆಯಲ್ಪಡುವ ಮಣಿಪುರ ರಾಜ್ಯದವಳು.
ಇಡೀ ಜಗತ್ತಿನ ಇತಿಹಾಸದಲ್ಲಿ ಕೇವಲ ಒಂದು ಬೇಡಿಕೆ ಇರಿಸಿ ಇಷ್ಟು  ವರ್ಷ ಗಳ ಕಾಲ ಆಮರಣಾಂತರ ಉಪವಾಸ ಆಚರಿಸಿದ ಉದಾಹರಣೆಯೇ ಇಲ್ಲ. ಯಾವ ಪ್ರತಿಭಟನೆಕಾರರೂ ಮುಟ್ಟಲಾಗದ ಎತ್ತರವನ್ನು ಶರ್ಮಿಳ ಏರಿದ್ದಾಳೆ. ಬಹುಶಃ ಇನ್ನೊಂದು ಶರ್ಮಿಳ ಜಗತ್ತಿನಲ್ಲಿರಲು ಸಾಧ್ಯವೇ ಇಲ್ಲ. ಮುಂದೆ ಹುಟ್ಟಲೂ ಸಾಧ್ಯವಿಲ್ಲ. ಹಾಗಾಗಿ ಸಮಸ್ತ ಮಣಿಪುರವೇ ಶರ್ಮಿಳ ಬದುಕುವಂತಾಗಲಿ ಎಂದು ಬಯಸುತ್ತಿದೆ.
ಈ ಸಂದಭ್ರದಲ್ಲಿ ಮಣಿಪು ರದ ಹಿನ್ನಲೆ ಏನು ಎಂಬುವುದನ್ನು ತಿಳಿಯುವುದು ಸೂಕ್ತವೆನಿಸುತ್ತದೆ. ನೀಲಿ ಬಣ್ಣದ ಪರ್ವತ ಶ್ರೇಣಿಗಳಿಂದಾವೃತವಾದ ನಿಸರ್ಗ ರಮಣೀಯ ಮಣಿಪುರವು ಮ್ಯಾನ್ಮಾರ್ ಗಡಿಗೆ ತಾಗಿಕೊಂಡಿದೆ. 1881ರಲ್ಲಿ ಬ್ರಿಟಿಷರು ಯುದ್ಧದ ಮೂಲಕ ಈ ನಾಡನ್ನು ವಶಪಡಿಸಿಕೊಂಡರು. ನಂತರ 1947ರಲ್ಲಿ ಭಾರತದ ಗಣರಾಜ್ಯಕ್ಕೆ ಸೇರ್ಪಡೆಗೊಂಡಿತು. 1972ರ ಜನವರಿ 21ರಂದು ಮಣಿಪುರಕ್ಕೆ ಪೂರ್ಣ  ಪ್ರಮಾಣದ ರಾಜ್ಯಸ್ಥಾನ ದೊರೆಯಿತು. ವಿವಿಧ ಕಲೆ, ಸಂಸ್ಕ್ರತಿ ಹೊಂದಿರುವ ಮಣಿಪು ರವು ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಸಿದ್ದಹಸ್ತವಾಗಿದೆ.
ಇಂತಹಮಣಿಪುರವು ಸ್ವಾತಂತ್ರ್ಯ ಬಂದಾಗಿನಿಂದ ನೆಮ್ಮದಿಯಾಗಿಲ್ಲ. ಸ್ವಾತಂತ್ರ್ಯ ಎಂಬ ಪದದ ಅಥ್ರವೇ ಗೊತ್ತಿಲ್ಲದಷ್ಟು ಅಲ್ಲಿನ ಜನರು ಅಭದ್ರತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಈ ಸ್ವಾತಂತ್ರ್ಯಕ್ಕಿಂತ ಬ್ರಿಟಿಷರ ಆಡಳಿತವೇ ಮೇಲು ಎಂಬ ಭಾವನೆ ಅವರ ಮನಸ್ಸಿನಲ್ಲಿ ಬರದಿರಲಿಕ್ಕಿಲ್ಲ. ಭಾರತದ ಆಡಳಿತದಿಂದಾಗಿ ಅವರು ಅಷ್ಟು ಬೇಸತ್ತಿದ್ದಾರೆ.
ನಮ್ಮ ಕೇಂದ್ರ ಸರಕಾರವು ಮಣಿಪುರವನ್ನು ಗಲಭೆಗ್ರಸ್ಥ ಪ್ರದೇಶ ಎಂದು ಗುರುತಿಸಿದೆ. ಹಾಗಾಗಿ ಅಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು 1985ರಲ್ಲಿ ಜಾರಿಗೊಳಿಸಲಾಯಿತು. ಇದರಿಂದಾಗಿ ಅಲ್ಲಿನ ಜನರ ಬದುಕು ಮೂರಾ ಬಟ್ಟೆಯಾಗಿ ಹೋಗಿದೆ.
ಈ ಕಾಯ್ದೆಯು ದೇಶದ ಇತರ ಕ್ರೂರ ಕಾಯ್ದೆಗಳಿಗೆ ತಾಯಿಯಿದ್ದಂತೆ. ಸರಳವಾಗಿ ಹೇಳುವುದಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಮಿಲಿಟರಿ ಆಡಳಿತ. ಈ ಕಾಯ್ದೆಯ ಪ್ರಕಾರ ಯಾರನ್ನು ಬೇಕಾದರೂ ವಾರೆಂಟ್ ಇಲ್ಲದೆ ಬಂಧಿಸಲು ಸಾಧ್ಯವಾಗುತ್ತದೆ. ಯಾವುದೇ ಮನೆಗಳಿಗೂ, ಕಛೇರಿಗಳಿಗೂ ಯಾವ ಮಧ್ಯರಾತ್ರಿಯಲ್ಲಿ ಬೇಕಾದರೂ ಹೋಗಿ ಬಂಧಿಸುವ ವಿಶೇಷ ಅಧಿಕಾರವನ್ನು ಸೇನೆಗೆ ನೀಡಲಾಗಿದೆ. ಒಂದು ವೇಳೆ ಸೇನಾ ಪಡೆಗಳಿಂದ ನಡೆಯುವ ಅಮಾಯಕರ ಮೇಲಿನ ದೌಜ್ರನ್ಯವನ್ನು ರಾಜ್ಯ ಸರಕಾರಕ್ಕೂ, ಪೋಲೀಸ್  ಇಲಾಖೆಗೂ ಕೇಂದ್ರ ಸರಕಾರದ ಅನುಮತಿ ಇಲ್ಲದೆ ತನಿಖೆ ನಡೆಸಲು ಸಾಧ್ಯವಿಲ್ಲ.
ಇಂತಹ ಕ್ರೂರ ಕಾಯ್ದೆಯನ್ನು ಮಣಿಪುರಿಗಳ ಮೇಲೆ ಹೇರಿದಾಗ ಬ್ರಿಟಿಷರಿಂದ ಸಿಕ್ಕಿದ ಸ್ವಾತಂತ್ರ್ಯವು ಕಸಿಯಲ್ಪಟ್ಟಿತು. ನಮ್ಮನ್ನು ಯಾವಾಗ ಬಂಧಿಸುವರೋ ಎಂಬ ಭೀತಿಯಲ್ಲಿ ಬದುಕತೊಡಗಿದರು.  ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು ಎಂಬ ಒಂದೇ ಒಂದು ಬೇಡಿಕೆಗಾಗಿ ಶರ್ಮಿಳ ಉಪವಾಸ ಆಚರಿಸಿದ್ದು. ಇದು ಓರ್ವ ಮಹಿಳೆ ನಡೆಸುವ ಸಾಟಿಯಿಲ್ಲದ ಪ್ರತಿಭಟನೆಯಾಗಿದೆ.
ಶರ್ಮಿಳ ಉಪವಾಸ ಸತ್ಯಾಗ್ರಹ ಆರಂಭಿಸಿದಾಗ ಇದು ಹೆಚ್ಚು ದಿನ ನಡೆಯುವುದಿಲ್ಲ ಎಂದು ಜನರು ಭಾವಿಸಿದ್ದರು. ಆದರೆ ಅವಳ ಉಪವಾಸವು ಕೊನೆಯಿಲ್ಲದೆ ಸಾಗಿದಾಗ ಮಣಿಪುರ ಸರಕಾರ ನಿಧಾನವಾಗಿ ತಲೆಕೆಡಿಸತೊಡಗಿತು. ನಂತರ ಆಕೆಯ ವಿರುದ್ಧ ‘ಆತ್ಮಹತ್ಯಾ’ ಯತ್ನದ ಅಪರಾಧ ಹೊರಿಸಲಾಯಿತು. ಈ ಅಪರಾಧದಡಿಯಲ್ಲಿ ಓರ್ವ  ವ್ಯಕ್ತಿಗೆ ಗರಿಷ್ಠ ಒಂದು ವರ್ಷ  ಶಿಕ್ಷೆ ಲಭಿಸುವುದು. ಆಸ್ಪತ್ರೆಯೇ ಜೈಲಾದ ಶರ್ಮಿಳಾಳಿಗೆ ಇಂತಹ ಒಂದು ವಷ್ರದ ಜೈಲು ಶಿಕ್ಷೆಯನ್ನು ಹಲವು ಬಾರಿ ಅನುಭವಿಸಬೇಕಾಯಿತು.

ಶರ್ಮಿಳಳ ಈ ಉಪವಾಸವನ್ನು ಸರಕಾರವು ಕೊನೆಗೊಳಿಸುವ ಲಕ್ಷಣ ಕಾಣಿಸುತ್ತಿಲ್ಲ. ಬಂದೂಕು, ಬಾಂಬು ಹಿಡಿದು ಪ್ರತಿಭಟಿಸಿದರೆ ಗಮನಿಸುವ ಈ ದೇಶದಲ್ಲಿ ನಿರಾಹಾರ ಪ್ರತಿಭಟನೆಯನ್ನು ಗಮನಿಸುವ ಮನಸ್ಸು ಸರಕಾರಕ್ಕಿದ್ದರಲ್ಲವೇ? ಇನ್ನು ಈ ಸಹೋದರಿಯ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವುದು ಈಕೆಯ ಮರಣವಾಗಿರಬಹುದೇನೋ?
2008 ಜುಲೈ 15ರಂದು ಭಾರತೀಯ ಭೂಸೇನೆಯ ಭಾಗವಾಗಿರುವ ಅಸ್ಸಾಮ್ ರೈಫಲ್ಸ್ನ 17ನೇ ಬೆಟಾಲಿಯನ್ ಕೇಂದ್ರ ಸ್ಥಾನದ ಎದುರು ಕೆಲವು ಮಹಿಳೆಯರು ಪ್ರತಿಭಟನೆ ನಡೆಸಿದರು. ಪ್ಲೇಕಾರ್ಡುಗಳನ್ನು ಹಿಡಿದು ಘೋಷಣೆ ಕೂಗುವ ಕೇವಲ ಪ್ರತಿಭಟನೆಯಾಗಿರಲಿಲ್ಲ. ಈ ಹೆಣ್ಣು ಮಕ್ಕಳು ಸಂಪೂರ್ಣ  ಬೆತ್ತಲೆಯಾಗಿ ನಿಂತು ಪ್ರತಿಭಟಿಸಿದರು. ‘ಇಂಡಿಯನ್ ಆರ್ಮಿ  ರೇಪ್ ಅಸ್, ಇಂಡಿಯನ್ ಆರ್ಮಿ  ಟೇಕ್ ಅವರ್ ಫ್ಲೆಷ್’ ಎಂದು ಬರೆಯಲಾದ ಬ್ಯಾನರುಗಳು ಅವರ ಪ್ರತಿಭಟನೆಯ ಕಾರಣವನ್ನು ತಿಳಿಸುತ್ತಿತ್ತು. ಭಾರತದ ಈ ನಾರಿಯರು ವಿವಸ್ತ್ರವಾಗಿ ಪ್ರತಿಭಟನೆ ನಡೆಸಿದಾಗ ‘ಪ್ರಕಾಶಿಸುವ ಭಾರತ’ದ ಕರಾಳ ಮುಖವನ್ನು ಜಗತ್ತು ಬಹಳ ಹತ್ತಿರದಿಂದ ದರ್ಶಿಸಿತು. ಈ ಪ್ರತಿಭಟನೆಯ ಕಾರಣಕರ್ತರು ಅದೇ ಅಸ್ಸಾಂ ರೈಫಲ್ಸ್   ಪಡೆ. ಜುಲೈ 10ರಂದು ತಂಗ್ಜಮ್ ಮನೋರಮಾ ದೇವಿ ಎಂಬ 22 ವರ್ಷ ದ ಹೆಣ್ಣು ಮಗಳನ್ನು ಇದೇ ಪಡೆಯು ಅಮಾನುಷವಾಗಿ ಕೊಂದುಹಾಕಿತು. ಇವರು ಕೇವಲ ಕೊಲೆ ಮಾಡಿದ್ದಲ್ಲ. ಭೀಕರ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಮಾಡಲಾಗಿತ್ತು.  ಮಧ್ಯರಾತ್ರಿಯಲ್ಲಿ ಮನೆಗೆ ನುಗ್ಗಿ ಮನೋರಮಾಳನ್ನು ಕೊಂಡುಹೋದ ರೈಫಲ್ಸ್   ಪಡೆ ಬೆಳಗಿನ ಜಾವ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಹೀಗೆ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುವಾಗ ಈ ಹೆಣ್ಣು ಮಕ್ಕಳ ನಗ್ನ ಪ್ರತಿಭಟನೆಯು ಧೈಯ್ರವಿದ್ದರೆ ಸಾರ್ವ ಜನಿಕವಾಗಿ ಅತ್ಯಾಚಾರವೆಸಗಿ ಎಂಬ ಸೇನೆಗಿರುವ ಸವಾಲಾಗಿತ್ತು.
ಮನೋರಮಾ ಮತ್ತು ಶಮ್ರಿಳಾ ಇಂದು ಮಣಿಪುರಿಗಳ ದೇವತೆಯಾಗಿದ್ದಾರೆ. ಮನೋರಮಾಳ ಮನೆಯ ಮುಂದೆ ಅವಳ ಹೆಸರಿನಲ್ಲಿಯೇ ಒಂದು ದೇವಾಲಯ ನಿರ್ಮಾಣಗೊಂಡಿವೆ. ಈ ಇಬ್ಬರು ಹೆಣ್ಣು ಮಕ್ಕಳು ಮಣಿಪುರದ ಸಮಸ್ಯೆಗಳಿಗೆ ಸಂಕೇತವಾಗಿದ್ದಾರೆ. ಜಗತ್ತು ಅಲ್ಲಿನ ಸಮಸ್ಯೆಗಳನ್ನು ಗಮನಿಸುತ್ತಿರುವುದು ಈ ಇಬ್ಬರು ಹೆಣ್ಣು ಮಕ್ಕಳ ಮೂಲಕವಾಗಿದೆ.
ಇಂದು ಭಾರತದಲ್ಲಿ ಅಮೇರಿಕನ್ ಪಡೆಗಳ ಅತ್ಯಾಚಾರವನ್ನೂ, ಇತರ ದೇಶಗಳ ತಪ್ಪುಗಳನ್ನು  ಸ್ಟೇಜುಗಳಲ್ಲೂ, ಪೇಜುಗಳಲ್ಲೂ ವಿಮರ್ಶಿ ಸುತ್ತಿದ್ದಾರೆ. ವಾರ್ತಾ  ಮಾಧ್ಯಮಗಳು ಸಕ್ಕತ್ತಾಗಿ ಕವರೇಜು ನೀಡುತ್ತಿದೆ. ಆದರೆ ಇವರುಗಳು ನಮ್ಮ ದೇಶದ ಸ್ಥಿತಿಯನ್ನು ಗಮನಿಸುವುದೇ ಇಲ್ಲ. ಅಸ್ಸಾಮಿನಲ್ಲೂ, ಕಾಶ್ಮೀರದಲ್ಲೂ ಸೇನೆಯ ಹಲವು ಅತ್ಯಾಚಾರಗಳನ್ನೆಸಗಿದ ಘಟನೆಗಳು ಅಪ್ಪಿತಪ್ಪಿ ಹೊರಬಿದ್ದಿದೆ. ಆದರೆ ಇದು ಯಾವುದೂ ಇವರಿಗೆ ಸುದ್ದಿಯಾಗಲಿಲ್ಲ. ನಮ್ಮ ದೇಶದ ಕುರಿತು ಬರೆದರೆ ಪೇಜುಗಳೂ ಸಾಕಾಗಲಿಕ್ಕಿಲ್ಲ.
ಸಹೋದರಿ ಶರ್ಮಿಳಳ ದೈಹಿಕ ಸ್ಥಿತಿಯು ಕ್ಷೀಣಿಸುತ್ತಾ ಸಾಗುತ್ತಿದೆ. ಬಲವಂತವಾಗಿ ಮೂಗಿನ ಮೂಲಕ ಆಹಾರ ನೀಡಲಾಗುತ್ತಿದ್ದರೂ ಆರೋಗ್ಯವು ದಿನದಿಂದ ದಿನಕ್ಕೆ ಹದಗೆಡುತ್ತಾ ಇದೆ. ಅವಳ ಮರಣವು ಅವಳಿಗೆ ಜಯ ದೊರಕಿಸದೆ ಹತ್ತಿರವಾಗುತ್ತಿದೆ. ವೈದ್ಯರ ಪ್ರಕಾರ ಅವಳ ಶರೀರದ ಕೆಲವು ಅಂಗಗಳು ಸ್ಪಂದಿಸುತ್ತಿಲ್ಲ. ಅವಳು ಇನ್ನು ಎಷ್ಟು ದಿನ ಬದುಕುತ್ತಾಳೋ ಆ ದೇವನೇ ಬಲ್ಲ. ಸರಕಾರವು ಅವಳ ಬೇಡಿಕೆಯನ್ನು ಈಡೇರಿಸುವಂತೆ ಕಾಣುತ್ತಿಲ್ಲ. ಅವಳು ತನ್ನ ಪ್ರತಿಭಟನೆಯನ್ನು ನಿಲ್ಲಿಸಲಿಕ್ಕೂ ಇಲ್ಲ. ಪ್ರತೀ ಮನಸ್ಸುಗಳೂ ಈ ಶಾಂತ ಶೈಲಿಯ, ಮಾದರಿ ಪ್ರತಿಭಟನೆಗೆ ಬೆಂಬಲ ಸೂಚಿಸಬೇಕಾಗಿದೆ. ಇಂದು ಮನೋರಮಾ ದೇವಿ ಸತ್ತು ಜೀವಿಸುತ್ತಿದ್ದರೆ ಶರ್ಮಿಳ ಸಾಯುತ್ತಿದ್ದಾಳೆ. ಮುಂದೆ ಏನು ಸಂಭವಿಸುವುದೋ ಎಂದು ಕಾದು ನೋಡಬೇಕಾಗಿದೆ.

Wednesday, 29 February 2012

ನೀನು "ಪೀಡೆ' ಅಂತ ಯಾರು ಹೇಳಿದ್ದು?


ಆಕಾಶದಲ್ಲಿ ಕಾರ್ಮೋಡ ಆವರಿಸಿದ್ದನ್ನು ಕಂಡು ನಾನು ಬೇಗನೇ ಮನೆಗೆ ಹೊರಟೆ. ಆದರೂ ದಾರಿ ಮಧ್ಯೆಯೇ ಮಳೆ ಎದುರಾಯಿತು. ಬೆಳಿಗ್ಗೆ ಹೊರಡುವಾಗ ಶಮಾ ಹಿಡಿ ಬಾಗಿರುವ ಕೊಡೆಯನ್ನು ನನ್ನ ಕಾಲರಿಗೆ ಸಿಕ್ಕಿಸಿ ಪ್ರೀತಿಯಿಂದ ತಲೆ ತಡವುತ್ತಾ ಹೇಳಿದ್ದಳು:
""ರೀ.. ಕೊಡೆ ಹಿಡ್ಕೊಳ್ಳಿ. ಸಂಜೆ ಬರುವಾಗ ಮಳೆಗೆ ನೆನೆದು ಒದ್ದೆಯಾದ ಕೋಳಿಯಂತೆ ಬರ್ಬೇಡಿ. ನಿಮ್ಗೆ ಜ್ವರ-ಗಿರ ಬಂದ್ರೆ ಏನು ಮಾಡುದು.''
""ನನ್ನ ಮೇಲಿನ ನಿನ್ನ ಕಾಳಜಿಗೆ ಥ್ಯಾಕ್ಸ್  '' ಎಂದು ಹೇಳಿ ನಾನು ಹೊರಟಿದ್ದೆ .
ಅವಳು ಒಳ ಹೋದಾಗ ಕೊಡೆಯನ್ನು ಸಿಟೌಟಿನ ಮೇಲಿಟ್ಟು ಬಂದಿದ್ದೆ. ಯಾಕೆಂದರೆ ಬೆಳಿಗ್ಗೆ ಬಿಸಿಲಿತ್ತು. ಮಾತ್ರವಲ್ಲ, ಕೊಡೆ ಹಿಡಿಯುವುದೆಂದರೆ ನನಗೆ ಧರ್ಮ   ಸಂಕಟ. ಆದರೆ ಕೊಡೆ ಹಿಡ್ಕೊಂಡಿದ್ದರೆ ಒಳ್ಳೆಯದಿತ್ತು ಎಂದು ಈಗ ತೋಚಿತು. ಹಾಗೆ ನಾನು ಮಳೆಗೆ ನೆನೆಯುತ್ತಾ ಮನೆಗೆ ಬಂದೆ.
ಮಳೆಗೆ ನೆನೆಯುವುದೆಂದರೆ ನನಗೆ ಇಷ್ಟ. ನಾನು ಚಿಕ್ಕವನಿದ್ದಾಗ, ಶಾಲೆ ಬಿಟ್ಟ ಸಂದರ್ಭದಲ್ಲಿ ಮಳೆ ಬರಲು ಕಾದು ನೆನೆಯುತ್ತಾ ಬಂದ ಹಲವು ಸಂದಭ್ರಗಳಿವೆ. ಅಜ್ಜನಿಂದ ಪ್ರೀತಿಯ ಬೈಗುಳ ತಿಂದದ್ದೂ ಇದೆ.
ಮಂಗಳಾರತಿಯ ನಿರೀಕ್ಷೆಯಿಂದಲೇ ಮನೆಗೆ ತಲುಪಿದೆ. ಅವಳ ತಮ್ಮ ಜಲೀಲ್ ಸಿಟೌಟಿನಲ್ಲಿ ನಿಂತು ಒಳಗೆ ಹೋದರೆ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಮುನ್ನೆಚ್ಚರಿಕೆ ನೀಡಲು ನನ್ನನ್ನು ಕಾಯುತ್ತಿದ್ದ.
""ಭಾವ, ಈಗ ಒಳಗೆ ಹೋದರೆ ನಿಮಗೆ ಭವ್ಯ ಸ್ವಾಗತ ಸಿಗುತ್ತೆ. ಅಕ್ಕ ಗರಂ ಆಗಿದ್ದಾಳೆ'' ಅವನು ಮುನ್ನೆಚ್ಚರಿಕೆ ನೀಡಿದ.
ನಮ್ಮ ಮಾತು ಅವಳಿಗೆ ಕೇಳಿಸಿರಬೇಕು. ಟರ್ಕಿ  ಟವೆಲನ್ನು ಹೆಗಲಿಗೇರಿಸಿ ಹೊರ ಬಂದಳು. ನಾನು ಒದ್ದೆಯಾಗಿ ಬರುತ್ತೇನೆ ಎಂದು ಅವಳಿಗೆ ವೊದಲೇ ತಿಳಿದಿತ್ತು. ನನ್ನ ಸ್ಥಿತಿಯನ್ನು ನೋಡಿ ಅವಳಿಗೆ ಕನಿಕರವಾದರೂ ಅದನ್ನು ತೊರ್ಪ ಡಿಸದೆ ಹುಸಿಕೋಪ ಪ್ರಕಟಿಸಿದಳು.
 ""ಎಂಥ ಮಳೆ ಮಾರಾಯ್ತಿ! ನಾನು ಎನಿಸಿರಲಿಲ್ಲ, ಇಷ್ಟು ಮಳೆ ಬರುತ್ತೆ ಅಂತ'' ಬ್ಯಾಗನ್ನು ಅವಳಿಗೆ ನೀಡುತ್ತಾ ಹೇಳಿದೆ.
""ಮಳೆಗಾಲದಲ್ಲಿ ಮಳೆ ಬರದೆ ಮತ್ತೆ ಯಾವಾಗ ಬರುವುದು. ಬೇಸಿಗೆಯಲ್ಲಾ?'' ಸಿಡುಕುತ್ತಾ ಬ್ಯಾಗನ್ನು ಟೇಬಲಿನ ಮೇಲಿಟ್ಟಳು.
ನಾನು ಕುರ್ಚಿ ಯಲ್ಲಿ ಕುಳಿತೆ. ಮೈಯೆಲ್ಲಾ ಒದ್ದೆಯಾಗಿತ್ತು. ಶಮಾ ಟವೆಲು ಹಿಡಿದು ಕುರ್ಚಿಯ ಹಿಂದೆ ನಿಂತು ನನ್ನ ತಲೆ ಒರೆಸಲು ತೊಡಗಿದಳು. ನಾನು ನನ್ನ ಶೂವನ್ನು ಬಿಚ್ಚಲು ಬಾಗಿದೆ.
""ಸರಿ ಕುಳಿತುಕೊಳ್ಳಿ'' ಎಂದು ಬೆನ್ನಿಗೆ ಒಂದು ಗುದ್ದು ಬಿತ್ತು.
ಶಮಾ ನನ್ನ ತಲೆ ಒರೆಸಿ ಅಡುಗೆ ಕೋಣೆಗೆ ಹೋದಳು. ನಾನು ರೂಮಿಗೆ ಹೋಗಿ ಬಟ್ಟೆ ಬದಲಿಸಿ ಬಂದು ಸೋಫಾದಲ್ಲಿ ಕುಳಿತೆ. ಹೊರಗೆ ಧೋ ಅಂತ ಮಳೆ ಸುರಿಯುತ್ತಿತ್ತು. ಜಲೀಲ್ ಕೂಡಾ ನನ್ನ ಬಳಿ ಕುಳಿತುಕೊಂಡನು. ನಾನು ಅವನೊಂದಿಗೆ ಹರಟಲು ಪ್ರಾರಂಭಿಸಿದೆ.
ಶಮಾ ಬಿಸಿ ಬಿಸಿ ಕಾಫಿ ತಂದು ಟೀಪಾಯಿ ಮೇಲಿಟ್ಟು ನಾನು ಕಳಚಿಟ್ಟಿದ್ದ ಶೂವನ್ನು ಹೊರಗೆ ಸ್ಟೇಂಡ್ ಮೇಲಿಟ್ಟಳು. ಮುಖದಲ್ಲಿ ಕೋಪವಿದ್ದರೂ ಅದು ಕೃತಕ ಕೋಪವೆಂದು ತಿಳಿಯುತ್ತಿತ್ತು.
""ಲೇ ಬಂಗಾರಿ, ಕಾಫಿಯೊಂದಿಗೆ ತಿನ್ನಲು ಏನಾದರೂ ಇದೆಯಾ? ವೊನ್ನೆ ಪೆರ್ನಾಲಿಗೆ ಬಗೆ ಬಗೆಯ ತಿಂಡಿ ತಯಾರಿಸಿದ್ದಿ, ಅದೆಲ್ಲಿ..?''
"" ಪೆರ್ನಾಲಿಗೆ   ಮಾಡಿದ್ದು ಇಷ್ಟು ದಿನ ಉಳಿಯುತ್ತದಾ?'' ಸಂಕ್ಷಿಪ್ತ ಉತ್ತರ ಬಂತು.
ಕಾಫಿ ಕುಡಿದು ಸೋಫಾದಲ್ಲಿ ಆರಾಮವಾಗಿ ಕುಳಿತೆ. ಟಿ.ವಿ. ಆನ್ ಮಾಡುವ ಹಾಗಿರಲಿಲ್ಲ. ಕಾರಣ ಮಳೆಯ ಹನಿಗಳು ಪಟ ಪಟ ಉದುರಲು ಆರಂಭಿಸಿದಾಗಲೇ ಕರೆಂಟು ಮಾಯವಾಗಿತ್ತು.
""ಭಾವ ನಾಳೆ ನಮ್ಮ ಕಾಲೇಜಿನಲ್ಲಿ ಸ್ಪೋರ್ಟ್ಸ್  ಡೇ. ನೀವು ಖಂಡಿತಾ ಬರ್ಬೇಕು. ನನ್ಗೆ ಇನ್ನೂರು ಮೀಟರ್ ಓಟ ಇದೆ'' ಜಲೀಲ್ ಒತ್ತಾಯ ಪಡಿಸಿದ.
""ನೀನು ಓಡಿ ಕೊನೆಗೆ ತಲುಪುವುದನ್ನು ನೋಡಲು ನಾನು ಬರ್ಬೇಕಾ?''
""ತಮಾಷೆ ಮಾಡುವುದೇನೂ ಬೇಡ. ನೀವು ಬಂದು ನೋಡಿ ನನ್ನ ಪರ್ಫಾಮೆನ್ಸ್  ''
""ನನಗೆ ಸಮಯವಿಲ್ಲ ಮಾರಾಯ. ಆಫೀಸು ಕೆಲಸವೇ ಬೆಟ್ಟದಷ್ಟುಂಟು. ಅದು ದೊಡ್ಡ ಕೆಲಸವೇನಲ್ಲ. ಆದರೆ ನಿನ್ನ ಅಕ್ಕನನ್ನು ಸುಧಾರಿಸುವಲ್ಲಿ ಸಾಕು ಸಾಕಾಗಿ ಹೋಗುತ್ತದೆ''
ನಾನು ಹೇಳಿದ್ದಕ್ಕೂ ಅವಳು ಒಳಗಿನಿಂದ ಬರುವುದಕ್ಕೂ ಸರಿ ಹೋಗಿತ್ತು.
""ನಿಮ್ಗೆ ನಾನು ಒಂದು ಪೀಡೆ ತರ ಆಗುವುದಾದರೆ ನಾನು ಹೋಗ್ತೇನೆ. ಆಗ ನಿಮ್ಗೆ ತಲೆಬಿಸಿ ಮುಗಿಯಬಹುದಲ್ವಾ?''
""ನೀನು ಪೀಡೆ ಅಂತ ಯಾರು ಹೇಳಿದ್ದು?''
""ಯಾರೂ ಹೇಳಲಿಲ್ಲ. ನಿಮ್ಮ ಮನಸ್ಸಿನಲ್ಲಿದ್ದುದನ್ನು ಹೇಳಿದೆ ಅಷ್ಟೇ...''
""ಓಹೋ ನಿನಗೆ ಮನಸ್ಸನ್ನು ಓದಲು ತಿಳಿದಿದೆ ಅಂತ ಕಾಣುತ್ತೆ..''
""ಅದೆಲ್ಲಾ ಇಲ್ರಿ, ಸಾಕು ನಿಮ್ಮ ಪಟ್ಟಾಂಗ. ನೀರು ಬಿಸಿ ಮಾಡಿಟ್ಟಿದ್ದೇನೆ. ಹೋಗಿ ಸ್ನಾನ ಮಾಡಿ ಬನ್ನಿ'' ಆಜೆÕ ಹೊರ ಬಂತು.
""ಸ್ನಾನ ಮಾಡುವುದಾ.... ನನಗೆ ಸ್ವಲ್ಪ ಶೀತ ಆಗುವ ಲಕ್ಷಣ ಕಾಣ್ತಿದೆ. ಗಂಟಲಲ್ಲಿ ಗರಗರ ಆಗ್ತಿದೆ..''
""ಮಳೆಗೆ ಇನ್ನೂ ಸ್ವಲ್ಪ ನೆನೆದು ಬನ್ನಿ. ಆಗ ಎಲ್ಲ ವಾಸಿಯಾಗುತ್ತೆ..'' ನಿರೀಕ್ಷಿಸಿದ ಉತ್ತರವೇ ಅವಳಿಂದ ಬಂತು.
""ನಿಮಗೆ ಒಂದು ನೆಗಡಿಯಾದರೆ ಅಂದು ಮನೆಯವರಿಗೆ ನಿದ್ದೆಯೇ ಇಲ್ಲ. ಬಿಸಿ ನೀರು ತಾ, ಕಷಾಯ ತಾ, ಕಂಬಳಿ ತಾ ಎಂದೆಲ್ಲಾ ಬೊಬ್ಬೆ ಹಾಕ್ತಿತ್ರೀರಿ. ಆದರೆ ನನಗೆ ಜ್ವರ ಬಂದರೂ ತಿರುಗಿ ನೋಡುವವರಿಲ್ಲ. ಈ ಪುರುಷರೇಕೆ ಹೀಗೆ?....'' ಬೈಗುಳದ ಸುರಿಮಳೆಯೇ ಸುರಿಯಿತು. ಶಮಾ ಅಡುಗೆ ಕೋಣೆಗೆ ಹೋದಳು.
ಅವಳು ಹಾಗೇನೆ. ನನ್ನ ಯಾವುದೇ ತಪ್ಪನ್ನು ಪುರುಷ ವರ್ಗದ ಮೇಲೆ ಹೊರಿಸ್ತಾಳೆ.
ಅವಳ ಬೈಗುಳವನ್ನು ಕೇಳಿ ಜಲೀಲ್ ಮುಸಿ ಮುಸಿ ನಕ್ಕನು.
""ಸುಮ್ಮನಿರು ಮಾರಾಯ. ಮುಸುಂಟಿಗೆ ಇಡ್ತೇನೆ ಈಗ..'' ಎಂದು ಗದರಿಸಿ ಎದ್ದು ಅಡುಗೆ ಕೋಣೆಗೆ ಹೋದೆ. ಶಮಾ ಅಡುಗೆ ಕೋಣೆಯನ್ನು ಶುಚಿಗೊಳಿಸುತ್ತಿದ್ದಳು.
""ಲೇ ಚಿನ್ನಾ.. ರಾತ್ರಿಗೆ ಏನು ಮಾಡಿದ್ದಿ?...'' ಕೆಳಗೆ ಬಿದ್ದಿದ್ದ ಕೈ ಬಟ್ಟೆಯನ್ನು ಎತ್ತಿ ಮೇಲಿಡುತ್ತಾ ಕೇಳಿದೆ.
""ನಿಮ್ಗೆ ತಿನ್ನುವುದೇ ಯೋಚನೆ''
""ಹೌದು ಬಂಗಾರಿ, ಬದುಕಬೇಕಲ್ಲಾ''
""ಕೆಲವರು ತಿನ್ನಲಿಕ್ಕಾಗಿ ಬದುಕುತ್ತಾರೆ''
""ಓಹೋ! ಅದು ಯಾರು?''
""ಹಾಗೆ ಬದುಕುವವರಲ್ಲಿ ಹೋಗಿ ಕೇಳಿ ನೋಡಿ'' ಪ್ರಶ್ನೆಗಳಿಗೆ ಚುಟುಕು ಉತ್ತರ ಬರುತ್ತಿತ್ತು.
""ಓಕೆ, ಇವತ್ತು ರಾತ್ರಿಗೆ ಏನೂ ಮಾಡ್ಬೇಡ. ಎಗ್ಸಿಬಿಷನ್ಗೆ ಹೋಗೋಣ. ಅಲ್ಲಿಂದಲೇ ಊಟ ಮಾಡಿ ಬಂದರಾಯಿತು'' ಇದನ್ನು ಕೇಳಿದ್ದೇ ತಡ. ಅವಳ ಮುಖದಲ್ಲಿ ನಗುವೊಂದು ಮಿಂಚಿತು.
""ಓ, ಶ್ಶೂ.... ನಾನು ಆಗಲೇ ಅಡಿಗೆ ಮಾಡಿಟ್ಟಿದ್ದೇನೆ. ನಿಮ್ಗೆ ವೊದಲೇ ಹೇಳ್ಬಾರ್ದಿತ್ತಾ ...'' ಎನ್ನುತ್ತಾ ತಲೆಗೆ ಒಂದು ವೊಟಕಿದಳು. ನಾನು ಅವಳ ಬಳಿ ಬಂದು ನಿಂತೆ.
ಅವಳು ಕೋಪಗೊಂಡಾಗ ಹೊರಗೆ ಸುತ್ತಾಡಿಸಿ ಕೊಂಡು ಬಂದರೆ ಅವಳ ಕೋಪವೆಲ್ಲಾ ಮಾಯವಾಗುತ್ತದೆ. ಆದರೆ ಅವಳಿಗೆ ಕೋಪ ಬಂದ ಕಾರಣ ನಾನು ಅವಳನ್ನು ಹೊರಗೆ ಸುತ್ತಾಡಿಸಲು ಕರೆದುಕೊಂಡು ಹೋಗುವುದು ಎಂದು ಅವಳಿಗೆ ತಿಳಿದಿಲ್ಲ. ಅದು ತಿಳಿದರೆ ಯಾವಾಗಲೂ ಕೋಪ ಬರುವ ಸಾಧ್ಯತೆ ನೂರು ಶೇಕಡಾ ಉಂಟು.
""ಶೀ, ಆಚೆ ಹೋಗಿ. ನಾನು ಇಲ್ಲಿ ಸ್ವಲ್ಪ ಕ್ಲೀನ್ ಮಾಡಿ ಬರ್ತೇನೆ ...''
ಜಲೀಲ್ ಅಡುಗೆ ಕೋಣೆಯ ಹೊರಗೆ ನಿಂತು ಕೆಮ್ಮುವ ಶಬ್ಧ ಕೇಳಿಸಿತು. ನಾನು ಹೊರಗೆ ಬಂದೆ.
""ಭಾವ, ಮಳೆ ನಿಂತಿದೆ. ಹೊರಗೆ ಒಂದು ರೌಂಡ್ ಸುತ್ತಾಡಿ ಬರೋಣ. ನೀವು ತಯಾರಿದ್ದೀರಾ...?''
""ಓ.ಕೆ. ಬತ್ರೇನೆ, ಒಟ್ಟಿಗೆ ಹೋಗೋಣ... ಅವಳೂ ಬರ್ತಾಳಂತೆ..''
ನಾವು ಹೊರಗೆ ಬಂದು ಸಿಟೌಟಿನಲ್ಲಿ ಕುಳಿತುಕೊಂಡೆವು. ಸ್ವಲ್ಪ ಹೊತ್ತಾದ ಮೇಲೆ ಶಮಾ ಬಾತ್ ಟವೆಲನ್ನು ಭುಜಕ್ಕೇರಿಸಿ ಬಂದಳು.
""ರೀ ಹೊರಡ್ಬೇಡ್ವಾ. ನೀವು ಇಲ್ಲಿ ಕೂತು ಪಟ್ಟಾಂಗ ಹೊಡೀತಿದ್ದೀರಿ...'' ಎಂದು ಹೇಳುತ್ತಾ ನನ್ನನ್ನು ತಳ್ಳಿಕೊಂಡು ಹೋಗಿ ಬಾತ್ರೂಮಿಗೆ ಸೇರಿಸಿದಳು.
""ಬೇಗ ಸ್ನಾನ ಮಾಡಿ ಬನ್ನಿ. ನಾನು ಹೊರಟು ನಿಂತಿರ್ತೇನೆ '' ಎಂದು ಹೇಳಿ ಬಾಗಿಲು ಹಾಕಿದಳು. ನಾನು ಸ್ನಾನ ಮಾಡಬೇಕು ಎಂಬ ಅವಳ ಕಾಳಜಿಯ ಬಗ್ಗೆ ಒಳಗೊಳಗೇ ಹೆಮ್ಮೆ ಪಟ್ಟುಕೊಂಡೆ. ಬಹಳ ಉತ್ಸಾಹದಿಂದ ಅವಳು ರೆಡಿಯಾಗುವ ಶಬ್ಧವು ಬಾತ್ರೂಮಿಗೂ ಕೇಳಿಸುತ್ತಿತ್ತು. ಕಪಾಟಿನ ಬಾಗಿಲುಗಳು ಡಬಡಬ ಶಬ್ಧ ಮಾಡುತ್ತಿದ್ದವು....